ನಾಗಿಮಳ್ಳಿಯೆಂಬ ತಾಯಿ

ಅಂಕಣ ದಣಪೆ ದಾಟಿದ ಸಾಲು : ಶುಭಶ್ರೀ ಭಟ್ಟ

ಅದೊಂದು ದಿನ ಶನಿವಾರ ಮಧ್ಯಾಹ್ನ ನಾನು ‘ಚಂಪಕ’, ಅಜ್ಜಿ ‘ಸುಧಾ’ ಪತ್ರಿಕೆಯ ಅಕ್ಷರಗಳನ್ನೆಲ್ಲಾ ಗುಕ್ಕು ಹಾಕಿಕೊಳ್ಳುತ್ತಿದ್ದೆವು. ನನ್ನ ಕೈಯಲ್ಲಿ ಚಂಪಕವಿದ್ದರೂ ಕಣ್ಣೆಲ್ಲಾ ಸುಧಾ ಪತ್ರಿಕೆಯ ಮೇಲೆ. ನನಗಾಗಲೇ ಅದರಲ್ಲಿ ಬರುತ್ತಿದ್ದ ಕಥೆಗಳನ್ನು ಓದುವ ಹುಚ್ಚು. ಆದರೆ ಚಿಕ್ಕಮಕ್ಕಳು ದೊಡ್ಡವರ ಕಥೆ ಪುಸ್ತಕ ಓದಬಾರದು ಎನ್ನುವುದು ನಮ್ಮಮ್ಮ ಮಾಡಿರುವ ಮಳ್ಳು ರೂಲ್ಸುಗಳಲ್ಲೊಂದಾಗಿತ್ತು.

 

