ಹೊಸಾಡದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ‘ಗೋ ಸಂಧ್ಯಾ’ ಸಂಪನ್ನ

ಗೋವು

ಕುಮಟಾ:ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾ ಅನುಗ್ರಹದೊಂದಿಗೆ ನಡೆಯುತ್ತಿರುವ ತಾಲೂಕಿನ ಮೂರೂರಿನ ಹೊಸಾಡದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಪ್ರೇಮಿಗಳ ವಾರ್ಷಿಕ ಗೋ ಸ್ನೇಹ ಕೂಟ “ಗೋ ಸಂಧ್ಯಾ” ಹಾಗೂ ಬೆಳದಿಂಗಳ ಊಟ ಕಾರ್ಯಕ್ರಮವು ಅತ್ಯಂತ ಅಭೂತಪೂರ್ವ ಯಶ ಕಂಡಿತು. ಈ ಬಾರಿ ಗೋ ಸಂಧ್ಯಾ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ಗೋ ಪ್ರೇಮಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ಮೂಲಕ ಸಂಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಅಮೃತಧಾರಾ ಗೋಶಾಲೆಯಲ್ಲಿ ಪ್ರತಿ ವರ್ಷ ಗೋವಿತ್ತ ನಮ್ಮ ಚಿತ್ತ ಎನ್ನುವ ಶೀರ್ಷಿಕೆಯಡಿ ಗೋ ಸಂಧ್ಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಗೋ ಪ್ರೇಮಿಗಳೆಲ್ಲ ಒಂದೆಡೆ ಸೇರಿ ಆ ದಿನವನ್ನು ಸಂಪೂರ್ಣ ಗೋವಿನೊಂದಿಗೆ ಕಳೆಯುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ.

ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .ಶ್ರೀರಾಮಚಂದ್ರಾಪುರ ಮಠದ ಜೊತೆಗೆ ಹಾಗೂ ಗೋ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಗೋಹತ್ಯೆ ನಿಷೇಧಕ್ಕೆ ಹಕ್ಕೊತ್ತಾಯವನ್ನು ಸಲ್ಲಿಸಿದ್ದ ಪರಮ ಪೂಜ್ಯ ಸಿದ್ಧಗಂಗಾ ಸ್ವಾಮೀಜಿಯವರ ದಿವ್ಯ ಚೇತನಕ್ಕೆ ನುಡಿನಮನ ಸಲ್ಲಿಸಿ ಮೌನಾಚರಣೆಯ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು .

ಗೋ ಪ್ರೇಮಿಗಳ ವಾರ್ಷಿಕ ಗೋಸ್ನೇಹ ಕೂಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತಧಾರಾ ಗೋಶಾಲೆಯ ಹೊಸಾಡದ ಗೌರವಾಧ್ಯಕ್ಷರಾದ ಶ್ರೀಮತಿ ಭಾರತಿ ಪಾಟೀಲ್ ವಹಿಸಿ ಮಾತನಾಡಿ ಇಂತಹ ನಡು ಕಾನನದಲ್ಲಿ ಇಷ್ಟು ಉತ್ತಮ ‌ಕಾರ್ಯಕ್ರಮ ಸಂಯೋಜನೆ ಗೊಂಡಿರುವುದು ಇಲ್ಲಿಯ ಕಾರ್ಯಕರ್ತರ ಶ್ರಮ ಹಾಗೂ ಗೋ ಪ್ರೀತಿಯ ಪ್ರತೀಕವಾಗಿದೆ ಎಂದು ಅವರು ಬಣ್ಣಿಸಿದರು.

