ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ರವಿವಾರದ ಚೂಡಾಮಣಿ ಸೂರ್ಯಗ್ರಹಣದ ಸಮಯದಲ್ಲಿ ಗೋಕರ್ಣದ ಊರಿನವರಿಗೆ ನಿಯಮಗಳ ಪ್ರಕಾರ ನಂದಿ ಮಂಟಪದವರೆಗೆ ಹೋಗಿ ದರ್ಶನ ಪಡೆದು ನಮಸ್ಕಾರ ಮಾಡಿ ಬರಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಜನ ಊರಿನವರು ದೇವರ ದರ್ಶನ ಪಡೆದರು.
ಈ ಕ್ಷೇತ್ರದಲ್ಲಿ ಭಕ್ತಾದಿಗಳು ಗ್ರಹಣದ ವೇಳೆಯಲ್ಲಿ ಈಶ್ವರನ ದರ್ಶನ ಪಡೆದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ಜಪ-ತಪಗಳನ್ನು ಮಾಡುವ ರೂಢಿಗತ ಪರಂಪರೆಗೆ ಅನುಕೂಲವಾಗಲೆಂದು “ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಲ್ಲಿ ಈ ಅವಕಾಶಗಳನ್ನು ನೀಡಲಾಯಿತು.
ಸರಕಾರದ ನಿಯಮಗಳ ಪ್ರಕಾರ ಜನರ ದೇಹದ ಉಷ್ಣಾಂಶವನ್ನು ನೋಡಿ, ಸಾನಿಟೈಜರ್ ಸಿಂಪಡಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶ್ರೀದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀಕ್ಷೇತ್ರದ ಉಪಾಧಿವಂತರು, ಊರಿನ ನಾಗರಿಕರು ಈ ವ್ಯವಸ್ಥೆಗೆ ಗೌರವ ನೀಡಿ, ಶಾಂತಿ ಸಮಾಧಾನಗಳಿಂದ ಅಚ್ಚುಕಟ್ಟಾಗಿ ದರ್ಶನ ಪಡೆದರು. ಅವರೆಲ್ಲರಿಗೂ ಶ್ರೀದೇವಾಲಯದ ಆಡಳಿತ ಹಾರ್ದಿಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.
ಈ ವೇಳೆಯಲ್ಲಿ ಆತ್ಮಲಿಂಗಕ್ಕೆ ನಿರಂತರ ಗಂಗಾಜಲಾಭಿಷೇಕ ಏರ್ಪಡಿಸಲಾಗಿತ್ತು. ಪ್ರಸ್ತುತದಲ್ಲಿ ನಮ್ಮ ರಾಷ್ಟ್ರದ ಗಡಿಯಲ್ಲಿ ಹೊರಾಡುತ್ತಿರುವ ನಮ್ಮ ಧೀರಯೋಧರಿಗೆ ಜಯ ಸಿಗಲೆಂದು ಮತ್ತು ರಾಷ್ಟ್ರದಲ್ಲಿ ಮಹಾಮಾರಿಯಾಗಿ ವ್ಯಾಪಿಸುತ್ತಿರುವ ಕೊವಿಡ್-೧೯ ಸಂಪೂರ್ಣವಾಗಿ ನಾಶಹೊಂದುವಂತೆ ಶ್ರೀಮಹಾಬಲೇಶ್ವರನಲ್ಲಿ ಪ್ರಾರ್ಥಿಸಿಕೊಂಡು ಈ ಧಾರಾಭಿಷೇಕವನ್ನು ಮಾಡಲಾಯಿತು.
ಗ್ರಹಣ ಮೋಕ್ಷದ ನಂತರ ಸ್ಥಳಶುದ್ಧಿ ಮಾಡಿ, ಶುದ್ಧಿ ಹೋಮ ಮಾಡಿ ಶ್ರೀದೇವರಿಗೆ ವಿಶೇಷ ಮಹಾಪೂಜೆಯನ್ನು ಮಾಡಲಾಯಿತು. ವೇ. ಪರಮೇಶ್ವರ ಮಾರ್ಕಾಂಡೆ ಇವರು ಮಹಾಪೂಜೆಯನ್ನು ನೆರವೇರಿಸಿದರು.