ಮಕ್ಕಳ ಸಂಗದೊಳೆಚ್ಚರಗೊಳ್ಳಲಿ…

ಅಂಕಣ ಬಗೆಯೆಷ್ಟೋ ಮೊಗವಷ್ಟು : ಗಜಾನನ ಶರ್ಮಾ ಹುಕ್ಕಲು

ದೊಡ್ಡವರೆಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ
ದಿವ್ಯ ಕಿಶೋರತೆ ನಿದ್ರಿಸುತಿಹುದು ವಿಸ್ಮೃತ ನಾಕದಲಿ |
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯಶಿಶು
ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಜಪಶು ||
 ಇದು ರಾಷ್ಟ್ರಕವಿ ಕುವೆಂಪು ಅವರ ಕವಿತೆಯ ಸಾಲುಗಳು. ಅವರ ಪ್ರಕಾರ, ತಮ್ಮನ್ನು ತಾವು ದೊಡ್ಡವರು ಎಂದುಕೊಂಡವರ, ಸಮಾಜ ದೊಡ್ಡವರೆಂದು ಹೇಳುವವರ ಅಥವಾ ವಯಸ್ಸಿನ ಕಾರಣದಿಂದ ದೊಡ್ಡವರು ಎನ್ನಲಾಗುವ ಎಲ್ಲರ ಹೃದಯದಲ್ಲೂ ಒಂದು ಪುಟ್ಟ ತೊಟ್ಟಿಲ ಲೋಕವಿದ್ದು ಅದರಲ್ಲಿ  ‘ದಿವ್ಯಕಿಶೋರತೆ’ ನೆಮ್ಮದಿಯಲ್ಲಿ ನಿದ್ರಿಸುತ್ತಿರುತ್ತದೆ. ಅದು ಎಚ್ಚರಗೊಳ್ಳುವುದು ಮಕ್ಕಳ ಸಂಗದಲ್ಲಿ ಮಾತ್ರ. ಆ ದಿವ್ಯಕಿಶೋರತೆ ಮಕ್ಕಳ ಸಂಗದಲ್ಲಿ ಎಚ್ಚರಗೊಳ್ಳುವುದಷ್ಟೇ ಅಲ್ಲ, ಅದು ದೊಡ್ಡವರನ್ನೂ ಹಾಡಿಸುತ್ತ, ಕುಣಿಸುತ್ತ ಅವರೊಳಗಿನ ಮನುಜಪಶುವನ್ನು ಸಂಸ್ಕರಿಸಿ ದಿವ್ಯತೆಗೆ ಏರಿಸುತ್ತದೆ. ಅವರೆದೆಯೊಳಗಿನ ಪಶುತ್ವವನ್ನು ನಾಶಪಡಿಸಿ, ಅವರನ್ನು ಮನುಷ್ಯತ್ವದ ಉನ್ನತಿಗೆ ಅರ್ಥಾತ್  ಸುಮನಸ ಸ್ಥಿತಿಗೆ ಏರಿಸುತ್ತದೆ. ಹೃದಯವನ್ನು ಆರ್ದ್ರಗೊಳಿಸಿ, ಎದೆಯನ್ನು ಮೃದುಗೊಳಿಸುತ್ತದೆ.
          

 

ಇದನ್ನೇ ಇನ್ನೊಂದು ಬಗೆಯಲ್ಲಿ  ಆಂಗ್ಲ ಕವಿ ವರ್ಡ್ಸ್ ವರ್ಥ್ ಹೇಳಿರುವುದು.  

