ಬೆಂಗಳೂರು: ದಕ್ಷಿಣ ಬೆಂಗಳೂರು ಹವ್ಯಕ ಮಂಡಲದ ಮಂಡಲೋತ್ಸವವು ಅಧಿಕ ಜೇಷ್ಠ ಕೃಷ್ಣ ಸಪ್ತಮಿಯಂದು (07-06-2026) ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶೀರ್ವಾದದೊಂದಿಗೆ ಸುಗಮವಾಗಿ ನೆರವೇರಿತು.
ಪೂರ್ವಾಹ್ಣದಲ್ಲಿ ಶ್ರೀರಾಮತಾರಕ ಹವನ, ಅರುಣ ಪ್ರಶ್ನೆ ಪಾರಾಯಣ ಹಾಗೂ ಸ್ವರ್ಣಪಾದುಕಾ ಪೂಜೆಗಳು ಶ್ರದ್ಧೆಯಿಂದ ಜರುಗಿದವು. ಮಾತೆಯರು ಸಾಮೂಹಿಕ ಕುಂಕುಮಾರ್ಚನೆ ಹಾಗೂ ಅರ್ಧನಾರೀಶ್ವರ ಸ್ತೋತ್ರ ಪಠನವನ್ನು ಮನೋಜ್ಞವಾಗಿ ನೆರವೇರಿಸಿದರು.


ಮಧ್ಯಾಹ್ನದಲ್ಲಿ ಸಕಲ ಭಕ್ತರಿಗೆ ಪ್ರಸಾದ ಭೋಜನದ ಸುವ್ಯವಸ್ಥೆಯನ್ನು ಮಾಡಲಾಗಿತ್ತು.
ಅಪರಾಹ್ಣದಲ್ಲಿ ಧ್ವಜಾರೋಹಣ, ಶಂಖನಾದ, ಗುರುವಂದನೆ ಮತ್ತು ದೀಪಜ್ವಲನಗಳೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಮಹಾಮಂಡಲದ ಕಾರ್ಯದರ್ಶಿಗಳಾದ ಮಹೇಶ ಚಟ್ನಳ್ಳಿ ಹಾಗೂ ಪ್ರಾಂತ ಪ್ರತಿನಿಧಿಗಳಾದ ಜಿ. ಜಿ. ಹೆಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು.
ಸಂಜೆಯ ವೇಳೆಯಲ್ಲಿ ಒಂಭತ್ತು ವಲಯಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಹರವಾಗಿ ನಡೆದವು. ಈ ಸಂದರ್ಭದಲ್ಲಿ ಸಮಾಜ ಸೇವಕರು, ವಿಶ್ವವಿದ್ಯಾನಿಲಯ ಮಟ್ಟದ ಸಾಧಕರು, ಕ್ರೀಡೆ ಹಾಗೂ ಪ್ರತಿಭಾ ಸ್ಪರ್ಧೆಗಳ ವಿಜೇತರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಮಂಡಲದ ಅಧ್ಯಕ್ಷ ನಾರಾಯಣ ಭಾಗವತ್ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಮಂಡಲ ಹಾಗೂ ಒಂಭತ್ತು ವಲಯಗಳ ಎಲ್ಲಾ ಪದಾಧಿಕಾರಿಗಳು ಮತ್ತು ಸಮಾಜದ ಬಂಧುಗಳು ಸಹಕಾರವನ್ನೊದಗಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.