ಕೇರಳಕ್ಕೆ ಗೋಕಾಕ ಮಾರ್ಗವಾಗಿ ಗೋವುಗಳನ್ನು ಸಾಗಿಸುತ್ತಿದ್ದಾಗ; ಅವುಗಳ ರಕ್ಷಣೆ ಮುಂದಾದ ಗೋಕಾಕದ 19 ವರ್ಷದ ಯುವಕ ಶಿವು ಉಪ್ಪಾರ ಅವರನ್ನು ನಿನ್ನೆ ಬೆಳಗಾವಿಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಹತ್ಯೆಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಗಳಿದ್ದು, ನಾಡಿನಲ್ಲಿ ನಿರಂತರವಾಗಿ ಗೋಸಂರಕ್ಷಕರ ಹತ್ಯೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಪ್ರಾಣಾರ್ಪಣೆಗೈದ ಶಿವು ಉಪ್ಪಾರ ಅವರ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ವಿಚಾರಣೆ ನಡೆಸಿ, ಹಂತಕರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು ಹಾಗೂ ಗೋಕಳ್ಳಸಾಗಾಣೆ ಮಾಡುತ್ತಿರುವವರಿಗೆ ದಿಟ್ಟ ಸಂದೇಶವನ್ನು ರವಾನಿಸಬೇಕೆಂದು ಶ್ರೀರಾಮಚಂದ್ರಾಪುರಮಠ ಸರ್ಕಾರವನ್ನು ಆಗ್ರಹಿಸುತ್ತದೆ.
ಪುಣ್ಯಕೋಟಿಯ ನಾಡಿನಲ್ಲಿ ಇತ್ತೀಚೆಗೆ ನಿರಂತರವಾಗಿ ಗೋಕಳ್ಳಸಾಗಣೆ ನಡೆಯುತ್ತಿರುವುದು ಹಾಗೂ ಗೋಸಂರಕ್ಷಕರ ಮೇಲೆ ಸಾಲುಸಾಲು ದಾಳಿಯಾಗುತ್ತಿರುವುದು ಖೇದಕರ ಹಾಗೂ ಆತಂಕಕಾರಿಯಾಗಿದ್ದು, ಇವುಗಳಿಗೆ ಸರ್ಕಾರ ಸೂಕ್ಷ್ಮವಾಗಿ ಸ್ಪಂದಿಸಬೇಕಿದೆ. ಗೋರಕ್ಷಣೆಯ ಜೊತೆಜೊತೆಗೆ ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಂಡವರ ರಕ್ಷಣೆಯೂ ಆಗಬೇಕು ಎಂಬುದು ಶ್ರೀಮಠದ ಆಗ್ರಹವಾಗಿದೆ.
ಸರ್ಕಾರಗಳು ಗೋಸಂರಕ್ಷಣೆಗೆ ಬದ್ಧವಾಗಿರಬೇಕು, ಗೋಸಂರಕ್ಷಕರ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಹಾಗೂ ಗೋಸಂರಕ್ಷಣೆ – ಸಂವರ್ಧನೆಗಳಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಇವುಗಳು ಸರ್ಕಾರದ ಕರ್ತವ್ಯ ಎಂಬುದನ್ನು ಇದೇ ಸಂದರ್ಭದಲ್ಲಿ ಶ್ರೀಮಠ ನೆನಪಿಸಬಯಸುತ್ತದೆ. ಅಂತೆಯೇ ಪ್ರಸ್ತುತ ಗೋಸಂರಕ್ಷಕ ಶಿವು ಉಪ್ಪಾರ ಹತ್ಯೆಯ ವಿಚಾರದಲ್ಲಿ ಸಮಗ್ರ ತನಿಖೆಗೆ ಸರ್ಕಾರ ತಕ್ಷಣ ಕಾರ್ಯ ಪ್ರವೃತ್ತವಾಗಬೇಕು ಎಂದು ಆಗ್ರಹಿಸುತ್ತದೆ.