‘ಗೌರೀಶ್ ಕಾಯ್ಕಿಣಿ’,  ‘ಯಶವಂತ್ ಚಿತ್ತಾಲ’ ಮತ್ತು ‘ನಾ. ಡಿಸೋಜ’ ಇನ್ನೂ ಅನೇಕರ ಬರಹಗಳನ್ನು ನಮ್ಮ ಊರಿನವರೆಂಬ ಹೆಮ್ಮೆಯಿಂದ ಓದಿದ್ದನ್ನೇ ನಾಲ್ಕೈದು ಬಾರಿ ಓದಿದ ಅಸ್ಪಷ್ಟ ನೆನಪು. ನಾನೂ ಹಣುಕಿ ಹಾಕಿ ಓದಲು ಕುಳಿತಿದ್ದೆ ಅಜ್ಜಿಗೆ ಗೊತ್ತಾಗದ ಹಾಗೆ. ಆಗ ಹಠಾತ್ತನೇ ಕೆಟ್ಟ-ಕೆಟ್ಟ ಪದಗಳ ಬೈಗುಳದ ರಾಗ ಪುಂಖಾನುಪುಂಖವಾಗಿ ಕೇಳಿಬರತೊಡಗಿದಾಗ ಅದು ನಾಗಿಮಳ್ಳಿಯ ದನಿಯೆಂಬುದು ನಮ್ಮೂರಲ್ಲಿ ಅಂಡು ತೊಳೆಸಿಕೊಳ್ಳುತ್ತಿದ್ದ ಮಗುವಿಗೂ ಗೊತ್ತಿದ್ದ ಸತ್ಯವಾಗಿತ್ತು. ಅಜ್ಜಿ ಸಿದ್ದೆಯಲ್ಲಿ ಅಕ್ಕಿಯನ್ನು ತಂದು ಅವಳಿಗೆ ಕೊಟ್ಟು ಬಾ ಎಂದು ಕೊಟ್ಟರು. ನಾನು ಅಜ್ಜಿ ಆಗಾಗ ಮೆಲುಕುತ್ತಿದ್ದ ಪಾರ್ಲೆಜಿ ಬಿಸ್ಕಿಟನ ಪೊಟ್ಟಣವನ್ನು ಕೊಂಡೊಯ್ದಿದ್ದೆ ಅಜ್ಜಿಗೆ ಕಾಣದಂತೆ. ದಣಪೆ ಕೋಲು ತೆಗೆದು ದೂರದಲ್ಲಿ ಬರುತ್ತಿದ್ದ ಅವಳಿಗಾಗಿ ಕಾಯತೊಡಗಿದೆ. ವರುಷಗಟ್ಟಲೇ ನೀರು ಕಾಣದ ತಲೆಗೂದಲುಗಳೆಲ್ಲಾ ಸೆಟೆದುಕೊಂಡು ಗಂಟಾಗಿತ್ತು. ಅವಳುಟ್ಟ ಅರ್ಧ ಹರಿದ ಸೀರೆಗೆ ಅದೆಷ್ಟು ಶತಮಾನವಾಗಿತ್ತೋ ನಾರುತ್ತಿತ್ತು. ಕೈಯಲ್ಲಿ ನಾಲ್ಕೈದು ಪಾಚಿಗಟ್ಟಿದಂತಹ ಕೈಚೀಲಗಳು, ಸರ್ಪದ ಕಣ್ಣಂತೆ ತೀಕ್ಷ್ಣವಾಗಿದ್ದ ಆ ಕಣ್ಣುಗಳಲ್ಲಿ ಧುಮ್ಮಿಕ್ಕುವ ಜಲಪಾತ ಎಂದೋ ಇಂಗಿಹೋದ ಕುರುಹು. ಅವಳನ್ನು ನೋಡ್ತಾ ಯೋಚನೆಯಲ್ಲಿ ಮೈಮರೆತಿದ್ದ ನನ್ನನ್ನು ಎಚ್ಚರಿಸಿದ್ದು ಅವಳ ಆ ಕಟುದನಿ. ‘ಏ ಬೆಳ್ಳಕ್ಕಿ ಕೂಸೇ,  ಈ ಗಂಡ್ಸ್ರು ಯಾರೂ ಸಮಿಲ್ಲ,ಎಲ್ರೂವ ***** ಮಕ್ಳೆಯಾ. ಹುಶಾರಿ ಗುತ್ತಾಯ್ತೆ?’ ಎಂದವಳ ದನಿಯಲ್ಲಿ ಕೇಳಿಸಿದ್ದು ಶುದ್ಧ ಅಂತಃಕರಣದ ಭಾವ, ಉಳಿದ ಕೆಟ್ಟ ಶಬ್ಧ ಕಿವಿಯ ತಮಟೆಯನ್ನು ಕೂಡ ತಾಕಿರಲಿಲ್ಲ. ಆದರೆ ಆ ಕಾಳಜಿ ಹೃದಯಕ್ಕಿಳಿದಿತ್ತು. ನೋಡಿದಾಗ ಅವಳಾಗಲೇ ಮುಂದಿನ ಮನೆ ದಣಪೆ ದಾಟಿದ್ದಳು ಅದೇ ಕರ್ಕಶವಾದ ಕೆಟ್ಟ ಶಬ್ಧಗಳ ನಿಘಂಟನ್ನು ಹರಿಬಿಟ್ಟು. ನಿಡುಸುಯ್ದು ಮನೆಗೆ ಬಂದೆ, ಮನವೆಲ್ಲಾ ಅಲ್ಲೇ.

