‘ಪ್ರತಿರುದ್ರ’ ಪಥದಲ್ಲಿ ೩೦೦ನೇ ಹೆಜ್ಜೆ

ಸುದ್ದಿ

ಪಳ್ಳತ್ತಡ್ಕ: ನಿಜ ಜ್ಯೇಷ್ಠ ಶುಕ್ಲ ತ್ರಯೋದಶೀ (27-06-2026) ಎಂಬುದು ಪಳ್ಳತಡ್ಕ ವಲಯದ ಕಾರ್ಯಕರ್ತರ ಸುಮಾರು 12 ವರ್ಷಗಳ ನಿರಂತರ ಪ್ರಯತ್ನದ ಸಾಫಲ್ಯದ ಒಂದು ದಿನ.

ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಆಶೀರ್ವಾದದೊಂದಿಗೆ ಸಂಪನ್ನವಾದ ಕೋಟಿರುದ್ರ ಎಂಬ ಕಾರ್ಯಕ್ರಮದ ಅನಂತರ, ‘ಇದು ವಲಯಗಳ ಪ್ರತೀ ಶಿಷ್ಯ ಭಕ್ತನ ಮನೆಯಲ್ಲೂ ಮುಂದುವರಿಯಬೇಕು’ ಎಂಬ ಗುರುವಚನವನ್ನು ಶಿರಸಾ ವಹಿಸಿ ಪಾಲಿಸಿದವರು ಪಳ್ಳತ್ತಡ್ಕ ವಲಯದ ಕಾರ್ಯಕರ್ತರು. ‘ಪ್ರತಿರುದ್ರ’ ಎಂಬ ಗುರುಗಳಿತ್ತ ಅಭಿಧಾನದೊಂದಿಗೆ ಮುಂಬರಿದು ಇಂದು ಮುನ್ನೂರನೇ ಪ್ರತಿರುದ್ರವೆಂಬ ಒಂದು ಘಟ್ಟವನ್ನು ಯಶಸ್ವಿಯಾಗಿ ತಲುಪಿದರು.

ಪ್ರತೀ ತಿಂಗಳ ಪಕ್ಷಗಳೆರಡರ ಪ್ರದೋಷ ದಿನ ಅಂದರೆ ತ್ರಯೋದಶಿ ತಿಥಿಯಂದು ಸಾಯಂಕಾಲ 6.30 ರಿಂದ ರಾತ್ರಿ 9.00 ಘಂಟೆಯ ವರೆಗೆ 11 ಆವೃತ್ತಿ ರುದ್ರ ಘೋಷ ಎಂಬೀ ಕ್ರಮದಲ್ಲಿ ಪ್ರತಿರುದ್ರಗಳು ನಡೆದು ಬಂದಿವೆ.

ಇದರಲ್ಲಿ ಮನೆಗಳನ್ನು ಗುರುತಿಸಿ, ಮನೆಯವರಿಗೆ ಇದರ ಮಹತ್ತ್ವವನ್ನು ಸಾರಿ, ದಿನವನ್ನು ನಿಗದಿಪಡಿಸಿ, ವಾಹನ ವ್ಯವಸ್ಥೆಯ ಅನಿವಾರ್ಯತೆಯ ಸಂದರ್ಭದಲ್ಲಿ ವಾಹನ ಇರುವವರನ್ನು ಸಂಪರ್ಕಿಸಿ, ಎಲ್ಲರನ್ನೂ ಸಂಘಟಿಸಿ, ಈವರೆಗೆ ಮುನ್ನಡೆಸಿದವರಲ್ಲಿ ಅಗ್ರಮಾನ್ಯರಾಗಿ ಕಾಣುವುದು ಮೋಹನಣ್ಣ ಎಂದೇ ಪ್ರಸಿದ್ಧರಾದ ಕೊರಿಕ್ಕಾರು ವಿಷ್ಣು ಶರ್ಮ ಇವರು. ಇವರಿಗೆ ಸಹಕರಿಸಿದವರು ಪಳ್ಳತ್ತಡ್ಕ ವಲಯದ ಕಾರ್ಯಕರ್ತರು.

ಹೀಗೆ ಈ ಸತ್ಕಾರ್ಯವು ಮಂಗಳೂರು ಹೋಬಳಿಯ ವೈದಿಕೋತ್ತಮರ ವಿಶೇಷ ಸಂಘಟನೆಯ ಫಲವಾಗಿ ಸಾಗಿ ಬಂದು 300 ನೇ ಪ್ರತಿರುದ್ರ ಪಳ್ಳತಡ್ಕದ ಮುದ್ದು ಮಂದಿರದಲ್ಲಿ 390 ರುದ್ರಾಧ್ಯಾಯಿಗಳಿಂದ ಮೂಡಿಬಂದು ಯಶಸ್ವಿಯಾಗಿ ವಲಯದ ಕಾರ್ಯಕರ್ತರ ಮನದಲ್ಲಿ ಸಾರ್ಥಕ್ಯಭಾವವನ್ನಿತ್ತಿತು.

Leave a Reply

Your email address will not be published. Required fields are marked *