“ನಾನು ಶ್ರೀಮಂತನಿದ್ದೇನೆ, ನನ್ನ ಬಳಿ ಎಲ್ಲವೂ ಇದೆ, ನನಗೆ ಎಲ್ಲವೂ ಗೊತ್ತಿದೆ.. ಆದರೂ ನನಲ್ಲಿ ಸಂತೋಷ ಮತ್ತು ಸಂತೃಪ್ತಿ ಇಲ್ಲ, ಯಾಕೆ?” ಎಂದು ಪ್ರತಿಷ್ಠಿತ ವೆಬ್ಸೈಟ್ ಕೋರಾದಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು.
ಹಾಗಿದ್ದರೆ ಸಂತೋಷ ಮತ್ತು ತೃಪ್ತಿ ಯಾವಾಗ ಆಗುತ್ತದೆ, ಯಾವುದರಿಂದ ಆಗುತ್ತದೆ ಎಂಬುದರ ಕುರಿತು ನಾವು ತಿಳಿಯುವ ಪ್ರಯತ್ನ ಮಾಡೋಣ.
ಸಂತೋಷಕ್ಕೂ ತೃಪ್ತಿಗೂ ವ್ಯತ್ಯಾಸ ಇದೆ. ಸಂತೋಷ ಎಂಬುದು ಆಹ್ಲಾದಕರ ಅನುಭವ, ಆನಂದದ ಸ್ಥಿತಿ. ನಾವು ಇಷ್ಟಪಡುವ, ಪ್ರೀತಿಸುವ ವಸ್ತುಗಳು ಸಿಕ್ಕಾಗ, ಕೆಲಸಗಳನ್ನು ಮಾಡಿದಾಗ, ವ್ಯಕ್ತಿಗಳನ್ನು ಭೇಟಿ ಮಾಡಿದಾಗ ಆಗುವುದು ಸಂತೋಷ. ಅಂದರೆ ಸಂತೋಷ ಉಂಟಾಗಲು ನಮಗೆ ಕೆಲವು ವಿಶೇಷ ಸಂಗತಿಗಳು ಇರಲೇಬೇಕು.
ಆದರೆ ತೃಪ್ತಿ ಎಂಬುದು ಹಾಗಲ್ಲ, ಏನೂ ಇಲ್ಲದೆಯೂ ತೃಪ್ತಿಯಾಗಿರಬಹುದು. ಅಲ್ಪವೇ ಸಿಕ್ಕರೂ ಅದರಿಂದ ತೃಪ್ತಿ ಹೊಂದಬಹುದು. ಅದೊಂದು ನೆಮ್ಮದಿಯ ಭಾವ. ಮೂಲಭೂತ ಅವಶ್ಯಕತೆಗಳು ಲಭ್ಯವಾದಲ್ಲಿ ಮನುಷ್ಯ ತೃಪ್ತಿ ಹೊಂದುತ್ತಾನೆ.
ಒಬ್ಬ ವಿದ್ಯಾರ್ಥಿ ಅತ್ಯಂತ ಪರಿಶ್ರಮದಿಂದ ಹಗಲು ರಾತ್ರಿ ಓದಿ ಕಷ್ಟಪಟ್ಟು ಪರೀಕ್ಷೆಗೆ ಸಿದ್ಧನಾಗುತ್ತಾನೆ. ಪರಿಕ್ಷೆಯಲ್ಲಿ ಒಳ್ಳೆಯ ಅಂಕಗಳು ಬಂದರೆ ಮಾತ್ರ ಅವನಿಗೆ ಸಂತೋಷ ಆಗುತ್ತದೆ. ಇಲ್ಲ ಅಂದರೆ ಬೇಸರ ಆಗುತ್ತದೆ.
ಆದರೆ ಅವನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ ತೃಪ್ತಿ ಅವನಿಗೆ ಇದ್ದೇ ಇರುತ್ತದೆ.
ಇಲ್ಲಿ ಒಂದು ಅಂಶ ನಾವು ಗಮನಿಸಬೇಕಾದುದು ಅಂದ್ರೆ ನಮಗೆ ಹೆಚ್ಚು ಹೆಚ್ಚು ತೃಪ್ತಿ ಹೊಂದಿದಷ್ಟು ಜೀವನದಲ್ಲಿ ಸಂತೋಷ ಜಾಸ್ತಿ ಆಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಮನುಷ್ಯನ ಸುಖಸಂತೋಷದಿಂದ ಇರಬೇಕಾದರೆ ಆತ ಮೊದಲು ಅಲ್ಪದಲ್ಲಿ ತೃಪ್ತಿಕಾಣುವದನ್ನು ರೂಢಿಸಿಕೊಳ್ಳಬೇಕು.
