ಗೋಧೂಳಿಯಲ್ಲಿ ಗಾನಲಹರೀ

ಸುದ್ದಿ

ಮಾಲೂರು: ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ನಿಜ ಜ್ಯೇಷ್ಠ ಶುಕ್ಲ ಚತುರ್ದಶಿಯಂದು (28-06-2026) ಆಶ್ರಮದ ವೈದಿಕ ಪ್ರಮುಖರಾದ ಸುಕುಮಾರ ಜೋಯಿಸ ಕರುವಜೆ ಅವರ ಸಹೋದರ ವಿಘ್ನೇಶ ಮತ್ತು ಸೌಮ್ಯಾ ದಂಪತಿಗಳಿಂದ ‘ಶ್ರೇಯಸ್ಕರೀ ಯಾಗಶಾಲೆ’ಯಲ್ಲಿ ಶ್ರೀಸತ್ಯನಾರಾಯಣ ಪೂಜೆ ನಡೆಯಿತು. ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಅವರ ಆರತಕ್ಷತೆಯನ್ನು ಕರುವಜೆ ಕುಟುಂಬ ಏರ್ಪಡಿಸಿತ್ತು. ಶ್ರೀಸಿದ್ಧಾಂಜನೇಯ ಸ್ವಾಮಿ ದೇವರ ಸನ್ನಿಧಿಯಲ್ಲಿ ವಿಶೇಷ ಸೇವೆಯನ್ನು ‌ಕರುವಜೆ ಸುಕುಮಾರ ಜೋಯಿಸರ ಕುಟುಂಬದವರು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಿದುಷಿ ಧನ್ಯಾಶ್ರೀ ಕಾಂಚನ ಅವರ ತಂಡದವರು ಸುಶ್ರಾವ್ಯವಾಗಿ ದೇವರ ನಾಮ, ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.‌ ಗೋಆಶ್ರಮದ ಗೋವಿಹಾರದಿಂದ ಗೋವುಗಳು ಪುನಃ ತಮ್ಮ ತಮ್ಮ ನಿಗದಿತ ಕೊಟ್ಟಿಗೆಗೆ ಆಗಮಿಸುವ ಗೋಧೂಳಿ ಸಮಯದಲ್ಲಿ ವಿದ್ವಾನ್ ರಾಮಕೃಷ್ಣ ಭಟ್ ಕೂಟೇಲು ಅವರು ಧಾರ್ಮಿಕ ವಿಧಿಗಳೊಂದಿಗೆ, ವಿದುಷಿ ಧನ್ಯಾಶ್ರೀ ಕಾಂಚನಾ ಅವರು ತಮ್ಮ ಇಂಪಾದ ಸಂಗೀತದೊಂದಿಗೆ, ಸುತ್ತಲೂ ನೆರೆದಿದ್ದ ಕರುವಜೆ ಕುಟುಂಬದ ಆಹ್ವಾನದಂತೆ ಆಗಮಿಸಿದ್ದ ಗೋಪ್ರೇಮಿ ಬಂಧುಗಳು ಪುಷ್ಪವೃಷ್ಟಿಗೈದು ಗೋವುಗಳು ತಮ್ಮ ಸ್ವಸ್ಥಾನಗಳಿಗೆ ತೆರಳುವ ಸನ್ನಿವೇಶವನ್ನು ‌ಭಾವಪರವಶರಾಗಿ ಕಣ್ತುಂಬಿಕೊಂಡರು.

ಆಶ್ರಮದ ವತಿಯಿಂದ ವಿದುಷಿ ಧನ್ಯಾಶ್ರೀ ತಂಡದವರನ್ನು ವಿಶೇಷವಾಗಿ ಗೌರವಿಸಲಾಯಿತು. ಈ ರೀತಿಯಲ್ಲಿ ಕೌಟುಂಬಿಕ – ಧಾರ್ಮಿಕ ಕಾರ್ಯಕ್ರಮಗಳನ್ನು ‌ಗೋಶಾಲೆಯ ಸ್ವಚ್ಛ, ಸುಂದರ ಪರಿಸರದಲ್ಲಿ ಆಯೋಜಿಸಿದ ಕರುವಜೆ ಕುಟುಂಬವನ್ನು ಅಭಿನಂದಿಸಿ, ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ಗೋಬಂಧುಗಳು ಗೋಶಾಲೆಯ ವ್ಯವಸ್ಥೆಯನ್ನು ಬಳಸಿಕೊಳ್ಳುವಂತಾಗಲಿ ಎಂಬ ಅಭಿಪ್ರಾಯವನ್ನು ಶ್ರೀರಾಘವೇಂದ್ರ ಗೋಆಶ್ರಮ ಮತ್ತು ಶ್ರೀಸಿದ್ಧಾಂಜನೇಯ ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ ಹೆಗಡೆಯವರು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *