*ಸೇರಿನಿಂದ ಅಳೆಯಲಾದೀತೇ ದೂರವನ್ನು?*

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

ದೇವಸ್ಥಾನಕ್ಕೆ ನಾವೇಕೆ ಹೋಗಬೇಕು? ಇಲ್ಲಿದೆ ವೈಜ್ಞಾನಿಕ‌ ಕಾರಣ.
ವಿವಾಹಿತ ಸ್ತ್ರೀಯರು ಕರಿಮಣಿಯ ಸರ ಮತ್ತು ಕಾಲುಂಗುರ ಧರಿಸುವುದರ ವೈಜ್ಞಾನಿಕ ಕಾರಣ ಗೊತ್ತೇ?
ಹಣೆಗೆ ಕುಂಕುಮ, ವಿಭೂತಿ, ಗಂಧ ಹಚ್ಚುವ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣವೇನು?
ಮರಕ್ಕೆ ಪ್ರದಕ್ಷಿಣೆ ಬರುವುದರ ವೈಜ್ಞಾನಿಕ‌ ಹಿನ್ನೆಲೆ.
ದಶಾವತಾರವು ವೈಜ್ಞಾನಿಕವಾದ ವಿಕಾಸವಾದವನ್ನು ಪ್ರತಿಪಾದಿಸುತ್ತದೆ.

ಹೀಗಿರುವ ನೂರೆಂಟು ‘ವೈಜ್ಞಾನಿಕ’ ಸಂಶೋಧನೆಗಳನ್ನು ದಿನನಿತ್ಯ ಕಾಣುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ನಮ್ಮ ಇನ್ಬಾಕ್ಸಿನಲ್ಲಿ. ವೈಜ್ಞಾನಿಕ ಎಂದ ತಕ್ಷಣ ನಮ್ಮ ಕುತೂಹಲ ಚಿಗುರುತ್ತದೆ. ಓದುತ್ತೇವೆ. ನಮ್ಮ ಪರಿಚಿತರೊಂದಷ್ಟು ಜನಕ್ಕೆ ಅದನ್ನು ಕಳುಹಿಸುತ್ತೇವೆ.

ಒಂದು ವಿಚಾರವನ್ನು ಯಾರೋ ನಮ್ಮೊಂದಿಗೆ ಹಂಚಿಕೊಂಡದ್ದು, ಅದನ್ನು ತಿಳಿಯುವ ಕುತೂಹಲ ನಮ್ಮಲ್ಲಿ ಹುಟ್ಟಿದ್ದು, ಅದನ್ನು ನಾವು ಓದಿದ್ದು, ಅದರಿಂದ ಹೊಸ ವಿಚಾರ ತಿಳಿದುಕೊಂಡದ್ದು, ಅದನ್ನು ನಮ್ಮ ಆಪ್ತರೂ ತಿಳಿಯಲಿ ಎಂದು ಬಯಸಿ ಕಳುಹಿಸಿದ್ದು… ಇದೆಲ್ಲವೂ ಸಹಜವೇ. ಅದು ಯಾವುದೂ ತಪ್ಪು ಎಂದೆನಿಸುವುದೂ ಇಲ್ಲ. ಆದರೆ ಇಲ್ಲೊಂದು ತಪ್ಪು ನಡೆದಿರುತ್ತದೆ. ನಮ್ಮ ಒಳ್ಳೆಯ ಉದ್ದೇಶಗಳೆಡೆಯಲ್ಲಿಯೇ ಈ ತಪ್ಪು ನುಸುಳಿಬಿಡುವುದನ್ನು ನಾವು ಗಮನಿಸುವುದಿಲ್ಲ.

