ಗೆಜ್ಜೆಯ ಪೂಜೆ

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ನಾದವು ಬ್ರಹ್ಮ. ಆಹತನಾದವು ಸಗುಣಬ್ರಹ್ಮವಾದರೆ ಅನಾಹತನಾದವು ನಿರ್ಗುಣಬ್ರಹ್ಮ. ಆಹತನಾದವು ಶ್ರುತಿ, ಸ್ವರ ಇತ್ಯಾದಿಗಳಲ್ಲಿ ಲೋಕರಂಜಕವೂ ಭವಭಂಜಕವೂ ಆಗಿದೆ. ಅನಾಹತನಾದವು ಯೋಗಿಜನರು ಗುರೂಪದಿಷ್ಟಮಾರ್ಗದಿಂದಲೇ ಉಪಾಸನೆಯನ್ನು ಮಾಡಿ ಮೋಕ್ಷವನ್ನು ಸಂಪಾದಿಸಬೇಕಾದ ವಿದ್ಯೆ.  ಮೋಕ್ಷಾಪೇಕ್ಷ ಯೋಗಿಗಳು ತಮ್ಮ ಪ್ರಾಣಾಯಾಮ ಹಾಗೂ ಪ್ರತ್ಯಾಹಾರ ಸಾಧನೆಯ ಸಮಯದಲ್ಲಿ ಸ್ಥೂಲೇಂದ್ರಿಯಗಳಿಗೆ ಗೋಚರವಾಗದ ನಾದಯೋಗವನ್ನು ಸಿದ್ಧಿಸಿಕೊಳ್ಳುತ್ತಾರೆ. ಚಿತ್ತವನ್ನು ಸ್ಥಿರಗೊಳಿಸಿ ದೇಹದಲ್ಲಿ ವಿವಿಧ ನಾದಗಳನ್ನು ಆಲಿಸಿ ಅನಾಹತನಾದಯೋಗವನ್ನು ಸಾಧಿಸುತ್ತಾರೆ. ಪ್ರಥಮಾಭ್ಯಾಸಕಾಲದಲ್ಲಿ ಅನೇಕ ನಾದಗಳು ಮಹತ್ತಾಗಿ, ಸ್ಥೂಲವಾಗಿ ಯೋಗಿಗಳಿಗೆ ಗೋಚರಿಸುತ್ತವೆ. ಅವು ಅಭ್ಯಾಸವು ವೃದ್ಧಿಯಾದಂತೆಲ್ಲ ಸೂಕ್ಷ್ಮವಾಗುತ್ತ ಬಂದು ಕಡೆಯಲ್ಲಿ ಅತ್ಯಂತ ಸೂಕ್ಷ್ಮವಾಗಿಬಿಡುತ್ತವೆ. ಅನಾಹತನಾದದ ಅಭ್ಯಾಸದ ಮೊದಲಲ್ಲಿ ಸಮುದ್ರ, ಮೇಘ, ಭೇರಿ, ಝರ್ಝರ ಇವುಗಳ ಮಹತ್ತಾದ ನಾದವೂ, ಅಭ್ಯಾಸದ ಮಧ್ಯದಲ್ಲಿ ಇನ್ನೂ ಅಸ್ಪಷ್ಟ ಗೋಚರವುಳ್ಳ ಮದ್ದಲೆ, ಶಂಖ, ಘಂಟೆ, ಕಹಳೆ ಇವುಗಳ ನಾದಗಳೂ, ಸಿದ್ಧಿಯಾಗುವ ಕಾಲವು ಸಮೀಪಿಸಿದಂತೆಲ್ಲ ಗೆಜ್ಜೆ, ಕೊಳಲು, ವೀಣೆ, ದುಂಬಿಯ ಝೇಂಕಾರ — ಹೀಗೆ ಬಹು ಸೂಕ್ಷ್ಮ ಗೋಚರವುಳ್ಳ ನಾದಗಳು ಯೋಗಿಗೆ ನಾಭಿಸ್ಥಾನದಲ್ಲಿ ಕೇಳಿಸುತ್ತವೆ. ಬಾಹ್ಯಪ್ರಪಂಚವನ್ನೆಲ್ಲ ಮರೆತು ಈ ನಾದಸುಧಾಂಬುಧಿಯಲ್ಲೇ ಮುಳುಗಿದರೆ ಉನ್ಮನೀ ಅವಸ್ಥೆಯು ದೊರೆಯುತ್ತದೆಂದು ಹಠಯೋಗಪ್ರದೀಪಿಕೆಯಲ್ಲಿ ಹೇಳಿದೆ. ಎಂದೇ, ಅನಾಹತನಾದಯೋಗವು ಯೋಗಿಗಳಿಗೆ ಮೋಕ್ಷಕಾಲದಲ್ಲಿ ಸಿದ್ಧಿಸುವ ಸಮಯದಲ್ಲಿ ಗೋಚರವಾಗುವಂತಹ ಈ ಎಲ್ಲ ವಾದ್ಯಗಳೂ ಭಾರತೀಯ ಸಂಗೀತ – ನಾಟ್ಯ ಪರಂಪರೆಯಲ್ಲಿ ಸಂಪ್ರದಾಯ (=ಹಿಮ್ಮೇಳ) ದಲ್ಲಿ ಪ್ರಯೋಗಿಸಲ್ಪಟ್ಟಿವೆ.

