ಬೆಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಶ್ರೀರಾಮಚಂದ್ರಾಪುರ ಮಠ ಸಹಾಯಹಸ್ತ ಚಾಚಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಬಳಿ ಇರುವ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಸ್ವ-ಇಚ್ಛೆಯಿಂದ ಆರಂಭಿಸಿದೆ. ಯಾವುದೇ ಸರ್ಕಾರಿ ನೆರವು ಅಥವಾ ಪ್ರತಿಫಲಾಪೇಕ್ಷೆ ಇಲ್ಲದೇ ತನ್ನ ಕರ್ತವ್ಯ ಎಂದು ಭಾವಿಸಿ ಈ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ರಾಮಾಯಣ ಚಾತುರ್ಮಾಸ್ಯ ಕೈಗೊಂಡಿರುವ ಅವರು, ಶನಿವಾರ ಆಶೀರ್ವಚನದಲ್ಲಿ ಈ ವಿಷಯ ಪ್ರಕಟಿಸಿದರು.
ರಾಜ್ಯದ ಜನ ಭೀಕರ ಪ್ರವಾಹದಿಂದ ತತ್ತರಿಸಿದ್ದು, ಇದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಬೇಕಾದ ಸಮಯ; ನೊಂದವರ ಬದುಕನ್ನು ಕಟ್ಟಿಕೊಡಲು, ನಮ್ಮ ಸಂಪಾದನೆಯ ಒಂದಿಷ್ಟು ಮೊತ್ತವನ್ನು ಸಮರ್ಪಿಸಬೇಕಾದ ಹೊತ್ತು. ಆದ್ದರಿಂದ ಶ್ರೀಮಠ ಈ ಮಾನವೀಯ ಕಾರ್ಯಕ್ಕೆ ಮುಂದಾಗಿದೆ” ಎಂದು ವಿವರಿಸಿದರು.
ಗೋಸ್ವರ್ಗದಲ್ಲಿ ಸಾವಿರಾರು ಮಂದಿಗೆ ಆಶ್ರಯ ನೀಡಲು ಮತ್ತು ಊಟೋಪಚಾರಕ್ಕೆ ವ್ಯವಸ್ಥೆಯಿದ್ದು, ಪ್ರವಾಹ ಸಂತ್ರಸ್ತರು ಉಚಿತವಾಗಿ ಇದನ್ನು ಬಳಸಿಕೊಳ್ಳಬಹುದು. ಗೋಸ್ವರ್ಗ, ನೆರೆ ಸಂತ್ರಸ್ತರ ಪಾಲಿಗೂ ಸ್ವರ್ಗವಾಗಬೇಕು ಎನ್ನುವುದು ನಮ್ಮ ಬಯಕೆ ಎಂದು ಸ್ಪಷ್ಟಪಡಿಸಿದರು.
ಪ್ರವಾಹ ಸಂತ್ರಸ್ತರಿಗೆ ಇನ್ನೂ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬ ಬಗ್ಗೆ ಚಿಂತನೆ ನಡೆದಿದೆ ಎಂದರು.
ಪರಿಹಾರ ಸಾಮಗ್ರಿ ಸಂಗ್ರಹ
ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಸಂಗ್ರಹಕ್ಕೆ ಕೂಡಾ ಶ್ರೀಮಠ ವ್ಯವಸ್ಥೆ ಮಾಡಿದೆ. ಮಂಗಳೂರಿನ ನಂತೂರು ಶ್ರೀಭಾರತೀ ಸಮೂಹಸಂಸ್ಥೆಯ ಸೇವಾಸಮಿತಿ ಕಚೇರಿ, ಮಾಣಿಮಠ ಕಚೇರಿ, ಉತ್ತರ ಕನ್ನಡ ಜಿಲ್ಲೆಯ ಕೆಕ್ಕಾರು ಮಠ ಕಚೇರಿ, ಅಪ್ಸರಕೊಂಡ ಮಠದ ಕಚೇರಿ, ಬಾನ್ಕುಳಿ ಗೋಸ್ವರ್ಗ ಆವರಣದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಗುತ್ತದೆ.