ಮಕರಸಂಕ್ರಾಂತಿ :ನೀಲಕಂಠ ಯಾಜೀ, ಬೈಲೂರು

ಲೇಖನ

ಸಂಕ್ರಾಂತಿ ಎಂದರೇನು?

‘ಗ್ರಹಾಣಾಂ ಪ್ರಾಗ್ರಾಶಿತಃ ಅಪರರಾಶೌ ಸಂಕ್ರಮಣಂ ಸಂಕ್ರಾಂತಿಃ ಇತಿ.’

ಅಂದರೆ ಗ್ರಹಗಳು ತಾವಿರುವ ರಾಶಿಯನ್ನು ಬಿಟ್ಟು ಮುಂದಿನ ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎನ್ನುತ್ತಾರೆ. ವಿಶಾಲವಾದ ಆಕಾಶಮಂಡಲದಲ್ಲಿ ತಮ್ಮ ತಮ್ಮ ಕಕ್ಷೆಯಲ್ಲಿ ಚಲಿಸುವ ಗ್ರಹಗಳನ್ನು ಗಣಿತೋಪಕ್ರಮಕ್ಕಾಗಿ ಮೇಷಾದಿ ಹನ್ನೆರಡು ರಾಶಿಗಳಲ್ಲಿ, ಅಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಸ್ಥಿತರನ್ನಾಗಿ ಗುರುತಿಸುತ್ತಾರೆ. ಒಂದು ರಾಶಿಯಿಂದ ಇನ್ನೊಂದು ರಾಶಿ ಪ್ರವೇಶವೇ ಸಂಕ್ರಾಂತಿ.

 

ಇದನ್ನು ಎಲ್ಲ ಗ್ರಹಗಳಿಗೆ ಹೇಳಲ್ಪಟ್ಟರೂ ನಾವು ಪರಿಗಣಿಸುವದು ರವಿಯ ಸಂಕ್ರಮಣಗಳನ್ನು ಮಾತ್ರ. ಕಾರಣ ಇಷ್ಟೆ ಜಗತ್ಪ್ರಕಾಶಕ ಸೂರ್ಯನ ಅಪರ ರಾಶಿಪ್ರವೇಶ ಪ್ರಕ್ರಿಯೆ ಎಂಬುದು ಪ್ರತ್ಯಕ್ಷ ಗೋಚರ. ಶಂಕು ಮೊದಲಾದ ಯಂತ್ರಗಳಲ್ಲಿ ಬರಿಗಣ್ಣಿನಿಂದಲೂ ಗುರುತಿಸಬಹುದು. ಉಳಿದ ಗ್ರಹಗಳ ಸಂಕ್ರಮಣವು ಗಣಿತಕ್ಕೆ ಮಾತ್ರ ಗೋಚರವೇ ಹೊರತು ಪ್ರತ್ಯಕ್ಷ ಸಾಧ್ಯವಲ್ಲ.

 

ಹನ್ನೆರಡು ರವಿಸಂಕ್ರಾಂತಿಗಳನ್ನು ವಿಷ್ಣುಪದ, ಷಡಶೀತಿಮುಖ, ವಿಷುವ ಮತ್ತು ಅಯನ ಎಂದು ನಾಲ್ಕು ವಿಧವಾಗಿ ಹೇಳಲಾಗುತ್ತದೆ. ವೃಷಭ, ಸಿಂಹ, ವೃಶ್ಚಿಕ, ಕುಂಭ ಈ ನಾಲ್ಕು ವಿಷ್ಣುಪದ ಸಂಕ್ರಾಂತಿಗಳು. ಮಿಥುನ, ಕನ್ಯಾ, ಧನು, ಮೀನ ಈ ನಾಲ್ಕು ಷಡಶೀತಿಮುಖ ಸಂಕ್ರಾಂತಿಗಳು. ಮೇಷ, ತುಲಾಗಳು ವಿಷುವ ಸಂಕ್ರಾಂತಿಗಳು. ಮಕರ, ಕರ್ಕಾಟಕಗಳು ಅಯನ ಸಂಕ್ರಾಂತಿಗಳು. ಸಂಕ್ರಮಣಕಾಲವೆಂಬುದು ಪುಣ್ಯಕಾಲ, ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿಗಳಿಗೆ ಯುಕ್ತವಾಗಿದೆ. ಈ ಪುಣ್ಯಕಾಲದಲ್ಲಿ ಮಾಡಿದ ಹವ್ಯ-ಕವ್ಯಾದಿಗಳು ಜನ್ಮಜನ್ಮಾಂತರಗಳಲ್ಲೂ ಫಲದಾಯಕಗಳು ಎಂದು ಮನುಸ್ಮೃತಿಯಲ್ಲಿ ಹೇಳಿದೆ-

