ಕಾರವಾರ: ನಿವೃತ್ತ ಯೋಧರು ಸೇರಿದಂತೆ ಸೇವಾ ನಿರತರಾಗಿರುವ ವೀರ ಯೋಧರಿಗಾಗಿ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗದ ದರ್ಶನಕ್ಕೆ ನೇರ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಮಠದ ಆಡಳಿತಕ್ಕೊಳಪಟ್ಟಿರುವ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ, ಶ್ರೀಸಂಸ್ಥಾನದವರ ಮಾರ್ಗದರ್ಶನದಂತೆ ಈ ವಿಶೇಷ ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ವರ್ಷದ ಹಿಂದೆಯೇ ಜಾರಿಗೆ ತಂದಿದ್ದು, ದೇವಾಲಯದ ಪ್ರವೇಶದ್ವಾರದಲ್ಲಿ ‘ದೇವರ ದರ್ಶನಕ್ಕೆ ನಿವೃತ್ತ ಹಾಗೂ ಕರ್ತವ್ಯದಲ್ಲಿರುವ ಸೈನಿಕರಿಗೆ ಪ್ರಾಶಸ್ತ್ಯ’ ಎಂಬ ಫಲಕ ಹಾಕಲಾಗಿದೆ.
ಯೋಧರಿಗೆ ಪ್ರಾಶಸ್ತ್ಯ:
ಸೈನಿಕರು, ದೇವಾಲಯದ ಕೌಂಟರ್ನಲ್ಲಿ ಸೈನಿಕರ ಗುರುತಿನ ಚೀಟಿಯನ್ನು ತೋರಿಸಿದರೆ, ಆಡಳಿತ ಮಂಡಳಿಯ ಸದಸ್ಯರೇ ಅವರನ್ನು ಗೌರವಪೂರ್ವಕವಾಗಿ ಕರೆದುಕೊಂಡು ಹೋಗಿ ನೇರವಾಗಿ ಆತ್ಮಲಿಂಗ ದರ್ಶನ ಹಾಗೂ ಪೂಜೆಗೆ ಅವಕಾಶ ಮಾಡಿಕೊಡುತ್ತಾರೆ ಎಂದು ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆ ಹೇಳಿದ್ದಾರೆ.
ಮಳೆ, ಚಳಿ, ಬಿಸಿಲೆನ್ನದೇ ಯೋಧರು ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಾರೆ. ಅವರು ಪ್ರಾಣದ ಹಂಗು ತೊರೆದು ದೇಶ ಕಾಯುತ್ತಿರುವ ಕಾರಣದಿಂದಾಗಿ ನಾವು ನೆಮ್ಮದಿಯಿಂದ ಇರುವಂತಾಗಿದೆ. ಅಂತಹ ಸೈನಿಕರು ಸರದಿಯಲ್ಲಿ ನಿಂತು ಕಾಯುವುದು ಸರಿಯಲ್ಲ. ಅವರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಚಿಂತನೆಯಿಂದಾಗಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ಆಡಳಿತಾಧಿಕಾರಿ ಹೇಳಿದ್ದಾರೆ.