‘ಅವ್ಳಿಗೆಂತಾ ಆಯ್ದು? ಎಂತಕ್ ಹಾಂಗೆಲ್ಲಾ ಕೆಟ್ಟಭಾಷೆ ಮಾತಾಡ್ತು? ಎಲ್ರಿಗೂ ಬೈಯ್ತಾ ತಿರ್ಗ್ತು?’ ಎಂದು ಅಜ್ಜಿಯ ಬಳಿ ಕೇಳಿದೆ. ನನ್ನ ಸಪ್ಪಗಾದ ಮುಖ ಕಂಡು ಅಜ್ಜಿಯೂ ಅವಳ ಕಥೆ ಹೇಳಲು ಬಯಸಿ ಜಗುಲಿಯಲ್ಲಿ ಕುಳಿತಳು. ಅಮ್ಮನೂ ಪುರುಸೊತ್ತು ಮಾಡಿಕೊಂಡು ಕೇಳಲು ಬಂದಳು. ಅಮ್ಮನ ಜೊತೆಗೆ ಬಂದ ಅವಳ ಬಾಲ ಅಂದರೆ ನನ್ನ ಪುಟ್ಟ ತಂಗಿಗೆ ಇದೆಲ್ಲಾ ಕೇಳುವ ವಯಸ್ಸಲ್ಲ ಎಂಬ ಅಮ್ಮನ ಮತ್ತೊಂದು ರೂಲ್ಸಿನ ಅನ್ವಯ ಪುಸಲಾಯಿಸಿ ಪಕ್ಕದ ಮನೆ ಶೆಟ್ರ ಕಿರಿಮಗಳ ಜೊತೆಗೆ ಆಡಿಕೊಳ್ಳಲು ಓಡಿಸಾಯ್ತು. ಅವಳನ್ನು ಬಿಟ್ಟು ಬರಲು ಅಪ್ಪ. ಅಪ್ಪ-ಮಗಳು ತೋಟದ ದಾರಿಯಲ್ಲಿ ಹೊರಟದನ್ನು ಮತ್ತೊಮ್ಮೆ ಕಣ್ಣು ಕಿರಿದಾಗಿಸಿ ನೋಡಿ ಖಚಿತಪಡಿಸಿಕೊಂಡ ಅಜ್ಜಿ ಕಥೆಯನ್ನು ಶುರು ಹಚ್ಚಿಕೊಂಡಳು.(ಅಜ್ಜಿಯ ಹಳೆಯ ಹವಿಗನ್ನಡ ಉಳಿದ ಓದುಗರಿಗಾಗಿ ಬದಲಾಯಿಸಲಾಗಿದೆ)

 