‘ಸಂಕ್ರಾಂತೌ ಯಾನಿ ದತ್ತಾನಿ ಹವ್ಯಕವ್ಯಾನಿ ದಾತೃಭಿಃ |

ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ ||’

ಸಂಕ್ರಾಂತಿಯ ಪುಣ್ಯಕಾಲದಲ್ಲಿ ವಿವಾಹೋಪನಯನಾದಿ ಶುಭಕಾರ್ಯವನ್ನು ಮಾಡಕೂಡದು.

 

ಮಕರಸಂಕ್ರಾಂತಿ- ಎಳ್ಳಿನಹಬ್ಬ ಎಂದು ಕರೆಯುತ್ತಾರೆ. ಎಳ್ಳು, ಬೆಲ್ಲ, ಕಬ್ಬಿನ ತುಂಡುಗಳನ್ನು ವಿನಿಮಯ ಮಾಡುತ್ತಾ ‘ಎಳ್ಳು ಬೆಲ್ಲವ ತಿಂದು ಒಳ್ಳೊಳ್ಳೆ ಮಾತಾಡಿ’ ಎಂಬ ಮಾತನ್ನು ಹೇಳುವುದಾಗುತ್ತದೆ. ಮಕರಸಂಕ್ರಾಂತಿ ಉತ್ತರಾಯಣದ ಆರಂಭಕಾಲ. ಸೂರ್ಯನು ಪರಮದಕ್ಷಿಣದಿಂದ ಉತ್ತರಗಮನವನ್ನು ಆರಂಭಿಸುವ ದಿನ. ಇಲ್ಲಿಂದ ಮುಂದಿನ ಆರು ತಿಂಗಳು ಉತ್ತರಾಯಣವಾಗಿದ್ದು ದೇವತೆಗಳಿಗೆ ಪ್ರಿಯವಾದ ಕಾಲವಾದ್ದರಿಂದ ದೇವಕಾರ್ಯಗಳಿಗೆ ಹಾಗೂ ಶುಭಶೋಭನಾದಿಗಳಿಗೆ ಪ್ರಶಸ್ತವಾಗಿದೆ. ಈ ದಿನವನ್ನು ಉತ್ತರಾಯಣಪುಣ್ಯಕಾಲವೆಂದೂ ಕರೆಯುತ್ತಾರೆ.

 

ಮಕರಸಂಕ್ರಾಂತಿಯು ಸೌರಮಾನದ ಹಬ್ಬವಾಗಿದ್ದು ಚಾಂದ್ರಪುಷ್ಯಮಾಸದಲ್ಲಿ ಬರುತ್ತದೆ. ಸಾಮಾನ್ಯವಾಗಿ ಜನವರಿ 13, 14, 15 ಈ ದಿನಾಂಕಗಳಲ್ಲಿ ನಾವು ನೋಡಬಹುದು. ಮಕರಸಂಕ್ರಾಂತಿಯ ಆಚರಣೆ ಪ್ರಾದೇಶಿಕವಾಗಿ ಭಿನ್ನ ಭಿನ್ನವಾಗಿದ್ದು ವಿಶೇಷವಾಗಿ ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿಗಳನ್ನು ಮಾಡಿದರೆ ಉತ್ತಮಫಲ.

‘ರವೇಃ ಸಂಕ್ರಮಣಂ ರಾಶೌ ಸಂಕ್ರಾಂತಿರಿತಿ ಕಥ್ಯತೇ |

ಸ್ನಾನದಾನತಪಃಶ್ರಾದ್ಧಹೋಮಾದಿಷು ಮಹಾಫಲಾ ||

ಕಾರಣ ಗಂಗಾದಿ ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡುವುದು, ಪಿತೃತರ್ಪಣಾದಿಗಳಿಗೆ, ದಾನಧರ್ಮಕ್ಕೆ, ಮಂತ್ರದೀಕ್ಷಾ ಸ್ವೀಕಾರಕ್ಕೆ ಈ ದಿನ ಉತ್ತಮವಾಗಿದೆ.
   