 

ನಿರ್ಗುಣಬ್ರಹ್ಮ ಸಾಧನೆಯು ಕಷ್ಟತಮವೂ ಲೋಕರಂಜಕವೂ ಅಲ್ಲದ್ದರಿಂದ, ಸಾಮಾನ್ಯರಿಗೂ ಸುಲಭಸಾಧ್ಯವಾದ ಸಗುಣಬ್ರಹ್ಮದ ಸುಲಭ ಸಾಧನೆಗಾಗಿ, ಅನಾಹತನಾದಯೋಗದಲ್ಲಿ ಕೇಳಿಸಬಹುದಾದಂತಹ,  ಮೇಲೆ ಹೇಳಿದ ಎಲ್ಲ ವಾದ್ಯಗಳ ಬಾಜನೆಯ ಸಮೇತ ಸಂಗೀತ – ನೃತ್ಯಾದಿ ಸೇವೆಗಳು ದೇವಾಲಯಗಳಂತಹ ಮಠಮಾನ್ಯಗಳಂತಹ ದೇವತಾರಾಧನಾ ಸ್ಥಳಗಳಲ್ಲಿ ಪೂಜಾದಿ ಕಾಲಗಳಲ್ಲಿ, ಯಜ್ಞಯಾಗಾದಿಗಳ ಸಮಯದಲ್ಲಿ, ಗೃಹಗಳಲ್ಲಿಯೂ ಪೂಜಾದಿಗಳ ಸಮಯದಲ್ಲಿ  ನಡೆಯಬೇಕೆಂಬ ವಿಧಿಗಳನ್ನು ಭಾರತದ ಪ್ರಾಚೀನ ಋಷಿಗಳೂ, ಋಷಿಸದೃಶ ರಾಜರುಗಳೂ ಆಗಮೋಕ್ತವಾಗಿ ವಿಧಿಸಿ ನಿಯಮಿಸಿದರೆಂದು ತೋರುತ್ತದೆ. ತನ್ಮೂಲಕ ಧರ್ಮಾರ್ಥಕಾಮಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಸಾಧಿಸಬಹುದಾದ, ದೃಷ್ಟಿ – ಶ್ರವಣಗಮ್ಯ, ಲೋಕರಂಜಕ – ಭವಭಂಜಕ  ವಿದ್ಯೆಯಾದ ನೃತ್ಯ – ಸಂಗೀತಗಳು, ಜನಸಾಮಾನ್ಯರ ಮನವನ್ನು ಏಕಾಗ್ರಗೊಳಿಸಿ, ಭಗವದ್ಭಕ್ತಿಯನ್ನೂ, ತನ್ಮೂಲಕ ಮೋಕ್ಷವನ್ನು ಗಳಿಸುವ ಹಾದಿಯನ್ನು ತೋರಿಸಲೂ ಸಾಧನವಾದವು. ಭಾರತದಲ್ಲಿ ಗೀತವಾದ್ಯನರ್ತನಗಳೆಂಬ ಈ ವಿದ್ಯೆಯು ಸಂಸ್ಕಾರಯುತವಾದ ಕಲೆಯೆಂದೂ, ಇದು ದೇವೋಪಾಸನೆಗೆ, ಆತ್ಮೋನ್ನತಿಗೆ ಕಾರಣವಾಗಿದ್ದು, ಲೋಕರಂಜಕವೂ ಭವಭಂಜಕವೂ ಮೋಕ್ಷದಾಯಕವೂ ಎಂದು ಬೋಧಿಸಿ, ವಿಶ್ವದಲ್ಲಿ ಇನ್ನೆಲ್ಲಿಯೂ ಹೇಳದ, ಭಾವಿಸದ, ಆಚರಿಸದ, ಸಾಧನೆಯನ್ನು ಸಾಧಿಸಿ ತೋರಿಸಿಕೊಟ್ಟು ಭಾರತವು ವಿಶ್ವಗುರುವಾಗಿದೆ. ಇದನ್ನು ಮುಂದಿನ ಜನಾಂಗವು ಉಳಿಸಿಕೊಳ್ಳುವ ಜವಾಬ್ದಾರಿಯಿದೆ.

 

