ಮುಗಿಯಿತೇ ಕರ್ತವ್ಯ ಮತ ಚಲಾಯಿಸಿದಲ್ಲಿಗೇ?

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

ದೇಶದೆಲ್ಲೆಡೆ ನಡೆದ ಏಳು ಹಂತಗಳ ಚುನಾವಣೆ ಮುಗಿದಿದೆ. ಮತ ಚಲಾಯಿಸಿದವರು, ಮತ ಚಲಾಯಿಸಲಾಗದೇ ಉಳಿದವರು, ಮತ ಚಲಾಯಿಸದಿದ್ದವರು… ಹೀಗೆ ನಾವು ಈ ಯಾವುದೇ ಕೆಟಗರಿಯಲ್ಲಿದ್ದರೂ ಕೂಡ ಚುನಾವಣೆಯ ಫಲಿತಾಂಶ, ಅದರಿಂದಾಗುವ ಬದಲಾವಣೆಗಳು ಹಾಗೂ ಅದೆಲ್ಲದರ ಒಟ್ಟು ಪರಿಣಾಮ ಎಲ್ಲರ ಮೇಲೂ ಆಗಲಿದೆ. ಹಾಗಾಗಿ ನಮ್ಮೆಲ್ಲರ ಕಣ್ಣು ಕಿವಿಗಳು ಫಲಿತಾಂಶದ ದಿನಕ್ಕಾಗಿ ಕಾಯುತ್ತಿವೆ.

ಈ ಹೊತ್ತಿನಲ್ಲಿ ಯೋಚಿಸಬೇಕಾದ ಒಂದು ಅಂಶವಿದೆ. ನಾವು ಮತ ಚಲಾಯಿಸಿದ್ದೇವೆ. ಆದರೆ ಅಷ್ಟಕ್ಕೇ ಮುಗಿಯಿತೇ ನಮ್ಮ ಕರ್ತವ್ಯ?
ದೇಶದ ಪ್ರಜೆಗಳಾಗಿ ನಮ್ಮದೊಂದಷ್ಟು ಕರ್ತವ್ಯಗಳಿವೆ. ಈ ಮಣ್ಣಿನಲ್ಲಿ ಹುಟ್ಟಿ ಬೆಳೆದು ಬದುಕುತ್ತಿರುವ ನಮಗೆ ಒಂದಷ್ಟು ಋಣಗಳಿವೆ. ಮನುಷ್ಯಕುಲದಲ್ಲಿ ಹುಟ್ಟಿದ್ದರಿಂದ ಮಾನವತೆಯ ಒಂದಷ್ಟು ಹೊಣೆಗಳೂ ಇವೆ ನಮ್ಮ ಮೇಲೆ.

ವ್ಯವಸ್ಥೆಗಳನ್ನು ಒದಗಿಸುವುದು ಸರ್ಕಾರ ಮತ್ತು ಸರ್ಕಾರದೊಂದಿಗೆ ಕೆಲಸ ಮಾಡುವ ಸಂಸ್ಥೆಗಳ ಜವಾಬ್ದಾರಿಯಾದರೂ ಅವುಗಳು ಸುಗಮವಾಗಿ ನಡೆಯಲು ನಮ್ಮ ಸಹಾಯವೂ ಬೇಕಾಗುತ್ತದೆ. ಸಾಮಾನ್ಯ ಉದಾಹರಣೆ ನಗರಗಳಲ್ಲಿನ ತ್ಯಾಜ್ಯ ವಿಲೇವಾರಿ. ಎಂತಹದೇ ವ್ಯವಸ್ಥೆ ಮಾಡಿದರೂ ಸಂಜೆಗತ್ತಲಲ್ಲಿ ಬಂದು, ಕಂಡಕಂಡಲ್ಲಿ ಎಸೆಯುವ ಬುದ್ಧಿಯನ್ನು ನಾವು ಬಿಡುವುದೇ ಇಲ್ಲ. ಅದೇಕೆ ನಮಗೆ ಸ್ವಚ್ಛತೆ ಅನ್ನುವುದು ಸರ್ಕಾರ ಮಾಡಬೇಕಾದ ಕಾರ್ಯ ಅನಿಸುತ್ತದೆ? ದೊಡ್ಡಮಟ್ಟಿನ ವ್ಯವಸ್ಥೆ ಕಲ್ಪಿಸಬೇಕಾದ್ದು ಆಡಳಿತ ವ್ಯವಸ್ಥೆಯಿಂದಲೇ ಆಗಬೇಕಾದ್ದಾದರೂ ಎಲ್ಲೆಂದರಲ್ಲಿ ಎಸೆಯುವ ಅಭ್ಯಾಸ ನಮ್ಮ ಬೇಜವಾಬ್ದಾರಿತನವಲ್ಲವೇ? ಇದು ಒಂದು ಉದಾಹರಣೆ ಅಷ್ಟೇ.

