ಅವರಂತಲ್ಲ, ನಮ್ಮಂತಾಗಬೇಕು ನಾವು!

ಅಂಕಣ ಇಳೆಯ ಹೊಳೆ : ಕವಿತಾ ಧನಂಜಯ ಜೋಯ್ಸ್

ಅಲ್ಲೊಬ್ಬ ರೈತ. ಸಮೃದ್ಧ ಭೂಮಿ, ಬೇಕಾದಷ್ಟು ನೀರು, ವಾಸಕ್ಕೆ ಯೋಗ್ಯ ಮನೆ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದ ಎಂಬಂತೆ ಹಳೆ ಅಡಿಕೆ ತೋಟಕ್ಕೆ ಬೇಸಾಯ ಮಾಡಿಕೊಂಡು ಅದರಲ್ಲೇ ಜೀವನ. ಅಲ್ಲೇ ಪಕ್ಕದಲ್ಲಿ ಇನ್ನೊಬ್ಬರ ಮನೆ. ಆತ ಸರ್ಕಾರಿ ನೌಕರ. ದಿನ ಬೆಳಗ್ಗೆ ರೆಡಿ ಆಗಿ ನೌಕರಿಗೆ ಹೋಗೋದು ಆತನ ಕೆಲಸ.

 

ಈ ರೈತ ಪ್ರತಿ ದಿನ ನೌಕರ ಕೆಲಸಕ್ಕೆ ಹೊರಡೊದನ್ನ ನೋಡಿ ಮನದಲ್ಲೇ ಕೊರಗಿ ಅಸೂಯೆ ಪಡುತ್ತಿದ್ದ. ಅವನಾದರೆ ಸೂಟು ಬೂಟು ಹಾಕಿ ನೌಕರಿ ಮಾಡಿ ತಿಂಗಳ ಸಂಬಳ ಎಣಿಸುತ್ತಾನೆ. ನಾನಾದರೆ ಮೈ ಕೈ ಕೆಸರು ಮಾಡಿ ದುಡಿಬೇಕು. ವರ್ಷಕೊಮ್ಮೆ ಬರುವ ಪಸಲಿಗೆ ಚಾತಕ ಪಕ್ಷಿಯಂತೆ ಕಾಯಬೇಕು. ನೌಕರಿಯೂ ಇಲ್ಲ ಸಂಬಳವೂ ಇಲ್ಲ. ಹೀಗೆ ಮನದಲ್ಲೇ ಗೊಣಗುತ್ತಾ ಪ್ರತಿ ದಿನ ಇದೇ ರಾಗ ಇದೇ ಹಾಡು.


