ಮಗುವೊಂದು ಜೋರಾಗಿ ಅಳುತ್ತಿದೆ. ಅದು ಹಸಿವಾಗಿ ಅಳುತ್ತಿದೆಯೋ, ಹೊಟ್ಟೆ ನೋವಿನಿಂದ ಅಳುತ್ತಿದೆಯೋ ಅಥವಾ ನಿದ್ರೆ ಬಂತೆಂದು ಅಳುತ್ತಿದೆಯೋ ಎಂದು ಕೂಡಲೇ ಅದರಮ್ಮನಿಗೆ ತಿಳಿಯುತ್ತದೆ.
ಇನ್ನೂ ಜಗತ್ತನ್ನು ಸರಿಯಾಗಿ ನೋಡದ ಮಗು, ಟಿ. ವಿ. ಯಲ್ಲಿ ಬರುವ ಸಿನೆಮಾವನ್ನು ನೋಡುವಾಗ ಇವನು ಕೆಟ್ಟವನು, ಇವನು ಒಳ್ಳೆಯವನು ಎಂದು ಸರಿಯಾಗಿ ಗುರುತಿಸುತ್ತದೆ.
ಬೆಳಿಗ್ಗೆ ಹೇಳುವ ಒಂದು “ಗುಡ್ ಮಾರ್ನಿಂಗ್” ಬಾಸ್ ನ ಮೂಡ್ ಆಫೀಸಿಗೆ ಬಂದ ಕೂಡಲೇ ಅದನ್ನು ತಿಳಿಸಿಬಿಡುತ್ತದೆ.
ಗಂಡ ಸಂಜೆ ಆಫೀಸಿನಿಂದ ಬಂದ ಕೂಡಲೇ, ಬಿಸಿ ಬಿಸಿ ಕಾಫಿ ಕಾದಿದ್ದರೆ ಸರಿ. ಇಲ್ಲದಿದ್ದರೆ ವಾತಾವರಣ ಬಿಸಿಯಾಗಿದೆ ಎಂದು ಗಂಡನಿಗೆ ತಿಳಿಯುತ್ತದೆ.
ಇದೆಲ್ಲಾ ಯಾಕೆ ಹೇಳಿದೆನೆಂದರೆ ನಮ್ಮ ನಿತ್ಯಜೀವನದಲ್ಲಿ ಮಾತು ತುಂಬಾ ಮುಖ್ಯವಾಗುತ್ತದೆ. ನನ್ನ ಅಮ್ಮ ಯಾವಾಗಲೂ ಹೇಳುತ್ತಿರುತ್ತಾರೆ “ಬಾಯಿದ್ದರೆ ತಾಯಿ ಇದ್ದಂತೆ” ಅಂತ. ಮನುಷ್ಯ ಪ್ರಾಣಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳಿಗೂ ಅವುಗಳದೇ ಆದ ಭಾಷೆಯಿದೆ. ಸಮಾಜದಲ್ಲಿ ಅನೇಕ ಭಾಷೆಗಳಿವೆ. ದಿನನಿತ್ಯದ ವ್ಯವಹಾರಗಳು ಮಾತಿಲ್ಲದೇ ಬಹಳ ಕಷ್ಟ.
ಬಳಸುವ ಭಾಷೆ ಯಾವುದೇ ಇರಬಹುದು. ಆದರೆ ನಿಜವಾದ ಭಾವ ವ್ಯಕ್ತವಾಗುವುದು ಮಾತಿನ ಹಿಂದೆ ಅಡಗಿದ ಧ್ವನಿಯಲ್ಲಿ. ಅದನ್ನೇ ಮಾತಿನ ಧಾಟಿ ಎನ್ನುವುದು.
“ಅಮ್ಮಾ, ನಂಗೆ ಇನ್ನೊಂದು ಚಾಕೋಲೇಟ್ ಕೊಡ್ತೀಯಾ?” ಅಂತ ಪ್ರಶ್ನೆ. “ಕೊಡ್ತೀನಪ್ಪಾ, ತಿನ್ನು. ಎಷ್ಟು ಬೇಕು? ಹಲ್ಲು ಪೂರ್ತಿ ಹಾಳಾಗೋ ಅಷ್ಟು ತಿನ್ನು” ಎಂದು ನನ್ನ ಉತ್ತರ. ಗೋಳೋ ಅಂತ ಅತ್ತ ಮಗ. ನಾನು ಕೊಡ್ತೀನಿ ಅಂದೆ ತಾನೇ? ಅಳು ಯಾಕೆ? “ನೀನು ಸರಿಯಾಗಿ ಹೇಳಿಲ್ಲ. ಕೋಪದಲ್ಲಿ ಹೇಳಿದೆ. ಪ್ರೀತೀಲಿ ಹೇಳು” ಅಂತ ಮಗನದ್ದು ಹಠ. ಇನ್ನೊಂದು ದಿನ, “ವಿಡಿಯೋ ಹಾಕು. ಇಲ್ಲ ಅಂದ್ರೆ ಟಿ. ವಿ. ಹಾಕು” ಅಂತ ಹಠ ಶುರು ಮಾಡಿದ ಮಗ. ಓಕೆ ಮಗನೇ ಹಾಕ್ತೀನಿ ಆಯ್ತಾ? ನೋಡು. ಕನ್ನಡಕ ಬರೋವರೆಗೂ ನೋಡ್ತಾ ಇರು ಆಯ್ತಾ? ಅಂದೆ. ಪುನಃ ಮಗನದ್ದು ಅದೇ ರಾಗ. ಪ್ರೀತಿಯಲ್ಲಿ ಹೇಳು ನೀನು ಅಂತ.
ಹೀಗೆ ಪ್ರಪಂಚವರಿಯದ ಕಂದಮ್ಮನೂ ಮಾತಿನ ಹಿಂದಿನ ಭಾವವನ್ನು ನಮ್ಮ ಧಾಟಿಯ ಮೂಲಕ ಗ್ರಹಿಸುತ್ತದೆ. ಮಾತಿನಷ್ಟೇ ಮುಖ್ಯ ಮಾತಿನೊಂದಿಗೆ ಬರುವ ಧಾಟಿ.
ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತವೆಂಬ ನವರಸಗಳನ್ನು ತೋರಿಸಲು ನಾಟ್ಯಶಾಸ್ತ್ರದಲ್ಲಿ ಬೇರೆ ಬೇರೆ ರೀತಿಯ ಭಂಗಿ, ಬೇರೆ ಬೇರೆ ರೀತಿಯ ನೋಟ ಇರುವಂತೆ ಆ ಭಾವಗಳನ್ನು ಮಾತಿನಲ್ಲಿ ತೋರಿಸುವಾಗ ಮಾತಿನ ಧಾಟಿ ಒಂದೇ ರೀತಿ ಇರಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ಮಾತನಾಡುವಾಗ ಒಂದು ಧಾಟಿ. ವಯಸ್ಕರೊಂದಿಗೆ ಮಾತನಾಡುವಾಗ ಒಂದು ಧಾಟಿ. ಸ್ನೇಹಿತರೊಂದಿಗೆ ಮಾತನಾಡಲು ಒಂದು ಧಾಟಿ. ಅಪ್ಪ ಅಮ್ಮನೊಂದಿಗೆ ಮಾತನಾಡಲು ಒಂದು ಧಾಟಿ. ಅತ್ತೆ ಮಾವನೊಂದಿಗೆ ಮಾತನಾಡುವಾಗ ಒಂದು ಧಾಟಿ. ಅದೇ ಪರಿಚಯವೇ ಇಲ್ಲದವರೊಂದಿಗೆ ಬೇರೆಯದೇ ಧಾಟಿ. ಇಷ್ಟವಿಲ್ಲದೇ ಇದ್ದರೂ ಅನಿವಾರ್ಯವಾಗಿ ಮಾತನಾಡುವಾಗ ಒಂದು ತರಹದ ಧಾಟಿ. ಅಪ್ಪಣೆ ಮಾಡಲು ದರ್ಪದ ಧಾಟಿ. ಬೇಡಲು ಆರ್ದ್ರ ಧಾಟಿ. ಇನ್ನೊಬ್ಬರನ್ನು ಹಂಗಿಸಲು ವ್ಯಂಗದ ಧಾಟಿ. ಹೀಗೆ ಮಾತಿನ ಧಾಟಿಯನ್ನು ಬರೆಯಲು ಸಾಧ್ಯವಿಲ್ಲ. ಒಂದು ಮಾತಿಗೆ ನೂರು ಅರ್ಥವಾದರೆ ಆಡದೇ ತೋರಿಸುವ ನೋಟಕ್ಕೆ ಸಾವಿರ ಅರ್ಥ. ಇನ್ನೊಬ್ಬರ ಭಾವವನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಮಾತಲ್ಲ.
ಮತ್ತೆ ಒಬ್ಬೊಬ್ಬರು ಸಾಮಾನ್ಯವಾಗಿ ಮಾತನಾಡುವ ರೀತಿ ಕೂಡ ಬೇರೆ ಬೇರೆ. ಆದರೂ ನಮ್ಮ ಮಾತಿನಿಂದ ನಮ್ಮ ಗುಣವನ್ನು ಅಳೆಯುವುದು ಕೂಡ ಸತ್ಯವೇ. “ಅವರು ತುಂಬಾ ಒಳ್ಳೆಯವರು. ಆದರೆ ಬಾಯಿ ಮಾತ್ರ ಜೋರು. ಮಾತು ಸ್ವಲ್ಪ ಗಟ್ಟಿ” ಎಂಬ ಮಾತನ್ನು ಅನೇಕ ಬಾರಿ ಯಾವುದಾದರೂ ವ್ಯಕ್ತಿಯ ಬಗ್ಗೆ ಹೇಳುವುದನ್ನು ಕೇಳಿರುತ್ತೇವೆ. ಅದರ ಅರ್ಥವೇನೆಂದರೆ ಅವರ ಮಾತಿನ ಧಾಟಿ ಕೊಂಚ ಜೋರಿನದ್ದು ಅಂತ. ನಾಲಿಗೆಯಿಂದ ಒಂದು ಬಾರಿ ಉದುರಿದ ಮಾತನ್ನು ಪುನಃ ನುಂಗಲು ಸಾಧ್ಯವೇ? ಆಡುವ ಮೊದಲು ಯೋಚಿಸದೇ ಹೋದರೆ ಅನಂತರದ ಪರಿಣಾಮವನ್ನು ಕೂಡ ಬದಲಿಸಲಾಗುವುದಿಲ್ಲ. ಒಮ್ಮೊಮ್ಮೆ ನಾವಾಡುವ ಒಂದೇ ಒಂದು ಮಾತಿನಿಂದ ಅಪರಿಚಿತರು ಆತ್ಮೀಯ ಸ್ನೇಹಿತರಾಗಬಹುದು. ಆತ್ಮೀಯರು ಮುಖವನ್ನೇ ನೋಡದಂತಹ ಶತ್ರುಗಳಾಗಬಹುದು. ಹಾಗಾಗಿ ಮಾತಿನ ಬಗ್ಗೆ ಗಮನವಿರಬೇಕು. ಮೊದಲು ಯೋಚಿಸಿ ಅನಂತರ ಆಡುವುದು ಎಲ್ಲ ರೀತಿಯಲ್ಲಿಯೂ ಕ್ಷೇಮ. ಅದನ್ನೇ ಮನಸ್ಸಲ್ಲಿಟ್ಟುಕೊಂಡು ‘ಮಾತು ಬಲ್ಲವನಿಗೆ ಜಗಳವಿಲ್ಲ’ ಎಂದಿರುವುದಿರಬೇಕು.
