ಏರದಿರಲಿ ಮನಸ್ಸು – ಭ್ರಮೆಯ ಬಲೂನನ್ನು

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

ಪ್ಲಾಸಿಬೊ ಇಫೆಕ್ಟ್ ಬಗ್ಗೆ ಕೇಳಿದ್ದೀರಾ? ಔಷಧಿಯಲ್ಲದ ಔಷಧಿ, ಚಿಕಿತ್ಸೆಯಲ್ಲದ ಚಿಕಿತ್ಸೆ. ಕೊಡುವ ಔಷಧಿಯಲ್ಲಿ ಯಾವುದೇ ಔಷಧೀಯ ಅಂಶವೇ ಇರುವುದಿಲ್ಲ. ಆದರೆ ಅದರಿಂದಾಗಿ ಔಷಧ ತೆಗೆದುಕೊಂಡ ವ್ಯಕ್ತಿಗೆ ಸಮಸ್ಯೆ ಪರಿಹಾರವಾಗಲೂಬಹುದು. ಪ್ಲಾಸಿಬೊ ತೆಗೆದುಕೊಂಡ ವ್ಯಕ್ತಿಯು ತಾನು ಔಷಧಿಯನ್ನೇ ತೆಗೆದುಕೊಂಡಿದ್ದೇನೆ ಎಂದುಕೊಂಡಿರುವಾಗ ಅವನಿಗೆ ತನ್ನ ಸಮಸ್ಯೆ ಕಡಿಮೆಯಾಗಿದೆ ಅನಿಸಬಹುದು. ಕಡಿಮೆಯೂ ಆಗಬಹುದು!

 

ಹೈಪೊಕಾಂಡ್ರಿಯಾ ಎಂಬೊಂದು ಸಮಸ್ಯೆ ಇದೆ. ಅದರಲ್ಲಿ ವ್ಯಕ್ತಿ ತನಗೆ ಯಾವುದೋ ಅನಾರೋಗ್ಯವಿದೆ ಎಂದುಕೊಂಡಿರುತ್ತಾನೆ. ತನಗೆ ಮಧುಮೇಹ, ಕ್ಯಾನ್ಸರ್, ಹೃದ್ರೋಗ ಹೀಗೆ ಏನೇನೋ ಇದೆಯೆಂದು ಭಾವಿಸಿಕೊಳ್ಳುತ್ತಾನೆ ಅವನು. ತಾನಂದುಕೊಂಡ ರೋಗದ ಲಕ್ಷಣಗಳೂ ಅವನಿಗೆ ಕಾಣಿಸಿಕೊಳ್ಳುತ್ತವೆ. ಆದರೆ ಅದ್ಯಾವುದೂ ಇರುವುದಿಲ್ಲ.

 

ಈ ಎರಡು ಸಂದರ್ಭಗಳಲ್ಲಿ ಒಳಿತು ಮಾಡುವುದು ಔಷಧಿಯೂ ಅಲ್ಲ, ಕೆಡುಕು ಮಾಡುವುದು ರೋಗವೂ ಅಲ್ಲ. ಎಲ್ಲದಕ್ಕೂ ಕಾರಣ ಮನಸ್ಸು. ಮನಸ್ಸು ನಮ್ಮನ್ನು ಒಂದು ಭ್ರಮೆಯೊಳಗೆ ತಳ್ಳಿಬಿಡುತ್ತದೆ. ನಾವು ದೃಢವಾಗಿ ಅದನ್ನು ನಂಬುತ್ತೇವೆ. ಮೋಸ ಹೋಗುತ್ತೇವೆ.

 

ಹಾಗಾದರೆ ನಮ್ಮ ಮನಸ್ಸೇ ನಮ್ಮನ್ನು ಮೋಸಗೊಳಿಸುತ್ತದೆಯೇ? ಹೌದು! ಯಾಕೆಂದರೆ ಮನಸ್ಸೂ ಮೋಸಹೋಗಿರುತ್ತದೆಯಲ್ಲ! ಮನಸ್ಸು ಮೋಸಹೋಗುವುದು ಯಾವಾಗ? ಅದು ಸರಿ-ತಪ್ಪುಗಳನ್ನು ನಿರ್ಧರಿಸಲು ಅಶಕ್ತವಾದಾಗ, ಅಸಮರ್ಥವಾದಾಗ. ಹಾಗಾದಾಗ ನಾವು ಸುಳ್ಳನ್ನು ನಂಬಿಬಿಡುತ್ತೇವೆ. ಸೋತುಬಿಡುತ್ತೇವೆ ಹಾಗಾಗಿ. ಮುಖ್ಯವಾಗಿ ಸಂಬಂಧಗಳಲ್ಲಿ. ಕೆಲವೊಮ್ಮೆ ವ್ಯವಹಾರದಲ್ಲಿ. ಅಥವಾ ಪ್ರತಿಯೊಂದರಲ್ಲೂ.