ಅವನ ಪ್ರಕಾರ, ‘Child is father of the man’, ಅಂದರೆ ‘ಮಗುವೇ ಮನುಷ್ಯನ ತಂದೆ’.  
ಈ ಸಾಲು ಗೋಚರಿಸುವುದು Wordsworth ಕವಿಯ ‘ಮೈ ಹಾರ್ಟಸ್ ಲೀಪ್ಸ್ ಅಪ್’ (my hearts leaps up) ಎಂಬ ಕವನದಲ್ಲಿ.  ಅದನ್ನು ‘ದಿ ರೈನ್ ಬೋ’ ಎಂದೂ ಕರೆಯುತ್ತಾರೆ. ಕಾಮಲಬಿಲ್ಲೊಂದನ್ನು ನೋಡಿದಾಗ ಹೃದಯದಲ್ಲಿ ಪುಟಿದೆದ್ದ ಭಾವ ಪ್ರವಾಹವೇ ಆ ಪದ್ಯ. ಮುಂದೆ ಆತನ ಪದ್ಯದ ಈ ಸಾಲನ್ನೇ ಉದ್ಧರಿಸಿ, ‘child is the father of man’ ಎಂಬ ಹಾಡೊಂದನ್ನು ಬ್ರಿಯಾನ್ ವಿಲ್ಸನ್ ಮತ್ತು ವಾನ್ ಡೈಕ್ ಪಾರ್ಕ್ಸ್  ಬರೆಯುತ್ತಾರೆ. ಅದನ್ನು ಅಮೆರಿಕದ ರಾಕ್ ಬ್ಯಾಂಡ್ ತಂಡ, ‘ದಿ ಬೀಚ್ ಬಾಯ್ಸ್’ ತಮ್ಮ ಆಲ್ಬಮ್ ‘ಸ್ಮೈಲ್’ಗೋಸ್ಕರ ರೆಕಾರ್ಡ್ ಮಾಡಿ, ವಿಶ್ವದಾಖಲೆ ನಿರ್ಮಿಸುತ್ತಾರೆ.

 


ವರ್ಡ್ಸ್ ವರ್ಥ್ ಮಹಾಕವಿಯ ಒಂಬತ್ತು ಸಾಲುಗಳ ಆ ಪುಟ್ಟ ಪದ್ಯ ಹೀಗಿದೆ –
My heart leaps up when I behold
A rainbow in the sky;
So was it when my life began;
So is it now I am a man;
So be it when I shall grow old,
Or let me die!
The Child is father of the Man;
And I could wish my days to be
Bound each to each by natural piety.
 

ಇಂಗ್ಲಿಷಿನಲ್ಲಿ ಅದನ್ನು ಹೀಗೆ  ವ್ಯಾಖ್ಯಾನಿಸಲಾಗಿದೆ:

‘My heart leaps up’, is perhaps Wordsworth’s shortest great poem. In just nine lines, Wordsworth expresses several features of Romanticism: a love of nature, the relationship between the natural world and the individual self, and the importance of childhood in making the poet the man he becomes, memorably expressed by Wordsworth’s statement that ‘The child is father of the man’.

 


Wordsworth observes a rainbow in the sky and is filled with joy at the sight of a rainbow: a joy that was there when Wordsworth was very young, is still there now he has attained adulthood, and – he trusts – will be with him until the end of his days. If he loses this thrilling sense of wonder, what would be the point of living? In summary, this is the essence of ‘My heart leaps up’.
                  

 

ಮನುಷ್ಯ ಸ್ವಭಾವಗಳು ಆತ ತನ್ನ ಬಾಲ್ಯದಲ್ಲಿ  ಬೆಳೆಸಿಕೊಂಡ ಗುಣ ಮತ್ತು ವರ್ತನೆಗಳ ಫಲಿತಾಂಶ. Man is the product of habits and behaviour developed in youth.
              

 

ಕವಿಗೆ ಕಾಮನಬಿಲ್ಲನ್ನು ಕಂಡು ತನ್ನೆದೆ  ತುಂಬಿರುವ ಆನಂದಲಹರಿಯ ಮೂಲ ತನ್ನ ಬಾಲ್ಯ ಎನ್ನಿಸುತ್ತದೆ. ಬಾಲ್ಯದಲ್ಲಿ ಎದೆಯಲ್ಲಿ ಜಿನುಗುತ್ತಿದ್ದ ಭಾವವೇ ವಯಸ್ಕನಾದ ಮೇಲೂ ತನ್ನಲ್ಲಿ ಜೀವಂತವಿದೆ ಎಂಬಲ್ಲಿಗೆ ಬಾಲ್ಯೋತ್ತರ ಬದುಕಿನಲ್ಲಿ ಗೋಚರಿಸುವ ಬಹುತೇಕ ಭಾವಗಳಿಗೆಲ್ಲ ಮೂಲ ಬಾಲ್ಯವೇ ಎಂದು ಆತ child is the father of man ಎಂದು ಉದ್ಘೋಷಿಸುತ್ತಾನೆ.

