ದಿನ ಬೆಳಗಾದರೆ ಸಂಜೆಯವರೆಗೆ ನಮ್ಮ ಕಣ್ಣ ಮುಂದೆ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ. ಆ ದಿನ ನಾವೆಷ್ಟು ನಿರತರಾಗಿರಬೇಕು, ಏನೇನು ಮಾಡಬೇಕು, ಎಷ್ಟು ರೇಗಾಡಬೇಕು, ಎಷ್ಟು ನಲಿದಾಡಬೇಕು, ಯಾರ್ಯಾರನ್ನು ಸಂಧಿಸಬೇಕು, ಯಾವಾಗ ಉಣಬೇಕು, ಯಾವಾಗ ಮಲಗಬೇಕು, ಎಲ್ಲವನ್ನೂ ಸಾಲು ಸಾಲಾಗಿ ನಡೆದು ಹೋಗುವ ಘಟನೆಗಳೇ ನಿರ್ಧರಿಸುತ್ತವೆ!
ಜೀವನದುದ್ದಕ್ಕೂ ನಮ್ಮ ಕಣ್ಣ ಮುಂದೆ ನಡೆದು ಹೋಗುವ ಘಟನೆಗಳಿಗೆ ನಾವು ಯಾವ ರೀತಿಯಲ್ಲಿ ಸ್ಪಂದಿಸುತ್ತೇವೆ, ಅವು ನಮ್ಮ ಮನಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಮೇಲೆಯೇ ನಮ್ಮ ವ್ಯಕ್ತಿತ್ವವೂ ರೂಪುಗೊಳ್ಳುತ್ತದೆ!
Life is nothing but celebration of events ಅಂತ ಮಹಾನುಭಾವರೊಬ್ಬರು ಹೇಳಿರುವುದು ಇದಕ್ಕಾಗಿಯೇ ಇರಬೇಕು. ಕಣ್ಣ ಮುಂದೆ ನಡೆದು ಹೋಗುವ ಘಟನೆಗಳನ್ನು ನಾವೆಷ್ಟು ಆಸ್ವಾದಿಸುತ್ತೇವೆಯೋ, ಅಷ್ಟೇ ಆನಂದಮಯ ಜೀವನವು ನಮ್ಮದಾಗುತ್ತದೆ. ಮನೆಯ ಮುಂದಿನ ಅಂಗಳದಲ್ಲಿ ತಾನಾಗಿಯೇ ಬೆಳೆದು ನಿಂತ ಗಿಡವೊಂದರಲ್ಲಿ ಸುಂದರವಾದ ಹೂವೊಂದು ಅರಳಿದರೆ ಒಂದು ಕ್ಷಣ ಆ ಹೂವನ್ನು ನೋಡಿ ನಿಲಬೇಕೆನಿಸುವುದಿಲ್ಲವೇ? ಆ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸ್ಟೇಟಸ್ ಹಾಕಿಕೊಳ್ಳದವರು ಎಷ್ಟು ಮಂದಿ ಇರುವರು ಇಂದಿನ ಆಧುನಿಕ ಯುಗದಲ್ಲಿ?
ಅದು ಇರಬೇಕು.
ಪ್ರಕೃತಿಯಲ್ಲಿ ನಡೆದು ಹೋಗುವ ಪ್ರತಿಯೊಂದು ಬದಲಾವಣೆಯನ್ನೂ ಆಸ್ವಾದಿಸಬೇಕು; ಜೀವನದಲ್ಲಿ ನಡೆದು ಹೋಗುವ ಪ್ರತಿಯೊಂದು ಘಟನೆಯನ್ನೂ ಆನಂದಿಸಬೇಕು!
ಅಳಬೇಕಾದಲ್ಲಿ ಅಳಬೇಕು, ನಗಬೇಕಾದಲ್ಲಿ ನಗಬೇಕು, ಬಚ್ಚಿಡುವುದನ್ನು ಬಚ್ಚಿಡಬೇಕು, ಬಿಚ್ಚಿಡುವುದನ್ನು ಬಿಚ್ಚಿಡಬೇಕು, ಪ್ರತಿರೋಧಿಸ ಬೇಕಾದುದನ್ನು ಪ್ರತಿರೋಧಿಸಬೇಕು, ಅನುರಾಗಿಸುವುದನ್ನು ಅನುರಾಗಿಸಬೇಕು, ನಿಂದಿಸ ಬೇಕಾದುದನ್ನು ನಿಂದಿಸಬೇಕು, ಪೂಜಿಸ ಬೇಕಾದುದನ್ನು ಪೂಜಿಸಬೇಕು… ಒಟ್ಟಿನಲ್ಲಿ ಘಳಿಗೆ ಘಳಿಗೆಯನ್ನೂ ಕೊಂಡಾಡಬೇಕು!
ಹಾಗೆ ನೋಡಿದರೆ ಭಾರತೀಯ ಸಂಸ್ಕೃತಿಯೂ ನಮಗೆ ಇದನ್ನೇ ಹೇಳಿಕೊಡುತ್ತದೆ. ಮಗುವು ಹುಟ್ಟಿದಲ್ಲಿಂದ ಹಿಡಿದು, ಬೆಳೆದು ನಿಂತು ವಾನಪ್ರಸ್ಥವನ್ನು ಹೊಂದುವ ವರೆಗೆ ಅದರ ಜೀವನದ ಅದೆಷ್ಟು ಘಟನೆಗಳನ್ನು ನಾವು ಆಘೋಷಿಸುವುದಿಲ್ಲ ಹೇಳಿ? ಸಕಲ ಋತುಗಳಲ್ಲೂ ಪ್ರಕೃತಿಯಲ್ಲಾಗುವ ಬದಲಾವಣೆಗಳಿಗನುಗುಣವಾಗಿ ಬರುವ ಅದೆಷ್ಟು ಹಬ್ಬಗಳನ್ನು ನಾವು ಆಚರಿಸುವುದಿಲ್ಲ ಹೇಳಿ?
ಅದೆಂತಹ ದುಃಖದ ಮಡುವಿನಲ್ಲಿದ್ದರೂ ಒಂದೇ ಒಂದು ಘಟನೆ ನಮ್ಮನ್ನು ಆನಂದ ತುಂದಿಲರನ್ನಾಗಿಸಬಲ್ಲುದು. ಅದೆಷ್ಟೇ ಆನಂದದಲ್ಲಿದ್ದರೂ ಮರುಕ್ಷಣದಲ್ಲಿ ನಡೆದು ಹೋಗುವ ಘಟನೆಯೊಂದು ನಮ್ಮನ್ನು ದುಃಖದ ಮಡುವಿನಲ್ಲಿ ತಳ್ಳಿಬಿಡಲೂ ಬಹುದು. ಘಳಿಗೆಯಿಂದ ಘಳಿಗೆಗೆ, ಘಟನೆಯಿಂದ ಘಟನೆಗೆ ಬದಲಾಗುವ ಮನಸ್ಥಿತಿ.
ಕುಗ್ಗಿಸುವ ಘಟನೆಗಳಿಗೆ ಕುಗ್ಗಿ ಹೋಗದೇ, ಹಿಗ್ಗಿಸುವ ಘಟನೆಗಳಿಗೆ ಹಿಗ್ಗಿ ಹೋಗದೇ ಘಳಿಗೆ ಘಳಿಗೆಯನ್ನೂ ಆಸ್ವಾದಿಸೋಣ… ಆನಂದಿಸೋಣ!
ಹೌದು, ಜೀವನವೆಂದರದು ಘಟನೆಗಳ ಘೋಷಯಾತ್ರೆ!