 

ಎಳ್ಳನ್ನು ಬೆಲ್ಲ ಹಾಗೂ ಕೊಬ್ಬರಿಯೊಂದಿಗೆ ಮಿಶ್ರಣ ಮಾಡಿ ಪರಸ್ಪರ ಹಂಚುವುದು ಎಲ್ಲೆಡೆ ನಡೆಯುತ್ತದೆ. ಎಳ್ಳಿನಲ್ಲಿರುವ ತೈಲಾಂಶ, ಬೆಲ್ಲದ ವಾತಹರ ಗುಣ ಹಾಗೂ ಕೊಬ್ಬರಿಯ ಜಿಡ್ಡು ಚಳಿಗಾಲದಲ್ಲಿ ಶರೀರಕ್ಕೆ ರಕ್ಷಣೆಯನ್ನು ನೀಡುವುದು ವಿದಿತವಿಚಾರ. ಮಕ್ಕಳಿಗೆ ಎಳ್ಳನ್ನು ಎರಚಿ ಆರತಿ ಎತ್ತುವುದೂ, ಹಿರಿಯರಿಂದ ಆಶೀರ್ವಾದ ಪಡೆಯುವುದೂ ಕೆಲವೆಡೆ ನಡೆಯುತ್ತದೆ. ಸಂಕ್ರಾಂತಿಕಾಳನ್ನು ಹೆಣ್ಣುಮಕ್ಕಳು ನೆರೆಕೆರೆಯವರಿಗೆ ನೀಡಿ ನಮಸ್ಕರಿಸುವ ಪದ್ಧತಿ ಇದೆ. ಎಳ್ಳು, ಶೇಂಗಾ, ಕಡಲೆ ಮೊದಲಾದ ಧಾನ್ಯಗಳಿಗೆ ಸಕ್ಕರೆಪಾಕವನ್ನು ಲೇಪಿಸಿ ಮನೆಯಲ್ಲಿಯೇ ಸಂಕ್ರಾಂತಿಕಾಳನ್ನು ತಯಾರಿಸುತ್ತಾರೆ. ಉತ್ತರಕರ್ನಾಟಕದಲ್ಲಿ ಗೋವನ್ನು ಸಿಂಗರಿಸಿ, ಪೂಜಿಸಿ, ಕಾಯಿ ಬೆಲ್ಲ ಕಾಳುಕಡಿಗಳನ್ನು ಕೊಟ್ಟು ಅಶುಭ ನಿವಾರಣೆಗಾಗಿ ಬೆಂಕಿ ಹಾಯಿಸುವ ಪದ್ಧತಿಯನ್ನು ನೋಡಬಹುದು.
   

 

ಮನುಷ್ಯ ಕಾಲಾಧೀನ. ಯೋಗ-ಭೋಗಗಳು ಬದುಕಿಗೆ ಭೂಷಣ. ಸನಾತನ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ಭೋಗಜೀವನದಿಂದ ಯೋಗಜೀವನಕ್ಕೆ ಹೊರಳಲು ಬೇಕಾದ ಭದ್ರ ಬುನಾದಿಯನ್ನು ರಚಿಸುತ್ತವೆ. ಹಬ್ಬ-ಹಾಡಿಗಳ ತತ್ತ್ವವನ್ನು ತಿಳಿದು ಆಚರಿಸಿದರೆ ಭಗವಂತನ ಅನುಗ್ರಹ ಸಾಧ್ಯ. ಭಕ್ತಿಯಿಂದ ಭಜಿಸುವ ಭಕ್ತರ ಅನುಗ್ರಹಕ್ಕೆ ರಥವೇರಿ ಬರುವ ಭಗವಂತನ ರಥೋತ್ಸವಾದಿಗಳು ಮಕರಸಂಕ್ರಾಂತಿಯ ಅನಂತರವಷ್ಟೆ ಆರಂಭವಾಗುವದು. ಕಾರಣ ಅಂತರಂಗ-ಬಹಿರಂಗ ಶುದ್ಧಿಯೊಂದಿಗೆ ನಮ್ಮ ಜೀವನರಥವನ್ನು ಪರಮತತ್ತ್ವದ ಕಡೆಗೆ ಎಳೆಯಲು ಇಂತಹ ಪುಣ್ಯತಮ ಪರ್ವಕಾಲವು ಇದೇ 15ನೇ ದಿನಾಂಕ ಮಂಗಳವಾರ ಸನ್ನಿಹಿತವಾಗಿದ್ದು ಎಳ್ಳು-ಬೆಲ್ಲದೊಂದಿಗೆ ಆಚರಿಸೋಣ, ಶಾಂತಿ-ಸುಖ ಹೊಂದೋಣ.

Author Details


Srimukha

Leave a Reply

Your email address will not be published. Required fields are marked *