ಅಶೋಕೆಯ ಪುಣ್ಯಭೂಮಿಗೆ ಮೂವತ್ತಾರನೆಯ ಶಂಕರರು ಪಾದಬೆಳೆಸಿದಾಗ, ಮಹರ್ಷಿ ದೈವರಾತರ ಸುಪುತ್ರ ದೇವಶ್ರವಶರ್ಮರು ಅವರ ಪಿತೃವಾಕ್ಯದಂತೆ ಕಾಯುತ್ತಿದ್ದರು. ಶ್ರೀಶ್ರೀಗಳವರನ್ನು ಆದರದಿಂದ ಸ್ವೀಕರಿಸಿ, ಷೋಡಷೋಪಚಾರಗೈದರು. ಜಗದ್ಗುರುಗಳ ಮನದಿಚ್ಛೆಯನ್ನು ಅದಾಗಲೇ ಅರಿತಿದ್ದರು.
ದೇವಶ್ರವಶರ್ಮರ ತೀರ್ಥರೂಪರು ಹೇಳಿದುದರ ನೆನಪೇ ಅವರಿಗೆ ಪ್ರೇರೇಪಣೆ. “ಮಠವು ಸಂಪರ್ಕಿಸಿದಾಗ ಸ್ಥಳವನ್ನು ಕೊಡಬೇಕೆಂಬ” ಪಿತೃವಾಕ್ಯ ಪರಿಪಾಲನೆಯಂತೆ ಮಠದ ನಿರ್ಮಾಣಕ್ಕೆ ಉಚಿತವಾಗಿ ಭೂಮಿಯನ್ನು ಕೊಡುವುದಾಗಿ ನಿವೇದಿಸಿಕೊಂಡರು. ಇದು ಮೂಲಮಠದ ಕಥೆಯ ಪ್ರಥಮ ಮಹಾಸನ್ನಿವೇಶ.
ಸೂಜಿಮೊನೆಯಷ್ಟೂ ಜಾಗವಿಲ್ಲದ ಅಶೋಕೆಯೆಂಬ ಸ್ಥಳದಲ್ಲಿ, ಮಠಸ್ಥಾಪನೆಗೆ ಬೇಕಾದ ಸ್ಥಳವನ್ನು ಕೊಡುವೆನೆಂಬ ಅಮೃತವಾಕ್ಯವು ಶ್ರೀಪೀಠಕ್ಕೆ ಸಮರ್ಪಣೆಯಾಯಿತು. ಇದು ರಾಮಾನುಗ್ರಹವಲ್ಲದೆ ಇನ್ನೇನು?
ಅದಷ್ಟೇ ಅಲ್ಲದೆ, ಇನ್ನೂ ಒಂದು ಅದ್ಭುತವಿದೆ. ಅಶೋಕೆಯ ಪರಿಸರದಲ್ಲಿ ಶ್ರೀಗಳವರ ಪ್ರಥಮ ಪಾದಯಾತ್ರೆಯ ಸಂದರ್ಭದಲ್ಲಿ ಅದೆಲ್ಲೋ ಕಾಯುತ್ತಿದ್ದ ಸರ್ಪವೊಂದು ಪ್ರತ್ಯಕ್ಷಗೊಂಡಿತಂತೆ. ಜೊತೆಗಿದ್ದ ಪರಿವಾರಕ್ಕೆ ಅದು ಕೇವಲ ಸರ್ಪದಂತೆ ಕಂಡರೂ ಅದು ಸ್ವತಃ ಪ್ರಥಮ ಪೀಠಾಚಾರ್ಯರಾದ ವಿದ್ಯಾನಂದಾಚಾರ್ಯರೇ ಸರ್ಪರೂಪದಲ್ಲಿ ದರ್ಶನಭಾಗ್ಯವನ್ನು ಕರುಣಿಸಿದುದು ಎಂದು ಶ್ರೀಸಂಸ್ಥಾನದವರು ಕಂಡುಕೊಂಡರು. ಶ್ರೀಸಂಸ್ಥಾನದವರ ಹತ್ತುಸಾವಿರದ ಶ್ರೀಕರಾರ್ಚಿತ ಶ್ರೀರಾಮ ಪೂಜೆಯು ಇದೇ ಅಶೋಕೆಯ ಪರಿಸರದಲ್ಲಿ ನಡೆಯಿತಷ್ಟೆ. ಆ ವಿರಾಟ್ ಪೂಜೆಯ ಸಂದರ್ಭದಲ್ಲೂ ಅದೇ ಸರ್ಪದರ್ಶನವು ಆಗಿತ್ತಂತೆ. ವಿದ್ಯಾನಂದಾಚಾರ್ಯರು ಪೂಜಿಸಿದ ಅದೇ ಸಂಪುಟವು, ಈಗಿನ ಶಂಕರಾಚಾರ್ಯರ ಕೈಯಲ್ಲಿ ಅದೇ ಸ್ಥಳದಲ್ಲಿ ಪೂಜೆಗೊಳ್ಳುತ್ತಿರುವುದನ್ನು ಕಂಡು ಅದೆಷ್ಟು ಆನಂದವಾಗಿರಬಹುದು. ಆ ಘಟನೆಯನ್ನು ನೋಡಿ ಕಣ್ತುಂಬಿಕೊಳ್ಳಲು ಪ್ರತ್ಯಕ್ಷವಾಗಿ ಕಂಡುಕೊಂಡುದು ಇರಬಹುದೆಂದು ಎಲ್ಲರೂ ತಿಳಿದುಕೊಂಡರು. ಈಗಲೂ ಅಗತ್ಯಬಿದ್ದಾಗ ಆಚಾರ್ಯ ವಿದ್ಯಾನಂದರು ಸರ್ಪರೂಪದಲ್ಲಿ ಕಾಣಿಸಿಕೊಂಡು ಅನುಗ್ರಹಿಸುತ್ತಾರೆ ಎಂದು ಶ್ರೀಸಂಸ್ಥಾನದವರು ಅಭಿಪ್ರಾಯಪಡುತ್ತಾರೆ.
