ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಶನಿವಾರ ಶನಿದೋಷ ನಿವಾರಣೆಗಾಗಿ ಶ್ರೀ ಆಂಜನೇಯ ಕಲ್ಪೋಕ್ತ ಪೂಜೆ ಹಾಗೂ ಆಂಜನೇಯ ಹೋಮ ನಡೆಯಿತು.
ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಭಕ್ತಭಾವದೊಂದಿಗೆ ಶನಿದೋಷ ನಿವಾರಣೆಗಾಗಿ ಪೂಜೆ ನಡೆಸಿದರು. ಬೆಳಗ್ಗೆ ಮಹಾಗಣಪತಿ ಹೋಮ, ಕಾಮಧೇನು ಹವನ, ಗೋಪೂಜೆಗಳು ನಡೆದವು. ಮಧ್ಯಾಹ್ನ ಪೂರ್ಣಾಹುತಿಯ ಅನಂತರ ವೈದಿಕ ಪ್ರಧಾನ ವೇದಮೂರ್ತಿ ಶ್ರೀ ಕೇಶವ ಪ್ರಸಾದ ಕೂಟೇಲು ಪ್ರಾರ್ಥನೆ ಸಲ್ಲಿಸಿದರು.
ಈ ಸೇವೆಯನ್ನು ಕಾರ್ತಿಕ ಮಾಸದ ಶನಿವಾರದ ದಿನ ಶನಿದೋಷ ನಿವಾರಣೆಗಾಗಿ ನಡೆಸಲಾಗಿದ್ದು, 33 ಕೋಟಿ ದೇವತೆಗಳ ಆವಾಸಸ್ಥಾನವಾದ ಗೋವುಗಳ ಸನ್ನಿಧಿಯಲ್ಲಿ ನಡೆಯುವ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸನ್ಮಂಗಲವಾಗಲಿ ಎಂದು ಅವರು ಪ್ರಾರ್ಥಿಸಿದರು.
ಆಂಜನೇಯ ಕಲ್ಪೋಕ್ತ ಪೂಜೆಯನ್ನು ಗೋಳಿತ್ತಡ್ಕ ಮನೆಯವರು ಹಾಗೂ ಆಂಜನೇಯ ಹವನ ಸೇವೆ ಪರ್ತಜೆ ಶ್ರೀ ಶಿವಪ್ರಸಾದ ವರ್ಮುಡಿ ಮತ್ತು ಮನೆಯವರು ಕೈಗೊಂಡರು. ಮಾತೃವಿಭಾಗದವರಿಂದ ಹನುಮಾನ್ ಚಾಲೀಸ, ವಿಷ್ಣುಸಹಸ್ರನಾಮ ಪಾರಾಯಣ, ಭಜನ ರಾಮಾಯಣ ನಡೆಯಿತು. ಶ್ರೀ ದುರ್ಗಾಪರಮೇಶ್ವರಿ ಪೆರ್ಲ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನ ಸಂಘ ಶಿವಗಿರಿ ಭಜನ ಸೇವೆ ನಡೆಸಿಕೊಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಪ್ಪು, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ಊರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ವಲಯಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ನ.15ರ ತನಕ ಗೋಮಾತಾ ಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಪ್ರತಿದಿನ ಪ್ರಾತಃಕಾಲ ಗಣಪತಿ ಹವನ, ಕಾಮಧೇನು ಹವನ; ಸಾಯಂಕಾಲ ಭಜನ ರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಳಸೀಪೂಜೆ, ಗೋಪಾಲಕೃಷ್ಣ ಪೂಜೆ; ರಾತ್ರಿ 7ಗಂಟೆಯಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಅನಂತರ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಸಂಘಟಕರು ಕೋರಿದ್ದಾರೆ.