ಭಾರತದ ಪ್ರತಿಯೊಂದು ನಾಟ್ಯ ಪದ್ಧತಿಗಳಲ್ಲಿ, ಅವು ಶಾಸ್ತ್ರೀಯವಾಗಲೀ ಜನಪದವಾಗಲಿ, ಮೋಕ್ಷಪ್ರದವೆಂದು ನಂಬಿದ ಗೆಜ್ಜೆಯ ಉಪಯೋಗ ಹಾಗೂ ಪೂಜೆಯು ಅಪಾರವಾದ ಮಹತ್ವವನ್ನು ಗಳಿಸಿದೆ. ಗೆಜ್ಜೆಯ ಶಬ್ದವು ಮಂಗಳಕರವೆಂದೂ, ಅದಕ್ಕೆ ದುಷ್ಟಶಕ್ತಿಯನ್ನು ಓಡಿಸಲು ಸಾಮರ್ಥ್ಯವಿದೆಯೆಂದೂ ನಂಬುಗೆಗಳಿವೆ. ಹಾಗೆಂದೇ ನೃತ್ಯವನ್ನು ಆರಂಭಿಸುವ ಮೊದಲು ಮಾಡುವ ಗೆಜ್ಜೆಯ ಪೂಜೆಗೂ ಕೆಲವು ವಿಧಿಗಳು ಸಂಪ್ರದಾಯಾನುಸಾರವಾಗಿ ವಿಧಿಸಲ್ಪಟ್ಟಿವೆ.  ಕೇರಳದ ದೇವಾಲಯದ ನೃತ್ಯಪದ್ಧತಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಚಂಡೆ, ತಾಳ ಇತ್ಯಾದಿ ವಾದ್ಯಗಳ ವಾದನಕ್ಕೆ ಮಾಡುವ ನರ್ತನದಲ್ಲಿ ಹಾಗೂ ಮಣಿಪುರಿ ನೃತ್ಯಪದ್ಧತಿಯಂತಹ ಕೆಲವೇ ಕೆಲವು ನೃತ್ತ – ನೃತ್ಯ ಪದ್ಧತಿಗಳಲ್ಲಿ ಮಾತ್ರ ನೂಪುರವನ್ನು ಬಳಸುವುದಿಲ್ಲವೋ ಹೊರತು ವಿಶ್ವದಲ್ಲಿಯೇ ಗೆಜ್ಜೆಯನ್ನು ಧರಿಸಿ ನರ್ತಿಸುವ ನೃತ್ತ – ನೃತ್ಯ – ನಾಟ್ಯಪದ್ಧತಿ ಇರುವುದು, ಅದು ಜನಪದವಾಗಲೀ ಶಾಸ್ತ್ರೀಯವಾಗಲೀ, ಭಾರತದಲ್ಲಿ ಮಾತ್ರ. ಆಫ್ರಿಕಾದ ಕೆಲವು ಜನಾಂಗಗಳಲ್ಲಿ ಹಾಗೂ ಪ್ರಾಚೀನ ಈಜಿಪ್ಟ್ ಗಳಲ್ಲಿ ಗೆಜ್ಜೆಯನ್ನು ಸ್ತ್ರೀಯರು ಧರಿಸುತ್ತಿದ್ದರೂ  ಅದು ಧಾರ್ಮಿಕ ಪೂಜಾವಿಧಿಗಳಿಗೆ ಅನ್ವಯವಾಗದೆ ಅಲಂಕಾರ ವಸ್ತುವಾಗಿಯೂ, ಇನ್ನಿತರ ಕಾರಣಗಳಿಗಾಗಿಯೂ ಪರಿಗಣಿಸಲ್ಪಟ್ಟಿದ್ದವು. ಆ ದೇಶಗಳನ್ನು ಇಸ್ಲಾಂ ಧರ್ಮವು ಆಕ್ರಮಿಸಿಕೊಂಡ ನಂತರ ನೂಪುರವು ದುಷ್ಟಶಕ್ತಿಯೆಂದೇ ಪರಿಗಣಿಸಲ್ಪಟ್ಟು ನೂಪುರಧಾರಣೆಯು ಬಹಿಷ್ಕರಿಸಲ್ಪಟ್ಟಿತು.

 

