ಕಲಾ ಸಾಧನೆಯ ಯುವ ಪ್ರತಿಭೆ ರವೀಂದ್ರ ಹೆಗಡೆ

ಅಂಕುರ

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲಾ ಲೋಕದಲ್ಲಿ ಸ್ವ ಪರಿಶ್ರಮದಿಂದ ಅಧ್ಯಯನ ನಡೆಸಿ ಛಾಪು ಮೂಡಿಸುತ್ತಿರುವ ಪ್ರತಿಭೆಯೇ ಸಿದ್ದಾಪುರದ ರಾಮಕೃಷ್ಣ ಹೆಗಡೆ ಮತ್ತು ರೇಖಾ ದಂಪತಿ ಪುತ್ರ ರವೀಂದ್ರ ಹೆಗಡೆ.

ಮಣ್ಣಾಟದಿಂದ ಕುಂಚದವರೆಗೆ….:
‘ಬಾಲ್ಯದ ದಿನಗಳಲ್ಲಿ ದಿನವಿಡೀ ಮಣ್ಣಿನಲ್ಲೇ ಆಟ ಆಡುತ್ತಿದ್ದೆ. ಮಣ್ಣಿನಿಂದ ಬಟ್ಟೆಗಳನ್ನು ಕಲೆ ಮಾಡಿಕೊಳ್ಳುತ್ತಿದ್ದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನನ್ನ ತಾಯಿ ಬಣ್ಣದ ಬ್ರಶ್ ಕೊಟ್ಟು ಕೂರಿಸುತ್ತಿದ್ದರು. ಅಂದು ಬಟ್ಟೆ ಕಲೆ ಆಗಬಾರದು ಎಂಬ ಉದ್ದೇಶಕ್ಕೆ ಅಮ್ಮ ನೀಡುತ್ತಿದ್ದ ಬಣ್ಣ ಮತ್ತು ಬ್ರಶ್ ಇಂದು ನನ್ನನ್ನು ಕಲಾವಿದನನ್ನಾಗಿ ಮಾಡಿದೆ ಎನ್ನುತ್ತಾರೆ ರವೀಂದ್ರ.


ಪ್ರೌಢ ಶಿಕ್ಷಣವನ್ನು ರಾಮಚಂದ್ರಾಪುರ ಮಠದ ಶ್ರೀ ಭಾರತೀ ಗುರುಕುಲzಲ್ಲಿ ಆದ್ಯಯನ ನಡೆಸಿರುವ ಈತ, ಗುರುಕುಲದ ಪರಿಸರ, ಆಧ್ಯಾತ್ಮದ ಸೆಳೆತ, ಪ್ರಕೃತಿಯ ಸೊಬಗೇ ನನಗೆ ಸ್ಪೂರ್ತಿ ಎನ್ನುವುದು ರವೀಂದ್ರನ ಅಭಿಮತ.
ಇನ್ನೂ ವಿಶೇಷವೆಂದರೆ ರವೀಂದ್ರ ಚಿತ್ರಕಲೆಯ ಕುರಿತು ಯಾರ ಬಳಿಯೂ ಅಧ್ಯಯನ ನಡೆಸಿಲ್ಲ! ತನ್ನ ಸ್ವ ಪರಿಶ್ರಮದಿಂದಲೇ ಕಲಾವಿದನಾಗಿ ಗುರುತಿಸಿಕೊಂಡವನು. ಪ್ರಸ್ತುತ ಡಿಪ್ಲೋಮಾ ಅಂತಿಮ ವರ್ಷದಲ್ಲಿ ಅಧ್ಯಯನ ನಡೆಸುತ್ತಿದ್ದರೂ ಈತನಿಗೆ ಕಲೆಯೆಂದರೆ ಪಂಚಪ್ರಾಣ. ತನ್ನ ಮೊದಲ ಚಿತ್ರವನ್ನು ಗೋಸ್ವರ್ಗದಲ್ಲಿ ಶ್ರೀಸಂಸ್ಥಾನದವರಿಗೆ ಸಮರ್ಪಿಸಿದ ಬಳಿಕ ಮತ್ತಷ್ಟು ಹುರುಪನ್ನು ಪಡೆದು ದೊಡ್ಡ ದೊಡ್ಡ ಚಿತ್ರ ರಚನೆಗಳೊಂದಿಗೆ ಹೆಜ್ಜೆ ಹಾಕುತ್ತಿದ್ದಾನೆ.
ಈತನ ಕಲೆಯನ್ನು ಗುರುತಿಸಿದ ಪ.ಪೂ.ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಉನ್ನತ ಕಲಾ ಅಧ್ಯಯನಕ್ಕೆ ಅಭಿನವ ರವಿವರ್ಮಾ ಎಂದೇ ಖ್ಯಾತರಾದ ಡಾ.ಬಿ.ಕೆ.ಎಸ್. ವರ್ಮಾ ಅವರಲ್ಲಿಗೆ ಕಳುಹಿಸಿದರು. ಅಂದಿನಿಂದ ಕಳೆದ ಒಂದೂವರೆ ವರ್ಷಗಳಿಂದ ವರ್ಮಾ ಅವರ ಸಂಪರ್ಕದಲ್ಲಿ ಅಧ್ಯಯನ ನಡೆಸುತ್ತಿದ್ದಾನೆ.


