ನಂತೂರು: ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಉತ್ತಮ ಗುಣನಡತೆಗಳ ಮೂಲಕ ಹೆತ್ತವರಿಗೆ, ಗುರುಹಿರಿಯರಿಗೆ, ವಿದ್ಯಾಸಂಸ್ಥೆಗೆ ಕೀರ್ತಿ ತರಬೇಕು. ಮಾದಕ ದ್ರವ್ಯವ್ಯಸನಗಳಿಗೆ ಬಲಿಯಾಗಬಾರದು. ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡುವುದರ ಜತೆಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತದೆ. ಇಲಾಖೆಯು ಮಾದಕ ವಸ್ತು ವಿತರಕರ ಜಾಲವನ್ನು ಪತ್ತೆ ಮಾಡಬೇಕು ಎಂದು ದ.ಕ.ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ ಒತ್ತಾಯಿಸಿದರು.
ಜನವರಿ 28, ಸೋಮವಾರದಂದು ಮಂಗಳೂರು ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀಭಾರತೀ ಪದವಿ ಕಾಲೇಜು, ಎನ್.ಎಸ್.ಎಸ್. ಘಟಕ, ಮಹಿಳಾ ಸಬಲೀಕರಣ ಘಟಕ, ಪದವಿಪೂರ್ವ ಕಾಲೇಜು, ಮಂಗಳೂರು ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆ ಜಂಟಿಯಾಗಿ ಹಮ್ಮಿಕೊಂಡ ಮಾದಕ ವಸ್ತುಗಳ ಬಗ್ಗೆ ಜಾಗರಣ ಅಭಿಯಾನ, ಸೈಬರ್ ಕ್ರೈಮ್ ಮತ್ತು ಮಹಿಳೆಯರ ಸ್ವ-ರಕ್ಷಣೆ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮಾಲಾಡಿ ಅವರು ಮಾತನಾಡಿ, ಮಾದಕ ದ್ರವ್ಯಗಳನ್ನು ಸೇವಿಸಿದ ಬಳಿಕ ಮೆದುಳು ನಿಯಂತ್ರಣ ಕಳೆದುಕೊಳ್ಳುತ್ತದೆ. ಆಗ ಆರೋಗ್ಯ ಹದಗೆಡುತ್ತದೆ. ಯುವಕರೂ ಯುವತಿಯರೂ ಈ ಜಾಲದಲ್ಲಿ ಸಿಲುಕಿ, ಹೊರಬರಲಾರದೇ ಚಡಪಡಿಸುವಂತಾಗುತ್ತದೆ. ಆದುದರಿಂದ ಅಂತಹ ಮೋಸದ ಜಾಲಕ್ಕೆ ಬಲಿಬೀಳಬಾರದು. ಮಹಿಳೆಯರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಸ್ವ-ರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ, ಮಂಗಳೂರು ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರಾಮಕೃಷ್ಣ ಕೆ. ಕೆ. ಅವರು ಮಾತನಾಡಿ ದ.ಕ. ಜಿಲ್ಲೆ ಮಾದಕದ್ರವ್ಯಜಾಲದಲ್ಲಿ ಸಿಲುಕದೇ ಉತ್ತಮ ಜಿಲ್ಲೆಯೆಂದು ಹೆಸರುಗಳಿಸಬೇಕು. ಅದಕ್ಕೆ ಕಾಲೇಜುಗಳಲ್ಲಿರುವ ಯುವಕರು ಜಾಗರೂಕರಾಗಬೇಕು. ಮೋಸ, ವಂಚನೆಗಳಿಗೆ ಬಲಿಯಾಗಬಾರದು ಎಂದು ಎಚ್ಚರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರು ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯ ಶ್ರೀ ಲಕ್ಷ್ಮೀಶ ಎ. ಅವರು ಮಾತನಾಡಿ, ಅನೇಕ ವಿದ್ಯಾರ್ಥಿಗಳು ಈ ಜಾಲದಲ್ಲಿ ಸಿಲುಕಿರುವುದನ್ನು ಪತ್ತೆ ಹಚ್ಚಿದ್ದೇವೆ. ಪ್ರಕರಣ ದಾಖಲಿಸಿ, ಬಂಧಿಸುತ್ತೇವೆ. ಆಗ ಯುವಕರು ತಮ್ಮ ಜೀವನಪರ್ಯಂತ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದುದರಿಂದ ಯುವಕರು ಎಚ್ಚತ್ತುಕೊಳ್ಳಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ನೀಡುವ ಶ್ರೀಭಾರತೀ ಸಮೂಹ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವುದು ಇಲ್ಲಿನ ವಿದ್ಯಾರ್ಥಿಗಳ ಭಾಗ್ಯ ಎಂದು ಹೇಳಿದರು.
ಆಡಳಿತಾಧಿಕಾರಿ ಪ್ರೊ. ಕೆ. ಶಂಕರ ಭಟ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ., ಪ.ಪೂ. ಕಾಲೇಜು ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್, ಹಿರಿಯ ಉಪನ್ಯಾಸಕಿ ಶ್ರೀಮತಿ ಸುಭದ್ರಾ ಭಟ್, ಶ್ರೀ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.
ಎನ್.ಎಸ್.ಎಸ್. ಶಿಬಿರಾಧಿಕಾರಿ ಶ್ರೀ ಅಶೋಕ್ ಎಸ್. ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಗಂಗಾರತ್ನ ಮುಗುಳಿ ವಂದಿಸಿದರು. ವಿದ್ಯಾರ್ಥಿ ನಾಯಕಿ ಕು. ಜಾಹ್ನವಿ ನಿರೂಪಿಸಿದರು.