ಇಂತಹ ಬರಹಗಳನ್ನು ಬರೆಯುವವರು ಯಾರು? ಹೀಗೆ ಫಾರ್ವರ್ಡ್ ಆಗುವ ಸಂದೇಶಗಳ ಸತ್ಯಾಸತ್ಯತೆ ಏನು? ಎಂದು ಯೋಚಿಸಬೇಕಿದೆ.
ಯಾರೋ ಹೇಳಿದ್ದನ್ನು ನಾವು ನಂಬುವುದು ಮತ್ತು ಹಂಚುವುದು ಎಷ್ಟು ಸರಿ ಎಂದು ನಾವು ಪ್ರಶ್ನಿಸಿಕೊಳ್ಳಬೇಕಿದೆ.
ಹಾಗಾದರೆ ನಮ್ಮ ಸಂಸ್ಕೃತಿಯ ಬಗ್ಗೆ ಒಳ್ಳೆಯ ಮಾಹಿತಿ ಸಿಕ್ಕಿದಾಗ ಅದನ್ನು‌ ನಾವು ಹಂಚಿಕೊಳ್ಳಬಾರದೇ? ಎಂಬುದು ಸಹಜವಾಗಿ ಹುಟ್ಟುವ ಪ್ರಶ್ನೆ.

ಮೊದಲನೆಯದಾಗಿ, ಯಾವುದೇ ವಿಚಾರಗಳನ್ನು ಆ ವಿಷಯದಲ್ಲಿ ನಿಪುಣತೆ ಹೊಂದಿರುವಾತನೇ ಹೇಳಿದ್ದರೆ ಮಾತ್ರ ಅದನ್ನು ನಾವು ಒಪ್ಪಬಹುದು ಅಥವಾ ನಂಬಬಹುದು. ನಂಬಲೇಬೇಕು ಅಥವಾ ಒಪ್ಪಲೆಬೇಕೆಂಬ ನಿಯಮವಿಲ್ಲ. ಆದರೆ ನಂಬಲು ಅರ್ಹವಾದದ್ದು ಎಂದೆನಿಸಬೇಕಾದರೆ ಅದು ತಜ್ಞರಿಂದ ದೃಢಪಟ್ಟಿರಬೇಕು. ಅದು ವಿಜ್ಞಾನವೇ ಇರಲಿ, ಧಾರ್ಮಿಕ ವಿಚಾರವೇ ಇರಲಿ.

ಎರಡನೆಯ ವಿಚಾರ, ಭಾರತೀಯ ಸಂಸ್ಕೃತಿಯ ಬಗ್ಗೆ. ನಮ್ಮ ಆಚಾರ ವಿಚಾರ ಆಹಾರ ವಿಹಾರಗಳು ಯಾರೋ ಒಬ್ಬ ವ್ಯಕ್ತಿ ಕುಳಿತು ಬರೆದಿಟ್ಟದ್ದಲ್ಲ. ಇದು ಸಹಸ್ರಾರು ವರ್ಷಗಳಿಂದ ಸಹಸ್ರಾರು ಜನ ಜ್ಞಾನಿಗಳು ಬದುಕಿ ಬಂದ ಮಾರ್ಗ. ನಮ್ಮಲ್ಲಿ ಧಾರ್ಮಿಕ, ವೈಜ್ಞಾನಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಎಂಬುದಾಗಿ ಬದುಕನ್ನು ವಿಂಗಡಿಸಿಲ್ಲ. ಎಲ್ಲವೂ ಬದುಕಿನಲ್ಲಿ ಸೇರಿಕೊಂಡಿವೆ, ಒಂದರೊಳಗೊಂದೂ ಸೇರಿಹೋಗಿವೆ. ನಮ್ಮ ಜೀವನದ ಪ್ರತಿಯೊಂದು ಸ್ತರಗಳಲ್ಲೂ ನಾವು ಈ ಎಲ್ಲವನ್ನೂ ಕಾಣುತ್ತೇವೆ. ಅವೆಲ್ಲವೂ ಒಂದಾಗಿರುವುದೇ ನಮ್ಮ‌ ಬದುಕು. Religion, spirituality ಮತ್ತು science ಇವೆಲ್ಲವೂ ಬೇರೆ ಬೇರೆ ಎನ್ನುವುದು ಪಶ್ಚಿಮದಿಂದ ನಾವು ಪಡೆದ ಅಪಕ್ವ ವಿಚಾರಧಾರೆಯ ಉತ್ಪನ್ನಗಳು. ಎಲ್ಲಕ್ಕೂ ವೈಜ್ಞಾನಿಕ ಪುರಾವೆ ಕೇಳುವ ಚಾಳಿಯೂ ನಮಗೆ ಅಲ್ಲಿಂದಲೇ ಬಂದಿದೆ.

