ಮೇವು ಹುಡುಕುವ ಗೋವು, ಕಟುಕರಿಗೆ ಸುಲಭ ಮೇವು

ಅಂಕಣ ಶಬ್ದ~ಶಿಲ್ಪ : ಮಹೇಶ ಎಳ್ಯಡ್ಕ

ಬೆಳಗಾಗುತ್ತಿದ್ದಂತೆಯೇ ಮನೆ ನಡೆಸುವ ಅಮ್ಮಂದಿರ ದಿನಚರಿಯ ಮುಖ್ಯ ಕಾರ್ಯವೆಂದರೆ, ಹಟ್ಟಿಯ ಕೆಲಸಗಳು. ಹಟ್ಟಿಯಲ್ಲಿ ಅಂಬಾ ಎಂದು ಅದಾಗಲೇ ಕರೆಯಲು ಆರಂಭಿಸಿ ಮನೆಯೊಡತಿ ಅಮ್ಮನಿಗಾಗಿ ಕಾಯುತ್ತಿರುವ ದನಗಳಿಗೆ ಕಲಗಚ್ಚು, ಮಡ್ಡಿ ಉಣಿಸಿ; ಕರುವಿಗೆ ಕುಡಿಸಿ ಉಳಿದ ಹಾಲು ಕರೆದು, ಕುಡಿಯಲು ನೀರು ಕೊಟ್ಟು, ಹೆಸರಿನಿಂದ ಕರೆದು, ಮಗಳೇ ಎಂದು ಮುದ್ದಿಸಿ…

 

ಇವೆಲ್ಲ ನಾವುಗಳು ನೋಡಿ ಬೆಳೆದ ನಿತ್ಯಚರ್ಯೆಗಳು. ಅದಾಗಿ ದನಗಳನ್ನು ಮೇಯಲು ಗುಡ್ಡೆಗೆ ಬಿಡುವುದು. ದನಗಳೂ ಈ ದಿನಚರಿಗೆ ಅದೆಷ್ಟು ಒಗ್ಗಿದ್ದವೆಂದರೆ, ನಿತ್ಯವೂ ಬೆಳಗ್ಗೆ ಹಟ್ಟಿಯಿಂದ ಹೊರಟು ತನ್ನ ನಿಗದಿತ ಹಾದಿಯಲ್ಲೇ ಸಂಚರಿಸಿ ಸಮೀಪದ ಗೋಮಾಳ ಅಥವಾ ಕಾಡುಗಳನ್ನು ಸಂಪರ್ಕಿಸಿ, ಕಾಡುಹುಲ್ಲು-ಸೊಪ್ಪು-ತರಗೆಲೆಗಳನ್ನು ಸಂಪಾದಿಸುತ್ತಾ, ತಿಂದು ಬರುತ್ತವೆ. ಬಚ್ಚಲೆನಿಸಿದಾಗ, ಬಿಸಿಲೇರಿದಾಗ, ನೆಳಲಿನಲ್ಲಿ ವಿಶ್ರಮಿಸುತ್ತವೆ. ಸಾಯಂಕಾಲದ ಇಳಿಸಮಯ ಹಿಡಿದಂತೆ ಪುನಃ ಹಟ್ಟಿಯ ಕಡೆಗೆ ನಡೆಯುತ್ತವೆ. ಗೋವುಗಳ ಉತ್ಸಾಹದ ನಡಿಗೆಯಲ್ಲಿ ಧೂಳೆದ್ದು ಗೋಧೂಳಿ ಸಮಯವಾಗಿರುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ದನಸಾಕಣೆಯ ಈ ಚಿತ್ರಣಗಳು ತಲೆತಲಾಂತರಗಳಿಂದ ಬಂದಿದ್ದು. ಗುಂಪಿನ ಹಿರಿಯ ದನಗಳು ಪ್ರತಿದಿನದ ಈ ಆವರ್ತನೆಯ ಶಿಸ್ತನ್ನು ಚಾಚೂ ತಪ್ಪದೆ ಕಿರಿಯ ಕರುಗಳಿಗೆ ತಿಳಿಸುತ್ತಾ, ತಮ್ಮ ಪರಂಪರೆಯನ್ನು ಮುಂದುವರಿಸುತ್ತದೆ.