ಒಂದು ದಿನ ರೈತನ ಗೆಳೆಯನೊಬ್ಬ ಆತನ ಮನೆಗೆ ಬಂದ. ರೈತನ ಚಿಂತೆಗೆ ಕಾರಣ ಕೇಳಿದ. ರೈತ ತನ್ನ ಅಳಲನ್ನು ತೋಡಿಕೊಂಡ. ಅದಕ್ಕೆ ಆತನ ಗೆಳೆಯ ನಿನ್ನ ಸಮಸ್ಯೆಗೆ ನನ್ನ ಬಳಿ ಒಂದು ಉಪಾಯವಿದೆ ಹೇಳುವೆ, ಇದರಿಂದ ನೀನು ತಿಂಗಳ ಸಂಬಳವನ್ನು ಪಡೆಯಬಹುದು ಎಂದ. ರೈತ ನಗುಮೊಗದಿಂದ ಕೇಳಿಸಿಕೊಳ್ಳಲಾರಂಭಿಸಿದ. ನೋಡು ಆತ ಇದ್ದಕಿದ್ದಂತೆ ನೌಕರಿ ಹಿಡಿಯಲಿಲ್ಲ. ಕಷ್ಟ ಪಟ್ಟು ಓದಿದ, ಅದಕ್ಕೆ ಒಂದಷ್ಟು ಹಣ ಖರ್ಚು ಮಾಡಿದ. ಅನಂತರ ನೌಕರಿ ಸಂಪಾದಿಸಲು  ಅಲ್ಲಿ ಇಲ್ಲಿ ಅಂತ ತಿರುಗಿ ಒಂದಷ್ಟು ಬಂಡವಾಳ ಹಾಕಿದ. ಕೆಲಸ ಗಿಟ್ಟಿಸಿಕೊಂಡ. ಈಗ ಸಂಬಳ ಪಡೆಯುತ್ತಿದ್ದಾನೆ. ನೀನು ಕೂಡ ಒಂದಷ್ಟು ಬಂಡವಾಳವನ್ನು ನಿನ್ನ ಜಮೀನಿನಲ್ಲಿ ಸರಿಯಾದ ರೀತಿ ಹಾಕಿದರೆ ನೀನು ತಿಂಗಳ ಸಂಬಳ ಪಡೆಯಬಹುದು. ಈಗ ನಿನ್ನ ಜಮೀನನಲ್ಲಿ ಅಡಿಕೆ ಮರ ಹೇಗೂ ಇದೆ. ಅದಕ್ಕೆ ಒಂದಷ್ಟು ಕಾಳುಮೆಣಸು ಹಬ್ಬಿಸು. ಮದ್ಯೆ ಮದ್ಯೆ ಕಾಫಿಗಿಡ, ಏಲಕ್ಕಿ, ಲವಂಗ ಹೀಗೆ ಗಿಡ ನೆಟ್ಟು ಬೆಳೆಸು. ತೋಟದ ಸುತ್ತ ಒಂದಷ್ಟು ಹಣ್ಣು ಹಂಪಲು ಗಿಡ ಬೆಳೆಸು. ನೆರಳಿಗೂ ಆಯಿತು, ಜೊತೆಗೆ ಆ ಹಣ್ಣನ್ನು ಮಂಗ ತಿನ್ನೋಕೆ ಶುರು ಮಾಡಿದ್ರೆ ನಿನ್ನ ತೋಟಕ್ಕೆ ಅದರ ಕಾಟವು ಇರೋದಿಲ್ಲ. ಮನೆ ಸುತ್ತ ಅಲ್ಲಲ್ಲಿ ತೆಂಗು, ಬಾಳೆ ನೆಡು. ಮನೆಗೂ ಬಳಸಿ ಉಳಿದ್ದರಲ್ಲಿ ಒಂದಷ್ಟು ಆದಾಯ ಬಂತು. ಅದು ಅಲ್ಲದೆ ಆ ಗದ್ದೆಯನ್ನು ಹಾಳು ಬಿಟ್ಟಿರುವೆಯಲ್ಲ, ಅಲ್ಲಿ ಬತ್ತ ನಾಟಿ ಮಾಡು. ಮನೆ ಬಳಕೆಗೆ ಅಕ್ಕಿಯೂ ಆಯಿತು. ದನಗಳಿಗೆ ಹುಲ್ಲು ಆಯ್ತು. ಇನ್ನು ಗದ್ದೆ ಉಳಿದರೆ ಕಬ್ಬು ಅರಿಶಿನ ಶುಂಠಿ ಹೀಗೆ ನೀನೇ ಕೆಲಸ ಮಾಡಿ ಕೊಳ್ಳವಷ್ಟು  ಪ್ರಮಾಣದ ಉಪಬೆಳೆ ಬೆಳದುಕೊ. ಹೀಗೆ ಉಪಬೆಳೆಗಳು ಹೆಚ್ಚಾದಂತೆ ಒಂದಲ್ಲ ಒಂದು ಬೆಳೆ ಪ್ರತಿ ತಿಂಗಳು ನಿನ್ನ ಆದಾಯದ ಮೂಲವಾಗುವುದು. ಅವನಂತೆ ನಿನಗೂ ದಿನ ಪೂರ್ತಿ ಕೆಲಸವೂ ಆಯ್ತು, ತಿಂಗಳ ಸಂಬಳವೂ ಆಯ್ತು ಎಂದು ಗೆಳಯ ಒಳ್ಳೆಯ ಸಲಹೆ ಕೊಟ್ಟ.