ಪ್ರಶ್ನಿಸುವುದು ತಪ್ಪಲ್ಲ. ಪ್ರಶ್ನಿಸುವುದಕ್ಕೆ ನಮ್ಮಲ್ಲೂ ಒಪ್ಪಿಗೆಯಿದೆ. ಆದರೆ ನಮ್ಮ ಪ್ರಶ್ನೆಯ ಉದ್ದೇಶ ಏನು? ವಿಚಾರವನ್ನು ಅರಿಯುವುದಕ್ಕಾಗಿಯೇ? ಹಾಗಾದರೆ ಇದಲ್ಲ ದಾರಿ. ಇನ್ನೂ ಐನೂರರ ಆಯುಸ್ಸೂ ದಾಟದ ಆಧುನಿಕ ವಿಜ್ಞಾನದ ಮಾನದಂಡದಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕೇ ಸಹಸ್ರಾರು ವರ್ಷಗಳಿಂದ ತಲೆ ಎತ್ತಿ ನಿಂತಂತಹ ಸನಾತನ ಸಂಸ್ಕೃತಿ! ಹೀಗೆ ಸಮರ್ಥಿಸಿಕೊಳ್ಳುವ ಅಗತ್ಯ ನಮಗೇನಿದೆ? ನಮ್ಮ ಸಂಸ್ಕೃತಿ ಸಂಪ್ರದಾಯಗಳು ಸರಿ ಎಂಬುದನ್ನು ಜಗತ್ತಿಗೆ ತೋರಿಸುವುದಕ್ಕಾಗಿ ಈ ಆಧುನಿಕ ವಿಜ್ಞಾನದ ಶಂಖದಿಂದ ಇಳಿಸಬೇಕು ನಮ್ಮತನವನ್ನು!

ಅಷ್ಟಕ್ಕೂ ಈ ಸಂಶಯಗಳಿರುವುದು ಯಾರಿಗೆ? ಯಾರು ನಮ್ಮನ್ನು ಪ್ರಶ್ನಿಸಿದವರು? ಹೊರಗಿನ ಯಾರೋ ಅಲ್ಲ. ಹೊರಗಿನಿಂದ ಯಾರೋ ನಮ್ಮತನವನ್ನು ಪ್ರಶ್ನಿಸಿದರೆ ಅವರೆದುರು ನಮ್ಮನ್ನು ನಾವು ಸಮರ್ಥಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ಆದರೆ ಕೊರೆಯುತ್ತಿರುವುದು ನಮ್ಮೊಳಗೇ ಇರುವ ಒಂದು ಹುಳ. ಆಧುನಿಕ ವಿಜ್ಞಾನದಲ್ಲಿ ಸರಿ ಎಂದು ಸಾಬೀತಾದದ್ದು ಮಾತ್ರ ಸರಿ. ಆಧುನಿಕ ಪ್ರಯೋಗಾಲಯಗಳಲ್ಲಿ ಸಾಬೀತಾಗದೇ‌ ಇರುವಂಥದ್ದು ಸರಿಯಲ್ಲದ್ದು ಎಂಬ ಭ್ರಮೆಯ ಹುಳ. ರೇಷ್ಮೆಹುಳಗಳು ಹಿಪ್ಪುನೇರಳೆಯ ಎಲೆಯನ್ನು ಕೊರೆಯುತ್ತಾ ಸಾಗುವಂತೆ ಈ ಭ್ರಮೆಯ ಹುಳ ನಮ್ಮೊಳಗಿನ ನಮ್ಮತನವನ್ನೇ ಕೊರೆಯುತ್ತಾ ನಮ್ಮೊಳಗೆ ಗೂಡುಕಟ್ಟಿದೆ.