 

 

ಮಹಾಕವಿಗಳಿಬ್ಬರ ಅಭಿಪ್ರಾಯವನ್ನು ಗಮನಿಸಿದಾಗ, ನಮ್ಮ ಸನಾತನ ಪರಂಪರೆಯ ಶ್ರುತಿವಾಕ್ಯ ‘ಅಪುತ್ರಸ್ಯ ಗತಿರ್ನಾಸ್ತಿ’  ಎಂಬುದನ್ನು ಕಾರ್ಯಕ್ರಮವೊಂದರಲ್ಲಿನ ನನ್ನ ಸ್ನೇಹಿತ ದೇವೇಂದ್ರ ಬೆಳೆಯೂರು ವ್ಯಾಖ್ಯಾನಿಸಿದ್ದು ನೆನಪಿಗೆ ಬರುತ್ತಿದೆ. ಆತನ ಪ್ರಕಾರ, ‘ಅಪುತ್ರಸ್ಯ ಗತಿರ್ನಾಸ್ತಿ’ ಎಂಬ ವಾಕ್ಯವನ್ನು ‘ಮಕ್ಕಳಾಗದವರಿಗೆ ಸದ್ಗತಿಯಿಲ್ಲ’ ಎಂದು ವ್ಯಾಖ್ಯಾನಿಸುವುದು ತಪ್ಪು. ಅದರ ನೈಜ ವ್ಯಾಖ್ಯಾನ,  ಮಕ್ಕಳಾಗದವರಿಗೆ ಅಂದರೆ ಶಿಶುತನವನ್ನು ತೋರದವರಿಗೆ ಗತಿಯಿಲ್ಲ. ಮಕ್ಕಳ ಮನಃಸ್ಥಿತಿಯನ್ನು ಹೊಂದದವರಿಗೆ, ದೊಡ್ಡವನೆಂಬ ಗರ್ವದಲ್ಲಿ ಮೆರೆಯುತ್ತ ಕಿಶೋರಾವಸ್ಥೆಯನ್ನು ಕಳೆದುಕೊಂಡವನಿಗೆ ನೆಮ್ಮದಿಯಿಲ್ಲ ಎಂಬುದು. ನೆಮ್ಮದಿಯಾಗಿ ಬದುಕಬೇಕೆಂದರೆ ಎದೆಯಲ್ಲಿ ಮಗುತನ ಸದಾ ಜಿನುಗುತ್ತಿರಬೇಕು ಎಂಬುದೇ ಅದರ ತಾತ್ಪರ್ಯ ಎಂಬುದು ಅವನ ವಿವರಣೆ.
               

 

ಮನುಷ್ಯನೊಳಗಿನ ಕ್ರೌರ್ಯ ಅಥವಾ ಪಶುತನ ನಾಶವಾಗಬೇಕೆಂದರೆ ಅವನಲ್ಲಿ ಕಿಶೋರತೆ ಜೀವಂತವಾಗಿರಬೇಕು. ಬಾಲ್ಯದಲ್ಲಿ ಆತ ಕಟ್ಟಿಕೊಳ್ಳುವ ‘ಭಾವಬುತ್ತಿ’ ದೊಡ್ಡವನಾದ ಮೇಲೂ ಪ್ರತಿನಿತ್ಯ ಅವನ ಹೆಗಲಲ್ಲಿ ಜೋತಾಡುತ್ತಿರಬೇಕು. ಸರಿಯಾದ ಬಾಲ್ಯ ದೊರೆಯದಿದ್ದರೆ ಅವನಲ್ಲಿ ಮೃದುತ್ವ ನಾಶವಾಗಿ ಕಠೋರತೆ ಹೆಚ್ಚುತ್ತದೆ. ರಾಕ್ಷಸತ್ವ ಮೈದಾಳುತ್ತದೆ. ಎದೆಯಲ್ಲಿ ಕಿಶೋರತೆ ಜೀವಂತವಾಗಿದ್ದರಷ್ಟೇ ರಾಕ್ಷಸತ್ವದ ನಾಶ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ರಾಮಾಯಣದಲ್ಲಿ ಬರುವ ವಿದ್ಯುತ್ಕೇಶನ ಕತೆ.

