ಕಾಮಿಡಿ ಲೋಕದ ಪ್ರಚಂಡ ಅನೂಪ್

ಅಂಕುರ

ದಕ್ಷಿಣ ಭಾರತದ ಪ್ರಸಿದ್ಧ ವಾಹಿನಿ ಜೀ ಕನ್ನಡ ವಾಹಿನಿ ನಡೆಸುವ ಜನಪ್ರಿಯ ಕಾಮಿಡಿ ಶೋ ‘ಡ್ರಾಮಾ ಜ್ಯೂನಿಯರ್ಸ್’. ಇಂತಹ ಜನಪ್ರಿಯ ಶೋನಲ್ಲಿ ತನ್ನ ಹಾಸ್ಯದ ಮೂಲಕ ಗಮನ ಸೆಳೆದ ಪ್ರತಿಭೆ ಅನೂಪ್ ರಮಣ ಎನ್.ಎಂ.

ಗಡಿನಾಡು ಕಾಸರಗೋಡಿನ ಮುಳ್ಳೇರಿಯಾದ ಮಹಾಲಿಂಗೇಶ್ವರ ಎನ್. ಮತ್ತು ಪದ್ಮಾ ಕೆ. ದಂಪತಿಯ ಪುತ್ರ ಅನೂಪ್ ರಮಣ ಈ ಅಪರೂಪದ ಸಾಧಕ.

ಅವಕಾಶವೇ ಅನಿರೀಕ್ಷಿತ!
ಚಿಕ್ಕವನಿದ್ದಾಗಲೇ ಯಕ್ಷಗಾನ ಕಲೆಯತ್ತ ಆಕರ್ಷಿತನಾಗಿದ್ದ ಅನೂಪ್, ಆಗಲೇ ಯಕ್ಷಗಾನದ ಹಾಸ್ಯ ಪ್ರಸಂಗಗಳನ್ನು ಅನುಕರಿಸಲು ತೊಡಗಿದ್ದ. ಶ್ರೀಭಾರತೀ ವಿದ್ಯಾಪೀಠದ ವಾರ್ಷಿಕೋತ್ಸವದಲ್ಲಿ ಮಾಡಿದ ನಾಟಕವೇ ರಂಗಪ್ರವೇಶ ರಂಗಪ್ರವೇಶ ಎಂದರೆ ತಪ್ಪಾಗಲಾರದು. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಭಾಗವಹಿಸಲು ಸಿಕ್ಕ ಅವಕಾಶ ಕೂಡ ಅನಿರೀಕ್ಷಿತ. 10 ದಿನದೊಳಗೆ ತಯಾರಿ ಮಾಡಿಕೊಂಡು ಮೆಗಾ ಆಡಿಷನ್‌ಗೆ ಬನ್ನಿ ಎಂದು ಜೀ ವಾಹಿನಿಯಿಂದ ಕರೆ ಬಂತು. ಏನಾದರೂ ಆಗಲಿ ಎಂದು ಭಾಗವಹಿಸಿದೆ. ಆಯ್ಕೆಯಾದ ಮೂವತ್ತು ಮಂದಿಯಲ್ಲಿ ನಾನು ಮಾತ್ರ ಡ್ರಾಮಾ ತರಬೇತಿ ಪಡೆಯದವನು. ಇದರಿಂದಾಗಿ ಮತ್ತಷ್ಟು ಖುಷಿಯಾಯಿತು ಎನ್ನುತ್ತಾನೆ ಅನೂಪ್.

ಮೆಂಟರ್ಸ್‌ಗಳ ಶಿಸ್ತೇ ಸ್ಪೂರ್ತಿ:
ಡ್ರಾಮಾದ ಗಂಧಗಾಳಿ ಇಲ್ಲದ ನಾನು ಇಷ್ಟರ ಮಟ್ಟಿಗೆ ಬೆಳೆದಿದ್ದೇನೆ ಎಂದರೆ ಮೆಂಟರ್ಸ್‌ಗಳ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ಕಾರಣ. ಹರೀಶ್, ಪ್ರಭುರಾಜ್, ಅಪ್ಪಣ್ಣ, ವಿಕ್ರಮ್ ಸೂರಿ, ಗಣಪ, ಮಂಜುನಾಥ ಬಡಿಗೇರ್ ಅವರ ಶಿಸ್ತೇ ಸ್ಪೂರ್ತಿ ಎನ್ನುವುದು ಅನೂಪ್‌ನ ಅಂಬೋಣ.

ಸ್ಪರ್ಧೆ ನಡೆಯುತ್ತಿದ್ದಾಗ ನಾನು 6ನೇ ತರಗತಿಯಲ್ಲಿದ್ದೆ. ಈಗ ಸ್ಪರ್ಧೆ ಮುಗಿದು ಮೂರು ವರ್ಷಗಳಾಗಿವೆ. ಈಗಲೂ ಗುರುತಿಸುತ್ತಿದ್ದಾರೆ ಎಂಬುದು ಸಂತೋಷದ ವಿಷಯ. ಕಲ್ಲಡ್ಕ, ಮೂಡಿಗೆರೆ, ಸಂಡೂರು ಹೀಗೆ ಅನೇಕ ಕಡೆಗಳಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಸನ್ಮಾನಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಭಾಗದಲ್ಲೂ ಅನೂಪ್‌ನೇ ಬೇಕು ಎಂದು ಆಹ್ವಾನಿಸುತ್ತಿದ್ದಾರೆ. ಡೈರೆಕ್ಟರ್‌ಗಳು, ಮೆಂಟರ್‌ಗಳು ನನ್ನಲ್ಲಿರುವ ಹಾಸ್ಯವನ್ನು ಗುರುತಿಸಿ ವಿಭಿನ್ನ ಪಾತ್ರಗಳನ್ನು ನೀಡಿ ನನ್ನನ್ನು ಮನೆಮಾತಾಗಿಸಿದ್ದಾರೆ ಎಂದು ಹೇಳುತ್ತಾನೆ ಅನೂಪ್.

ಬೇರೆ ಚಟುವಟಿಕೆಗಳಲ್ಲೂ ಆಸಕ್ತ:
ಭಾರತೀ ವಿದ್ಯಾಪೀಠ ಬದಿಯಡ್ಕದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ, ಕೇವಲ ಹಾಸ್ಯದಲ್ಲಿ ಮಾತ್ರವಲ್ಲದೇ, ಕ್ರಿಕೆಟ್, ಚೆಸ್‌ನಲ್ಲೂ ಈತ ಮುಂದಿದ್ದಾನೆ. ಚೆಸ್‌ನಲ್ಲಿ ಮೂರು ಬಾರಿ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾನೆ.

ಅವನಿನ್ನೂ ಚಿಕ್ಕವನು. ಅವನಿಗೆ ಭವಿಷ್ಯದಲ್ಲಿ ಯಾವುದರಲ್ಲಿ ಆಸಕ್ತಿ ಇದೆಯೋ, ಆ ಕ್ಷೇತ್ರದಲ್ಲಿ ತರಬೇತಿ ಕೊಡಿಸಬೇಕೆಂದು ಇದೆ. ಮಗನ ಸಾಧನೆ ಖುಷಿ ನೀಡಿದೆ ಎನ್ನುತ್ತಾರೆ ಅನೂಪ್ ರಮಣನ ತಂದೆ ಮಹಾಲಿಂಗೇಶ್ವರ ಎನ್.

Leave a Reply

Your email address will not be published. Required fields are marked *