ಕುಮಟಾ : ಮೂರೂರಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಕುಮಾರ ಅಭಿ ಆರ್. ಅಡಿಗುಂಡಿ ರಾಜ್ಯಮಟ್ಟದ ಚಕ್ರ ಎಸೆತ (ಡಿಸ್ಕಸ್ ಥ್ರೋ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನ.21, 22ರಂದು ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕು. ಅಭಿ 39.75 ಮೀಟರ್ ದೂರ ಚಕ್ರ ಎಸೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾನೆ.
ಕು. ಅಭಿ 2016-17 ಸಾಲಿನ ರಾಷ್ಟ್ರಮಟ್ಟದ ಚಕ್ರ ಎಸೆತ ಸ್ಪರ್ಧೆಯಲ್ಲಿಯೂ ಪ್ರತಿನಿಧಿಸಿ 9ನೇ ಸ್ಥಾನ ಗಳಿಸಿ ಪ್ರಗತಿ ವಿದ್ಯಾಲಯಕ್ಕೆ ಗೌರವ ತಂದಿದ್ದನು. ಈ ಬಾರಿಯೂ ರಾಷ್ಟ್ರಮಟ್ಟದಲ್ಲಿ ಜಯಿಸಿ ಮತ್ತಷ್ಟು ಕೀರ್ತಿ ತರಲಿ ಎಂದು ಸಂಸ್ಥೆ ಹಾರೈಸಿದೆ.
ಪ್ರಗತಿ ವಿದ್ಯಾಲಯದಿಂದ ಹಾರೈಕೆ : ಅಭಿಯ ಈ ಮಹತ್ಸಾಧನೆಗೆ ಮೂರೂರು ಕಲ್ಲಬ್ಬೆಯ ವಿದ್ಯಾನಿಕೇತನ ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಮುಖ್ಯೋಪಾಧ್ಯಾಯ ಶ್ರೀ ಎಂ. ಜಿ. ಭಟ್ಟ, ದೈಹಿಕ ಶಿಕ್ಷಕ ಶ್ರೀ ಅರುಣ ನಾಯ್ಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ, ದೈಹಿಕ ಪರಿವೀಕ್ಷಕ ಶ್ರೀ ಎಸ್. ಜಿ. ಭಟ್ಟ ಹಾಗೂ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.