ಅಶಿಸ್ತು, ಅಸಮಾಧಾನ, ಅಸಹಕಾರ, ಅನೀತಿ ಇದೆಲ್ಲ ನಮ್ಮ ಬದುಕಿನಲ್ಲಿ ಎಷ್ಟು ಸೇರಿಹೋಗಿವೆಯೆಂದರೆ ನಮಗೆ ಅವೆಲ್ಲವೂ ಸಹಜ ಅನಿಸಿಬಿಡುತ್ತವೆ. ದೇಶ ಎನ್ನುವುದು ನಮಗಿಂದು ಏನೂ ಅಲ್ಲ ಎನ್ನುವ ಸ್ಥಿತಿಗೆ ಬಂದಿದ್ದೇವೆ. ಇದಾಗಿರಲಿಲ್ಲ ಭಾರತೀಯರ ಮನಸ್ಥಿತಿ. ‘ನಾವು’ ಎಂದು ಬದುಕಿದವರು ನಮ್ಮ ಹಿಂದಿನವರು. ನಾವಿಂದು ‘ನಾವು’ ಎನ್ನುವುದನ್ನು ಕೊಂದುಕೊಳ್ಳುತ್ತಾ ‘ನಾನು’ ಎನ್ನುವುದರೊಳಗೆ ಬದುಕುತ್ತಿದ್ದೇವೆ. ನಾವು ಎನ್ನುವುದು ಇದ್ದರೆ ಮಾತ್ರ ನಾನು ಎನ್ನುವುದು ಉಳಿಯುವುದು ಎಂಬುದು ನಮಗೆ ನೆನಪಿಲ್ಲ. ಒಗ್ಗಟ್ಟಿನ ಆ ಪಾಠ ನೆನಪಿರುವುದಾದರೂ ಹೇಗೆ! ಪರೀಕ್ಷೆಗಾಗಿ ಕಲಿಯುವ, ಮುಗಿದ ಮೇಲೆ ಮರೆಯುವ ವ್ಯವಸ್ಥೆಯಲ್ಲವೇ ನಮ್ಮದು ಈಗ.

ಕಟ್ಟಡಗಳು, ಕಾರ್ಖಾನೆಗಳು, ವಿದ್ಯಾಸಂಸ್ಥೆಗಳು, ವ್ಯವಸ್ಥೆಗಳು ಎಲ್ಲವೂ ಇದ್ದಲ್ಲಿಗೆ ದೇಶ ಸಮೃದ್ಧವಾಯಿತು ಎಂದು ನಾವು ನಂಬುವುದಾದರೆ, ಬೇರುಗಳಿಲ್ಲದೇ ಗಿಡವೊಂದು ಹೂಬಿಡಬೇಕು, ಫಲಕೊಡಬೇಕು ಎಂದಂತೆಯೇ. ದೇಶ ಎನ್ನುವುದು ಪಂಥಗಳು, ಎಡ-ಬಲ ವಿಚಾರಧಾರೆಗಳು, ಪರ-ವಿರೋಧ ಹೋರಾಟಗಳನ್ನು ಮೀರಿದ್ದು. ಅದು ರಾಜಕೀಯವನ್ನು ಮೀರಿದ್ದು. ಅದರಲ್ಲೂ ನಮ್ಮ ದೇಶ! ಅದು ನೆಲದ ಮೇಲೆ ಗೆರೆ ಎಳೆದು ಹುಟ್ಟಿಸಿದ ದೇಶವಲ್ಲ. ನಾವು ಯಾರೂ ತಿಳಿಯದೇ ಇರುವಷ್ಟು ಹಿಂದಿನ ಕಾಲದಿಂದ ಈ ದೇಶ ನಿಂತಿದೆ. ಅದು ಧೃಡವಾಗಿ ನಿಂತಿದೆ. ಹಾಗೆ ನಿಂತಿರುವುದು ಮೌಲ್ಯಗಳ ಆಧಾರದಲ್ಲಿ. ಧರ್ಮದ ಬುನಾದಿಯಲ್ಲಿ.

ಇಂದು ನಾವು – ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂಬ ಹುಸಿ ಅಹಿಂಸೆಯ ಹಿಂದೆ ಮುಖ ಮುಚ್ಚಿಕೊಂಡಿದ್ದೇವೆ. ಸತ್ಯ ಕಣ್ಣೆದುರಿದ್ದರೂ ಯಾರನ್ನೋ ಓಲೈಸುವುದಕ್ಕೆ ಹಸಿ ಸುಳ್ಳಿನ ಮೊರೆಹೋಗುತ್ತಿದ್ದೇವೆ. ಈ ನೆಲದ್ದಲ್ಲದ್ದನ್ನು ಅನುಸರಿಸಿದರೆ ಗೌರವ ಎಂಬ ಹುಸಿ ನಂಬಿಕೆಯಲ್ಲಿದ್ದೇವೆ. ಈ ದೇಶ ಸಾವಿರಾರು ವರ್ಷ ನಡೆದುಬಂದದ್ದು ಧರ್ಮಾಧರ್ಮಗಳ ಆಧಾರದಲ್ಲಿ. ಮೌಲ್ಯಗಳು ನಮ್ಮ ಬದುಕಿನ ಬೆಳಕು. ಆದರೆ ನಮಗೆ ಕತ್ತಲಿನ ಸೆಳೆತ.