“ಅವಳ ಹೆಸರು ನಾಗಮ್ಮ. ದಲಿತ ಜನಾಂಗದ ಹೆಣ್ಣುಮಗಳು. ಅವಳೇನೂ ಹುಟ್ತಾ ಹುಚ್ಚಿಯಾಗಿರಲಿಲ್ಲ. ಅವಳಿಗೂ ನಮ್ಮೆಲ್ಲರಂತೆ ಪುಟ್ಟ ಸಂಸಾರವಿತ್ತು. ಗಂಡನೆಂಬುವವ ಹುಟ್ಟಾ ಕುಡುಕನಾಗಿದ್ದರೂ, ಅವಳ ಕೂಲಿನಾಲಿಯಿಂದ ಸಂಸಾರದ ಸರಿಗಮಪ ಸಾಗಿತ್ತು. ಮದುವೆಯಾಗಿ ವರುಷವೆರಡು ಕಳೆದರೂ ಮಕ್ಕಳಾಗದೇ ಇದ್ದುದು ಆಗಿನ ಕಾಲಕ್ಕೆ ಬಲುದೊಡ್ಡ ಚಿಂತೆಯ ವಿಷಯವಾಗಿತ್ತು. ಇವಳೋ ಕಂಡವರ ಮಾತನ್ನೆಲ್ಲಾ ಕೇಳಿಕೊಂಡು ಕಂಡಕಂಡ ದೇವರಿಗೆ ಹಣ್ಕಾಯಿ ಹರಕೆ ಹೊತ್ತಳು. ಅವರ ದೈವಕ್ಕೆ ಕೋಳಿಬಲಿ ಕೊಟ್ಟಳು. ಭಟ್ಟರ ಮನೆ ನಾಗರಕಟ್ಟೆಗೆ ಬಾಳೆಕೊನೆ, ಹಾಲು ಎಲ್ಲಾ ಕೊಟ್ಟಳು. ಕೊನೆಗೊಂದು ದಿನ ದೇವರು ಕಣ್ಬಿಟ್ಟಂತೆ ಗರ್ಭಕಟ್ಟಿತು. ತನ್ನ ಗಂಡಸ್ತನದ ಮೇಲೇ ನಂಬಿಕೆಯಿಲ್ಲದ ಅವಳ ಗಂಡನಿಗೆ, ಆ ಗರ್ಭದ ಮೇಲೆ ಸಂಶಯ. ಅವಳು ಕೆಲಸ ಮಾಡಲು ಹೋಗುತ್ತಿದ್ದ ಗಂಡಸರ ಜೊತೆಗೆಲ್ಲಾ ಸಂಬಂಧ ಕಟ್ಟಿ ಬೈಯುತ್ತಿದ್ದ. ಬಸಿರ ಬಯಕೆಯನ್ನೊತ್ತ ಚೊಚ್ಚಲ ಬಸುರಿ, ಕಳಂಕದ ಮಾತನ್ನೆಲ್ಲಾ ಬದಿಗೊತ್ತಿ ಹೆರಿಗೆಯ ದಿನದ ತನಕ ಕೆಲಸ ಮಾಡುತ್ತಾ ಒದ್ದಾಡಿತು. ತನ್ನದೇ ಪಡಿಯಚ್ಚಿನಂತೆ ಗುಂಡುಕಲ್ಲಿನ ಹಾಗೆ ಹುಟ್ಟಿದ ಮಗನನ್ನು ನೋಡಿದ ಮೇಲೆ ಅವಳ ಗಂಡ ತೆಪ್ಪಗಾಗಿದ್ದ, ಅವಳೂ ನಿರಾಳಾದಳು. ಅದಾದಮೇಲೆ ಮತ್ತೆರಡು ಹುಟ್ಟಿದರೂ, ಅವರ್ಯಾರೂ ಹೆಚ್ಚು ದಿನ ಬದುಕಲೇ ಇಲ್ಲ. ಆದರೆ ಅದರ ಬಿಸಿಕೆಂಡದಂತಹ ನೋವು ಹೆತ್ತಕರುಳನ್ನು ನಿಧಾನಕ್ಕೆ ಸುಡುತ್ತಿತ್ತು. ಎಲ್ಲರೆದುರಿಗೆ ಸಹಜವಾಗಿದ್ದರೂ ಒಳಗೊಳಗೆ ಕುಸಿದಿದ್ದಳಾಕೆ. ಅದಕ್ಕೆಲ್ಲಾ ತಂಪೆರೆಯುವಂತೆ ಹುಟ್ಟಿತ್ತು ಮತ್ತೊಂದು ಮಗು, ಹೆಣ್ಮಗು.