 

ಮೊದಮೊದಲು ಕಾಡುಗಳಿದ್ದವು. ಹಸಿರು ಹುಲ್ಲುಗಳ ಹೇರಳ ಲಭ್ಯತೆಯಿತ್ತು. ವಿಶಾಲ ಹುಲ್ಲುಗಾವಲುಗಳು, ಬದುಗಳು, ತೋಡು-ಹಳ್ಳಗಳು ಇದ್ದವು. ಆದರೆ ಕಾಲ ಬದಲಾದಂತೆ, ಜನಸಾಂದ್ರತೆ ಹೆಚ್ಚಿದಂತೆ, ಜನರ ಲೋಭೆಯು ಹೆಚ್ಚಿದಂತೆ ಗೋಮಾಳಗಳು ಮರೆಯಾದವು. ಕಾಡುಗಳಲ್ಲಿ ಹಸಿರು ಹುಲ್ಲುಗಳು ಕಾಣೆಯಾದವು. ಅಲ್ಲಲ್ಲಿ ಬೇಲಿ-ಬದುಗಳು ಬಂದು ಗೋವುಗಳ ನಿಯಮಿತ ಹಾದಿಗಳೆಲ್ಲ ತುಂಡಾದವು. ಇದರಿಂದಾಗಿ ಗೋವುಗಳು ಹೊಟ್ಟೆ ಹೊರೆಯಲು ಬೇರೆ ಮಾರ್ಗೋಪಾಯಗಳನ್ನು ಕಂಡವು. ಅವುಗಳಲ್ಲೊಂದು ರಸ್ತೆ-ಮಾರ್ಗಗಳು.

 

ಹೌದು, ಕಾಡುಗುಡ್ಡಗಳಿಂದ ರಸ್ತೆಬದಿಗಳಿಗೆ ಬರುವಂತಾದವು ನಮ್ಮ ಗೋವುಗಳು. ಹಳ್ಳಿಗಳಲ್ಲಿ ನಿರಂತರವಾಗಿ ಊರ ದನಗಳು ಕಾಣುತ್ತಿದ್ದ ಜಾಗವೆಂದರೆ ರಸ್ತೆಗಳ ಬದಿಗಳಲ್ಲಿ,  ತರಕಾರಿ ಅಂಗಡಿಗಳ ಸನಿಹದಲ್ಲಿ ಅಥವಾ ಮರದ ನೆರಳಿನಲ್ಲಿ.

 

ಹಟ್ಟಿಯಿಂದ ಹೊರಟ ದನಗಳು ನೇರವಾಗಿ ಮುಖ್ಯರಸ್ತೆಗೆ. ಹೊಸ ಸ್ಥಳದಲ್ಲಿ ಹುಡುಕುತ್ತಾ, ಕಲೆಯುತ್ತಾ ಹೊಸ ಆಹಾರಗಳಿಗೆ ಒಗ್ಗಿಕೊಂಡವು. ತರಕಾರಿ ಮುಂಗಟ್ಟುಗಳ ಬಳಿ ಬಿದ್ದಿರುವ ಅರೆ ಕೊಳೆತ ತರಕಾರಿಗಳು, ಹೋಟೇಲುಗಳ ಪಕ್ಕದಲ್ಲಿ ಬಿದ್ದಿರುವ ಅಳಿದುಳಿದ ಊಟ ತಿಂಡಿಗಳು, ಬೇಕರಿಗಳ ಬಿಸ್ಕತ್ತು-ಚಾಕಲೇಟುಗಳನ್ನೇ ಪರಮಾನ್ನ ಮಾಡಿಕೊಂಡವು. ಪೇಟೆ-ರಸ್ತೆಗಳನ್ನು ಪರಿಚಯಿಸಿಕೊಂಡ ಗೋವುಗಳು, ಅವುಗಳನ್ನೇ ತಮ್ಮ ಗೋಮಾಳಗಳನ್ನಾಗಿ ಪರಿಗಣಿಸಿದವು.

 

ಈ ಬದಲಾವಣೆಯು ತಲೆತಲಾಂತರದಿಂದ ಬಂದ ಸಮತೋಲನವನ್ನು ಏರುಪೇರಾಗಿಸಿತು.