ಭಾರತ ಎನ್ನುವುದು ರಾಜಕೀಯವಾಗಿ ವಿಭಾಗಿಸಲ್ಪಟ್ಟ, ಬೇಲಿಗಳ ನಡುವೆ ಮಲಗಿರುವ ದೇಶವಲ್ಲ. ಪ್ರತಿಯೊಬ್ಬ ಪ್ರಜೆಯ ಒಳಗೆ ಎಚ್ಚರವಿರುವುದು ಭಾರತ. ಅದನ್ನು ಇಲ್ಲವಾಗಿಸುವ ಪ್ರಯತ್ನ ನಡೆದು ಬಂದಿದೆ ಶತಮಾನಗಳಿಂದ. ಅದರ ಪರಿಣಾಮವೇ ನಾವಿಂದು ದೇಶವಿರೋಧಿಗಳ ಬಗ್ಗೆಯೂ ಕರುಣೆದೋರುತ್ತೇವೆ, ನಮ್ಮ ಸೈನಿಕರ ಬಗ್ಗೆಯೂ ಅನುಮಾನಿಸುತ್ತೇವೆ! ನಮ್ಮವರು ಶತ್ರುಗಳಂತೆ ಕಾಣುತ್ತಾರೆ, ಶತ್ರುಗಳು ಆಪ್ತರಂತೆನಿಸುತ್ತಾರೆ. ಯಾರೋ ಬಿತ್ತಿದ ವಿಷಬೀಜ ನಮ್ಮನ್ನು ಒಳಗಿನಿಂದ ಕೊಲ್ಲುತ್ತಿದೆ ಎನ್ನುವುದೂ ನಮಗೆ ಅರಿವಾಗಿಲ್ಲ.

ದೇಶ ನಮ್ಮದು, ಆಳುವವರೇಕೆ ಹೊರಗಿನವರು? ಎಂಬ ಪ್ರಶ್ನೆ ಮೂಡಿದ್ದರಿಂದಲೇ ಅಲ್ಲವೇ ಸ್ವಾತಂತ್ರ್ಯ ಹೋರಾಟ ನಡೆದದ್ದು? ಇದೇ ಪ್ರಶ್ನೆ ಇನ್ನೊಮ್ಮೆ ಕೇಳಿಕೊಳ್ಳಬೇಕಿದೆ ಇಂದು. ದೇಶ ನಮ್ಮದು ಇದರ ಪ್ರತಿ ಏಳುಬೀಳುಗಳ ಭಾಗ ನಾವಲ್ಲವೇ? ಪ್ರತಿಯೊಂದರಲ್ಲಿಯೂ ನಮ್ಮ ಹಕ್ಕು ಹುಡುಕುವುದರಲ್ಲಿ ನಿಷ್ಣಾತರಾದ ನಾವು ಮೊದಲು ಕರ್ತವ್ಯಗಳನ್ನು ಅರಿತುಕೊಳ್ಳಬೇಕು.

ದೇಶದ ರಕ್ಷಣೆ ಗಡಿಗಳಲ್ಲಿ ಮಾತ್ರವಲ್ಲ, ನಮ್ಮ ಮನಸ್ಸಿನೊಳಗಿಂದ ಆಗಬೇಕಿದೆ. ದೇಶದ ಪ್ರಗತಿ ಸರ್ಕಾರದ ಕೆಲಸ ಮಾತ್ರವಲ್ಲ, ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಹೌದು. ನನ್ನ ಮನೆ, ನನ್ನ ಕುಟುಂಬ ಎನ್ನುವುದರೊಂದಿಗೆ ನನ್ನ ದೇಶ ಎನ್ನುವುದನ್ನೂ ನಾವು ಕಲಿಯಬೇಕಿದೆ. ಮತ ಚಲಾಯಿಸುವುದಷ್ಟೇ ಅಲ್ಲ ಕರ್ತವ್ಯ. ದೇಶದ ಉನ್ನತಿಯೆಡೆಗಿನ ಪ್ರತಿ ಹೆಜ್ಜೆಯಲ್ಲಿ ಒಟ್ಟಾಗಿ ನಿಲ್ಲುವುದೂ.

Author Details


Srimukha

Leave a Reply

Your email address will not be published. Required fields are marked *