ಸಭೆಯ ಮುಖ್ಯ ಅತಿಥಿಗಳಾಗಿ ಹಾಜರಿದ್ದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರಿಗೆ ಗೋ ಶಾಲೆಗೆ ರಸ್ತೆ ನಿರ್ಮಾಣದ ಕುರಿತಾಗಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ನಿಮ್ಮ ಋಣ ನನ್ನ ಮೇಲಿದೆ ಹಾಗಾಗಿ ಗೋವಿನ ಸೇವೆ ಜೊತೆಗೆ ನಿಮ್ಮ ಋಣ ತೀರಿಸುವ ಜವಾಬ್ದಾರಿ ನನ್ನದು. ಗೋ ಶಾಲೆಗೆ ಅಗತ್ಯ ಇರುವ  ರಸ್ತೆಯನ್ನು ಮಾಡಿಸಿಕೊಡುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು. ಅದರಲ್ಲಿಯೂ ರಸ್ತೆಯನ್ನು ಅಗಲೀಕರಣ ಮಾಡಿ ಹೊಸ ರಸ್ತೆ ನಿರ್ಮಿಸಿಯೇ ಸಿದ್ಧ ಎಂದು ಹೇಳಿದರು. ಗೋ ಶಾಲೆಗೆ ಸರಕಾರದಿಂದ ಬರಬೇಕಾದ ಹಣವನ್ನು ತರಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಸುತ್ತೇನೆ ಎಂದ ಅವರು ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀಗಳ ಆಶೀರ್ವಾದದಿಂದಲೇ ನಾನು ಈ ಮಟ್ಟಕ್ಕೆ ಬೆಳೆದವನು ಅವರ ಶಿಷ್ಯ ಎಂಬ ಬಗ್ಗೆ ಹೆಮ್ಮೆ ಇದೆ ಹಾಗೂ ಸದಾ ಅವರ ಜೊತೆಗೆ ಇರುವುದಾಗಿ ಅವರು ತಿಳಿಸಿದರು.

ಸಂಕಲ್ಪ ಸಂಸ್ಥೆಯ ಸಂಸ್ಥಾಪಕ ಪ್ರಮೋದ ಹೆಗಡೆ ಮಾತನಾಡಿ ಗೋವು ಮನುಕುಲದ ಆರಂಭದಿಂದಲೂ, ಮನುಷ್ಯರ ಪ್ರೀತಿಪಾತ್ರವಾದ ಪ್ರಾಣಿಯಾಗಿತ್ತು. ಆರ್ಯರು, ಭಾರತೀಯರ ನಾಗರಿಕ ಪರಂಪರೆಯಲ್ಲಿ ಗೋವಿನ ಬಳಕೆಯ ಮಹತ್ವ ಗೋಚರವಾಗುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂತು.

ಮನುಷ್ಯರಿಗೆ ಅಮೃತಸದೃಶವಾದ ಹಾಲನ್ನು ನೀಡುವ ಕಾಮಧೇನುವಿಗೆ ಜನ್ಮಕೊಟ್ಟ ತಾಯಿಯ ಸ್ಥಾನವನ್ನು ನೀಡಿದ ಹಿರಿಮೆ, ನಮ್ಮ ಪರಂಪರೆ. ಹಾಗಾಗಿ ಭಾರತೀಯ ಆಹಾರ ಸಂಸ್ಕೃತಿ ಯಲ್ಲಿ ಹಾಲು, ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಸ್ಥಾನಮಾನವಿದೆ ಅಂತಹ ಗೋವನ್ನು ಕಾಪಾಡಿಕೊಂಡು ಬದುಕು ಹಸನಾಗಿಸಿಕೊಳ್ಳುವ ಜವಾಬ್ದಾರಿ ನಮ್ಮದ್ದು ಎಂದರು.

ಉದ್ಯಮಿಗಳು ಹಾಗೂ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಕಾರ್ಯಕ್ರಮದಲ್ಲಿ ಹಾಜರಿದ್ದು ಗೋ ಶಾಲೆ ಸಾಲದಲ್ಲಿದೆ ಎಂಬ ವಿಷಯ ಕೇಳಿ ಬಹಳ ನೋವಾಗಿದೆ. ಗೋ ಸೇವೆ ಮಾಡುವುದು ಎಲ್ಲರ ಜವಾಬ್ದಾರಿ ಹಾಗಾಗಿ ನಾವುಗಳೂ ಅದರ ಜೊತೆ ಇರಬೇಕು ಹಾಗಾಗಿ ವಯಕ್ತಿಕವಾಗಿ ಧನ ಸಹಾಯ ಮಾಡುವುದಾಗಿ ಹೇಳಿ ಒಂದು ಲಕ್ಷ ರೂ ಘೋಷಣೆ ಮಾಡಿದರು.