ಇದನ್ನೆಲ್ಲ ಕೇಳಿಸಿಕೊಂಡ ರೈತ ಅದಕೊಂದಷ್ಟು    ಸಬೂಬು ಹೇಳಿದ. ಮಂಗನ ಕಾಟ, ಕೆಲಸದವರ ಸಮಸ್ಯೆ ಹೀಗೆ ಹಲವು ಕಾರಣ. ನೋಡು ಈ ಎಲ್ಲ ಸಮಸ್ಯೆ ಆತನ ನೌಕರಿಯಲ್ಲೂ ಇದೆ. ಸಮಸ್ಯೆ ಇಲ್ಲದ ದುಡಿಮೆ ಇಲ್ಲ. ಆತ ಬೇರೆಯವರ ಕೈ ಕೆಳಗೆ ದುಡಿಯುವ ನೌಕರ. ಆದರೆ ನೀನು ಹಾಗಲ್ಲ. ನಿನ್ನ ಜಮೀನಿಗೆ ನೀನೇ ಅರಸ. ನೀನೇ ನಾಲ್ಕಾರು ಜನರಿಗೆ ಕೆಲಸ ಕೊಡುವುದರ ಜೊತೆಗೆ ತಿಂಗಳ ಸಂಬಳವನ್ನು ಎಣಿಸೋ ಯಜಮಾನ. ಎಲ್ಲ ಸಮಸ್ಯೆಗೂ ಒಂದು ಪರಿಹಾರವಿದೆ. ಸುಮಾರು 10ಕ್ಕೂ ಹೆಚ್ಚು ಉಪಬೆಳೆ ನಿನ್ನ ಬಳಿ ಇದ್ದರೆ ವರ್ಷ ಪೂರ್ತಿ ಅವನಂತೆ ನಿನಗೂ ನೌಕರಿ ಇದ್ದಂತೆ.  ಇಷ್ಟೆಲ್ಲ ಜಮೀನು, ನೀರು ಸೌಕರ್ಯ ವಿದ್ದು ಅಲ್ಲಿ ದುಡಿಯದೇ, ಆತನನನ್ನು ನೋಡಿ ನೀನು ಕೊರಗುವುದರಲ್ಲಿ ಯಾವ ಅರ್ಥವು ಇಲ್ಲ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಸುತ್ತಿದಂತೆ ಆಯ್ತು ನಿನ್ನ ಕತೆ ಎಂದು ಗೆಳೆಯ ವಿವರವಾಗಿ ಹೇಳಿ ರೈತನ ಕಣ್ಣು ತೆರೆಸಿದ. ರೈತ ಇದನೆಲ್ಲ ಯೋಚಿಸಿ ಮನದಲ್ಲೇ ಮುದಗೊಂಡ.


ಈ ಮೇಲಿನ ಕತೆ  ಆ ರೈತನ ಕತೆ ಮಾತ್ರವಲ್ಲ. ನಮ್ಮ ನಿಮ್ಮೆಲ್ಲರ ಮನದೊಳಗಿನ ಭಾವ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ನಮಗೆ. ಸರಕಾರಿ ಕೆಲಸ ಅಥವಾ ಇನ್ಯಾವುದೋ ನೌಕರಿ ಎಂದ ಕೂಡಲೇ ಒಳ್ಳೆ ಸಂಬಳ ಕೈ ತುಂಬಾ ದುಡ್ಡು ಎಣಿಸೋದು, ಅನ್ನೋದು ಮಾತ್ರ ನಮ್ಮ ಕಣ್ಣಿಗೆ ಕಾಣೋ ಸತ್ಯ. ನಮ್ಮಿಂದ ಅದು ಸಾಧ್ಯವಿಲ್ಲ ಅನ್ನೋ ಕೀಳರಿಮೆ. ಆದರೆ ಇರುವ ಅವಕಾಶವನ್ನು ಬಳಸಿಕೊಂಡು ಕಷ್ಟ ಪಟ್ಟು ದುಡಿದರೆ ಯೋಜನಾಬದ್ಧವಾಗಿ  ಶ್ರಮ ವಿನಿಯೋಗಿಸಿದರೆ ನಾವು ಆ ಯಾವ ನೌಕರಿಯವರಿಗೂ ಕಮ್ಮಿ ಇಲ್ಲ. ನಮ್ಮೊಳಗಿನ ಕೀಳರಿಮೆ ಹೋಗಿ, ಆ ರೈತನ ಮನೆಗೆ ಬಂದ ಗೆಳೆಯನಂತೆ ನಮ್ಮ ಮನದೊಳಗೂ ಸಾಧಿಸುವ ಛಲಗಾರ, ಆತ್ಮಾಭಿಮಾನವೆಂಬ ಗೆಳೆಯನ ಆಗಮನವಾಗಬೇಕು. ಈ ವಾರ್ಷಿಕ ಬೆಳೆಗಳು ನೌಕರರಿಗೆ ಬರೋ ವಾರ್ಷಿಕ ಭತ್ಯೆಯಂತೆ. ಈ ಉಪಬೆಳೆಗಳು ತಿಂಗಳ ಸಂಬಳದಂತೆ. ಕಾಲಕ್ಕೆ ಅನುಗುಣವಾಗಿ ನಾವು ಒಂದಷ್ಟು ಮಾರ್ಪಾಟುಗಳನ್ನು ಅನುಸರಿಸಿಕೊಂಡು ಸಾಧಿಸಬೇಕು. ಅವರಂತೆ ನಾವಿಲ್ಲ ಅನ್ನೋ ಕೊರಗನ್ನು ಬಿಟ್ಟು ಅವರಂತೆ ನಾವು ನಮ್ಮತನದಲ್ಲಿ ಹೇಗೆ ಸಾಧಿಸಲು ಸಾಧ್ಯ ಎನ್ನುವ ಚಿಂತನೆಯತ್ತ ಮುಖ ಮಾಡೋಣ.

Author Details


Srimukha

Leave a Reply

Your email address will not be published. Required fields are marked *