“ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ…..!!- ಪ್ರಸನ್ನಾ ವಿ ಚೆಕ್ಕೆಮನೆ

ಲೇಖನ

 

ಏಕಾದಶಿ ಎಂದರೆ ಹರಿಸ್ಮರಣೆ. ಹರಿಸ್ಮರಣೆ ಎಂದರೆ ರಾಮಪದ. ಶ್ರೀರಾಮ ಪದತಲದಲ್ಲಿ ಶ್ರೀರಾಮ ಧ್ಯಾನ ಮಾಡುವ ದಿನ. ರಾಮನನ್ನೇ ಮೈಮನಗಳಲ್ಲಿ ತುಂಬಿಕೊಂಡು ಸಾರ್ಥಕ ಭಾವ ಪಡೆಯುವ ಪುಣ್ಯಕ್ಷಣ.

 

ಅದಕ್ಕಾಗಿಯೇ ಪ್ರತಿ ಏಕಾದಶಿಯ ಪವಿತ್ರ ದಿನವನ್ನು ಮನಸು ಕಾಯುತ್ತಲೇ ಇರುತ್ತದೆ. ರಾಮಧ್ಯಾನದಲ್ಲಿ ತಲ್ಲೀನಗೊಂಡು ಚಿಂತೆ, ತಲ್ಲಣಗಳನ್ನು ಮರೆತು ಶ್ರೀಗುರುಗಳ ಅಮೃತ ವಚನಗಳ ಸವಿಯುಂಡು ಒಂದಿಷ್ಟು ನೆಮ್ಮದಿ ಪಡೆಯಲು, ಶಾಂತಿಯನ್ನು ಬಯಸಲು.

 

ಸಕಲ ವಿದ್ಯಾ ಆದಿಪೂಜಿತ ಶ್ರೀಗಣನಾಥನ ವಂದನೆಯೊಂದಿಗೆ ಆರಂಭವಾದ ಮೊದಲ ಪದ. ಶ್ರೀಗುರುಗಳು ಗಣಪನನ್ನು ಬಣ್ಣಿಸಿದ ಪರಿ ಅನನ್ಯ.

 

ಹೊಟ್ಟೆ ದೊಡ್ಡ, ಕಣ್ಣು ಸಣ್ಣ ಇದ್ದರೂ ಶ್ರೀ ಗಣೇಶ ಜೊತೆಗಿದ್ದರೆ ಎಲ್ಲಾ ಕಾರ್ಯಗಳೂ ನಿರ್ವಿಘ್ನವಾಗಿ ಸಾಗಿ ಸಂಪೂರ್ಣ ಸಫಲ ದೊರಕುತ್ತದೆ ಎಂಬ ಭರವಸೆಯಿಂದ ಸಿಂಧೂರ ವರ್ಣ ಶ್ರೀಗಣನಾಥನಿಗೆ ನಮಿಸಿ ಮುಂದೆ ಸಾಗಿದ್ದು ಶ್ರೀ ಶಿಶುನಾಳ ಶರೀಫರ “ಗುಡಿಯ ನೋಡಿರಣ್ಣಾ…..’ ಎಂಬ ಪದಕ್ಕೆ.

 

ಪುಟ್ಟ ಮಕ್ಕಳಾದ ಆಭಾ, ಅನ್ಯಾರ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಮೂಡಿಬಂದ ಈ ಹಾಡು ಮನ ಮುಟ್ಟಿತು.

 

ಪೊಡವಿಗೊಡೆಯನು ಕಡು ಬೆಡಗಿನಲಿ ಅಡಗಿ ಕುಳಿತಿಹ ಈ ದೇಹವೆಂಬ ಗುಡಿಯ ಮಹತ್ವದ ಅರಿವು ಮೂಡಿಸಿದ್ದು ಶ್ರೀಗಳ ವಿವರಣೆ.

 

“ನಮಗರಿವಿಲ್ಲದೆ ನಮ್ಮೊಳಗಿರುವ ಪರಮಾತ್ಮನು ತೋರುವವರಿಗೆ ಮಾತ್ರ ತೋರುವನು” ಎನ್ನುವಾಗ ಬದುಕಿನಲ್ಲಿ ಕೇವಲ ಆ ಭಗವಂತನ ಕೃಪೆಯಿಂದ ಮಾತ್ರ ನಡೆದಿರುವ ಹಲವಾರು ಘಟನೆಗಳು ಮನದಂಗಳದಲ್ಲಿ ಮೂಡಿ ಬಂದು ಭಾವುಕಳಾಗಿ ಹೋದೆ.

 

ಉತ್ಥಾನ ದ್ವಾದಶಿಯ ಪುಣ್ಯದಿನದಲ್ಲಿ ಮಧುರ ನೈವೇದ್ಯವನ್ನು ಸ್ವೀಕರಿಸಿ ಭಕ್ತರ ಸಂಕಷ್ಟಗಳನ್ನು ದೂರ ಮಾಡುವ ಶ್ರೀರಾಮನ ಪಾದ ಸ್ಮರಣೆಯಿಂದ ಮನಸು ತುಂಬಿ ಬಂತು.