ನಮಗೆ ರಾಮಾಯಣದ ಬಗ್ಗೆ, ರಾಮ ಇದ್ದುದರ ಬಗ್ಗೆ ಸಂಶಯ ಮೂಡುತ್ತದೆ. ಅದಕ್ಕೆ ನಮಗೆ ವೈಜ್ಞಾನಿಕ ಪುರಾವೆ ಬೇಕು. ನಾವು ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಚಾರಗಳ ಬಗ್ಗೆ ನಮಗೆ ವೈಜ್ಞಾನಿಕ ಪ್ರಮಾಣಪತ್ರ ಬೇಕು. ನಮ್ಮ ಆಹಾರಪದ್ಧತಿಯ ಬಗ್ಗೆಯೂ ನಮಗೆ ಆಧುನಿಕ ಪ್ರಯೋಗಾಲಯದಲ್ಲಿ ಕಂಡುಕೊಳ್ಳಬಹುದಾದ ಪುರಾವೆಗಳು ಸಿಗಬೇಕು. ಅದು ಇಲ್ಲವಾದರೆ ನಾವು ಇದಾವುದನ್ನೂ ನಂಬುವುದಿಲ್ಲ.

ನಂಬುವುದು, ನಂಬದಿರುವುದು ವೈಯಕ್ತಿಕ ಅಭಿಪ್ರಾಯ. ಅದು ವ್ಯಕ್ತಿಯ ಸ್ವಾತಂತ್ರ್ಯ. ಆದರೆ, ಯೋಚಿಸಬೇಕಾದ ಅಂಶವೊಂದಿದೆ ಇಲ್ಲಿ. ಆಧುನಿಕ ವಿಜ್ಞಾನವು ಭೌತಿಕವಾಗಿ ನಮ್ಮ ಗ್ರಹಿಕೆಗೆ ಲಭಿಸುವ ವಿಚಾರಗಳನ್ನಷ್ಟೇ ಅಳತೆ ಮಾಡಬಲ್ಲುದು. ಪ್ರಯೋಗಕ್ಕೊಳಪಡಿಸಿ ಪುರಾವೆ ಕೊಡಬಲ್ಲುದು. ಆದರೆ ಭಾರತೀಯ ವಿಚಾರಧಾರೆ ಭೌತಿಕತೆಯ ಪರಿಧಿಯನ್ನು ಮೀರಿದ್ದು. ಅದನ್ನು ಪ್ರಯೋಗಾಲಯದ ತಕ್ಕಡಿಯಲ್ಲಿ ಇಡಲಾಗದು. ಹಾಗಿರುವಾಗ ನಾವು ಅದಕ್ಕೊಂದು ವೈಜ್ಞಾನಿಕ ಕಾರಣ ಹುಡುಕಿಯೇ ಬಿಡಬೇಕು ಎಂದು ಹಟ ಹಿಡಿದು ಏನೋ‌ ಒಂದು ಕಾಲ್ಪನಿಕ ಸಮಾಧಾನವನ್ನು ಕೊಟ್ಟು, ಅದನ್ನೇ ನಿಜ ಎಂಬಂತೆ ಸುದ್ದಿ ಹಬ್ಬಿಸುವುದರಿಂದ ನಮ್ಮನ್ನೇ ನಾವು ಅಪಹಾಸ್ಯ ಮಾಡಿಕೊಂಡಂತೆ.

Objective ಮತ್ತು subjective ಎಂಬ ಎರಡು ಅಂಶಗಳಿವೆ. Objective ಎಂದರೆ ಹೊರಗಿನಿಂದ ತಿಳಿಯಬಹುದಾದಂಥದ್ದು. Subjective ಎಂದರೆ ವ್ಯಕ್ತಿಯ ವೈಯಕ್ತಿಕ ಅನುಭವ. ಇಲ್ಲೂ ಹಾಗೆಯೇ. ಭಾರತೀಯ ವಿಚಾರಗಳನ್ನು ಅಳವಡಿಸಿಕೊಂಡು ಒಬ್ಬ ವ್ಯಕ್ತಿ ತನ್ನ ಬದುಕು ಎತ್ತರಕ್ಕೇರಿರುವುದನ್ನು ಅರಿಯಬಲ್ಲ. ಆದರೆ ಅದನ್ನು ಪ್ರಯೋಗಾಲಯದ ಗಾಜಿನ ಪಾತ್ರೆಗಳೊಳಗೆ ಬಣ್ಣ ಬದಲಾಗುವ ದ್ರವದಂತೆ ನೋಡಲಾಗದು.