ನಾಟ್ಯಶಿಕ್ಷಣದ ಕಾಲದಲ್ಲಿ ಆಚರಿಸಬೇಕಾದ ಧಾರ್ಮಿಕ ವಿಧಿಗಳು —

ಭರತನಾಟ್ಯವೂ ಸೇರಿದಂತೆ ಎಲ್ಲ ಭಾರತೀಯ ನೃತ್ಯಪದ್ಧತಿಗಳೂ ಧಾರ್ಮಿಕ ಆಚರಣೆಗಳು, ಧಾರ್ಮಿಕ ಶ್ರದ್ಧೆಗಳು, ನಂಬುಗೆಗಳು, ಕಲ್ಪನೆಗಳು ಮತ್ತು ಭಾವನೆಗಳ ಜೊತೆಗೆ ಹಾಸುಹೊಕ್ಕಾಗಿ ಹೆಣೆದುಕೊಂಡ ಕಾರಣವನ್ನು ಮೇಲೆ ನೀಡಿದೆ. ಆದುದರಿಂದ ಭಾರತೀಯ ಲಲಿತಕಲೆಗಳಲ್ಲಿ, ಅದರಲ್ಲಿಯೂ ಮುಖ್ಯವಾಗಿ ಸಂಗೀತ – ನಾಟ್ಯಪದ್ಧತಿಗಳಲ್ಲಿ ಅವು ಶಾಸ್ತ್ರೀಯವಾಗಲಿ ಅಥವಾ ಜನಪದವಾಗಲಿ ಶಿಕ್ಷಣ ಮತ್ತು ಪ್ರಯೋಗಗಳಲ್ಲಿ ಪವಿತ್ರಕರ್ಮಗಳನ್ನು ಆಚರಿಸುವ ಪದ್ಧತಿ ಇದ್ದೇ ಇದೆ. ಲಲಿತಕಲೆಗಳ ವಿದ್ಯಾರಂಭದಿನವನ್ನು ಚಂದ್ರನು ಗೊತ್ತುಪಡಿಸಿದ ರಾಶಿಯಲ್ಲಿ ಶಾಸ್ತ್ರೋಕ್ತವಾಗಿ ಸಾಮಾನ್ಯವಾಗಿ ಚತುರ್ಥೀ, ನವಮೀ  ಅಥವಾ ಚತುರ್ಥಿಗಳಲ್ಲದ ದಿನಗಳಲ್ಲಿ ಹಸ್ತ, ಶತಭಿಷಾ, ಪುಷ್ಯ, ಅನೂರಾಧ, ಧನಿಷ್ಠಾ, ರೇವತಿ ಅಥವಾ ಜ್ಯೇಷ್ಠಾ ನಕ್ಷತ್ರದಲ್ಲಿ ಯಾವುದಾದರೊಂದು ದಿನ ಇರುವ ಶುಭತಿಥಿಯಲ್ಲಿ, ಉತ್ತರಾಯಣದಲ್ಲಿ ಬುಧವಾರ, ಗುರುವಾರ ಅಥವಾ ಶುಕ್ರವಾರವು ಇರುವಾಗ ಆಚರಿಸಬೇಕು. ಈ ಜ್ಯೋತಿಷ್ಕ ವಿವರವು ಎಲ್ಲ ವಿದ್ಯಾರಂಭಗಳಿಗೂ ಸಮಾನವಾಗಿ ಅನ್ವಯಿಸುತ್ತವೆ. ಈ ಸಮಾರಂಭವನ್ನು ಒಂದು ಸೌಧ, ಸುಂದರವಾದ ಮನೆ, ಹಸಿರುಹುಲ್ಲಿನ ಹಾಸಿಗೆಯಿರುವ ಉದ್ಯಾನವನ, ಸುಂದರವಾದ ಚಪ್ಪರದಡಿ ಮುಂತಾದ ಸುಂದರವಾದ ಸ್ಥಳಗಳಲ್ಲಿ ಆಚರಿಸಬೇಕು. ರಂಗಸ್ಥಳವು ದೃಢವಾಗಿ, ನುಣುಪಾಗಿ, ಸಮತಲವಾಗಿ ಕೆಂಪುಮಿಶ್ರಿತ ಹಳದಿ ಅಥವಾ ಕಪ್ಪು ಬಣ್ಣದ್ದಾಗಿರಬೇಕು. ಅದು ಬೇಸಿಗೆಯಲ್ಲಿ ತಣ್ಣಗೂ ಚಳಿಗಾಲದಲ್ಲಿ ಬೆಚ್ಚಗೂ ಇರಬೇಕು. ನಾಟ್ಯಾರಂಭದ ಸಮಯದಲ್ಲಿ ನಾಟ್ಯವಿದ್ಯೆಯ ಅಭ್ಯರ್ಥಿಯು ವಿಘ್ನೇಶ್ವರ, ಇಂದ್ರ, ವೈಕುಂಠವಾಸಿಗಳಾದ ದೇವತೆಗಳು, ಭಾರತೀ, ಚಂಡೀ, ಮಾತೃದೇವತೆಯರು ಮತ್ತು ಕುಲದೇವತೆ ಇವರುಗಳನ್ನು ಪೂಜಿಸಬೇಕು. ಇವುಗಳೊಂದಿಗೆ ವಾದ್ಯಮೇಳ, ಕೈತಾಳಗಳು, ಗುರು ಮತ್ತು ಇತರ ಕನ್ಯೆಯರು ಅಥವಾ ನಾಟ್ಯಕಲಾಕಾರರುಗಳನ್ನೂ ಪೂಜಿಸಬೇಕು. ರಂಗಸ್ಥಳವನ್ನೂ ದಂಡಿಕೆಗೆ ಆಧಾರವಾದ ಕಂಬಗಳನ್ನೂ ನಾಟ್ಯವಿದ್ಯಾಭ್ಯರ್ಥಿಯು ವಂದಿಸಬೇಕು. ಗಂಧ, ಪುಷ್ಪ, ವಸ್ತ್ರ, ಧೂಪ, ಮಂಗಳಾರತಿ, ಬಗೆ ಬಗೆಯ ನೈವೇದ್ಯಗಳಿಂದ ಪೂಜೆಯನ್ನು ಮಾಡಬೇಕು. ರಂಗಸ್ಥಲದಲ್ಲಿ ಹರಡಿದ ಭತ್ತದ ಮೇಲೆ ನಾಟ್ಯವಿದ್ಯಾಭ್ಯರ್ಥಿಯು ನಿಂತು ಎದೆಮಟ್ಟದಲ್ಲಿ ಇರುವ ದಂಡಿಕೆಯನ್ನು ಎರಡು ಕೈಗಳಿಂದಲೂ ಹಿಡಿದು ಗುರುವು ಉಚ್ಚರಿಸುವ ಪಾಟಸೊಲ್ಲುಗಳಿಗೆ ತಕ್ಕಂತೆ ಹೆಜ್ಜೆಗಳನ್ನು ಹಾಕಲು ಮೊದಲುಮಾಡಬೇಕು. ಈ ವೇಳೆಯಲ್ಲಿ  ನಾಟ್ಯವಿದ್ಯಾಭ್ಯರ್ಥಿಯು