 

  • ಗೋಮಾಳಗಳು ಮರೆಯಾದುದರಿಂದ ಅದೆಷ್ಟೋ ಔಷಧೀಯ ಸಸ್ಯಗಳು ಗೋವುಗಳ ಆಹಾರವಾಗುತ್ತಿಲ್ಲ. ಇದರಿಂದಾಗಿ ಗೋವುಗಳ ಸ್ವಂತ ರೋಗನಿರೋಧಕ ಶಕ್ತಿಗಳು ಕಡಿಮೆಯಾಗಿ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲದೇ, ಅವು ಕೊಡುವ ಹಾಲಿನಲ್ಲೂ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ.
  • ನಿಃಸತ್ವವಷ್ಟೇ ಅಲ್ಲದೆ, ವಿಷಯುಕ್ತವಾದ, ರಸ್ತೆಬದಿಯ ಅರೆಕೊಳೆತ ತರಕಾರಿ ತಿನ್ನುವುದರಿಂದ, ಕೊಳಚೆ ನೀರು ಕುಡಿಯುವುದರಿಂದ ಗೋವುಗಳಿಗೂ, ಅವುಗಳ ಹಾಲನ್ನು ಕುಡಿವ ಕರು ಹಾಗೂ ಮನುಷ್ಯರಿಗೂ ಪರಿಣಾಮ.
  • ಅನ್ನಾಹಾರಗಳನ್ನು ಪ್ಯಾಕ್ ಮಾಡಲಾದ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಆಹಾರವಿದೆ ಎಂದು ತಿಳಿದ ಗೋವುಗಳು ಅವುಗಳನ್ನು ತಿನ್ನುತ್ತವೆ. ಈ ಪ್ಲಾಸ್ಟಿಕ್ ಗಳು ಕರುಳುಗಳಲ್ಲಿ ಸಿಕ್ಕಿಹಾಕಿಕೊಂಡು ಬೇರೆ ಆಹಾರಕ್ಕೂ ಅವಕಾಶವಿಲ್ಲದಂತೆ, ಮುಂದೆಯೂ ಹೋಗದೆ, ಹಿಂದೆಯೂ ಬರದೆ ಗೋವುಗಳಿಗೆ ಪ್ರಾಣವೇದನೆ ಸೃಷ್ಟಿಸುತ್ತವೆ.
  • ರಸ್ತೆಯ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತಗಳಗಿ ಗೋವುಗಳಿಗೂ ಮನುಷ್ಯರಿಗೂ ಪ್ರಾಣಾಪಾಯ.
  • ಸಾಯಂಕಾಲ ಪುನಃ ಹಟ್ಟಿಗೆ ಮರಳುವ ಶಿಸ್ತು ಹದತಪ್ಪುತ್ತವೆ. ರಾತ್ರೆಯ ತನಕವೂ ಜನನಿಬಿಡವಾಗಿರುವ ಪೇಟೆಯಲ್ಲಿ ಇದ್ದು, ಕ್ರಮೇಣವಾಗಿ ಇವುಗಳು ರಸ್ತೆಯ ದನಗಳೇ ಆಗಿ ಬಿಡುತ್ತವೆ.
  • ಇವುಗಳೆಲ್ಲದಕ್ಕೆ ಕಿರೀಟದಂತೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಗೊಂಡ ಒಂದು ಸಮಸ್ಯೆ ಎಂದರೆ ಗೋಕಳ್ಳರದು.

 

ಗೋಕಳ್ಳರ ಸುಲಭ ಗುರಿ – ಬೀದಿ ಗೋವುಗಳು

 

ಗೋಕಳ್ಳರ ಸುಲಭಗುರಿ ಈ ಬೀಡಾಡಿ ಗೋವುಗಳೇ. ಹಗಲಿಡೀ ಬೀದಿಬದಿಯಲ್ಲಿ ಆಹಾರ ಅರಸುತ್ತಾ ಕಾಲಕಳೆದು, ರಾತ್ರಿಯಾದರೆ ರಸ್ತೆಬದಿಗಳಲ್ಲೇ ಮಲಗಿರುತ್ತವೆ ಈ ಗೋವುಗಳು. ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಯಾರೊಬ್ಬ ಮನುಷ್ಯರ ಸುಳಿವೂ ಇರುವುದಿಲ್ಲ. ಇವುಗಳನ್ನು ಪ್ರೀತಿಸುವ ಯಾರೊಬ್ಬನೂ ಆ ಸಮಯದಲ್ಲಿ ಜೊತೆಗಿರುವುದಿಲ್ಲ.

