ರಾಮಪದಕ್ಕೊಂದು ಅಲ್ಪವಿರಾಮ

ಕಲೆ ~ ಸಾಹಿತ್ಯ ಪ್ರಕಟಣೆ

 

ಪ್ರತಿ ಜೀವದ ಕೊನೆಯ ಗುರಿಯಾದ ಮುಕ್ತಿಯ ಮೊದಲ ಹಂತ ಸತ್ಸಂಗ. ಸತ್ಸಂಗ ಮಾಡಲು ಏಕಾದಶಿಯ ಹರಿದಿನಕ್ಕಿಂತ ಶ್ರೇಷ್ಠ ಪರ್ವಕಾಲ ಯಾವುದಿರಬಹುದು! ರಾಮನ ಪದಗಳನ್ನು, ರಾಗದಲ್ಲಿ ಪೋಣಿಸಿ ಭಾವದ ಸುಗಂಧ ಬೀರುವ ‘ರಾಮಪದ’ ವೆಂಬ ವಿನೂತನ ಸತ್ಸಂಗವನ್ನು ಶ್ರೀಸಂಸ್ಥಾನದವರು ಅಂತಹ ಪರ್ವಕಾಲವಾದ ಪ್ರತಿ ಏಕಾದಶಿಯಂದು ಅನುಗ್ರಹಿಸಿದರು. ಶಾಸನತಂತ್ರದ ಕಲಾರಾಮ ವಿಭಾಗದ ಅಡಿಯಲ್ಲಿ ಈ ರಾಮಪದವೆಂಬ ಸತ್ಸಂಗ ಆಯೋಜಿತಗೊಂಡಿತು.

 

ಹೇಮಲಂಬ ಸಂವತ್ಸರದ ರಾಮನವಮಿ (04-04-2017)ಯಿಂದ ಈ ವಿಶಿಷ್ಟ ರಾಮಪದವು ಹೊಸನಗರದ ಪ್ರಧಾನಮಠದಲ್ಲಿ ಪ್ರಾರಂಭಗೊಂಡಿತು. ನುರಿತ ಕಲಾವಿದರಿಂದ ಮೊದಲ್ಗೊಂಡು ಉದಯೋನ್ಮುಖ ಕಲಾವಿದರು ಭಜನೆ ಸಂಕೀರ್ತನೆಯ ಸೇವೆಗೈದು ರಾಮಚರಣಗಳಲ್ಲಿ ಕಲಾದರ್ಶನ ನೀಡಿ ಕಲಾಂತರಂಗದಲ್ಲಿ ರಾಮದರ್ಶನ ಪಡೆದುಕೊಳ್ಳುವ ಆಪೂರ್ವ ಅವಕಾಶವನ್ನು ಕಲ್ಪಿಸಿದರು. ಸದಾಶಿವ ಬ್ರಹ್ಮೇಂದ್ರರ, ಪುರಂದರದಾಸರ, ತ್ಯಾಗರಾಜರ, ಕನಕದಾಸರ, ಬಸವೇಶ್ವರರ, ತುಲಸೀದಾಸರ, ಸೂರದಾಸರ, ತುಕಾರಾಮರ, ಮೀರಾಳ, ಭದ್ರಾಚಲರಾಮದಾಸರ, ಸಂತ ಶಿಶುನಾಳ ಶರೀಫ್ ಹೀಗೇ ಭಾರತದ ಅತ್ಯಂತ ಶ್ರೇಷ್ಠ ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, ವಚನಗಳನ್ನು ಹಾಡಿ, ಭಾವಿಸುವ ವಿಶಿಷ್ಟ ವೇದಿಕೆ ರಾಮಪದವಾಯಿತು.

 

ದೇವಮಂದಿರ ಭಜನೆ ಪೂಜೆ ಪ್ರಸಾದಗಳು ।
ಜೀವನದಲಂಕಾರ, ಮನಸಿನುದ್ಧಾರ ॥
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- ।
ದಾವುದಾದೊಡಮೊಳಿತು – ಮಂಕುತಿಮ್ಮ

 