ಕಾರವಾರದ ಪಹರೆ ವೇದಿಕೆಯ ಅಧ್ಯಕ್ಷರಾದ ಶ್ರೀ ನಾಗರಾಜ್ ನಾಯ್ಕ್ ಬಾಸ್ಗೋಡ್ ಮಾತನಾಡಿ ಪರಮಾತ್ಮನಿಗೆ ಸಮೀಪವಾಗಲು ನಾಗರಿಕ ಬದುಕಿನಲ್ಲಿ ಗೋ ಸೇವೆ, ಸಂರಕ್ಷ ಣೆ ಅನಿವಾರ್ಯವಾಗಿದ್ದು, ಗೋ ಸಂರಕ್ಷ ಣೆಯಿಂದ ದೇಶ ಸುಭಿಕ್ಷ ವಾಗಬಲ್ಲದು ಎಂದರು.

ಮಕ್ಕಳಿಗೆ ಗೋವಿನೊಂದಿಗೆ ಒಡನಾಟ.

ಆಕಳ ಕರು ಎಂದರೆ ಮಕ್ಕಳಿಗೆ ಬಲು ಪ್ರೀತಿ ಎಂಬುದನ್ನು ಮನಗಂಡು ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗೋ ಹಾಗೂ ಕರುಗಳೊಡನೆ ಒಡನಾಟ ಬೆಳೆಸುವ ವ್ಯವಸ್ಥೆ ಮಾಡಲಾಗಿದ್ದು ಮಕ್ಕಳು ಅದರ ಸವಿ ಸವಿದರು. ಕರುಗಳ ಸ್ವಚ್ಛಂದ ಓಡಾಟದ ಜೊತೆಗೆ ಮಕ್ಕಳಿಗೆ ಆ ಕರುಗಳ ಜೊತೆ ಒಡನಾಡುವ ಅವಕಾಶ ಪಡೆದ ಮಕ್ಕಳ ಸಂತಸಕ್ಕೆ ಪರವೇ ಇರಲಿಲ್ಲ.

ವೇದಿಕೆಯಲ್ಲಿ ನಡೆಯಲಿದೆ ದಾನಿಗಳ ಸ್ಮರಣೆ .

ಕಳೆದ ಒಂದು ದಶಕದಿಂದ ಗೋಶಾಲೆಗೆ ತಮ್ಮ ತನು ಮನ ಧನದಿಂದ ಸಹಕಾರ ನೀಡುತ್ತಿರುವ ಅನೇಕ ದಾನಿಗಳನ್ನು ಸ್ಮರಿಸಿ ಅವರನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು. ಗೋ ಸಾಕಾಣಿಕೆ ಹಾಗೂ ಗೋಶಾಲೆಯ ಸದಸ್ಯತ್ವವನ್ನು ಪಡೆದುಕೊಳ್ಳುವುದರ ಮೂಲಕ ಗೋಶಾಲೆಯ ಜೊತೆಗಿದ್ದು ಸದಾ ಕಾಲ ಗೋಶಾಲೆಗೆ ಬೆನ್ನೆಲುಬಾಗಿ ಸಹಾಯ ಮಾಡುತ್ತಿರುವ ದಾನಿಗಳನ್ನು ಗುರುತಿಸಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು ಹಾಗೂ ಗೋವಿಗೆ ಹುಲ್ಲಿನ ಕೊಡುಗೆ ನೀಡಿದ ಅನೇಕ ದಾನಿಗಳನ್ನು ಇಲ್ಲಿ ಗುರ್ತಿಸಿ ಗೌರವಿಸಲಾಯಿತು .ಸುಮಾರು ಐವತ್ತಕ್ಕೂ ಹೆಚ್ಚಿನ ದಾನಿಗಳಿಗೆ ಗೋ ಉತ್ಪನ್ನಗಳ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು .

