ಗ್ರಸ್ತೋದಿತ-ಚಂದ್ರಗ್ರಹಣ

ಲೇಖನ

ಆಕಾಶದಲ್ಲಿ ಗ್ರಹಗಳ ಪರಸ್ಪರ ಯೋಗ ಸಂಯೋಗಗಳಿಂದ ಉಂಟಾಗುವ ಒಂದು ಕೌತುಕ ಘಟನೆ ಗ್ರಹಣ.
ಬುವಿಯಿಂದ ನೋಡುಗನಿಗೆ ಒಂದು ಆಕಾಶಕಾಯವು ಇನ್ನೊಂದು ಆಕಾಶಕಾಯವನ್ನು ಆಚ್ಛಾದಿಸಿದಂತೆ (ಮುಚ್ಚಿದಂತೆ) ಕಂಡುಬಂದರೆ ಅದನ್ನು ಗ್ರಹಣ ಎನ್ನುವರು.
ಎಲ್ಲಾ ಗ್ರಹಗಳಿಗೂ ಗ್ರಹಣ ಉಂಟಾಗುತ್ತದೆಯಾದರೂ ಸೂರ್ಯ-ಚಂದ್ರರ ಗ್ರಹಣವನ್ನೇ ಗ್ರಹಣಶಬ್ದದಿಂದ ತಿಳಿಯುತ್ತೇವೆ.

ಗ್ರಹಣದಲ್ಲಿ ಖಗ್ರಾಸಗ್ರಹಣ, ಖಂಡಗ್ರಾಸಗ್ರಹಣ, ವಲಯಗ್ರಹಣ ಎಂದು ಪ್ರಧಾನ ಭೇದಗಳಿವೆ. ಹಾಗೆಯೇ ಅವುಗಳಲ್ಲಿ ಗ್ರಸ್ತೋದಯಗ್ರಹಣ, ಗ್ರಸ್ತಾಸ್ತಗ್ರಹಣಗಳೂ ಸಂಭವಿಸುತ್ತವೆ.

ಪ್ರಸ್ತುತ ಗ್ರಸ್ತೋದಯಚಂದ್ರಗ್ರಹಣಕ್ಕೆ ನಾವು ಸಾಕ್ಷಿಯಾಗುವವರಿದ್ದೇವೆ.

ಗ್ರಸ್ತೋದಯ ಚಂದ್ರಗ್ರಹಣ:
ವಿಶ್ವಾವಸು ಸಂವತ್ಸರದ ಫಾಲ್ಗುನ ಪೂರ್ಣಿಮಾ ಮಂಗಳವಾರ (ಮಾರ್ಚ್ 3) ಗ್ರಸ್ತೋದಿತಚಂದ್ರಗ್ರಹಣ ಸಂಭವಿಸಲಿದೆ. ಗ್ರಸ್ತೋದಿತಗ್ರಹಣ ಎಂದರೆ- ನಮ್ಮ ಪ್ರದೇಶದಲ್ಲಿ ಚಂದ್ರ ಉದಯವಾಗುವ ಮೊದಲೇ ಚಂದ್ರನಿಗೆ ಗ್ರಹಣ ಆರಂಭವಾಗಿದ್ದು ಗ್ರಹಣ ಹಿಡಿದಿರುವ ಚಂದ್ರನು ಪೂರ್ವಕ್ಷಿತಿಜದಲ್ಲಿ ಉದಯಿಸುವುದು.
ಪ್ರಸ್ತುತ ವಿಶ್ವಾವಸು ಸಂವತ್ಸರದ ಫಾಲ್ಗುನ ಪೂರ್ಣಿಮಾ ದಿನಾಂಕ 03-03-2026 ರಂದು ಈ ಗ್ರಸ್ತೋದಿತ ಚಂದ್ರಗ್ರಹಣವು ಭಾರತದಲ್ಲಿ ಎಲ್ಲಾ ಕಡೆಗಳಲ್ಲೂ ಗೋಚರವಾಗುತ್ತದೆ.