ಅಲ್ಲದೇ ಅಂತಾರಾಷ್ಟ್ರೀಯ ವೇಗದ ಪೇಂಟಿಂಗ್ ಕಲಾವಿದ ವಿಲಾಸ್ ನಾಯಕ, ಖ್ಯಾತ ಮೂರ್ತಿ ಕಲಾವಿದ ಶಿವಕುಮಾರ ಹಿರೇಮಠ, ಡಾ.ಅನೀಶ್ ವಿದ್ಯಾಶಂಕರ್ ಸಂಪರ್ಕದಲ್ಲಿಯೂ ಈತ ಅಧ್ಯಯನ ನಡೆಸಿದ್ದಾನೆ.
ಈಗಾಗಲೇ ಸಿದ್ದಾಪುರದಲ್ಲಿ ಚಿತ್ರಪ್ರದರ್ಶನವನ್ನೂ ನಡೆಸಿರುವ ಈತ, ಕನ್ನಡ ಚಿತ್ರರಂಗದ ನಟರಾದ ಧನವೀರ್, ರಕ್ಷಿತ್ ಶೆಟ್ಟಿ, ಉಪೇಂದ್ರ, ಹರೀಶ್ ರೈ, ದರ್ಶನ್ ಅವರ ಭಾವಚಿತ್ರಗಳನ್ನು ರಚಿಸಿ ಗಮನ ಸೆಳೆದಿದ್ದಾನೆ.


ಶ್ರೀಸಂಸ್ಥಾನದವರ ಆಶೀರ್ವಾದವೇ ದೊಡ್ಡ ಪ್ರಶಸ್ತಿ:
ಶಾಲಾ ದಿನಗಳಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ, ಚಿತ್ರಕಲಾ ಸ್ಪರ್ಧೆ, ಗಣೇಶ ಚತುರ್ಥಿ ಚಿತ್ರಕಲಾ ಸ್ಪರ್ಧೆ, ಕಾಲೇಜಿನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಕೆಲವು ಬಹುಮಾನ ಪಡೆದಿದ್ದರೂ, ಶ್ರೀಸಂಸ್ಥಾನದವರ ಆಶೀರ್ವಾದವೇ ದೊಡ್ಡ ಪ್ರಶಸ್ತಿ. ಜೊತೆಗೆ ಗುರುವಾಗಿ ಡಾ.ಬಿ.ಕೆ.ಎಸ್. ವರ್ಮಾ ಅವರು ಸಿಕ್ಕಿದ್ದು ನನ್ನ ಭಾಗ್ಯ ಎನ್ನುವುದು ರವೀಂದ್ರನ ಅಂಬೋಣ.

Author Details


Srimukha

1 thought on “ಕಲಾ ಸಾಧನೆಯ ಯುವ ಪ್ರತಿಭೆ ರವೀಂದ್ರ ಹೆಗಡೆ

  1. ಗುರುರಾಮರ ಆಶಿರ್ವಾದಗಳು ಸದಾ ಇರಲಿ.
    ಇನ್ನು ಹೆಚ್ಚಿನ ಸಾಧನೆಯ ಮಾಡಯವಂತಾಗಲಿ ರವಿ…🙏

Leave a Reply

Your email address will not be published. Required fields are marked *