 

“ತಲ್ಲಣಿಸದಿರು ಕಂಡ್ಯ ತಾಳು ಮನವೇ….” ನನ್ನ ಇಷ್ಟದ ಈ ಪದವನ್ನು ಕೇಳುವಾಗಲೆಲ್ಲ ಇದು ನನಗಾಗಿಯೇ ರಚಿಸಿದ್ದು ಎಂದುಕೊಳ್ಳುತ್ತದೆ ಮನಸು.

 

ಬೆಟ್ಟದಾ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆವವರು ಯಾರು? ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗೆ ಅಲ್ಲಿಗೆ ಆಹಾರ ಒದಗಿಸಿದವನು ಯಾರು?

 

“ಯಾರು?” !!

 

“ಯಾರು?” ಎಂಬ ಅನುಮಾನವೇ ಬೇಡ. ಕನಕದಾಸರು ಈ ವಚನದಲ್ಲೇ ಉತ್ತರಿಸಿದ್ದಾರೆ “ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಗಟ್ಯಾಗಿ ಸಲಹುವನು ಇದಕೆ ಸಂಶಯ ಬೇಡ” ….ಬಹುಶಃ ಈ ಭರವಸೆಯೊಂದಿಲ್ಲದಿದ್ದರೆ ನಾಳೆಗಾಗಿ ಕಾಯುವ ನಿರೀಕ್ಷೆ ಇರುತ್ತಿರಲಿಲ್ಲವೇನೋ?

 

ಆಪತ್ತುಗಳು ಬಂದಾಗಲೆಲ್ಲ, ಮನಸು ತಲ್ಲಣಗೊಂಡಾಗಲೆಲ್ಲ ಕಣ್ತುಂಬಿ ಬಂದಾಗ ಮತ್ತೆ ಮತ್ತೆ ಮನ ನೆನಪಿಸುವುದು ಈ ಗೀತೆಯನ್ನು.

 

ಕೃಷಿ ಎಂದರೆ ಅಷ್ಟು ಸುಲಭವಲ್ಲ. ಅದರಲ್ಲಿ ಅದೆಷ್ಟು ತೊಡಕುಗಳಿವೆ. ಅಹೋರಾತ್ರಿ ಶ್ರಮ ಪಟ್ಟರೂ ಸಮರ್ಪಕವಾಗಿ ಫಲ ದೊರಕುವುದಿಲ್ಲ’ ಶ್ರೀಗಳ ಈ ವಚನ ನಿಜಕ್ಕೂ ಸತ್ಯ. ಆದರೆ ಅದನ್ನು ಮನಗಂಡವರೆಷ್ಟೋ..

 

ತಾಯ್ತನದ ಮಹಾನ್ ರೂಪವೇ ಆ ಭಗವಂತ. ನಮ್ಮ ಮಾತೆಗಿಂತಲೂ ನೂರು ಕೋಟಿ ಮಿಗಿಲಾದ ತಾಯ್ತನದ ಭಾವವಿರುವ ಆ ಹರಿಯ ಸ್ಮರಣೆಯಿಂದಲೇ ಅಲ್ಲವೇ ಬದುಕು ಮುನ್ನಡೆಯುತ್ತಿರುವುದು.

 

“ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ ನಿಗಮ ಗೋಚರ ಮುಕುಂದಾ…..” ದಾಸರ ಪದ ಸಂಪೂರ್ಣ ಅರ್ಥವಾಗುವುದು ಬದುಕಿನಲ್ಲಿ ಉಪೇಕ್ಷೆಗೊಳಪಟ್ಟವರಿಗೆ ಮಾತ್ರ. ಪ್ರೀತಿ ನೀಡಿದವರು ನಿರ್ಲಕ್ಷ್ಯ ತೋರಿದರೆ, ಉಪೇಕ್ಷೆ ಮಾಡಿದರೆ ಬದುಕು ಅತ್ಯಂತ ಅಸಹನೀಯ ‌.

 

ಆದರೆ ಮೊಸಳೆಯಿಂದ ರಕ್ಷಣೆ ದೊರಕಲು ಗಜರಾಜ ಪ್ರಾರ್ಥಿಸಿದಾಗ ಓಡಿ ಬಂದು ಪಾರುಮಾಡಿದ ಶ್ರೀಹರಿ ಭಕ್ತರನ್ನು ಉಪೇಕ್ಷೆ ಮಾಡುವನೇ….?

 

ಅಜಾಮಿಳನಿಗೇ ಮುಕ್ತಿ ನೀಡಿದವನು ‘ನೀನಲ್ಲದೆ ಬೇರೆ ಗತಿ ಯಾರೆನಗೆ ‘ ಎಂದು ನಿರತವೂ ಹರಿಸ್ಮರಣೆ ಮಾಡುವವರನ್ನು ದೂರ ತಳ್ಳುವನೇ….