ಆದರೆ ಈ ರೀತಿಯ ಭಾವನೆಗಳ ವ್ಯತ್ಯಾಸಕ್ಕೆ ಕಾರಣ ಏನು ಎಂಬುದನ್ನು ನೋಡೋಣ. ಅದೇ ಕೋರಾ ವೆಬ್ಸೈಟಲ್ಲಿ ಒಬ್ಬರು ಉತ್ತರ ಬರೆಯುತ್ತಾರೆ.
ಮನುಷ್ಯನ ಸಂತೋಷವು ನಾಲ್ಕು ರಾಸಾಯನಿಕಗಳ ಮೇಲೆ ಅವಲಂಬಿತವಾಗಿದೆ.
೧. ಡೋಪಮೈನ್
೨. ಎಂಡೊರ್ಫಿನ್
೩. ಸೆರೊಟೊನಿನ್
೪. ಆಕ್ಸಿಟೊಸಿನ್
ದೇಹ ಬಲಪಡಿಸುವ ಸಂದರ್ಭದಲ್ಲಿ ಮನುಷ್ಯ ಹಾಕುವ ದೈಹಿಕ ಶ್ರಮಕ್ಕೆ ಬದಲಾಗಿ ಮೆದುಳಿನಲ್ಲಿ ಎಂಡೊರ್ಫಿನ್ ಬಿಡುಗಡೆಯಾಗುತ್ತದೆ. ಮನುಷ್ಯ ಕ್ರಮೇಣ ದೇಹದಂಡನೆಯನ್ನು ಇಷ್ಟಪಡಲು ಪ್ರಾರಂಭಿಸುತ್ತಾನೆ. ಇದು ನಿಮಗೆ ಸಂತೋಷವನ್ನು ಉಂಟುಮಾಡುತ್ತದೆ. ಹೀಗೆ ಎಂಡೊರ್ಫಿನ್ ಉಂಟುಮಾಡಿದ ಈ ಸಂತೋಷ ಕೇವಲ ತಾತ್ಕಾಲಿಕ.
ಮನುಷ್ಯ ಶ್ರೀಮಂತಿಕೆಯ ಹಿಂದೆ ಬಿದ್ದಾಗ, ದುಡ್ಡು ಸಂಪಾದನೆಗಾಗಿ ಬಹಳಷ್ಟು ಕೆಲಸಗಳನ್ನು ಮಾಡಿರುತ್ತಾನೆ ಅಥವಾ ಬುದ್ಧಿಯನ್ನು ಸಹಜತೆಗಿಂತ ಹೆಚ್ಚು ಬಳಸಿರುತ್ತಾನೆ. ಆ ಮೂಲಕ ಆತ ಇಷ್ಟ ಪಡುವ ಐಷಾರಾಮಿ ವಸ್ತುಗಳನ್ನು ಕೊಂಡುಕೊಳ್ಳುತ್ತಾನೆ. ಅವನ ಕನಸುಗಳಾದ ಕಾರು,ದೊಡ್ಡ ಬಂಗಲೆಯೋ, ರಂಗುರಂಗಿನ ಬಟ್ಟೆಗಳು ಹೀಗೆ ಎಲ್ಲವೂ ಈಡೇರಿದಾಗ ಮಿದುಳಿನಲ್ಲಿ ಡೊಪಮೈನ್ ಉತ್ಪತ್ತಿಯಾಗುತ್ತದೆ. ಇದೂ ನಮಗೆ ಸಂತೋಷವನ್ನು ಉಂಟುಮಾಡುತ್ತದೆಯಾದರೂ, ಇದೂ ಕೂಡ ತಾತ್ಕಾಲಿಕವೇ.
ಹಾಗಾದರೆ ನಿರಂತರ ಸಂತೋಷದ ಗುಟ್ಟೇನು?
ಆಗಲೇ ಹೇಳಿದಂತೆ ನಾಲ್ಕು ರಾಸಾಯಿನ ದ್ರವಗಳ ನಿರಂತರ ಉತ್ಪತ್ತಿಯಿಂದ ಮನುಷ್ಯ ಸಂತೋಷವಾಗಿರಲು ಸಾಧ್ಯ ಎಂದು ಸಂಶೋಧನೆಗಳು ಹೇಳಿವೆ. ಅದಕ್ಕಾಗಿ ಉಳಿದೆರಡು ರಾಸಾಯನಿಕಗಳ ಕುರಿತು ತಿಳಿಯೋಣ.