ಗೆಜ್ಜೆಯನ್ನು ಕಟ್ಟಿರುವುದಿಲ್ಲ ಮತ್ತು ಮೃದಂಗಾದಿ ಪಕ್ಕವಾದ್ಯಗಳನ್ನೂ ಬಳಸುವುದಿಲ್ಲ. ಈ ಸಮಾರಂಭವು ಒದ್ದಿಕೆ (=ಹೊದ್ದಿಕೆ) ಎಂಬ ಹೆಸರಿನಲ್ಲಿ ಇತ್ತೀಚಿನವರೆಗೂ ಇದ್ದಿತೆಂದು ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣರವರು ಹೇಳಿದ್ದಾರೆ. ಕಲಿಕೆಯು ಉತ್ತರೋತ್ತರವಾಗಿ ವರ್ಧಿಸುತ್ತ, ವಿದ್ಯಾರ್ಥಿಗೆ ಬಳಲಿಕೆಯಾಗದಂತೆ ಬೆಳೆಯುತ್ತ ಹೋಗಿ ಹಾಡಿನ ಅಂಶವೂ ಕಲಿಕೆಯಲ್ಲಿ ಸೇರಲಾರಂಭಿಸುತ್ತದೆ. ಕಾಲಕ್ರಮದಲ್ಲಿ ವಿದ್ಯಾರ್ಥಿಯು ಗೀತವಾದನನೃತ್ಯಗಳ ಪರಂಪರೆಯನ್ನು ತಿಳಿದುಕೊಂಡು, ಗೀತದ ಭಾಗಗಳನ್ನು ತನ್ನ ಶರೀರದ ಅಂಗಪ್ರತ್ಯಂಗಾದಿಗಳಿಂದ ವಿಂಗಡಿಸಿ ತೋರಿಸುವುದನ್ನೂ, ಭಾವಗಳನ್ನು ದೃಷ್ಟಿಯಿಂದ ಪ್ರಕಟಪಡಿಸುವುದನ್ನೂ, ಅರ್ಥವನ್ನು ಮುದ್ರೆಗಳಿಂದ ಸೂಚಿಸುವುದನ್ನೂ, ಛಂದೋಲಯಗಳನ್ನು ಪದಗತಿಗಳಿಂದ ನಿರ್ವಹಿಸುವುದನ್ನೂ ಕಲಿತು ಪ್ರೌಢವಾದಾಗ, ಮಧ್ಯಂತರದ ಇನ್ನೊಂದು ಸಾಂಕೇತಿಕ ಸಮಾರಂಭವನ್ನು ಮೇಲಿನಂತೆಯೇ ಆಚರಿಸಬೇಕು. ಈ ಸಮಾರಂಭದಲ್ಲಿ ಸಂಗೀತವಾದ್ಯಗಳ ಪೂಜೆಗೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಇಲ್ಲಿಂದ ನಾಟ್ಯವಿದ್ಯಾರ್ಥಿಯು ಸಂಪ್ರದಾಯದೊಡನೆ,(ಇದು ಪರಿಭಾಷೆ) ಎಂದರೆ ಹಿಮ್ಮೇಳದ ವಾದ್ಯದೊಡನೆ ಅಭ್ಯಾಸ ಮಾಡಬೇಕಾಗಿರುತ್ತದೆ. ನಾಟ್ಯವಿದ್ಯಾರ್ಥಿಯು ತನ್ನ ಗುರುವನ್ನೂ, ವಾದ್ಯಕಾರರನ್ನೂ ಜರಿವಸ್ತ್ರ, ದಕ್ಷಿಣೆ ಇತ್ಯಾದಿಗಳನ್ನಿತ್ತು ಪೂಜಿಸಿ ಆಶೀರ್ವಾದವನ್ನು ಪಡೆಯಬೇಕು. ಮೂರನೆಯ ಮತ್ತು ಕೊನೆಯ ಹಂತದ ಸಮಾರಂಭವೇ ಗೆಜ್ಜೆಪೂಜೆ. ಈ ಹಂತದಲ್ಲಿ ವಿದ್ಯಾರ್ಥಿಗೆ ಗುರುವು ಯಾಂತ್ರಿಕವೂ ಅಭ್ಯಾಸಪೂರ್ವಕವೂ ಆದ ವಿದ್ಯಾರಹಸ್ಯಗಳನ್ನೂ, ನಾಟ್ಯವಿದ್ಯೆಯ ಸೂಕ್ಷ್ಮಾಂಶಗಳನ್ನೂ ಬೋಧಿಸುತ್ತಾರೆ. ಇವು ಆಯಾ ಗುರುಪರಂಪರೆಯ ಶೈಲಿ ಹಾಗೂ ವೈಶಿಷ್ಯಗಳಿಗೆ ತಕ್ಕಂತೆ ಆಚರಿಸಲ್ಪಡುತ್ತವೆ. ಗುರುವು ತನ್ನ ವಿದ್ಯಾರ್ಥಿಯು ರಂಗಪ್ರವೇಶಕ್ಕೆ ಅರ್ಹ,  ಎಂದು ನಿಶ್ಚಯಿಸಿದ ಮೇಲೆ ರಂಗಪ್ರವೇಶ ಸಮಾರಂಭವನ್ನು ಏರ್ಪಡಿಸಿ ಅದಕ್ಕೆ ನೃತ್ಯಸಮಾಜದ ಹಿರಿಯ ಕಲಾವಿದರು. ಇತರ ನಾಟ್ಯಗುರುಗಳು, ವಿದ್ವಾಂಸರು, ಕವಿಗಳು, ರಸಿಕರು ಮತ್ತು ಕಲಾಪೋಷಕರನ್ನು ಆಹ್ವಾನಿಸುತ್ತಾರೆ. ಹಿಂದೆ ಹೇಳಿದಂತೆ ಪೂಜಾವಿಧಿಗಳನ್ನು ಮಾಡಿದ ನಂತರ ಆ ವಿದ್ಯಾರ್ಥಿಯ ನಾಟ್ಯಶಿಕ್ಷಣವು ಪರಿಪೂರ್ಣವಾದುದರ ಮತ್ತು ಆ ವಿದ್ಯಾರ್ಥಿಯು ರಂಗವನ್ನೇರಲು ಅರ್ಹವಾದುದರ ಮತ್ತು ನಾಟ್ಯಕಚೇರಿಗಳ ವೃತ್ತಿಯನ್ನು ಕೈಗೊಳ್ಳಲು ಸಮರ್ಥವಾದುದರ ಸಂಕೇತವಾಗಿ ಪಾದಗಳಿಗೆ ಗೆಜ್ಜೆಯನ್ನು ಕಟ್ಟಲಾಗುವುದು.

