ಧರ್ಮಯುಕ್ತವಾದ ಪೀಳಿಗೆಯನ್ನು ಬೆಳೆಸುವ ಪ್ರಯತ್ನ ಸಮಾಜದಲ್ಲಿ ನಡೆಯಬೇಕು. ಮಠ ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆದು ಬಂದಿದೆ. ಕುಟುಂಬ ಎಂಬುದು ಸಮಷ್ಠಿಯಿಂದ ಐಕ್ಯಮತ್ಯೆಯಿಂದ ಇರಬೇಕು. ಕುಟುಂಬಕ್ಕೆ ಒಂದೇ ಮನಸ್ಸು ಇದ್ದಾಗ ಶ್ರೇಯಸ್ಸಾಗುತ್ತದೆ. ಕುಟುಂಬ ಸಾಗುವ ದಾರಿ ತಪ್ಪಾಗಿರದೆ, ಐಕ್ಯಕ್ಕಾಗಿ ಸ್ವಾರ್ಥವನ್ನು ಬಲಿಕೊಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನವೀಕೃತ ಶ್ರೀರಾಘವೇಶ್ವರ ಭಾರತೀ ಗುರುಕುಲ ಕಟ್ಟಡ ಲೋಕಾರ್ಪಣೆಗೊಳಿಸಿ, ಕುಟುಂಬ ಮಂಗಲ ಕಾರ್ಯಕ್ರಮದ ಸಂದರ್ಭ ಆಶೀರ್ವಚನ ನೀಡಿದರು.

ಕುಟುಂಬ ತುಂಡಾಗಿ ಮನಸ್ಸು ಒಡೆದು ಹೋಗುತ್ತಿರುವುದು ದುರಂತವಾಗಿದೆ. ಗಾಯತ್ರಿ ಅನುಗ್ರಹದಿಂದ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವ ಪ್ರೇರಣೆ ಲಭಿಸುತ್ತಿದೆ. ಕುಟುಂಬ ಸಮೃದ್ಧವಾಗಿರುವ ಜತೆಗೆ ಶ್ರೇಯಸ್ಸಿನಿಂದ ಬೆಳೆಯಬೇಕು. ಗೋಮಯದ ಗಂಧಕ್ಕೆ ನಾಡಿಗಳು ತೆರೆದುಕೊಳ್ಳುತ್ತದೆ. ಮಕ್ಕಳನ್ನು ಸಂಪತ್ತಾಗಿ ಭಾವಿಸಬೇಕಾಗಿದ್ದು, ಮಕ್ಕಳನ್ನು ಬೆಳೆಸುವುದರಲ್ಲಿ ಕ್ಲೇಶಗಳಿದ್ದರೂ, ಅದು ಸುಖವೆಂದು ಭಾವಿಸಬೇಕು. ಆಚರಣೆಗಳನ್ನು ಪಾಲಿಸುವ ಕಾರ್ಯವಾಗಬೇಕು. ಕುಟುಂಬ ಕ್ಷಯಿಸದೆ, ಬೆಳೆಯಬೇಕು ಎಂದು ತಿಳಿಸಿದರು.

೪೮ ದಂಪತಿಗಳು ಕುಟುಂಬ ಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಮಕೃಷ್ಣ ಭಟ್ ಕೂಟೇಲು ಪ್ರಸ್ತಾವನೆಗೈದರು.