ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೫

ಅರಿವು-ಹರಿವು
ಬ್ರಹ್ಮರ್ಷಿ ಶಕ್ತಿ ಅದೃಶ್ಯಂತಿಯರ ಪುತ್ರ ಬ್ರಹ್ಮರ್ಷಿ ಪರಾಶರ. ವಂಶವೇ ನಶಿಸಿಹೋಗುವಾಗ ಕುಲವನ್ನು ಕಾಪಾಡಿ ವಂಶ ಬೆಳಗಿದ ಮಹಾಮುನಿ. ವಿಧಿಯಾಟದಂತೆ ತಮ್ಮ ನೂರು ಮಕ್ಕಳನ್ನೂ ಕಳೆದುಕೊಂಡು ಲೋಕನಿಯಮದಂತೆ ಮಹಾ ದುಃಖದಲ್ಲಿ ಮುಳುಗಿದ ವಸಿಷ್ಠರು ಆತ್ಮಹತ್ಯೆಗೆ ಮುಂದಾದಾಗ ಅವರಿಗೆ ತಿಳಿದ ಸಂಗತಿ ಸೊಸೆ ಅದೃಶ್ಯಂತಿ ಗರ್ಭವತಿ.
ಆ ಗರ್ಭಸ್ಥ ಶಿಶು ವಸಿಷ್ಠರಿಗೆ ಬದುಕಿಗೆ ಭರವಸೆಯ ಬೆಳಕ ನೀಡಿ, ಅವರ ಸಾವನ್ನು ತಡೆದು ಜಯಿಸಿದ್ದಕ್ಕೆ ಅವರೇ ( ವಸಿಷ್ಠರೇ) ‘ಪರಾಶರ’ ಎಂಬ ನಾಮಕರಣವನ್ನು ಮಾಡಿದರು. ಮಗು ಹುಟ್ಟಿದ ಮೇಲೆ ವಸಿಷ್ಠರೇ ತಮ್ಮ ತಂದೆಯೆಂದು ತಿಳಿದು ಅವರ ಸನ್ನಿಧಿಯಲ್ಲಿಯೇ  ಬೆಳೆಯಿತು. ಆದರೆ ಕಾಲಾನುಸಾರವಾಗಿ ತಾಯಿ ಅದೃಶ್ಯಂತಿಯಿಂದ ಇವರು ತನ್ನ ಅಜ್ಜ.  ಮತ್ತು ತನ್ನ  ಅಪ್ಪ , ಚಿಕ್ಕಪ್ಪಂದಿರ ಇಹಲೋಕ ತ್ಯಾಗದ ಬಗ್ಗೆ ತಿಳಿದಾಗ ಪರಾಶರರು ಬಹಳ ನೊಂದರು. ಕೋಪಗೊಂಡರು. ಆದರೆ ಅಜ್ಜ ವಸಿಷ್ಠರ ಸಮಾಧಾನದ ಮಾತುಗಳಿಂದ ಕೋಪಶಮನದ ಅನಿವಾರ್ಯತೆ ಮತ್ತು ಮಹತಿಯನ್ನು ‘ಔರ್ವ’ ಎಂಬುವನ ಉದಾಹರಣೆಯ ಮೂಲಕ ತಿಳಿದಾಗ ಶಾಂತಿ ಹೊಂದಿ ಎಂದಿನಂತೆ ತಪಶ್ಚರ್ಯೆಯಲ್ಲಿ ನಿರತರಾದರು. ಪ್ರಪಂಚಕ್ಕೆ ಇವರು ತೋರಿದ ವೇದದ ಬೆಳಕು ಗಣನೀಯ. ಋಗ್ವೇದವು ಸರ್ಗ 1.62-73ರಲ್ಲಿ ಅಗ್ನಿಸೋಮನ ಕುರಿತಾದ ಮಂತ್ರಗಳ ದೃಷ್ಟಾರರು ಪರಾಶರಶಕ್ತ್ಯ ಎಂದು ಉಲ್ಲೇಖಿಸುತ್ತದೆ.
देवो न यः सविता सत्यमनम्न कृत्व निपति व्रजनानि विश्वा
पुरुप्रशस्तो अमतीर्न सत्य आत्मेव सेवो दिधिशय्यो भूत्।
ಇನ್ನು ಕೆಲವು ರಚನೆಗಳು ಪರಾಶರರೇ ಬರೆದಿದ್ದು ಹೌದೋ ಅಲ್ಲವೋ ಎಂಬ ಸಂದಿಗ್ಧಗಳಿದ್ದರೂ ಸಹ ಅವರ ಉಪದೇಶಗಳ ಕುರುಹುಗಳಂತೂ ಈ ರಚನೆಗಳಲ್ಲಿ ಕಾಣಸಿಗುತ್ತದೆ.  ಅವು ಈ ಕೆಳಗಿನಂತಿವೆ;
•ಪರಾಶರ ಸ್ಮೃತಿ : ಇದು ಕಲಿಯುಗಕ್ಕೆ ಬೇಕಾದ ನ್ಯಾಯಸೂತ್ರಗಳನ್ನು ಬೋಧಿಸುತ್ತದೆ.
• ವಿಷ್ಣುಪುರಾಣ
•ಬೃಹತ್ ಪರಾಶರ ಹೋರಾ ಶಾಸ್ತ್ರ : ಅದ್ಭುತ ಜ್ಯೋತಿಶ್ಶಾಸ್ತ್ರದ ರಚನೆ
ಇವರ ಉಪದೇಶಗಳು ತಮ್ಮ ಶಿಷ್ಯರಿಗೆ ಅನಂತ.
   ವೇದವ್ಯಾಸರ ಜನಕ ಇವರೇ. ಆ ಸಂದರ್ಭ ಇಂತಿದೆ; ದಾಶರಾಜನ ಮಗಳಾದ ಅಂಬಿಗ ಕನ್ಯೆ ಮತ್ಸ್ಯಗಂಧಿಯು ಪ್ರಯಾಣಿಕರನ್ನು ಯಮುನಾ ನದಿ ದಾಟಿಸುವ ಕೆಲಸ ಮಾಡುತ್ತಿದ್ದಳು. ಅದೊಂದು ದಿನ ಬ್ರಹ್ಮರ್ಷಿ ಪರಾಶರರು ಯಮುನಾ ನದಿಯನ್ನು ಮತ್ಸ್ಯಗಂಧಿ ದಾಟಿಸುವ ದೋಣಿಯ ಮೇಲೆ ಪ್ರಯಾಣ ಮಾಡುತ್ತಿದ್ದರು. ವಿಧಿಲಿಖಿತವೋ ಎಂಬಂತೆ ಪರಾಶರರಿಗೆ ಸ್ಪುರಣೆಯಾಗಿ ಅವರ ಅನುಗ್ರಹ ಮತ್ಸ್ಯಗಂಧಿಯ ಮೇಲಾದಾಗ ಅಲ್ಲೇ ಒಂದು ದ್ವೀಪದ ಮೇಲೆ ಜನಿಸಿದ ಶಿಶುವೇ ಕೃಷ್ಣದ್ವೈಪಾಯನ. ಪರಾಶರರ ಅನುಗ್ರಹದಿಂದ ಮತ್ಸ್ಯಗಂಧಿಯ ಮೈಯ ಮತ್ಸ್ಯಗಂಧ ದೂರಾಗಿ, ದೂರ ದೂರದವರೆಗೂ ಸುಗಂಧ ಸೂಸುತ್ತದೆ ಹಾಗಾಗಿ ಯೋಜನಗಂಧಿ ಎಂದು ಕರೆಸಿಕೊಂಡು ಲೋಕ ವಿಖ್ಯಾತಿ ಹೊಂದುತ್ತಾಳೆ.  ಕಪ್ಪು ಬಣ್ಣದ ಪರಮ ತೇಜ್ಸಸಿನ ಮಗು, ಕೃಷ್ಣದ್ವೈಪಾಯನ. ಈ ಪರಮ ತೇಜಸ್ಸಿನ, ಲೋಕ ಬೆಳಗಿದ ಪಾತ್ರವನ್ನು ಮುಂದಿನ ಸಂಚಿಕೆಯಲ್ಲಿ ಅವಲೋಕಿಸೋಣ.

Author Details


Srimukha

Leave a Reply

Your email address will not be published. Required fields are marked *