 

ನಮ್ಮ ಬಗ್ಗೆಯೇ ನಮಗೆ ಇಂತಹದ್ದೊಂದು ಭ್ರಮೆ ಇರಬಹುದು! ನಾನು ಶ್ರೇಷ್ಠ ಎಂಬ ಭ್ರಮೆ. ನಾನು ಹೆಚ್ಚು ಅರಿತಿದ್ದೇನೆ ಎಂದು. ನಾನು ತುಂಬ ಓದಿದ್ದೇನೆ ಎಂದು. ಆದರೆ ಅದೆಲ್ಲವೂ ಭ್ರಮೆಯೇ ಅಲ್ಲವೇ? ನಾವು ಸಾವಿರ ಪುಸ್ತಕ ಓದಿಕೊಂಡಿರಬಹುದು. ಸಾವಿರದೊಂದು ಓದಿದವನೂ ಇಲ್ಲಿ ಇದ್ದಾನೆ. ಅಷ್ಟಕ್ಕೂ, ಓದಿದ ಮಾತ್ರಕ್ಕೆ ಜ್ಞಾನ ಬೆಳೆಯುತ್ತದೆಯೇ? ಪಾಯಸದ ಪಾತ್ರೆಯೊಳಗಿನ ಸೌಟಿನಂತಿದ್ದರೇನು ಪ್ರಯೋಜನ!

ಅಥವಾ ನಾನು ಅಪ್ರಯೋಜಕ ಎಂಬ ಭ್ರಮೆಯೂ ಇರಬಹುದು ನಮಗೆ! ನಾನು ಏನೂ ಸಾಧಿಸಲಾರೆ ಬದುಕಿನಲ್ಲಿ ಎಂಬುದೂ ಒಂದು ಭ್ರಮೆಯೇ. ಮೀನು ಈಜುವುದರಲ್ಲಿ ಸಾಧಿಸಬೇಕು. ಜಿಂಕೆ ಓಡುವುದರಲ್ಲಿ. ಮೀನನ್ನು ನೋಡಿ ಜಿಂಕೆ ದುಃಖಪಟ್ಟರೆ ಅದು ಮೂರ್ಖತನವೇ.

ಇವೆರಡೂ ಅಪಾಯಕಾರಿಯೇ. ತನಗೂ ಪರರಿಗೂ.

 

ಆರೋಗ್ಯದ ಭ್ರಮೆಯೂ ಇದೆ ನಮ್ಮಲ್ಲಿ ಹಲವರಿಗೆ. ಅನ್ನ ಒಳ್ಳೆಯದಲ್ಲ. ನವಣೆ, ಓಟ್ಸನ್ನೇ ತಿನ್ನಬೇಕು. ಮೂರು ಹೊತ್ತೂ ಗ್ರೀನ್ ಟೀ ಕುಡಿಯಬೇಕು. ತುಪ್ಪ ತಿನ್ನಲೇಬಾರದು. ಆಲೀವ್ ಆಯಿಲಿನಷ್ಟೂ ಶ್ರೇಷ್ಠ ಮತ್ತೊಂದಿಲ್ಲ!  ಇಂತಹ ದೊಡ್ಡ ಭ್ರಮೆಯ ಬಲೂನಿನಲ್ಲಿ ನಮ್ಮನ್ನು ಕೂರಿಸಿ ಮೇಲೆ ಹಾರಿಸಿದ್ದು ಪಶ್ಚಿಮದವರು. ಇಳಿಯುತ್ತೇವೆಯೋ, ಬೀಳೂತ್ತೇವೆಯೋ ಕಾದು ನೋಡಬೇಕಿದೆ.