                

ವಿದ್ಯುತ್ಕೇಶ ಹೇತಿಯೆಂಬ ರಾಕ್ಷಸ ಮತ್ತು ಕಾಲನ ಒಡಹುಟ್ಟಿದ ಭಯೆ ಎಂಬ ದಂಪತಿಗಳ ಮಗ. ಮುಂದೆ ಈ ವಿದ್ಯತ್ಕೇಶ ಸಂಧ್ಯಾದೇವಿಯ ಮಗಳಾದ ಸಾಲಕಟಂಕಟೆ ಎಂಬುವಳನ್ನು ವಿವಾಹವಾಗುತ್ತಾನೆ. ಸಾಲಕಟಂಕಟೆ ಗರ್ಭವತಿಯಾಗಿ ಮಂದರಪರ್ವತದ ಗುಹೆಯೊಂದರಲ್ಲಿ ಮಗುವೊಂದಕ್ಕೆ ಜನ್ಮವೀಯುತ್ತಾಳೆ. ನವಜಾತ ಶಿಶುವನ್ನು ಗುಹೆಯಲ್ಲೇ ಬಿಟ್ಟು ಆ ರಕ್ಕಸಿ ತನ್ನ ಪತಿಯೊಂದಿಗೆ ಕ್ರೀಡಿಸಲು ಹೊರಟುಹೋಗುತ್ತಾಳೆ.
                 

 

ಗುಹೆಯಲ್ಲಿ ಒಂಟಿ ಶಿಶು ಹಸಿವಿನಿಂದ  ಜೋರಾಗಿ ಅಳುತ್ತದೆ. ಆ ಘೋರಾರಣ್ಯದ ನಡುವೆ ಮಗುವಿನ ರೋಧನವನ್ನು ಕೇಳುವವರಾದರೂ ಯಾರು? ಹೆತ್ತ ತಾಯಿಯೇ ನಿಷ್ಕರುಣೆಯಿಂದ ತ್ಯಜಿಸಿಹೋದ ಆ ಅನಾಥ ಶಿಶು ಅಳುತ್ತಲೇ ಇತ್ತು. ಮಗುವಿನ ಅದೃಷ್ಟ! ಅದರ ಅಳು ಜಗನ್ಮಾತೆಗೆ ಕೇಳಿಸಿತು. ಮಂದರಪರ್ವತದ ನೆತ್ತಿಯನ್ನು ಹಾದು ಹೋಗುತ್ತಿದ್ದ ಶಿವಪಾರ್ವತಿಯರಿಗೆ ಆ ಕಂದನ  ಹೃದಯವಿದ್ರಾವಕ ಆಕ್ರಂದನ ಕೇಳಿಸುತ್ತದೆ. ಮಾತೆ ಪಾರ್ವತಿಯ ಮಾತೃಹೃದಯ ಕರಗಿ ನೀರಾಗಿ ಆಕೆ ಕೆಳಗಿಳಿದು ಬಂದು ಮಗುವನ್ನೆತ್ತಿ, ಸಂತೈಸಿ, ತನ್ನ ದಿವ್ಯದೃಷ್ಟಿಯಿಂದ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಾಳೆ. ರಾಕ್ಷಸರ ತಾಮಸ ಪ್ರವೃತ್ತಿಯಿಂದ ಅವರ ಮುಂದಿನ ಪೀಳಿಗೆಗೆ ಒದಗುತ್ತಿರುವ ದುಸ್ಥಿತಿಗೆ ಮರುಗಿದ ಜಗನ್ಮಾತೆ ತಕ್ಷಣದಲ್ಲಿ ರಾಕ್ಷಸ ಕುಲಕ್ಕೆ ವರವೊಂದನ್ನು ನೀಡುತ್ತಾಳೆ.
“ಇನ್ನು ಮುಂದೆ ರಕ್ಕಸ ಸ್ತ್ರೀಯರು ಗರ್ಭಧಾರಣೆಯಾಗುತ್ತಿದ್ದಂತೆಯೇ ಪ್ರಸವಿಸಲಿ ಮತ್ತು ಹುಟ್ಟುವ ಮಗು ಹುಟ್ಟಿದೊಡನೆಯೇ ತಾಯಿಗೆ ಸಮಾನ ವಯಸ್ಸು ಪಡೆಯಲಿ.”