ಈ ಮೊಬೈಲು ಕೈಗೆ ಬಂದ ಅನಂತರ ಮೆಸೇಜ್ ಎಂಬ ಕಾನ್ಸೆಪ್ಟ್ ಬಂತು. ಬರೆಯಲು ಬಂದ ಭಾವಗಳು ಮಾತಿನಲ್ಲಿ ಕಷ್ಟ ಎಂಬಂತಹ ಮನೋಭಾವವಿರುವ ನನ್ನಂಥವರಿಗೆ ತುಂಬಾ ಇಷ್ಟವಾದ ವಿಷಯವದು. ಮೆಸೇಜು ಬರೆಯುವಾಗ ನಮ್ಮಲ್ಲಿರುವ ಭಾವ ಅಥವಾ ಮಾತಿನ ಧಾಟಿ ಓದುಗನಿಗೆ ಗೊತ್ತಾಗುವುದಿಲ್ಲ. ಓದುವವನ ಭಾವ ಆ ಕ್ಷಣದಲ್ಲಿ ಹೇಗಿದೆಯೋ ಹಾಗೆ ಅರ್ಥ ಮಾಡಿಕೊಳ್ಳುತ್ತಾನೆ. ಆದರೆ ಹೀಗೆ ಒಬ್ಬರು ಕಳಿಸಿದ ಮೆಸೇಜ್ ಅನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಸಂಬಂಧಗಳು ಹಾಳಾದ ಉದಾಹರಣೆಗಳೂ ಸಿಗಬಹುದು. ಮತ್ತೂ ಒಂದು ರೀತಿ ನೋಡಿದರೆ ಮಾತನಾಡಿದ್ದನ್ನು ಕೇಳಿಸಿಕೊಳ್ಳುವವನ ಆ ಕ್ಷಣದ ಮನಸ್ಥಿತಿಗೆ ತಕ್ಕಂತೆ ಅರ್ಥವಾಗುತ್ತದೆ.
ಒಟ್ಟಿನಲ್ಲಿ ಮಾತಿನ ಬಗ್ಗೆಯಾಗಲೀ, ಧಾಟಿಯ ಬಗ್ಗೆಯಾಗಲೀ, ಮಾತಿನ ಹಿಂದಿನ ಭಾವದ ಬಗ್ಗೆಯಾಗಲೀ ಬರೆಯುವುದು ಕಷ್ಟ. ಬರೆಯುವುದು ಅನಿವಾರ್ಯವೂ ಅಲ್ಲ. ಆದರೆ ಸಮಾಜದಲ್ಲಿ, ಸಂಬಂಧದಲ್ಲಿ ಮಾತು, ಆಡುವಾಗ ಬಳಸುವ ಧಾಟಿಯನ್ನು, ಬಳಸುವಾಗ ಮುಖದಲ್ಲಿ, ಕಂಗಳಲ್ಲಿ ತೋರುವ ನೋಟವನ್ನು ಕಲಿಯುವ ಅನಿವಾರ್ಯತೆ ಖಂಡಿತ ಇದೆ. ನಿಜವಾದ ಮುತ್ತು ಅಮೂಲ್ಯ, ಅಪರೂಪ ಮತ್ತು ವಿರಳ. ಅದಕ್ಕೆ ಮಾತೆಂದರೆ ಮುತ್ತು ಎಂದಿದ್ದಾರೆ ಬಲ್ಲವರು. ಅವಶ್ಯಕತೆ ಇದ್ದಲ್ಲಿ ಬೇಕಾದಷ್ಟೇ ಮಾತಾಡೋಣ. ನಾವು ಕೂಡ ಮಾತು ಬಲ್ಲವರಾಗೋಣ.
ಕೊನೆ ಹನಿ: ದಿವ್ಯಮೌನ ಸಾಧಿಸುವುದೇ ಜೀವನದ ಗುರಿ. ಅದಕ್ಕಿಂತ ಮೊದಲು ಮಾತು ಕಲಿಯೋಣ. ಮಾತಿಗೊಂದು ತೂಕವಿರಲಿ. ಧಾಟಿಯ ಶ್ರುತಿ ತಪ್ಪದಿದ್ದರೆ ಜೀವನವೀಣೆಯು ಇಂಪಾದ ನಾದ. ಮಾತು ಸರಿಯಿದ್ದರೆ ಸಂಬಂಧಗಳು ಸ್ವಸ್ಥ.
ಮಂಗಲಾ ಯಶಸ್ವಿ ಭಟ್