ನೀಲನಕಾಶೆ:
ಅಶೋಕೆಯ ಪುಣ್ಯಭೂಮಿಯಲ್ಲಿ ನಡೆದಾಡಿದರು ಶ್ರೀಗಳವರು. ಅಂದು ಆದಿಶಂಕರರಿಂದ ಉಗಮಗೊಂಡಿದ್ದ ಒಂದು ಮಹಾನ್ ಪರಂಪರೆ, ಮುಂದೆ ಕಾಲನ ಸೆಳೆತಕ್ಕೆ ಸಿಲುಕಿ ಸಂಚರಿಸಿದ್ದ ಪರಂಪರೆ, ಇಂದು ಮತ್ತೆ ಅದೇ ಮೂಲಸ್ಥಾನದಲ್ಲಿ ಸೇರುವ ಸುಮಹೂರ್ತವು ಅಮೃತಸಿಂಚನವಾಯಿತು. ಮಠದ ಮೂಲವನ್ನು ಕಂಡರು. ಮೂಲಮಠವನ್ನೊಮ್ಮೆ ಕಂಡರು.
ಪರಂಪರೆಯ ಮಹತ್ತನ್ನು ಸಹಸ್ರಮಾನದ ಕಾಲ ಸಾರಲು ಅವಶ್ಯವಿರುವ ಮಠದ ನೀಲನಕ್ಷೆಯನ್ನು ನಿಂತನೆಲೆಯಲ್ಲೇ ಕಂಡುಕೊಂಡರು.
ಮೊದಲ ಹಂತದ ನೀಲನಕಾಶೆ:
ಅಶೋಕೆವಾಸಿ ಮಲ್ಲಿಕಾರ್ಜುನನಿಗೆ ನವೀಕೃತ ದೇವಾಲಯ, ಶ್ರೀರಾಮನಿಗೆ ಒಂದು ದೇವಸ್ಥಾನ, ಪೀಠಾಚಾರ್ಯ ಗುರುಗಳ ವಸತಿಗಾಗಿ ಒಂದು ಗುರುಭವನ, ಶಿಷ್ಯರ ಅನುಕೂಲತೆಗಾಗಿ ವಸತಿಗೃಹ, ಸ್ನಾನಗೃಹ, ಸಭಾಂಗಣ, ಪಾಕಶಾಲೆಗಳನ್ನೊಳಗೊಂಡ ಒಂದು ಕಟ್ಟೋಣ, ಇದಿಷ್ಟನ್ನು ಮೊದಲ ಹಂತವಾಗಿ ಚಿತ್ರಿಸಿಕೊಂಡರು. ಆ ಕ್ಷಣದಲ್ಲಿ ಅಲ್ಲಿದ್ದುದು ಕೇವಲ ಕಾಡುಗುಡ್ಡೆಗಳು, ಹಾಗೂ ಚಿಕ್ಕದಾದ ಮಲ್ಲಿಕಾರ್ಜುನ ಗುಡಿ ಮಾತ್ರ.
ಮಲ್ಲಿಕಾರ್ಜುನ ಗುಡಿ, ಶ್ರೀರಾಮದೇವಾಲಯ ಹಾಗೂ ಗುರುಭವನಗಳು ಸಾಂಪ್ರಾದಾಯಿಕ, ಶಾಶ್ವತ ಹಾಗೂ ಬಲಿಷ್ಠವಾಗಿರಬೇಕು ಎಂಬ ಉದ್ದೇಶದಿಂದ, ಇನ್ನು ಸಹಸ್ರಮಾನದ ಕಾಲಕ್ಕೂ ಅಚಲವಾಗಿ, ಧೃಡವಾಗಿ ತಲೆಯೆತ್ತಿ ನಿಲ್ಲಬೇಕು ಎಂಬ ಕಾರಣದಿಂದ ಆಧುನಿಕ ಸಿಮೆಂಟ್ ಬಳಕೆಯಿಲ್ಲದೇ ಕೇವಲ ಕಲ್ಲು, ಮಣ್ಣು, ಗಾರೆ, ಸುಣ್ಣ ಇತ್ಯಾದಿಗಳನ್ನು ಬಳಸಿ ಕಟ್ಟುವ ಯೋಜನೆಯದು (ಹಳೆಕಾಲದ ದೇವಾಲಯಗಳು, ಕನ್ನಂಬಾಡಿ ಕಟ್ಟೆ – ಇತ್ಯಾದಿಗಳನ್ನು ಸ್ಮರಿಸಿಕೊಳ್ಳಬಹುದು).
ಅಬ್ಬಾ – ಎಂತ ಕಲ್ಪನೆ!
ಸರಿ, ಅದಕ್ಕಾಗಿ ಒಂದು ಯೋಜನೆ, ಸಮಿತಿ ಹಾಗೂ ಕಾಲಾನುಕ್ರಮಣಿಕೆಯನ್ನು ಸಿದ್ಧಪಡಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಕರುಣಿಸಿದರು. ರಾಮಾನುಗ್ರಹದಿಂದ ಕಾರ್ಯಾರಂಭವಾಯಿತು.