ರಾಕ್ಷಸರು ಹುಟ್ಟಿದೊಡನೆಯೇ ವಯಸ್ಕರಾಗುವಂತೆ  ಪಾರ್ವತಿ ನೀಡಿದ ವರ, ಒಂದರ್ಥದಲ್ಲಿ ಶಾಪ! ನನ್ನ ದೃಷ್ಟಿಯಿಂದ ಅದು ಖಂಡಿತವಾಗಿ ಶಾಪ. ಯಾಕೆಂದರೆ ಅದು ರಾಕ್ಷಸ ಪೀಳಿಗೆಯಿಂದ ಅವರ ಬಾಲ್ಯವನ್ನೇ ಕಸಿದುಬಿಟ್ಟಿತು.
              

 

ಈ ಪುರಾಣ ಕತೆಯನ್ನು ನಾವು ಇನ್ನೊಂದು ದೃಷ್ಟಿಕೋನದಿಂದ ವ್ಯಾಖ್ಯಾನಿಸುವುದು ಅರ್ಥಪೂರ್ಣ. ರಾಕ್ಷಸರಿಗೆಲ್ಲ ಬಾಲ್ಯವಿಲ್ಲ ಎಂದು ಹೇಳುತ್ತಲೇ ಈ ಕತೆ ಬಾಲ್ಯವಿಲ್ಲದವರೆಲ್ಲ ರಾಕ್ಷಸರಾಗುತ್ತಾರೆ ಎಂಬ ಧ್ವನಿಯನ್ನೂ ಹೊರಡಿಸುವುದಲ್ಲವೇ? ಈ ಕತೆಯನ್ನು ನಾನಂತೂ ಅರ್ಥ ಮಾಡಿಕೊಂಡಿದ್ದೇ ಹಾಗೆ. ಸುಂದರ ಬಾಲ್ಯ ಸಿಕ್ಕಿದವರ್ಯಾರೂ ರಕ್ಕಸರಾಗಲು ಸಾಧ್ಯವಿಲ್ಲ. ಹಾಗಾಗಿ ಬಾಲ್ಯ ಸಿಕ್ಕದವರು ರಾಕ್ಷಸರಾಗುತ್ತಾರೆ ಎಂಬುದೇ ತಾತ್ಪರ್ಯ.
                     

 

ಇದು ಕೇವಲ ತರ್ಕಕ್ಕಾಗಿ ಕತೆಯನ್ನು ಅಪವ್ಯಾಖ್ಯಾನಿಸಿದ್ದಲ್ಲ. ಆಧುನಿಕ ಮನೋವೈಜ್ಞಾನಿಕ ಅಧ್ಯಯನಗಳೂ ಇದನ್ನೇ ಹೇಳುತ್ತವೆ. ಸಮರ್ಪಕ ಬಾಲ್ಯ ದೊರೆಯದ ಮಕ್ಕಳು ಬೆಳೆದು ದೊಡ್ಡವರಾದಾಗ ಅವರಲ್ಲಿ ಕ್ರೈಮ್ ರೇಟ್ ಹೆಚ್ಚು. ಹಾಗೆಯೇ ಅನೇಕ ಸರ್ವಾಧಿಕಾರಿಗಳ, ಕೊಲೆಪಾತಕರ, ಸಮಾಜವಿರೋಧಿಗಳ ಬದುಕಿನ ಅಧ್ಯಯನ ನಡೆಸಿದಾಗಲೂ ಅವರಲ್ಲಿ ಹೆಚ್ಚಿನ ಮಂದಿಯ ಬಾಲ್ಯ ಅಸಮರ್ಪಕವಾಗಿತ್ತು ಎಂದು ತಿಳಿದು ಬರುತ್ತದೆ.

Author Details


Srimukha

Leave a Reply

Your email address will not be published. Required fields are marked *