ಒಮ್ಮೆ ಒಬ್ಬ ವೃದ್ಧ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ರೈಲಿನಲ್ಲಿ ಅವನು ಗಾಢ ನಿದ್ದೆಯಲ್ಲಿ ಇರುವಾಗ ಅವನ ಕಿಸೆಯಲ್ಲಿ ಇದ್ದ ಅವನ ಪರ್ಸ್ ಕಿಸೆಯಿಂದ ಜಾರಿ ಬಿದ್ದು ಕಳೆದುಹೋಗುತ್ತದೆ. ಅದು ಒಬ್ಬ ಯುವಕನಿಗೆ ಸಿಗುತ್ತದೆ. ರೈಲಿನಲ್ಲಿ ತುಂಬ ಜನರಿದ್ದರಿಂದ ಅದು ಯಾರ ಪರ್ಸ್ ಎಂದು ತಿಳಿಯುವುದಿಲ್ಲ. ಆಗ ಯುವಕ ರೈಲು ನಿಲ್ದಾಣದಲ್ಲಿ-
‘ಯಾರು ನನಗೆ ಸಿಕ್ಕಿರುವ ಪರ್ಸ್‌ನ ಗುರುತು ಹೇಳುತ್ತಾರೋ ಅವರಿಗೆ ಅದನ್ನು ಕೊಡುತ್ತೇನೆ” ಎಂದು ಘೋಷಣೆ ಮಾಡುತ್ತಾನೆ.
ಆಗ ಅಲ್ಲಿಗೆ ಬಂದ ವೃದ್ಧ-
‘ಆ ಪರ್ಸ್‌ನಲ್ಲಿ ಒಂದು ಕೃಷ್ಣನ ಫೋಟೋ ಇದೆ” ಎಂದು ಗುರುತು ಹೇಳುತ್ತಾನೆ.
ಆ ಗುರುತು ಸರಿಯಾದ್ದರಿಂದ ಯುವಕ ವೃದ್ಧನಿಗೆ ಪರ್ಸ್ ಕೊಡುತ್ತಾನೆ.
ಆ ಪರ್ಸ್ ಪಡೆದ ವೃದ್ಧ ಹೇಳುತ್ತಾನೆ-
“ಈ ಪರ್ಸ್ ಅತ್ಯಂತ ಅಮೂಲ್ಯವಾದದ್ದು; ಅದರ ಹಿಂದೆ ಒಂದು ಕಥೆ ಇದೆ” ಎಂದು ಅದನ್ನು ಹೇಳುತ್ತಾನೆ.
“ನಾನು ಚಿಕ್ಕವನಾಗಿರುವಾಗ ನನ್ನ ತಂದೆಯನ್ನು ಕಾಡಿ, ಬೇಡಿ ಈ ಪರ್ಸ್‌ನ್ನು ಕೊಂಡುಕೊಂಡೆ. ಅದರಲ್ಲಿ ನನ್ನ ತಂದೆಯ ತಾಯಿಯ ಫೋಟೋ ಇಟ್ಟುಕೊಳ್ಳುತ್ತಿದ್ದೆ. ನನ್ನ ಮದುವೆಯಾದ ಅನಂತರ ಹೆಂಡತಿ ಫೋಟೋ, ಮಗ ಹುಟ್ಟಿದ ಅನಂತರ ಅವನ ಫೋಟೋ ಇಟ್ಟುಕೊಳ್ಳುತ್ತಿದ್ದೆ. ಆದರೆ ಅವನಿಗೆ ಮದುವೆ ಮಾಡಿದ ಅನಂತರ ಅವನು ಹೆಂಡತಿಯೊಂದಿಗೆ ನನ್ನ ಬಿಟ್ಟು ಬೇರೆಯಾಗಿ ಇರಲು ಪ್ರಾರಂಭಿಸಿದ. ಅಷ್ಟು ಹೊತ್ತಿಗೆ ನನ್ನ ತಂದೆ ತಾಯಿಗಳು ಮತ್ತು ಹೆಂಡತಿ ಸತ್ತು ಹೋಗಿದ್ದರು. ಇದ್ದ ಒಬ್ಬ ಮಗನೂ ನನ್ನ ಬಿಟ್ಟು ಹೋಗಿದ್ದ. ಇದರಿಂದ ಪಾಠ ಕಲಿತ ನಾನು ನನ್ನನ್ನು ಯಾವಾಗಲೂ ಬಿಟ್ಟು ಹೋಗದ ಕೃಷ್ಣನ ಫೋಟೋ ಇಟ್ಟುಕೊಳ್ಳಲು ಪ್ರಾರಂಭಿಸಿದೆ” ಎಂದು ಹೇಳಿದ.
ಈ ಜಗತ್ತಿನಲ್ಲಿ ಇರುವುದು ಎರಡೇ. ಒಂದು ನಶ್ವರ ಇನ್ನೊಂದು ಈಶ್ವರ.
Awanobbane satya