 

ವಾತ್ಸಲ್ಯವಾರಿಧಿಯೆಡೆಗಿನ ನಮ್ಮ ಭಾವ ಎಂದು ಅವನ ಮನಕ್ಕೆ ತಟ್ಟುವುದೋ, ಸಂಪೂರ್ಣ ಶರಣಾಗತಿಯ ಭಾವ ನಮ್ಮಲ್ಲಿ ಎಂದು ಮೂಡುವುದೋ ಎಂಬ ಅರಿವು ಅವನಿಗೆ ಮಾತ್ರವಲ್ಲವೇ ತಿಳಿಯಲು ಸಾಧ್ಯ ‌.!!.

 

ರಾಮ ತಾರಕ ಮಂತ್ರದ ಮರ್ಮವನ್ನರಿತ ಭದ್ರಾಚಲ ರಾಮದಾಸರ ಕೃತಿ. ಯಾವುದೇ ಕೋರಿಕೆ ಇಲ್ಲದ, ಬೇಡಿಕೆ ಇಲ್ಲದ ಈ ರಾಮತಾರಕ ಮಂತ್ರವು ಭವಸಾಗರವನ್ನು ದಾಟಿಸುವ ನೌಕೆ. ಇದನ್ನು ಭದ್ರವಾಗಿ ಎದೆಯಲ್ಲಿರಿಸುವಾಗ ಪರಿಶುದ್ಧ ಮನ ನನಗಿರಲಿ ದೇವಾ ಎಂಬ ಕೋರಿಕೆ ಮನದಲ್ಲಿತ್ತು.

 

ಬಹುಶಃ ಸಂಪೂರ್ಣ ಶರಣಾಗತಿಯ, ಆತ್ಮನಿವೇದನೆಯ ಭಾವ ನಮ್ಮಲ್ಲಿ ಮೂಡುವವರೆಗೂ ಹರಿಯ ಕರುಣೆಗಾಗಿ ಕಾಯಲೇಬೇಕಿದೆ.

 

ಅವನ ನಿರೀಕ್ಷೆಯಲ್ಲಿ ಕಾಯುತ್ತಿರುವ ನಮ್ಮನ್ನು ಅವನು ಕಾಯುತ್ತಿರುವನು ಎಂಬ ತುಂಬು ಭರವಸೆಯೊಂದಿಗೆ ಮನಸು ಕಾಯುತ್ತಿದೆ ಮುಂದಿನ ಏಕಾದಶಿಯ ಪುಣ್ಯ ದಿನಕ್ಕೆ. ರಾಮಪದ ಧ್ಯಾನದಲ್ಲಿ ತಲ್ಲೀನಗೊಂಡು ಮನಸಿನ ತಲ್ಲಣಗಳನ್ನು ಮರೆಯುವ ಪಾವನ ಕ್ಷಣಕ್ಕೆ. ಶ್ರೀಗುರುಗಳ ಅಮೃತ ವಚನಗಳ ವಾರಿಧಿಯಲ್ಲಿ ಮಿಂದು ಮನಸು ಪುನೀತಗೊಳ್ಳುವ ಪವಿತ್ರ ದಿನಕ್ಕೆ ಶ್ರೀರಾಮನ ಆಗಮನವನ್ನು ಕಾಯುತ್ತಿದ್ದ ಶಿಲಾರೂಪಿ ಅಹಲ್ಯೆಯಂತೆ. ಶ್ರೀರಾಮನ ಭಕ್ತಿಯ ಸಮರ್ಪಣೆ ಮಾಡಲು “ಎಂದು ಬರುವನೋ ರಾಮಾ….” ಎಂದು ವನವನಗಳಲ್ಲಿ ಅಲೆದಾಡಿ ಅವನ ನಿರೀಕ್ಷೆಯಲ್ಲೇ ಇದ್ದ ಶಬರಿಯಂತೆ.

 

“ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರು……..!! ನಿನ್ನದೇ ಈ ಬದುಕು. ನನ್ನದೇನಿದ್ದರೂ ನೀನಿತ್ತ ಸೌಭಾಗ್ಯ” ರಾಮನಾಮ ಸ್ಮರಣೆಯ ಆನಂದಭಾಷ್ಪವು ಕಂಗಳಿಂದ ಸುರಿಯುವಾಗಲೂ ರಾಮಚರಣಕಮಲ ಸ್ಮರಣೆ ನಿರತ ನನ್ನಲಿ ನೆಲೆಸಿರಲಿ ಎಂಬ ಬೇಡಿಕೆ ಮಾತ್ರ ನನ್ನದು.

Author Details


Srimukha

Leave a Reply

Your email address will not be published. Required fields are marked *