 

ಇಂತಹ ಗೋವುಗಳನ್ನು ಬಲಾತ್ಕಾರದಿಂದ ಎಳೆದು ಪಿಕಪ್ ಅಥವಾ  ಲಾರಿಗಳಲ್ಲಿ ಅಮಾನುಷವಾಗಿ ತುಂಬಿ ಕಟುಕರಲ್ಲಿಗೆ ಸಾಗಿಸುತ್ತಾರೆ ಗೋಕಳ್ಳರು. ಕೆಲವೊಮ್ಮೆ ಗೋವುಗಳು ಪ್ರತಿರೋಧಿಸುವುದನ್ನು ತಪ್ಪಿಸಲು ಪ್ರಜ್ಞೆತಪ್ಪಿಸುವ ಔಷಧಿಗಳನ್ನು ಮೂಗಿಗೆ ಅಥವಾ  ಆಹಾರಕ್ಕೆ ಸಿಂಪಡಿಸಲಾಗುತ್ತದಂತೆ. ಬಾಯಿಯನ್ನು ಬಂಧಿಸಲು ಫೆವಿಕ್ವಿಕ್ ಅಂತಹ ಅಂಟನ್ನು ಬಾಯಿಗೆ ಕೊಡಲಾಗುತ್ತದೆ ಎಂದು ಪ್ರತೀತಿ.

 

ಅಬ್ಬಾ! ಕಟುಕರ ಹೃದಯವೇ.

 

ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ಹೊಸ ಪ್ರಯೋಗವೆಂಬಂತೆ, ಕುಮಟಾ ಬಳಿಯಲ್ಲಿ ದನಗಳಿಗೆ ಚೂರಿ ಇರಿಯುವ ಚಾಳಿ ಶುರುವಾಗಿದೆ. ಹಗಲಿನಲ್ಲೇ ಚೂರಿ ಇರಿತಕ್ಕೊಳಗಾದ ದನಗಳು ತಮ್ಮ ದೇಹದ ರಕ್ತವೆಲ್ಲ ಸ್ರಾವವಾಗಿ ರಾತ್ರಿವೇಳೆಗೆ ಸುಸ್ತಾಗಿರುತ್ತವೆ. ಇದರಿಂದಾಗಿ, ಶಕ್ತಿಹೀನ ಗೋವುಗಳು ಹೆಚ್ಚಿನ ಪ್ರತಿರೋಧವಿಲ್ಲದೆ ಸಾಗಾಣೆಗೆ ಸುಲಭವಾಗಿ ಬಗ್ಗುತ್ತವೆಂಬ ಕಾರಣಕ್ಕೆ ಈ ಕ್ರೌರ್ಯ ನಡೆಸುತ್ತಾರೆ ಕಟುಕರು.

 

ಅಮ್ಮಾ!

 

ಆ ಘಟನೆಯನ್ನು ಒಮ್ಮೆ ಕಲ್ಪಿಸಿಕೊಳ್ಳಿ.

 

ಜನನಿಬಿಡ ರಸ್ತೆಯ ಅಂಚಿನಲ್ಲೆಲ್ಲೋ ಒಂದು ಗೋಮಾತೆಯಿದೆ. ಯಾವನೋ ಒಬ್ಬ ಅದರ ಬಳಿ ನಡೆಯುತ್ತಿರುತ್ತಾನೆ. ಹಣ್ಣು, ತರಕಾರಿ ಏನನ್ನೋ ಕೊಡುತ್ತಾನೆಂದು ಭಾವಿಸಿದ ಗೋಮಾತೆ ತಲೆ ಅತ್ತ ತಿರುಗಿಸಿ ಕಾಯುತ್ತಿರುತ್ತದೆ. ಬಂದವನೇ ಎದೆಗೆ ಧಸಕ್ಕನೆ ಚೂರಿಯಿಂದ ತಿವಿಯುತ್ತಾನೆ. ಏನು ನಡೆಯುತ್ತಿದೆ ಎಂದು ಅರಿಯುವ ಮೊದಲೇ ರಕ್ತಸ್ರಾವ ಆರಂಭವಾಗುತ್ತದೆ. ಓಡಲೂ ಆಗದೇ,  ನಡೆಯಲೂ ಆಗದೇ ಅಲ್ಲೇ ಕುಸಿಯುತ್ತದೆ. ಹಾಗೆಯೇ ಸಾಯಂಕಾಲವಾಗುತ್ತದೆ. ನಿತ್ಯವೂ ಅಲ್ಲೇ ಇರುವ ದನವಾದುದರಿಂದ, ಆ ಪರಿಸರದ ಜನರೂ, ಹೊಟ್ಟೆ ತುಂಬಿರಬೇಕು, ಹಾಗಾಗಿ ಮಲಗಿರಬೇಕು ಎಂದು ತಿಳಿದುಕೊಂಡಾರು. ಪಾಪ! ಯಾರೊಬ್ಬರೂ ನೋಡಲು ಬರರು. ತನ್ನ ನೋವನ್ನು ಹೇಳಲೂ ಬಾರದು ಗೋವಿಗೆ.