 

ಈಗೀಗ ಹೆಚ್ಚು ಕಂಡುಬರುತ್ತಿರುವ ಭ್ರಮೆಗಳಲ್ಲೊಂದು ಮಕ್ಕಳನ್ನು ‘ಸರಿಯಾಗಿ’ ಬೆಳೆಸುವ ಹುಚ್ಚು. ಮಕ್ಕಳನ್ನು ಬೆಳೆಸುವುದು ಎಂದರೇನು? ಅವರು ಬೆಳೆಯುವುದು. ಅಷ್ಟೇ. ಸಸಿಯೊಂದಕ್ಕೆ ಸರಿಯಾಗಿ ನೀರು – ಗೊಬ್ಬರ ಕೊಟ್ಟು, ಕ್ರಿಮಿಕೀಟಗಳ ಬಾಧೆ ಇರದಂತೆ ನೋಡಿಕೊಂಡರೆ ಸಾಕು. ಸರಿಯಾಗಿ ಎಂದರೆ ಏನು? ಅದಕ್ಕೊಂದು ಮಾನದಂಡ ಬೇಕಲ್ಲ? ನಡೆಯುವುದು ಹೇಗೆ ಎಂದು ಕಲಿಯುವ ವಯಸ್ಸಿನಲ್ಲಿ ಅವಕ್ಕೆ ಹಿಪ್-ಹಾಪ್ ಬೇಕೇ? ಬೆಳಗ್ಗೆ ರಾತ್ರಿ ಲೆಕ್ಕ ತಿಳಿಯದ ಅವಕ್ಕೆ ಅಂತರಿಕ್ಷದ ಪಾಠ ಬೇಕೇ? ಕಾಮನಬಿಲ್ಲಿನ ಬಣ್ಣ ನೋಡಿ ಖುಷಿಪಡುವ ಅಚ್ಚರಿ ಬೇಕು ಅವಕ್ಕೆ. ಬೆಳಕಿನ ವಕ್ರೀಭವನ ಅಲ್ಲ. ಈ ಕಾಲಘಟ್ಟದಲ್ಲಿ ಒಂದಷ್ಟು ಮಾಹಿತಿಗಳು ಬೇಗ ಸಿಗುತ್ತವೆ ಮಕ್ಕಳಿಗೆ. ಅದು ತಪ್ಪಲ್ಲ. ಆದರೆ ಮಕ್ಕಳನ್ನು ದೊಡ್ಡವರನ್ನಾಗಿಸುವ ಪ್ರಕ್ರಿಯೆ ಇದೆಯಲ್ಲ. ಅದು ಸರಿಯಲ್ಲ. ಮಕ್ಕಳು ಮಕ್ಕಳಾಗಿಯೇ ಇರಬೇಕು. ಮುಗ್ಧತೆ ಇರಬೇಕು, ಕುತೂಹಲ ಇರಬೇಕು. ತುಂಟತನ ಇರಲೇಬೇಕು. ಅವರು ಮೊಗ್ಗು ಬಿರಿದು ಅರಳಿದಂತೆ ಅರಳಬೇಕು.

 

ಕೆಲವು ಭ್ರಮೆಗಳು ಒಳಿತನ್ನೂ ಮಾಡಿಯಾವು. ಅವು ಪ್ಲಾಸಿಬೊದಂತೆ. ಇನ್ನು ಕೆಲವು ಹೈಪೊಕಾಂಡ್ರಿಯಾದಂತೆ. ಅದು ಯಾವುದು ಎಂದು ನಾವು ತಿಳಿದುಕೊಳ್ಳಬೇಕು ಅಷ್ಟೇ. ಅವುಗಳಿಂದ ಕಳಚಿಕೊಳ್ಳಬೇಕು.

 

ನಾವು ಈಗಂದುಕೊಂಡಿರುವ ಭ್ರಮೆಗಳೆಲ್ಲದಕ್ಕಿಂತಲೂ ನಾವು ವಾಸ್ತವ ಅಂದುಕೊಂಡಿರುವ ಭ್ರಮೆಯೇ ದೊಡ್ಡ ಭ್ರಮೆ ಎನ್ನುತ್ತಾರೆ ಶ್ರೀಶಂಕರರು. ನಾನು, ನೀನು, ಕಂಡದ್ದು, ಕೇಳಿದ್ದು… ಎಲ್ಲವೂ ಭ್ರಮೆಯಂತೆ! ಸತ್ಯ ಒಂದೇ. ಅದನ್ನು ಕಾಣು ಎನ್ನುತ್ತಾರೆ ಅವರು. ಅವರು ತೋರಿಸಿದ ಬೆಳಕಿನ ಕಡೆಗೆ ನಡೆಯುವಾಗ ನಡುವಿನ ಸಣ್ಣಪುಟ್ಟ ಭ್ರಮೆಗಳ ಬಲೂನು ಏರಿ ದಾರಿಯಿಂದ ದೂರ ಹಾರದಷ್ಟು ಸದೃಢವಿರಲಿ ನಮ್ಮ ಮನಸ್ಸು.

 

Author Details


Srimukha

Leave a Reply

Your email address will not be published. Required fields are marked *