ನಮ್ಮ ಪ್ರದೇಶದಲ್ಲಿ (ಕರ್ನಾಟಕ) ಸಾಯಂ 6:28 ರಿಂದ 6:48 ರವರೆಗೆ ಸ್ವಲ್ಪಮಾತ್ರ ಗ್ರಹಣವು ಗೋಚರವಾಗುತ್ತದೆ.
ಆದ ಕಾರಣ ಕೇವಲ 9 ರಿಂದ 20 ನಿಮಿಷಗಳು ಮಾತ್ರ ಗ್ರಹಣಾಚರಣೆ ನಮ್ಮ ಪ್ರದೇಶದಲ್ಲಿದೆ.
(ಅಕ್ಷಾಂಶವಶಾತ್ ಸರಿಸುಮಾರು 80 ಮೈಲುವ್ಯಾಪ್ತಿಯಲ್ಲಿ ಉದಯಾಸ್ತಗಳು ಒಂದು ನಿಮಿಷ ಬದಲಾಗುತ್ತವೆ.)

ಗ್ರಹಣಸ್ಪರ್ಶಕಾಲ:
ನಮಗಿಂತ ಪೂರ್ವದೇಶದಲ್ಲಿ ನಮ್ಮ ಸಮಯ ಮಧ್ಯಾಹ್ನ 3:18ಕ್ಕೆ ಸ್ಪರ್ಶವಾಗುತ್ತದೆ. ಇದು ಚಂದ್ರಬಿಂಬವು ಭೂಛಾಯೆಯನ್ನು ಸ್ಪರ್ಶಿಸುವ ಸಮಯ (ನಮಗೆ ಕಾಣುವುದಿಲ್ಲವಾದ ಕಾರಣ ಆಚರಣೆಯಿಲ್ಲ).
ಗ್ರಹಣ ಸಮ್ಮೀಲನಕಾಲ: 4:32 (ಚಂದ್ರಬಿಂಬವು ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಸಮಯ)
ಮಧ್ಯಕಾಲ: 5:03 (ಪೂರ್ಣಿಮಾ ತಿಥಿಯು ಮುಗಿಯುವ ಸಮಯ)
ಉನ್ಮೀಲನ ಕಾಲ: 5:32 (ಚಂದ್ರಬಿಂಬವು ಸ್ವಲ್ಪಮಾತ್ರವಾಗಿ ಕಾಣಲು ಆರಂಭವಾಗುವ ಸಮಯ.)
ಹೀಗೆ ಸುಮಾರು ಪ್ರತಿಶತ 80 ರಷ್ಟು ಚಂದ್ರಬಿಂಬವು ಕಾಣುತ್ತಿರುವಾಗ ನಮ್ಮ ಪ್ರದೇಶದಲ್ಲಿ ಚಂದ್ರೋದಯವು ಆಗುತ್ತದೆ.

ಚಂದ್ರೋದಯ ಸಮಯ:
6:36 ಶಿವಮೊಗ್ಗ ಪ್ರಾಂತ್ಯ
6:38 ಶಿರಸಿ ಪ್ರಾಂತ್ಯ
6:36 ಮಂಗಳೂರು ಪ್ರಾಂತ್ಯ
6:28 ಬೆಂಗಳೂರು ಪ್ರಾಂತ್ಯ
6:48ಕ್ಕೆ ಗ್ರಹಣಮೋಕ್ಷ. (ಸಂಪೂರ್ಣಚಂದ್ರಬಿಂಬವು ದೃಗ್ಗೋಚರವಾಗುತ್ತದೆ.)

ಒಟ್ಟಿನಲ್ಲಿ 3 ಗಂಟೆ 30 ನಿಮಿಷಗಳ ಗ್ರಹಣದಲ್ಲಿ ನಮ್ಮಲ್ಲಿ ಕೆಲವು ನಿಮಿಷಗಳ ಪುಣ್ಯಕಾಲವಿರುತ್ತದೆ.
ಹುಬ್ಬಾ (ಪೂ.ಫಾ) ನಕ್ಷತ್ರದಲ್ಲಿ ಗ್ರಹಣವಾಗುತ್ತಿದ್ದು ಇದು ಕೇತುಗ್ರಸ್ತ ಗ್ರಹಣವಾಗಿರುತ್ತದೆ.