ಅಷ್ಟಕ್ಕೂ ಆಧುನಿಕ ಮಾನದಂಡದ ಪ್ರಕಾರವೇ ನಮ್ಮ ವಿಚಾರಗಳನ್ನು ಕೊಡುವ ಅಗತ್ಯ ಇದೆಯೇ? ಈಜಬೇಕಾದರೆ ನೀರಿಗಿಳಿಯಬೇಕು. ದಡದಲ್ಲಿ ಕುಳಿತು, ಮೂಗಿಗೆ ನೀರು ಹೊಕ್ಕು ಸಾಯುವುದಿಲ್ಲವೇ ಎಂದು ಪ್ರಶ್ನಿಸಿದರೆ? ಅಷ್ಟಕ್ಕೂ ನಿಜವಾಗಿಯೂ ಕಲಿಯುವ ಆಸಕ್ತಿ ಇದ್ದವರು ಅದರೊಳಗೆ ಇಳಿದೇ ಇಳಿಯುತ್ತಾರೆ. ನಿಮ್ಮ ಸಂಸ್ಕೃತಿ, ಸಂಪ್ರದಾಯ, ವಿಚಾರಧಾರೆಗಳು ಸರಿ‌ ಇಲ್ಲ‌ ಎನ್ನುವವ ಮಾತ್ರ ಅದಕ್ಕೆ ಪ್ರಮಾಣ ಕೇಳುತ್ತಾನೆ. ಪುರಾವೆಯನ್ನು ಕೇಳುವುದನ್ನೂ ತಪ್ಪು ಎನ್ನಲಾಗದು. ಆದರೆ ಕೊಡುವ ಪುರಾವೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ವಿಶಾಲ‌ ಮನಸ್ಸೂ ಆತನಿಗಿರಬೇಕು. ಸೀಮಿತವಾದ ದೃಷ್ಟಿಯನ್ನು ಹೊಂದಿರುವಾಗ ಅದರಾಚೆಯದನ್ನು ಆತ ನೋಡಲಾರ. ಹಾಗಾಗಿ ಆತ ಅರಿಯಲಾರ. ಇದನ್ನೆಲ್ಲ ಪ್ರಶ್ನಿಸುವವ ವಿರೋಧಿಸುವವನೇ ಎಂದರೆ ಅದೂ ಅಲ್ಲ ಎನಿಸುತ್ತದೆ. ಯಾಕೆಂದರೆ ವಿರೋಧಿಸುವುದಕ್ಕಾದರೂ ಆ ವಿಚಾರವನ್ನು ಆಮೂಲಾಗ್ರವಾಗಿ ಆತ ತಿಳಿಯಬೇಕಲ್ಲವೇ? ತಿಳಿಯಬೇಕಾದರೆ ಆತ ಅದರಾಳಕ್ಕೆ ಇಳಿಯಲೇಬೇಕಲ್ಲ! ಹಾಗೆ ಇಳಿದವನಿಗೆ ಆಧುನಿಕ ಮಾನದಂಡಗಳು ಇದನ್ನು ಅಳೆಯಲಾರವು ಎನ್ನುವ ಸತ್ಯ ಗೋಚರವಾಗದೇ ಇದ್ದೀತೇ?

ಯಾವುದನ್ನೂ ನಾವು ಆಧುನಿಕ ವಿಜ್ಞಾನದಲ್ಲಿ ಸಾಬೀತು ಮಾಡಲಾಗದು ಎಂದೇನಿಲ್ಲ. ನಮ್ಮ ಹಲವು ಪದ್ಧತಿಗಳು, ಆಹಾರಕ್ರಮಗಳನ್ನು, ಆಯುರ್ವೇದ, ಯೋಗ ಮುಂತಾದವುಗಳನ್ನು ಈಗಾಗಲೇ ವಿವಿಧ ರೀತಿಯಲ್ಲಿ‌ ಪರೀಕ್ಷೆಗೆ ಒಳಪಡಿಸಿ ಅವು ಯಾವ ರೀತಿಯಲ್ಲಿ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಅದನ್ನೂ ಮೀರಿದ ವಿಚಾರಗಳಿವೆ ಎನ್ನುವುದನ್ನು ಮರೆಯಬಾರದು.