ನಾವು ಇತರರಿಗೆ ಉಪಕಾರಿಯಾದಾಗ, ನಮ್ಮ ಲಾಭಕ್ಕಿಂತಲೂ ಇತರರ ಕಷ್ಟಗಳು ನಮಗೆ ಹೆಚ್ಚಾದಾಗ,ಮಾನವೀಯತೆಯ ನೆಲೆಗಟ್ಟಿನಲ್ಲಿ ಮನುಷ್ಯ ಮನುಷ್ಯನ ಬಂಧಗಳು ಏರ್ಪಟ್ಟಾಗ ಸೆರೊಟೊನಿನ್ ಉತ್ಪಾದನೆಯಾಗುತ್ತದೆ. ನಾನು ಈ ಬರಹ ಬರೆಯುವಾಗ ನನ್ನಲ್ಲಿ ಸೆರೊಟೊನಿನ್ ಉತ್ಪತ್ತಿಯಾಗುತ್ತಿದೆ ಏಕೆಂದರೆ ಓದಗುರ ಮಾಹಿತಿಗಾಗಿ ನಾನು ಈ ಎಲ್ಲ ಸಂಗತಿಗಳನ್ನು ಕಲೆಹಾಕಿ ಬರೆಯುತ್ತಿದ್ದೇನೆ.
ಈ ಕಾರಣದಿಂದಲೇ ಕೋಟ್ಯಾಧಿಪತಿಗಳು, ಶ್ರೀಮಂತರು ಆಗಾಗ ದಾನ – ದೇಣಿಗೆಗಳನ್ನು ಕೊಡುವುದನ್ನು ನಾವು ಕಾಣುತ್ತೇವೆ. ಪ್ರಾಪಂಚಿಕ ಸಂತೋಷವನ್ನು ಅನುಭವಿಸಿದ ಅವರು ನೈಜ ಸಂತೋಷವನ್ನು ಅರಸುತ್ತಾ ಕಷ್ಟದಲ್ಲಿರುವವರಿಗೆ, ಸಮಾಜದ ದೇಶದ ಕೆಲಸ ಮಾಡುವವರಿಗೆ ಸಹಕಾರ ನೀಡುವ ಮೂಲಕ ತೃಪ್ತಿ ಹೊಂದು ತನ್ಮೂಲಕ ನೈಜ ಆನಂದವನ್ನು ಹೊಂದುತ್ತಾರೆ.
ಇನ್ನು ಕೊನೆಯದಾಗಿ ಆಕ್ಸಿಟೋಸಿನ್ ಎಂಬುದು ಮನುಷ್ಯ ಇನ್ನೊಬ್ಬ ಮನುಷ್ಯನೊಂದಿಗೆ ಆತ್ಮೀಯತೆಯಿಂದ ಹತ್ತಿರವಾದಾಗ ಉತ್ಪತ್ತಿಯಾಗುತ್ತದೆ. ಉದಾಹರಣೆಗೆ ಪ್ರೀತಿಯಿಂದ ಆಲಿಂಗಿಸಿದಾಗ, ಸಂತೋಷದಿಂದ ಹಸ್ತಲಾಘವ ಮಾಡಿದಾಗ ಬಹುಪ್ರಮಾಣದಲ್ಲಿ ಆಕ್ಸಿಟೋಸಿನ್ ಉತ್ಪತ್ತಿಯಾಗುತ್ತದೆ. ಹೆಚ್ಚು ಹೆಚ್ಚು ಸಾಮಾಜಿಕವಾಗಿ ನಮ್ಮನ್ನು ನಾವು ತೆರೆದುಕೊಂಡಂತೆ ಹೆಚ್ಚು ಸಂತೋಷವನ್ನು ಅನುಭವಿಸಬಹುದು. ಅದೇ ಸಂತೃಪ್ತಿಗೆ ರಹದಾರಿ.
ಒಟ್ಟಿನಲ್ಲಿ ಜೀವನದಲ್ಲಿ ಸಂತೋಷ ಸಂತೃಪ್ತಿ ನಿರಂತರವಾಗಿ ನೆಲೆಸಬೇಕೆಂದರೆ ಇನ್ನೊಬ್ಬರ ಭಾವನೆಗಳಿಗೆ ಮಿಡಿಯುವ ಹೃದಯ, ಸಹಾಯ ಹಸ್ತ ಚಾಚುವ ಗುಣ ಮತ್ತು ಮುಕ್ತವಾಗಿ ಎಲ್ಲರೊಡನೆ ಬೆರೆಯುವುದನ್ನು ರೂಢಿಸಿಕೊಳ್ಳಬೇಕು.