 

ಯಕ್ಷಗಾನದಲ್ಲಿ ಗೆಜ್ಜೆಪೂಜೆ—

ಕರ್ನಾಟಕದ ಯಕ್ಷಗಾನ ಪರಂಪರೆಯಲ್ಲಿಯೂ  ಮೇಳವು ಹೊರಡುವ ಮುನ್ನ ಹಾಗೂ ಮೇಳವು ಪತ್ತನಾಜೆಯ ದಿನ ನಿಲ್ಲುವ ಮುನ್ನ ವಿಧಿವತ್ತಾಗಿ ಗೆಜ್ಜೆಯ ಪೂಜೆ ಆಗಲೇ ಬೇಕು. ಕಲಾವಿದರು ತಿರುಗಾಟದ ಮೊದಲದಿನ ಗೆಜ್ಜೆಯನ್ನು ಪೂಜಿಸಿ ಕಟ್ಟುವ ಸಂಪ್ರದಾಯವು ಮೊದಲಿನಿಂದಲೂ ನಡೆದುಕೊಂಡು ಬಂದಿರುವಂಥದ್ದು . ಇಲ್ಲಿ ಗೆಜ್ಜೆಪೂಜೆ ಎಂದರೆ ಕೆಲವರಿಗೆ ಭರತನಾಟ್ಯದಂತೆ ಯಕ್ಷಗಾನದ ರಂಗಪ್ರವೇಶ ಕಾರ್ಯಕ್ರಮವೂ ಹೌದು. ಮಕ್ಕಳು ಕ್ಷೇತ್ರದ ಅಧಿದೇವರ ಎದುರು ಗೆಜ್ಜೆ ಕಟ್ಟುವ ಮೂಲಕ ಕಲಾಸೇವೆಯನ್ನು ಆರಂಭಿಸುತ್ತಾರೆ. ದಕ್ಷಿಣಕನ್ನಡಜಿಲ್ಲೆಯ ಸುಪ್ರಸಿದ್ಧ ಶಕ್ತಿಕ್ಷೇತ್ರವಾದ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನಮಂಡಳಿಯ ಆರು ಯಕ್ಷಗಾನಮೇಳಗಳ ಎಲ್ಲ ಕಲಾವಿದರಿಗೂ ಪ್ರಥಮಸೇವೆಯಾಟದಲ್ಲಿ ದೇವಳದ ವಂಶಪಾರಂಪರ್ಯ ಅರ್ಚಕರಾದ ಆಸ್ರಣ್ಣನವರು ಗೆಜ್ಜೆಯನ್ನು ನೀಡಿ ವಿಧಿವತ್ತಾಗಿ ಮೇಳಗಳ ತಿರುಗಾಟಕ್ಕೆ ಚಾಲನೆಯನ್ನು ನೀಡುತ್ತಾರೆ. ಗೆಜ್ಜೆಯೊಂದಿಗೆ ಈ ಆರು ಮೇಳಗಳ ದೇವರ ಪೆಟ್ಟಿಗೆ, ಚಿನ್ನ, ಬೆಳ್ಳಿಯ ಕಿರೀಟ, ಆಯುಧಗಳಿಗೂ ಚೌಕಿಯಲ್ಲಿ ಪೂಜೆ ನಡೆಯುತ್ತದೆ. ದಕ್ಷಿಣಕನ್ನಡಜಿಲ್ಲೆಯ ಇನ್ನೊಂದು ಪ್ರಸಿದ್ಧ ಶಕ್ತಿಕ್ಷೇತ್ರವಾದ ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನಮೇಳವು ಹುಟ್ಟಲು ಕಾರಣವಾದ, ಶ್ರೀದೇವರ ಹಸಿರುಸೀರೆ ಗೆಜ್ಜೆಗಳು ದೊರೆತ ರೋಚಕ ಕಥೆಯೊಂದು ಇದೆ. ಅಲ್ಲಿಯೂ ಗಣಪತಿ ಪೂಜೆಯನ್ನು ಮಾಡುವಾಗ ಯಕ್ಷಗಾನಮೇಳದ ಗೆಜ್ಜೆಯ ಪೂಜೆಯು ವಿಧಿವತ್ತಾಗಿ ನಡೆಯುತ್ತದೆ. ಯಕ್ಷರಂಗದಲ್ಲಿಯೂ ಕಲಾವಿದರು ಗೆಜ್ಜೆ ಕಟ್ಟುವ ಮುನ್ನ ಚೌಕಿಯಲ್ಲಿ ನೆರೆದ ಹಿರಿಯರಿಂದ ಅನುಮತಿ ಬೇಡುತ್ತಾರೆ. ಹೀಗೆ ವರ್ಷದ ಮೊದಲ ಪ್ರದರ್ಶನಕ್ಕೆ ಆರಂಭಿಸುವ ಮೊದಲು ದೈವ – ದೇವರುಗಳ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ, ದೇವರ ಆಶೀರ್ವಾದವನ್ನೂ, ಊರಹಿರಿಯರ ಆಶೀರ್ವಾದವನ್ನೂ ಪಡೆದು ಆರಂಭಿಸಿದ್ದ ಜನಪದಕಲಾಮೇಳಗಳೂ, ಯಕ್ಷಗಾನಮೇಳಗಳೂ ಸಂಪ್ರದಾಯವನ್ನು ಅನುಸರಿಸಿ ಪತ್ತನಾಜೆಯ ದಿನದಂದು ಮರಳಿ ದೇವರ ಸನ್ನಿಧಿಯಲ್ಲಿ ಸೇವೆಯ ಪ್ರದರ್ಶನದೊಂದಿಗೆ ತಮ್ಮ ಗೆಜ್ಜೆಯನ್ನು ಬಿಚ್ಚುವ ವಿಧಿಯನ್ನು ನೆರವೇರಿಸಿ ತಮ್ಮ ಆ ವರ್ಷದ ತಿರುಗಾಟಕ್ಕೆ ಮಂಗಳವನ್ನು ಹಾಡುತ್ತಾರೆ. ಮಳೆಗಾಲವು ಮುಗಿದು ಮುಂದಿನ ಸಿಂಹಮಾಸದವರೆಗೆ ಸುಮಾರು ಮೂರು ತಿಂಗಳುಗಳ ಕಾಲ ತುಳುನಾಡಿನಲ್ಲಿ ಕೇಳಿ – ಅಬ್ಬರ ನೃತ್ಯಗಳಿಗೆ ವಿರಾಮಕಾಲವಾದರೂ, ಸಾಂಕೇತಿಕವಾಗಿ ಗೆಜ್ಜೆ ಕಳಚುವ ಯಕ್ಷಗಾನ ಕಲಾವಿದರು ಮಳೆಗಾಲದಲ್ಲಿ ಸಭಾಂಗಣದಲ್ಲಿ ನಡೆಯುವ ಕಲಾಪ್ರದರ್ಶನಗಳಿಗಾಗಿ ಮರಳಿ ಗೆಜ್ಜೆಯನ್ನು ಕಟ್ಟುತ್ತಾರೆ. ಚೆಂಡೆ, ತಾಸು,  ಡಮರು, ನಗಾರಿ, ಡೋಲು, ಢಕ್ಕೆ, ಜಾಗಟೆಯಂತಹ ಲಯವಾದ್ಯಗಳಿಗೂ ಸ್ವಲ್ಪ ಬಿಡುವೆಂದಿದ್ದರೂ ಅವೂ ಸಭಾಭವನಕ್ಕೆ ಕಲಾವಿದರೊಂದಿಗೆ ಮರಳುತ್ತವೆ.

 

ಭೂತದ ಕೋಲದಲ್ಲಿ ಗಗ್ಗರ ಪೂಜೆ —

ಕರ್ನಾಟಕ ಹಾಗೂ ಕೇರಳದ ಭೂತಾರಾಧನೆಯಲ್ಲಿ  ‘ಗಗ್ಗರ’ ಎಂಬ ಗೆಜ್ಜೆಗಳುಳ್ಳ ವಿಶಿಷ್ಟ ರೀತಿಯ ಕಂಚಿನ ಕಡಗವನ್ನು ಧರಿಸಲಾಗುತ್ತದೆ. ಈ ಗಗ್ಗರ ಧರಿಸುವ ಕಾರ್ಯಕ್ರಮಕ್ಕೆ ಭೂತಾರಾಧನೆಯಲ್ಲಿ ವಿಶೇಷ ಮಹತ್ತ್ವವಿದೆ. ಗಗ್ಗರವೆನ್ನುವುದು ‘ಘರ್ಘರ’ದ ತದ್ಭವ.  ನೃತ್ಯದ ಪರಿಭಾಷೆಯಲ್ಲಿ ಘರ್ಘರವೆಂದರೆ ಪಾದದ ವಿವಿಧ ಚಲನೆಯಿಂದ ಉಂಟಾಗುವ ಗೆಜ್ಜೆಗಳ ನಾದವೆಂದರ್ಥ. ದೈವಗಳ ಆರಾಧನೆಯಲ್ಲಿ ಗಗ್ಗರ ಧರಿಸುವ ಈ ವಿಶೇಷ ಸಂದರ್ಭವನ್ನು ‘ಗಗ್ಗರದೆಚ್ಚಿ’ ಎಂದು ಕರೆಯಲಾಗುತ್ತದೆ. ಗಗ್ಗರ ಧರಿಸಿ ನಿಂತ ಭೂತಕ್ಕೆ ಗುತ್ತು ಬಾರಿಕೆಯವರೂ ಇತರರೂ ಪ್ರಾರ್ಥನೆ ಸಲ್ಲಿಸಿ, ‘ಪೂವರಿ’ (ಪೂ +ಅರಿ = ಹೂ ಮತ್ತು ಅಕ್ಕಿ) ಎಸೆಯುತ್ತಾರೆ. ಆ ಸಮಯದಲ್ಲಿ   ಭೂತಕ್ಕೆ ಆವೇಶ ಬರುವುದನ್ನು ತುಳುಭಾಷೆಯಲ್ಲಿ ‘ವಸಯೋ ಆಪುನಿ’ ಎನ್ನುತ್ತಾರೆ. ಭೂತಕ್ಕೂ, ಭೂತದ ಮಾನಿಗೂ ‘ದರ್ಶನ’ ಅಂದರೆ ನಡುಕದ ಆವೇಶ ಬರುತ್ತದೆ. ವಾದ್ಯಮೇಳದ ತಾಳಕ್ಕನುಗುಣವಾಗಿ ಹೆಜ್ಜೆ ಹಾಕಿ ಭೂತ ನರ್ತಿಸುತ್ತದೆ. ಭೂತದ ವೇಷಕ್ಕೆ, ಆಯಾ ಭೂತದ ಸ್ವರೂಪ, ಸ್ವಭಾವಗಳಿಂದ ತಕ್ಕ ತೆಂಗಿನ ಎಳೆಯಗರಿ, ಕೇಪಳ ಹೂ, ಅರದಾಳ, ಮಸಿ, ಇಂಗಳಿಕ, ಕೆಂಪುವಸ್ತ್ರ, ದಗಲೆ, ಗೆಜ್ಜೆ, ಗಗ್ಗರ, ಕೈದಂಡೆ, ನೆತ್ತಿಪಟ್ಟ, ಚಪ್ಪರಕೊಂಬು, ಮಾಲೆಗಳು, ಅಣಿ ಮೊದಲಾದುವನ್ನು ಉಪಯೋಗಿಸುತ್ತಾರೆ.  ಕೋಲ ಕಟ್ಟುವ ವ್ಯಕ್ತಿಯು ವೇಷವನ್ನು ಪೂರೈಸಿ ಗಗ್ಗರವನ್ನು ಇಡುವಾಗ ಗುರಿಕಾರರು “ಇಟ್ಟ ಗಗ್ಗರದಲ್ಲಿ ಸುತ್ತಿದ ಗರಿಯಲ್ಲಿ ಹದಿನಾರು ಕಲೆ ಪರಿಪೂರ್ಣವಾಗಿ ತುಂಬಿ ಬಂದು ಹಿಂದೆ ನಮ್ಮ ಹಿರಿಯರನ್ನು ಹೇಗೆ ರಕ್ಷಿಸಿದೆಯೋ ಅಂತೆಯೇ ನಮ್ಮ ಬಿನ್ನಹವನ್ನು ಹೇಳಿ ನಮ್ಮ ಈ ಸಂಸಾರವನ್ನು ಹೂವಿನ ಹಿತ್ತಿಲಿನಂತೆ ಕಾಪಾಡುವ ಅಧಿಕಾರ ನಿನಗೆ ಸೇರಿದ್ದು” ಎಂದು ಪ್ರಾರ್ಥಿಸುತ್ತಾರೆ. ತಾರಸ್ವರದಲ್ಲಿ ವಾದ್ಯಗಳು ಭೋರ್ಗರೆಯಲು ದೈವಕ್ಕೆ ಆವೇಶವಾಗಿ ಉಗ್ರವಾಗಿ ಕುಣಿದು ಗಗ್ಗರವನ್ನು ಕಟ್ಟುತ್ತದೆ. ಭೂತ ಕಟ್ಟುವವನು ತಾನು “ಗಗ್ಗರ” ಕಟ್ಟಲು ಗುತ್ತು ಬಾರಿಕೆಯವರ, ಪೂಜಾರಿಗಳ ಹಾಗೂ ಅಲ್ಲಿ ನೆರೆದಿದ್ದ ಭಕ್ತಾದಿಗಳ ಅನುಮತಿ ಕೇಳುವುದು ವಾಡಿಕೆ.