ಅದೇನೇ ಇರಲಿ. ಇಲ್ಲಿ ನನ್ನ ಆಕ್ಷೇಪ ಇರುವುದು ಆ ರೀತಿ ಪ್ರಶ್ನಿಸುವ, ಹೀಯಾಳಿಸುವ, ನಮ್ಮತನದ ಬಗ್ಗೆ ನಮಗೇ ಇರುವ ಕೀಳರಿಮೆಯ ಬಗ್ಗೆಯೇ ಹೊರತು ಆಧುನಿಕ ವಿಜ್ಞಾನದ ಬಗ್ಗೆ ಅಲ್ಲ. ಆಧುನಿಕ ವಿಜ್ಞಾನದ ಸಾಧನೆಗಳಿಂದಾಗಿ ಮನುಷ್ಯಕುಲಕ್ಕೆ ಆಗಿರುವ ಉಪಕಾರಗಳು ಹಲವು. ನಮ್ಮ ಇಂದಿನ ಬದುಕನ್ನು ಸರಳವಾಗಿಸಿದ್ದು ಅದುವೇ. ಪ್ರತಿದಿನ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಕಣ್ಮುಚ್ಚಿ ನಿದ್ರಿಸುವುದರೊಳಗೆ ನಾವು ಪ್ರತಿಕ್ಷಣ ಆಧುನಿಕ ವಿಜ್ಞಾನದ ಋಣದಲ್ಲಿಯೇ ಇರುತ್ತೇವೆ. ಆ ಸಾಧನೆಗಳಿಗೆ, ವಿಜ್ಞಾನಿಗಳಿಗೆ ನಾವು ಎಂದಿಗೂ ಆಭಾರಿಗಳೇ.

ಆದರೆ ಅದು ಪರಿಪೂರ್ಣ ಅಲ್ಲ ಅನ್ನುವುದನ್ನೂ ನಾವು ಮರೆಯಬಾರದು. ಒಂದಾನೊಂದು ಕಾಲದಲ್ಲಿ ಡಾರ್ವಿನ್ನನು ಹೇಳಿದ ವಿಕಾಸವಾದ ತಪ್ಪು ಎಂದು ಅದೇ ವಿಜ್ಞಾನವು ಹೇಳಲಾರಂಭಿಸಿದೆ. ಒಮ್ಮೆ ಪ್ರಯೋಗಿಸಿ, ಪರಿಣಾಮಕಾರಿ ಎಂದು ಜನರಿಗೆ ನೀಡಲ್ಪಡುತ್ತಿದ್ದ ಔಷಧಿಗಳು ಇಂದು ನಿಷೇಧಿಸಲ್ಪಟ್ಟಿವೆ. ಒಂದು ಕಾಲದಲ್ಲಿ ಸರಿ ಎಂದು‌ ನಂಬಿದ್ದ ಸಿದ್ಧಾಂತಗಳು ತಪ್ಪು ಎಂದು ಸಾಬೀತಾಗಿವೆ.
ವಿಜ್ಞಾನವೇ ಹಾಗೆ. Trial and error ಗಳ ಪಯಣ. ಕೆಲವು ಸರಿ ಎಂದು ಆ ಕಾಲದಲ್ಲಿ ಕಂಡುಬಂದದ್ದು ಬಳಕೆಗೆ ಬಂತು. ತಪ್ಪೆನಿಸಿದ್ದು ಇನ್ನೊಂದು ಕವಲೊಡೆದು ನಡೆಯಿತು. ಒಂದು ಕಾಲದಲ್ಲಿ ಸರಿ ಎಂದು ಸಾಬೀತಾದದ್ದು ಕಾಲಾಂತರದಲ್ಲಿ ತಪ್ಪೆಂದು ಸಿದ್ಧವಾಗುವುದೂ ಇದೆ. ಅದು ಹಾಗೇ ನಡೆಯುತ್ತಲೇ ಇರುತ್ತದೆ. ಯಾಕೆಂದರೆ ಅದಕ್ಕೊಂದು ಮಿತಿಯಿದೆ. ಅದನ್ನು‌ ಮೀರಿ ಅದು ಬೆಳೆದಿಲ್ಲ. ಬೆಳೆಯುವುದೋ‌ ಇಲ್ಲವೋ‌ ಅನ್ನುವುದು ಗೊತ್ತಿಲ್ಲ.

