ಶ್ರೀ ಸಂಸ್ಥಾನದವರ ಯೋಜನೆಗಳಲ್ಲಿ ಭಾಗಿಯಾಗುವುದೇ ಸೌಭಾಗ್ಯ : ಜ್ಯೋತಿ ಕೇಶವ ಭಟ್

ಮಾತೃತ್ವಮ್
ಅಳಿಕೆ ಗ್ರಾಮದ ಎರುಂಬು ಕೇಶವ ಭಟ್ ಇವರ ಪತ್ನಿಯಾಗಿರುವ ಜ್ಯೋತಿ ಕೆ.ಭಟ್ ವೃತ್ತಿಯಲ್ಲಿ ಉಪನ್ಯಾಸಕಿಯಾದರೂ ಶ್ರೀಮಠದ ಸೇವಾಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವವರು.

ನೆಗಳಗುಳಿ ಮಹಾಬಲೇಶ್ವರ ಭಟ್ ಶಂಕರಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಜ್ಯೋತಿಗೆ ಬಾಲ್ಯದಿಂದಲೇ ಗೋವುಗಳ ಮೇಲೆ ವಿಪರೀತ ಪ್ರೀತಿ. “ತವರುಮನೆಯಲ್ಲಿದ್ದ ದೇಶೀ ತಳಿಯ ಹಸುವಿನ ಹಾಲು ಕುಡಿದೇ ಬೆಳೆದ ನನಗೆ ಈಗಲೂ ಗೋವುಗಳೆಂದರೆ ವಿಶೇಷ ವ್ಯಾಮೋಹ. ಆದರೆ ನಮ್ಮ ಉದ್ಯೋಗ ನಿಮಿತ್ತ ಪೇಟೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಬಂದ ಕಾರಣ ಶ್ರೀಗುರುಗಳ ಗೋಸೇವಾ ಯೋಜನೆಗಳಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಕಾರ ನೀಡುತ್ತೇವೆ” ಎನ್ನುತ್ತಾರೆ ಪ್ರಸ್ತುತ ಮಂಗಳೂರಿನ ಕೊಡಿಕಲ್ ನಿವಾಸಿಗಳಾಗಿರುವ ಜ್ಯೋತಿ.

ಇಲೆಕ್ಟ್ರಾನಿಕ್ ಆಂಡ್ ಕಮ್ಮೂನಿಕೇಷನ್ ವಿಭಾಗದ ಡಿಪ್ಲೊಮಾದಲ್ಲಿ ರೇಂಕ್ ಗಳಿಸಿದರೂ ವಿವಾಹವಾಗಿ ಪತಿಯ ಜೊತೆ ಗುಜರಾತ್ ಚೆನ್ನೈ ಮೊದಲಾದ ನಗರವಾಸದ ನಡುವೆ ಉದ್ಯೋಗಕ್ಕೆ ಹೋಗಲು ಅನನುಕೂಲವಾದರೂ ಇಬ್ಬರು ಮಕ್ಕಳು ಜನಿಸಿದ ನಂತರ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ ಮಂಗಳೂರು ಬಲ್ಮಠದ ಸರಕಾರಿ ಕಾಲೇಜ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿಯಾಗಿರುವ ಜ್ಯೋತಿಯ ಸಾಧನೆಯ ಹಾದಿ ಇತರ ಮಹಿಳೆಯರಿಗೆ ಸ್ಪೂರ್ತಿದಾಯಕ.