ರಾಮನ ಪದಗಳಿಗೆ ರಾಗದ ರಸ ಬೆರೆಸಿ, ಭಾವದ ಅಮೃತ ಬೆರೆಸಿ ತಯಾರಾಗುವ ರಸಪಾಕವೇ ಶ್ರೀಸಂಸ್ಥಾನದವರ ಅಮೃತವಚನದ ‘ರಾಮಪದ’. ಶ್ರೀ ಗರ್ತಿಕೆರೆ ರಾಘಣ್ಣನಂತ ಹಿರಿಯ ಕಲಾವಿದರಿಂದ ಮೊದಲ್ಗೊಂಡು, ಪುಟಾಣಿಯಾದ ಕುಮಾರಿ ಸಮನ್ವಿತಾವರೆಗೆ, ಅಶೋಕ್ ಹುಗ್ಗಣ್ಣವರ್, ಹುಮಾಯುನ್ ನಂತಹ ಹಿಂದುಸ್ತಾನಿ ಸಂಗೀತದ ಮೇರು ಕಲಾವಿದರಿಂದ ಮೊದಲ್ಗೊಂಡು ಉದಯೋನ್ಮುಖ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ವರೆಗೆ ಎಲ್ಲರೂ ರಾಮನ ಪದಗಳಲ್ಲಿ ತಮ್ಮ ಕಲಾಸೇವೆಯನ್ನು ಸಲ್ಲಿಸಿದರು. ವಿಶೇಷವಾಗಿ, ಶ್ರೀಸಂಸ್ಥಾನದವರು ತಮ್ಮ ನಾದಯೋಗದಲ್ಲಿ ತ್ಯಾಗರಾಜರು, ಭದ್ರಾಚಲರಾಮದಾಸರು, ಸದಾಶಿವ ಬ್ರಹ್ಮೇಂದ್ರರು, ಶಿಶುನಾಳ ಶರೀಫರು, ನಾಥ ಪರಂಪರೆಯ ಗುರುಗಳ ಸಾಹಿತ್ಯವನ್ನು ಭಾವಪೂರ್ಣವಾಗಿ ನಮಗೆಲ್ಲ ಉಣಬಡಿಸಿದರು.

ಒಟ್ಟು 45 ರಾಮಪದಗಳಲ್ಲಿ 3 ವೇದಪದಗಳೂ ಅನುಗ್ರಹೀತವಾದವು. ಪುರುಷಸೂಕ್ತ, ರುದ್ರಚಮಕ, ಗೋಸೂಕ್ತ, ಪುರುಷಸೂಕ್ತದ ಘನ ವೈದಿಕೋತ್ತಮರ ಸಿರಿಕಂಠದಲ್ಲಿ ಮೊಳಗಿದವು. ಈ ಉತ್ತಮೋತ್ತಮ ವೇದಮಂತ್ರಗಳ ಅರ್ಥವನ್ನು ಶ್ರೀಸಂಸ್ಥಾನದವರು ಅನುಗ್ರಹಿಸಿದರು. ಶ್ರೀಮಠವು ಸ್ವರ್ಣಾಂಗುಲಿಕ ನೀಡಿ ಸಮ್ಮಾನಿತರಾದ ವೇದಮೂರ್ತಿ ಪಳ್ಳತಡ್ಕ ಶಂಕರನಾರಾಯಣ ಘನಪಾಟಿಗಳಿಂದ ಮೊದಲಗೊಂಡು ಒಟ್ಟು 24 ವೈದಿಕೋತ್ತಮರು ಈ ವೇದಪದಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. ಒಟ್ಟು 80 ಕಲಾವಿದರು ರಾಮಪದದ ಸತ್ಸಂಗದಲ್ಲಿ ತಮ್ಮ ಕಲಾಸೇವೆಯನ್ನು ನೀಡಿದರು.

 

ವಿಲಂಬಿ ಸಂವತ್ಸರದ ವೈಕುಂಠ ಏಕಾದಶಿ (18-12-2018) ಯಂದು ನೆರವೇರಿದ ರಾಮಪದದೊಂದಿಗೆ ಈ ಸತ್ಸಂಗ ಕಾರ್ಯ ಅಲ್ಪವಿರಾಮವನ್ನು ಪಡೆದುಕೊಳ್ಳುತ್ತಿದೆ. ಹೊಸ ಕಾಯಕಲ್ಪದೊಡನೆ ರಾಮಪದವನ್ನು ಮುಂದೆ ನಿರೀಕ್ಷಿಸಿ…

Author Details


Srimukha

Leave a Reply

Your email address will not be published. Required fields are marked *