ಬದಿಯಡ್ಕ : ಇಲ್ಲಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇತ್ತೀಚೆಗೆ ಉಗ್ರರ ವಿಕೃತ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಯೋಧರ ದಿವ್ಯಾತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಜಯಪ್ರಕಾಶ್ ಪಜಿಲ ಇವರು ಉಗ್ರಗಾಮಿಗಳ ಕ್ರೂರಕೃತ್ಯಗಳ ಸಂಪೂರ್ಣ ಚಿತ್ರಣವನ್ನು ಮಕ್ಕಳ ಮುಂದಿಟ್ಟು ಸಭೆಯನ್ನುದ್ದೇಶಸಿ ಮಾತನಾಡಿ “ದೇಶಕ್ಕಾಗಿ ಬಲಿಯಾದ ಯೋಧರ ತ್ಯಾಗವನ್ನು ಸ್ಮರಿಸುತ್ತಾ ಅವರ ಆತ್ಮಕ್ಕೆ ಚಿರಶಾಂತಿ ಕೋರೋಣ, ಅವರ ಕುಟುಂಬ ಸದಸ್ಯರ ನೋವಲ್ಲಿ ಭಾಗಿಯೋಗೋಣ . ಮುಂದೆಂದೂ ಇಂತಹ ಉಗ್ರರು ಹುಟ್ಟದೇ ಇರಲಿ. ಯುವಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಸೇನಾಪಡೆಗೆ ಸೇರುವಂತಾಗಲಿ “ಎಂದರು.
ವಿದ್ಯಾರ್ಥಿಗಳಾದ ಕು. ಸಿಂಧುಶ್ರೀ ಪುಲ್ವಾನಾ ದುರ್ಘಟನೆ ಬಗ್ಗೆ ವಿವರಿಸಿದರೆ ಕು.ಯತಿಕಾ ತನ್ನ ಕಾಶ್ಮೀರ ಪ್ರವಾಸದ ಅನುಭವವನ್ನು ಹೇಳುತ್ತಾ ” ಈ ಘಟನೆಯಿಂದ ನೋವುಂಡ ನಾವುಗಳು ಸೇನೆಗೆ ಸೇರುವ ಇರಾದೆಯಿಂದ ಹಿಂದೇಟು ಹಾಕಬಾರದು. ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಸೇನೆಗೆ ಸೇರಿ ನಾವೆಲ್ಲಾ ಉಗ್ರರಿಗೆ ಪ್ರತೀಕಾರ ತೀರಸಲೇಬೇಕು” ಎಂದು ತಮ್ಮ ಬಿಸಿ ರಕ್ತದ ಆಕ್ರೋಶವನ್ನು ವ್ಯಕ್ತಪಡಿಸಿದಳು.
ಅಂತಿಮವಾಗಿ ಎಲ್ಲರೂ ಮೊಂಬತ್ತಿ ಬೆಳಗಿಸಿ ಸಂಕೇತಿಕವಾಗಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕ. ಅನನ್ಯಾ ಹಾಗೂ ಕು.ಅವ್ಯಯಾ ಹಾಡಿದ ‘ಓ ನನ್ನ ದೇಶ ಬಾಂಧವರೇ’ ಹಾಡಿಗೆ ಎಲ್ಲರ ಕಣ್ಣಾಲಿಗಳು ತುಂಬಿದವು.
ಕುಂಬಳೆ ಸರಕಾರಿ ಪ್ರೌಢಶಾಲೆಯ ಅಧ್ಯಾಪಿಕೆ ಶ್ರೀಮತಿ ಉಮಾ ಭಟ್ ಉಪಸ್ಥಿತರಿದ್ದರು.
ಶಾಲಾ ಅಧ್ಯಾಪಿಕೆ ಶ್ರೀಮತಿ ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.