ಬಾಗಿ ನೆಡೆಯೋಣ

ಅಂಕಣ ಇಳೆಯ ಹೊಳೆ : ಕವಿತಾ ಧನಂಜಯ ಜೋಯ್ಸ್

ಪ್ರತಿ ದಿನವೂ ನಮ್ಮ ಪಾಲಿಗೆ ಹೊಸತೇ. ಏಳುವಾಗಲೇ ಕೆಲ ನೀರಿಕ್ಷೆಯೊಂದಿಗೆ, ಕೆಲವು ಕನಸುಗಳೊಂದಿಗೆ ಏಳುತ್ತೇವೆ. ಈ ದಿನ ನನ್ನ ಪಾಲಿಗೆ ಈ ಎಲ್ಲ ಕನಸುಗಳನ್ನು ಈಡೇರಿಸಲಿ ಎಂಬ ಹಂಬಲ ಮನದಲ್ಲಿ. ಈ ಕೆಲಸ ಮಾಡಬೇಕು, ಅಲ್ಲಿಗೆ ಹೋಗಬೇಕು ಹೀಗೆ ಹತ್ತು ಹಲವು ಯೋಚನೆ. ಅದರಂತೆ ಕಾರ್ಯ. ಬೆಳಗಿನಿಂದ ರಾತ್ರಿಯ ವರೆಗೆ ನೆಡೆದ ಘಟನೆಗಳೆಲ್ಲವನ್ನೂ ಅವಲೋಕಿಸಿದರೆ ಅದೇ ನಮಗೆ ದೊಡ್ಡ ಅನುಭವದ ಬುತ್ತಿ. ನಿರೀಕ್ಷೆಯೊಂದಿಗೆ ಉದಯಿಸಿ  ಅನುಭವದೊಂದಿಗೆ ಮುಕ್ತಾಯವಾಗೋದು ನಮ್ಮ ದೈನಂದಿನ ಬದುಕು.

 


   ಅದೊಂದು ಮುಂಜಾವು. ಮಲೆನಾಡ
ಮುಂಜಾವೆಂದರೆ ಅದೊಂದು ಬಗೆಗಿನ ವರ್ಣನಾತೀತ ಆನಂದ. ಚುಮುಚುಮು ಇಬ್ಬನಿಯ ತಂಪು, ಎಳೆಯ ಬಿಸಿಲು, ಹಸು ಕರುಗಳ ಅಂಬಾ ಎನ್ನೋ ಕೂಗು, ಮನೆ ಎದುರು ಹಸಿರ ತೋಟ. ಹಾಗೆ ಹೊಲದ ಕಡೆ ಕಣ್ಣು ಹಾಯಿಸಿದರೆ ಹಸಿರುಟ್ಟು ನಿಂತ ಹೊಲ ಈಗ ಮಾಗಿ ಹೊಂಬಣ್ಣಕ್ಕೆ ತಿರುಗಿ ಪರಿಪೂರ್ಣವಾಗಿ ಬಾಗಿ ನಿಂತಿದೆ ಪೈರು. ಗೊಂಚಲು ಗೊಂಚಲು ತೆನೆ, ಕಣ್ಣ ಅಳತೆಗೆ ನಿಲುಕುವಷ್ಟೂ ದೂರವೂ ಹೊಂಬಣ್ಣವೇ. ನೋಡಲು ಅದೆಷ್ಟು ಸೊಗಸೋ, ಹಾಗೇ ಅದು ನೇಗಿಲ ಯೋಗಿಯ ವರುಷದ ಫಲದ ಹರುಷವು ಹೌದು.

 


  ತೆನೆಬಿಟ್ಟ ಪೈರು ಬಾಗಿದೆ, ಗೊನೆ ಬಿಟ್ಟ ಬಾಳೆ ಬಾಗಿದೆ, ಹಣ್ಣು ಹೂವು ಬಿಟ್ಟ ಗಿಡ ಬಾಗಿದೆ, ಅವೆಲ್ಲದರಿಂದ ಪಡೆದು ಜೀವನ ನೆಡುಸುವ ನಾವು ಮಾತ್ರ ಎಲ್ಲ ನನ್ನಿಂದ  ಎಂಬ ಹಮ್ಮಿನಿಂದ ಬೀಗುತ್ತಿದ್ದೇವೆ. ಬಿಗುವುದು ಸದ್ಗುಣವಲ್ಲ, ಬಾಗಿದರೆ ಬದುಕು ಸುಗಮ, ಅದೇ ಸದ್ಗುಣವೆಂದು ಸಾರಿ ಹೇಳುತ್ತಿದೆ ಪ್ರಕೃತಿ. ಅರಿತು ಕೊಳ್ಳುವ, ಅನುಸರಿಸುವ ಮನ ಸಿದ್ಧವಾಗಬೇಕಷ್ಟೇ.


    
      – ಕವಿತಾ ಧನಂಜಯ ಜೋಯ್ಸ್

Author Details


Srimukha

Leave a Reply

Your email address will not be published. Required fields are marked *