“ಗುರಿ ತಲುಪಬೇಕೆಂಬ ಹಂಬಲವೊಂದು ಮನದಲ್ಲಿ ಗಟ್ಟಿಯಾಗಿದ್ದರೆ ಯಾವುದೇ ಕಾರ್ಯವೂ ಅಸಾಧ್ಯವಲ್ಲ ಎಂಬುದಕ್ಕೆ ನಾನೇ ಮಾದರಿ ” ಎಂದು ಹೇಳುವ ಜ್ಯೋತಿ ಪ್ರಸ್ತುತ ಮಂಗಳೂರು ಮಧ್ಯವಲಯದ ವಿದ್ಯಾರ್ಥಿವಾಹಿನಿ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಸದ ಮಾತೆಯಾಗಿ ಸೇವೆ ಮಾಡಲು ಆರಂಭದಲ್ಲಿ ತುಸು ಅಳುಕಾದರೂ ಗೋಮಾತೆಯ ಸೇವೆಯ ಭಾಗ್ಯ ಇದು ಎಂದು ಭಾವಿಸಿ ಮಾತೃತ್ವಮ್ ಯೋಜನೆಗೆ ಕೈ ಜೋಡಿಸಿದ ಜ್ಯೋತಿ ಅವರು ನಿರೀಕ್ಷೆಗಿಂತಲೂ ವೇಗವಾಗಿ ತಮ್ಮ ಎರಡು ವರ್ಷಗಳ ಗುರಿ ತಲುಪಿದವರು.

“ಮೊದಲ ವರ್ಷದ ಸಂಗ್ರಹ ಪರಿಚಿತರು,ಆತ್ಮೀಯರು ನೀಡಿದರೆ ,ಎರಡನೇ ವರ್ಷದ ಮೊತ್ತದ ಸಂಗ್ರಹವಾಗಿದ್ದು ಬಂಧುಗಳ ಸಹಕಾರದಿಂದ ಎಂದು ಸ್ಮರಿಸುವ ಇವರು ವಿಶ್ವ ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದವರು. ಅಕ್ಷತಾಭಿಯಾನದ ಸಂದರ್ಭದಲ್ಲಿ ಮನೆಮನೆಗೆ ಭೇಟಿ ನೀಡಿದ ಅನುಭವವು ಮಾಸದ ಮಾತೆಯಾಗಿ ಜ‌ನಸಂಪರ್ಕ ಮಾಡಲು ಸುಲಭವಾಯಿತು. ಅಭಯಾಕ್ಷರ ಸಹಿ ಸಂಗ್ರಹ ಕಾರ್ಯದಲ್ಲೂ ಸಂಪೂರ್ಣ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡ ಇವರು ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸುಮಾರು ೮೦ ೦೦೦ ಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಿದವರು. ದೇವಸ್ಥಾನ, ಜಾತ್ರೆ ಮುಂತಾದ ಜನರು ಸೇರುವೆಡೆಗಳಲ್ಲೆಲ್ಲ ತಮ್ಮ ತಂಡದೊಂದಿಗೆ ಜನರ ಸಹಿ ಸಂಗ್ರಹ ಮಾಡಿದ ವಿಧಾನ ಎಂದೂ ಮರೆಯಲಾರೆ ಎನ್ನುತ್ತಾರೆ ಇವರು.

” ಪೂರ್ವ ಜನ್ಮದ ಸುಕೃತದಿಂದ ನಮ್ಮ ಸಂಸ್ಥಾನದವರಂತಹ ಗುರುಗಳು ನಮಗೆ ದೊರಕಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದರೆ ಬದುಕಿನಲ್ಲಿ ಖಂಡಿತಾ ಯಶಸ್ಸು ದೊರೆಯುತ್ತದೆ. ನಮ್ಮ ಗುರುಗಳು ಮಾತೃತ್ವಮ್ ಯೋಜನೆಯನ್ನು ರೂಪೀಕರಿಸಿದ ಕಾರಣ ಅದೆಷ್ಟೋ ಮಹಿಳೆಯರಿಗೆ ಶ್ರೀಮಠದ ಸೇವೆ, ಗೋಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಪುಣ್ಯ ದೊರಕಿತು. ಜೊತೆಗೆ ಇದುವರೆಗೂ ಜಗತ್ತು ಕಂಡು ಕೇಳಿ ಅರಿಯದ ಈ ಕೊರೋನಾ ಮಹಾಮಾರಿಯ ನಡುವೆಯೂ ಗೋಮಾತೆಯ ಮೇವಿಗಾಗಿ ಒಂದಿಷ್ಟಾದರೂ ಹಣ ಸಂಗ್ರಹವಾಗಿದ್ದು ಈ ಯೋಜನೆಯ ಮೂಲಕವೇ . ಶ್ರೀಗಳ ದೂರದೃಷ್ಟಿಯ ಈ ಯೋಜನೆಯಲ್ಲಿ ಭಾಗಿಯಾಗುವ ಸದವಕಾಶ ದೊರೆತವರೆಲ್ಲ ಭಾಗ್ಯವಂತರು” ಎಂಬುದು ಇವರ ಭಾವಪೂರ್ಣ ಮಾತುಗಳು.