ನಾನು ಹೇಳಹೊರಟಿರುವುದು ಇಷ್ಟೇ. ಆಮ್ಲಜನಕವನ್ನು ಕಂಡುಹಿಡಿಯುವ ಮೊದಲೂ ಉಸಿರಾಟ ಇತ್ತು. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಆಮ್ಲಜನಕ ಎನ್ನುವ ಮೂಲವಸ್ತುವನ್ನು ಕಂಡುಹಿಡಿಯುವ ಮೊದಲೂ, ಅದನ್ನು ಪಿರಿಯಾಡಿಕ್ ಟೇಬಲ್ಲಿಗೆ ಸೇರಿಸುವ ಮೊದಲೂ, ಅದರ ಗುಣಧರ್ಮಗಳನ್ನು ಅರಿಯುವ ಮೊದಲೂ ಅದು ಇತ್ತು. ತನ್ನ ಪಾಡಿಗೇ ಸೃಷ್ಟಿಯಲ್ಲಿ ತನಗಿರುವ ಕರ್ತವ್ಯವನ್ನು‌ ನಿಭಾಯಿಸುತ್ತಿತ್ತು. ಸೃಷ್ಟಿಯ ಎಷ್ಟೋ ಕೋಟಿ ಕೋಟಿ ವರ್ಷಗಳ ಅನಂತರ ಯಾರೋ ಒಬ್ಬ ತನಗೆ ಆಕ್ಸಿಜನ್ ಎಂದು ಹೆಸರಿಸುತ್ತಾನೆ ಎಂಬುದರ ಹಂಗು ಅದಕ್ಕಿರಲಿಲ್ಲ. ಇನ್ನು ಕೆಲಕಾಲದ ಅನಂತರ ಪಿರಿಯಾಡಿಕ್ ಟೇಬಲ್ಲಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಅದನ್ನು ಸ್ಥಳಾಂತರಿಸಿದರೂ ಅದು ತನ್ನ ಗುಣವನ್ನು ಬಿಡುವುದಿಲ್ಲ. ಇವೆಲ್ಲವೂ ನಾವು ನಮಗೆ ಅರ್ಥವಾಗಲೆಂದು‌ ಮಾಡಿಕೊಂಡ ವ್ಯವಸ್ಥೆ.
ಭಾರತೀಯ ಜನಜೀವನವೂ ಸಂಸ್ಕಾರ ಸಂಪ್ರದಾಯಗಳೂ ಹಾಗೇ. ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿವೆ. ಅವುಗಳನ್ನು ಪ್ರಯೋಗಕ್ಕೆ ಒಳಪಡಿಸಿ, ಅರ್ಥೈಸಿಕೊಳ್ಳಬೇಕಾದ ಅನಿವಾರ್ಯತೆ ನಮಗಿರಬಹುದು. ಆದರೆ ಭಾರತೀಯ ವಿಚಾರಗಳಿಗಿಲ್ಲ. ಅವು ನಿರಂತರ ಪ್ರವಹಿಸುತ್ತಲೇ ಇರುತ್ತವೆ‌. ನಡುವೆ ಒಂದಷ್ಟು ಬೊಗಸೆ ನೀರನ್ನು ಮೊಗೆದುಕೊಳ್ಳುವ ಅವಕಾಶವಷ್ಟೇ ನಮ್ಮದು. ಮೊಗೆದುಕೊಂಡ ನೀರನ್ನು ಏನು ಮಾಡುತ್ತೇವೆ ಎನ್ನುವುದು ಅವರವರ ಪ್ರಜ್ಞೆಗೆ ಬಿಟ್ಟ ವಿಚಾರ. ಬಾಯಾರಿಕೆ ತಣಿಸಬಹುದು. ಅಥವಾ ಅದರೊಳಗಿನ ಹೈಡ್ರೋಜನ್, ಆಕ್ಸಿಜನ್ ಅಣುಗಳ ಪ್ರಮಾಣವನ್ನು ಲೆಕ್ಕ ಹಾಕಲೂಬಹುದು.