 

ರಾತ್ರಿಯಾಗುತ್ತಿದ್ದಂತೆಯೇ,  ಗೋವಿಗದು ಕೊನೆಯ ರಾತ್ರಿ. ಕಟುಕರು ಬಂದು ಧರಧರನೆ ಅನಾದರದಿಂದ ಧರೆಯಿಂದೆಳೆದು ಮೃತ್ಯುವಾಹನಕ್ಕೆ ತುಂಬಿಸಿ ಕೊಂಡೊಯ್ಯುತ್ತಾರೆ.

 

ಕಟುಕರಾದರೂ ಪರವಾಗಿಲ್ಲ, ಈ ರೀತಿ ಹಿಂಸಿಸಿ ಕೊಲ್ಲುವ ಕಟುಕರಿದ್ದಾರಲ್ಲ, ಅವರ ನಿರ್ದಯಿ ಹೃದಯವು ಇಡೀ ಪ್ರಪಂಚದಲ್ಲಿ ಅತ್ಯಂತ ಕೊಳಕಿನ ಜಾಗವಲ್ಲವೇ?  ಇಂಥವರನ್ನು ಹಿಡಿದು, ಅವರು ಗೋವಿಗೆ ಕೊಡುವ ಅದೇ ಶಿಕ್ಷೆಗಳನ್ನು ಅವರಿಗೆ ಕೊಡುವಂತಾಗಬೇಕು. ಅಂತಹ ಒಂದು ಕಾನೂನನ್ನು ಈ ದೇಶವು ಕಾಣುವಂತಾಗಬೇಕು.

 

ಊರ ದನಗಳೆಂದರೆ ಶ್ರೇಷ್ಠ. ಅವುಗಳ ಹಾಲು ಅಮೃತ. ಗುಡ್ಡಗಳಲ್ಲಿರುವ ಕಾಡುವೃಕ್ಷಗಳನ್ನು ತಿಂದ ಗೋವಿನ ಹಾಲು ಇನ್ನೂ ಉತ್ತಮ. ಹಗಲಿಡೀ ಸೂರ್ಯನ ಬಿಸಿಲನ್ನು ಹೀರಿದ ಗೋವುಗಳ ಹಾಲು ಅದರಲ್ಲೂ ಶ್ರೇಷ್ಠ. ಈ ಚಿಂತನೆಯಿಂದ ನಮ್ಮ ಹಳಬರು ಗೋವುಗಳನ್ನು ಕಾಡಿಗೆ ಬಿಟ್ಟು ಮೇಯಲು ವ್ಯವಸ್ಥೆ ಮಾಡಿದ್ದರು. ಆದರೆ, ಕಾಲ ಬದಲಾದಂತೆ ‘ಗುಡ್ಡೆಗೆ ಬಿಡುವ’ ವ್ಯವಸ್ಥೆಯೂ ಬದಲಾಗಬೇಕಿದೆ.

 

ಗೋಕಳ್ಳರ ಹಾವಳಿ ಇರುವವರೆಗೂ ನಮ್ಮ ಗೋವುಗಳನ್ನು ನಾವು ರಕ್ಷಿಸೋಣ. ನಮ್ಮ ಗೋವುಗಳನ್ನು ನಮ್ಮ ಮನೆಯಲ್ಲೇ ಬೆಳೆಸುವ ವ್ಯವಸ್ಥೆಯಾಗಬೇಕಿದೆ. ಹಟ್ಟಿಯ ಪಕ್ಕದ ಬಿಡುಜಾಗದಲ್ಲಿ ಗೋವಿಗಾಗಿಯೇ ರಕ್ಷಿತಾರಣ್ಯ ಬೆಳೆಸಿ, ಅಲ್ಲೇ ಓಡಾಡಲಿ. ಸಾಯಂಕಾಲ ಪುನಃ ಹಟ್ಟಿಗೆ ಬರಲಿ, ನಮ್ಮೊಡನೆ ಸೇರಿಕೊಳ್ಳಲಿ.

 

ಪಾಪ, ನಮಗಾಗಿ ದುಡಿಯುವ ಗೋಮಾತೆಯನ್ನು ನಾವು ರಕ್ಷಿಸಬೇಡವೇ?

 

Author Details


Srimukha

Leave a Reply

Your email address will not be published. Required fields are marked *