ಸಾಹಿತ್ಯ, ಸಂಗೀತ, ಓದು,ಸಮಾಜಸೇವೆಗಳಲ್ಲಿ ಆಸಕ್ತಿ ಹೊಂದಿರುವ ಜ್ಯೋತಿ ಅವರ ಪತಿ ಕೇಶವ ಭಟ್ ಅವರು ಸಹಾ ಶ್ರೀಮಠದ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವವರು. ಶ್ರೀಮಠದ ವಿವಿಧ ಯೋಜನೆಗಳಿಗೆ ತಮ್ಮಿಂದ ಸಾಧ್ಯವಾದಷ್ಟು ಸಮರ್ಪಣೆ ಮಾಡುವ ಈ ದಂಪತಿಗಳು ಇತ್ತೀಚೆಗೆ ಈ ವಿಚಾರದಲ್ಲಿ ಶ್ರೀಗುರುಗಳ ವಿಶೇಷ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದವರು.

ಮಗಳು ಪ್ರಜ್ಞಾ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೆ ಪುತ್ರ ಪ್ರಜ್ವಲ್ ಪಿಯುಸಿ ವಿದ್ಯಾರ್ಥಿ.

“ನಮ್ಮ ಶ್ರೀಮಠದ ಗೋಸೇವೆಯ ಕಾರ್ಯವು ಇತರ ಸಮಾಜದವರಿಗೂ ಬಹಳ ಮೆಚ್ಚುಗೆಯಾದ ವಿಚಾರ. ಗೋಸೇವೆಗೆ ಸಂಬಂಧಿಸಿದ ಕಾರ್ಯದಲ್ಲಿ ನಮ್ಮ ಮಠದ ಬಗ್ಗೆ ಒಳ್ಳೆಯ ಅಭಿಪ್ರಾಯ ಸೂಚಿಸುವಾಗ ನಿಜಕ್ಕೂ ಹೆಮ್ಮೆಯೆನಿಸುತ್ತದೆ . ಶ್ರೀಮಠದ ಸೇವೆ, ಗೋಸೇವೆಗಳಲ್ಲಿ ಸಿಗುವ ಆನಂದ ಅನಿರ್ವಚನೀಯ. ಅದನ್ನು ಮಾತುಗಳ ಮೂಲಕವಾಗಲಿ,ಬರಹದ ಮೂಲಕವಾಗಲಿ ವ್ಯಕ್ತಪಡಿಸುವುದು ಅಸಾಧ್ಯ. ಆ ನೆಮ್ಮದಿ ಸಂತಸ ಅನುಭವಿಸಿದವರಿಗೇ ಗೊತ್ತು” ಎಂದು ನುಡಿಯುವ ಜ್ಯೋತಿ ಕೇಶವ ಭಟ್ ಅವರಿಗೆ  ಇನ್ನು ಮುಂದೆಯೂ ತಮ್ಮಿಂದ ಸಾಧ್ಯವಾದಷ್ಟು ರೀತಿಯಲ್ಲಿ ಸೇವೆ ಸಲ್ಲಿಸಬೇಕೆಂಬ ಗುರಿ ಹೊಂದಿದವರು.

Author Details


Srimukha

Leave a Reply

Your email address will not be published. Required fields are marked *