ಹಾಗಾದರೆ ಇಂದು ನಾವು ಆಚರಿಸುವ ಸಂಪ್ರದಾಯಗಳೆಲ್ಲವೂ ಸರಿಯೇ? ಅವುಗಳಲ್ಲಿ ತಪ್ಪುಗಳೇ ಇಲ್ಲವೇ? ಎಂದು ಪ್ರಶ್ನೆ ನಮ್ಮೊಳಗೆ ಮೂಡುತ್ತದೆ‌. ಇದಕ್ಕೊಂದು ಉತ್ತರವಿದೆ. ಕಥೆಯ ರೂಪದಲ್ಲಿ.

ಒಂದು ಗುರುಕುಲ. ಅಲ್ಲೊಬ್ಬ ಗುರು. ಅವರೊಮ್ಮೆ ಶಿಷ್ಯನಿಗೆ ಕೆಲಸವೊಂದನ್ನು ಕೊಡುತ್ತಾರೆ. ಸರಿಯಾದ ಅಳತೆಯ ಒಂದು ಸಮಿತ್ತನ್ನು ಅವನ ಕೈಗಿತ್ತು ಇದೇ ಅಳತೆಯ ಸಾವಿರ ಸಮಿತ್ತುಗಳನ್ನು ಕತ್ತರಿಸಿ ಇಡು, ಎನ್ನುತ್ತಾರೆ. ಶಿಷ್ಯ ಕೆಲಸ ಆರಂಭಿಸುತ್ತಾನೆ. ಶಿಷ್ಯನ ಕೆಲಸ ಮುಗಿದ ಅನಂತರ ಬಂದ ಗುರುಗಳು ಅದನ್ನು ನೋಡಿದಾಗ ಅಳತೆಯಲ್ಲಿ‌ ವ್ಯತ್ಯಾಸ ಕಂಡು, ಹೇಗೆ ಕತ್ತರಿಸಿದೆ ಎಂದು ಕೇಳುತ್ತಾರೆ. ಒಂದನೆಯದರಂತೆ ಎರಡನೆಯದನ್ನು. ಎರಡನೆಯದರಂತೆ ಮೂರನೆಯದನ್ನು. ಮೂರನೆಯದರಂತೆ ನಾಲ್ಕನೆಯದನ್ನು‌. ಹೀಗೆ ಒಂಬೈನೂರ ತೊಂಬತ್ತೊಂಬತ್ತನೆಯದರಂತೆ ಕೊನೆಯ ಸಮಿತ್ತನ್ನು ಕತ್ತರಿಸಿದೆ, ಎಂದು ಶಿಷ್ಯ ಉತ್ತಾರಿಸುತ್ತಾನೆ.
ಗುರುಗಳು ಮೊದಲನೆಯದನ್ನು ಹಾಗೂ ಕೊನೆಯದನ್ನು ಒಂದರ ಪಕ್ಕ ಇನ್ನೊಂದನ್ನು ಇಟ್ಟು ತೋರಿಸುವಾಗ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಒಂದೊಂದೇ ಕತ್ತರಿಸುತ್ತಾ ಬಂದಂತೆ ಸ್ವಲ್ಪ ಸ್ವಲ್ಪವೇ ಅಳತೆ ಕಡಿಮೆಯಾಗುತ್ತಾ ಬಂದಿತ್ತು. ಮೊದಲನೆಯದ್ದಕ್ಕಿಂತ ಕೊನೆಯದು ತುಂಬ ಚಿಕ್ಕದಾಗಿಬಿಟ್ಟಿತ್ತು.
ಇದಕ್ಕೆ ಗುರುಗಳು ಕೊಟ್ಟ ಪರಿಹಾರ ತುಂಬ ಸರಳವಾದದ್ದು‌.
ಮೊದಲನೆಯದರ ಅಳತೆಯನ್ನೇ ಅನುಸರಿಸಿದರೆ ತಪ್ಪಲಾರೆವು‌. ಮಧ್ಯದ ಯಾವುದೋ ಒಂದನ್ನು ತೆಗೆದುಕೊಂಡರೆ ತಪ್ಪುವುದು ಖಂಡಿತಾ.

ಹೀಗಿರುವಾಗ ನಾವುಗಳು ಬೇರೆಯದೇ ಮಾನದಂಡದಲ್ಲಿ ಅಳತೆ ಮಾಡಲು ಹೊರಟಿದ್ದೇವಲ್ಲ!!!

Author Details


Srimukha

Leave a Reply

Your email address will not be published. Required fields are marked *