ಗೋಪಾಲಕರಿಗೆ ಗೌರವ

ಹೊಸಾಡದ ಅಮೃತಧಾರಾ ಗೋಶಾಲೆಯಲ್ಲಿ ಹಗಲಿರುಳೆನ್ನದೆ ಕಾರ್ಯಕರ್ತರಾಗಿ ಹಾಗೂ ಗೋ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅನೇಕರನ್ನು ಗುರುತಿಸಿ ಈ ಸಭೆಯಲ್ಲಿ ಗೌರವಿಸಲಾಯಿತು. ಬೆಳಗಿನ ಪ್ರಾರಂಭದಲ್ಲಿ ಗೋಮೂತ್ರವನ್ನು ಹಿಡಿಯುವುದರ ಮೂಲಕ ಪ್ರಾರಂಭವಾಗುವ ಇವರ ಕಾಯಕ ದಿನದ ಇಪ್ಪತ್ನಾಲ್ಕು ಗಂಟೆಯೂ ನಡೆಯುತ್ತಿರುತ್ತದೆ ಹೀಗಾಗಿ ಇವರ ಅನನ್ಯ ಸೇವೆಯನ್ನು ಸ್ಮರಿಸಿ ಗೋ ಸಂಧ್ಯಾ ವೇದಿಕೆಯಲ್ಲಿ ಅವರನ್ನು ಪುರಸ್ಕರಿಸಲಾಯಿತು.ಸುಮಾರು 25ಕ್ಕೂ ಹೆಚ್ಚು ಗೋ ಸೇವಕರನ್ನು ಗೌರವಿಸಿದ್ದು ವಿಶೇಷವಾಗಿತ್ತು.

ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

ಗೋ ಸಂಧ್ಯಾ ಕಾರ್ಯಕ್ರಮದಲ್ಲಿ ವಿಶೇಷ ಸಂಗೀತ ಸಂಧ್ಯಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿ ಶ್ರೀ ಸುಧೀರ್ ಹೆಗಡೆ ಅವರಿಂದ ಬಾನ್ಸುರಿ ವಾದನ ಹಾಗೂ ಕುಮಾರಿ ರಮ್ಯಾ ಭಟ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಿತು . ಪ್ರಗತಿ ವಿದ್ಯಾಲಯ ಮೂರೂರು ಹಾಗೂ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನ ಗೆದ್ದವು.

ಸುಮಾರು ಮೂರು ಸಾವಿರಕ್ಕೂ ಅಧಿಕ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಗೋಶಾಲೆಯ ಸಮಗ್ರ ಚಿತ್ರಣವನ್ನು ಹಾಗೂ ಗೋಶಾಲೆಯ ಈಗಿನ ಪರಿಸ್ಥಿತಿಯ ಕುರಿತಾಗಿ  ಗೋಶಾಲೆಯ ಅಧ್ಯಕ್ಷರಾದ ಶ್ರೀ ಮುರಳೀಧರ ಪ್ರಭು ವಿವರಿಸಿದರು .ಗೋಶಾಲೆ ಪ್ರಾರಂಭದಿಂದ ಇಲ್ಲಿಯವರೆಗೆ ನಡೆದ ರೀತಿಯನ್ನು ಕೋಶಾಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ಟವರದಿಯ ಮೂಲಕ ಸಭೆಗೆ ತಿಳಿಸಿದರು .ಶ್ರೀ ಅರುಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು .ಎಂ.ಕೆ ಹೆಗಡೆ ವಂದಿಸಿದರು.

ಈ ಸಂದರ್ಭದಲ್ಲಿ ಕುಮಟಾದ ಮಂಡಲ ಅಧ್ಯಕ್ಷರಾದ ಶ್ರೀ ಮಂಜುನಾಥ ಭಟ್ಟ ಸುವರ್ಣಗದ್ದೆ ,ಅಂಕೋಲಾ ಗೋ ಪರಿವಾರದ ಅಧ್ಯಕ್ಷರಾದ ನಿತ್ಯಾನಂದ ನಾಯ್ಕ, ಹೊನ್ನಾವರದ ಯೋಗೇಶ ರಾಯ್ಕರ್ ,ಡಾಕ್ಟರ್ ಜಿ.ಜಿ ಹೆಗಡೆ ಇನ್ನಿತರ ಪ್ರಮುಖರು ಹಾಜರಿದ್ದರು.

 

Author Details


Srimukha

Leave a Reply

Your email address will not be published. Required fields are marked *