ನೆಪಮಾತ್ರದ ಬಾಣಂತನ ಮುಗಿಸಿ ಮತ್ತೆ ದುಡಿಯತೊಡಗಿದಳು ಆ ಹೆಣ್ಣು. ಮಗಳೂ ಬೆಳೆಯತೊಡಗಿದಂತೆ ಅವಳನ್ನೂ ಕೆಲಸದ ಜಾಗಕ್ಕೆ ಕರೆದೊಯ್ಯತೊಡಗಿದಳು. ಆ ಜೀವಕ್ಕೆನೂ ಗೊತ್ತಿತ್ತು ಅಲ್ಲೊಂದು ಆಘಾತ ಕಾದಿದೆಯೆಂದು! ಅವಳ ಮಗಳು ಮರಳದಿಣ್ಣೆಯ ಬಳಿ ಆಡುತ್ತಿದ್ದಾಗ ಅಲ್ಲಿಗೆ ಅತ್ಯಂತ ರಭಸವಾಗಿ ಬಂದು ಗುದ್ದಿದ ವಾಹನಕ್ಕೆ, ಆ ಪುಟ್ಟ ಜೀವ ಹೆತ್ತೊಟ್ಟೆಯ ಮುಂದೆಯೇ ಕೊನೆಯುಸಿರಿಟ್ಟಿತು. ಕಣ್ಣಲ್ಲಿ ನೀರೇ ಬತ್ತಿದಂತಾಗಿ ಶಿಲೆಯಾದಳು ನಾಗಮ್ಮ. ಅನಿಷ್ಟಕ್ಕೆಲ್ಲಾ ಶನಿಶ್ವರನೇ ಹೊಣೆಯೆಂಬಂತೆ ಇವಳನ್ನೇ ದೂಷಿಸಿ, ಗಂಡನೂ ಮಗನೂ ಇವಳನ್ನು ಮನೆಯಿಂದ ಹಾಕಿದ್ದೇ ನೆಪವಾಗಿ ಪೂರ್ಣಹುಚ್ಚಿಯಾದಳು. ಅವಳು ದುಃಖವೆಲ್ಲಾ ಕಣ್ಣೀರಾಗುವ ಬದಲು ಕೆಟ್ಟಶಬ್ಧದ ಹೊಳೆಯಾಗಿ ಗಾಡಿಯೋಡಿಸುವವರ ಮೇಲೆಲ್ಲಾ ಹರಿದಿತ್ತು.

 

ಅವಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಅವಳ ಬಳಿಹೋದ ಗಂಡಸರ ಮೇಲೆ ಅವಳಿಗೆ ಸಹಜ ದ್ವೇಷ ಶುರುವಾಯಿತು. ಅವಳನ್ನು ದಿಟ್ಟಿಸಿ ನೋಡುವ ಗಂಡಸರನ್ನೆಲ್ಲಾ ವಾಚಾಮಗೋಚರ ಬೈಯತೊಡಗಿದಳು.” ಎಂದು ಅಜ್ಜಿ, ನಾಗಮ್ಮನೆಂಬುವವಳು ನಾಗಿಮಳ್ಳಿಯಾಗಿ ಬದಲಾದ ಕಥೆಯನ್ನು ಹೇಳಿ ಮುಗಿಸಿದಾಗ ನಾನು, ಅಮ್ಮ ಅರಿಯದ ಭಾವದಿಂದ ಮೂಕರಾಗಿದ್ದೆವು. ಅದಾದ ನಂತರ ಅವಳು ಅನೇಕ ಬಾರಿ ನಮ್ಮನೆಗೆ ಬೇಡಲು ಬಂದಿದ್ದಳು. ಮುಂಚೆ ಅವಳ ಕೊಳಕು ಭಾಷೆಗೆ ಕಿವಿಮುಚ್ಚಿಕೊಳ್ಳುತ್ತಿದ್ದ ನಾನು ಅವಳೆದುರು ಹೋಗಲೇ ಹೆದರುತ್ತಿದ್ದೆ. ಆದರವಳ ಕಥೆ ಕೇಳಿದ ಮೇಲೆ ಅವಳಾಡುವ ಶಬ್ಧ ನನಗೆಂದೂ ಸಹನೀಯವಾಗದಿದ್ದರೂ ಕೇವಲ ಹೆತ್ತೊಟ್ಟೆಯ ಕಣ್ಣೀರಂತೆ ಅನಿಸಿ ಮನ ಒದ್ದೆಯಾಗುತ್ತಿತ್ತು. ಅವಳು ಸತ್ತು ಐದಾರು ವರುಷವಾಯ್ತು ಈಗ. ಆದರೆ ನನ್ನ ಕಿವಿಯಲ್ಲಿಂದೂ ಅವಳ ಕಣ್ಣೀರಿನ ದನಿಯಿದೆ.

Author Details


Srimukha

Leave a Reply

Your email address will not be published. Required fields are marked *