 

ತುಳುನಾಡಿನಲ್ಲಿ ಪತ್ತನಾಜೆಯು ವೃಷಭಮಾಸದ ಹತ್ತನೇ ದಿನ. ಸಾಧಾರಣವಾಗಿ ಮೇ ತಿಂಗಳ 24 ರಂದು ಇರುತ್ತದೆ. ದೀಪಾವಳಿಯಿಂದ ಆರಂಭಗೊಳ್ಳುವ ಭೂತಕೋಲಗಳು, ನಾಗಮಂಡಲ, ಢಕ್ಕೆಬಲಿ, ಮಂಡಲಭೋಗ, ಜಾಲಾಟಗಳು ಪತ್ತನಾಜೆಯಂದು ಮುಕ್ತಾಯಗೊಳ್ಳುತ್ತವೆ.  ಭೂತಕೋಲದ ಆರಾಧನೆಗಳು ತಮ್ಮ ಸೇವೆಯನ್ನು ಮುಕ್ತಾಯಗೊಳಿಸಿದ ನಂತರ, ಗಗ್ಗರ ಮುಂತಾದ ದೈವಕ್ಕೆ ಸಂಬಂಧಿಸಿದ ಆಭರಣಗಳನ್ನು ಸಂಪ್ರದಾಯಸ್ಥರು ಅವುಗಳ ಮರದ ಪೆಟಾರಿಯಲ್ಲಿ ಪತ್ತನಾಜೆಯಂದೆ ಇಡುತ್ತಾರೆ. ಕರ್ನಾಟಕದಲ್ಲಿ ಗೆಜ್ಜೆಯ ಇನ್ನೊಂದು ರೂಪವಾದ ಗಗ್ಗರವನ್ನು ಅನೇಕ ಜಾನಪದದ ದೇವರುಗಳ, ವೀರಭದ್ರ ಇತ್ಯಾದಿ ಕುಣಿತಗಳಲ್ಲಿಯೂ ಧರಿಸುತ್ತಾರೆ. ಅನೇಕ ಪ್ರಾಚೀನ ನಾಟ್ಯಶಿಲ್ಪಗಳಲ್ಲಿ ನೂಪುರದೊಂದಿಗೆ ಗಗ್ಗರದ ರೀತಿಯ ಆಭರಣಗಳು ಇರುವುದನ್ನು ಕಾಣಬಹುದು.

 

(ವಿವಿಧ ಆಕರಗಳಿಂದ)

 

 

 

Author Details


Srimukha

Leave a Reply

Your email address will not be published. Required fields are marked *