ದೋಷವಿಚಾರ:
ತ್ರಿಷಡ್ದಶಾಽಯೋಪಗತಂ ನರಾಣಾಂ ಶುಭಪ್ರದಂ ಸ್ಯಾದ್ ಗ್ರಹಣಂ ರವೀಂದ್ವೋಃ | ದ್ವಿಸಪ್ತನಂದೇಷುಷು ಮಧ್ಯಮಂ ಸ್ಯಾತ್ ಶೇಷೇಷ್ವನಿಷ್ಟಂ.. ಎಂಬುದಾಗಿಯೂ,
ಜನ್ಮಸಪ್ತಾಷ್ಟರಿಃಫಾಂಕ ದಶಮಸ್ಥೇ ನಿಶಾಕರೇ.. ಇತ್ಯಾದಿ ವಚನದಂತೆ
ಸಿಂಹ, ಕನ್ಯಾ, ಮಕರ, ವೃಷಭ ರಾಶಿಯವರಿಗೆ ದೋಷಪ್ರದವು. ಕರ್ಕ, ಕುಂಭ, ಮೇಷ, ಧನು ರಾಶಿಯವರಿಗೆ ಮಧ್ಯಮವು ಆಗಿರುತ್ತದೆ.

ತಸ್ಯ ದಾನಂ ಚ ಹೋಮಂ ಚ ದೇವಾರ್ಚನ ಜಪೌ ತಥಾ | ಎನ್ನುವಂತೆ ಆಚರಿಸಿಕೊಳ್ಳುವುದು ಉತ್ತಮ.
(ಅಕ್ಕಿ, ಬಿಳಿವಸ್ತ್ರ, ಹುರುಳಿ ದಕ್ಷಿಣಾಸಹಿತ ದಾನಮಾಡಬಹುದು)

ಶಾಸ್ತ್ರೀಯವಾಗಿ ಆಚರಿಸುವವರಿಗೆ-
ಗ್ರಸ್ತೋದಯೇ ವಿಧೋಃ ಪೂರ್ವಂ ನಾಹಃ ಭೋಜನಮಾಚರೇತ್ ಎನ್ನುವಂತೆ
ಆ ದಿನ ಹಗಲು ಭೋಜನ ನಿಷಿದ್ಧ.

ಬಾಲವೃದ್ಧಾತುರಾಣಾಂ ತು ಗ್ರಹಣಯಾಮಾತ್ ಪೂರ್ವಮೇಕಮ್
ಎಂದರೆ ಬಾಲರಿಗೆ, ವೃದ್ಧರಿಗೆ, ರೋಗಗ್ರಸ್ತರಿಗೆ ಮಧ್ಯಾಹ್ನದವರೆಗೆ ಆಹಾರಸೇವಿಸಲು ಅವಕಾಶವಿದೆ. ಆ ದಿನ ಶ್ರಾದ್ಧವಿದ್ದಲ್ಲಿ ಮರುದಿನ ಮಾಡುವುದು.

ಒಟ್ಟಿನಲ್ಲಿ ಪ್ರಕೃತಿಯಲ್ಲಿ ನಡೆಯುವ ವಿಶೇಷ ಬೆಳಕಿನ ಆಟವನ್ನು ಶಾಸ್ತ್ರೀಯವಾಗಿ ಆಧ್ಯಾತ್ಮಿಕದೃಷ್ಟಿಯಿಂದ ಆಚರಿಸೋಣ.

ಡಾ| ನಾಗೇಶ ಭಟ್ಟರು
ಶ್ರೀಸಂಯೋಜಕರು
ಉಪಖಂಡ-ಪಂಚಾಂಗ
ಧರ್ಮಕರ್ಮ ಖಂಡ
~
ಜ್ಯೌತಿಷ ಪ್ರಾಧ್ಯಾಪಕರು,
ಶ್ರೀ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯ, ಉಮ್ಮಚಗಿ

Leave a Reply

Your email address will not be published. Required fields are marked *