ನಗರದ ನೀರಡಿಕೆ ನೀಗಲು ನಾಳೆಗೂ  ನೀರು ಬೇಡವೇ?

ಅಂಕಣ ಬಗೆಯೆಷ್ಟೋ ಮೊಗವಷ್ಟು : ಗಜಾನನ ಶರ್ಮಾ ಹುಕ್ಕಲು

ಮಗೂ, ಬದುಕಿಗೊಂದು ಅರ್ಥವೇ ಇಲ್ಲದೇ ವ್ಯರ್ಥವಾಗಿ ನಲ್ಲಿಯಿಂದ ತೊಟ್ಟಿಕ್ಕಿ ಬಚ್ಚಲಿಗೆ ಹರಿಯುತ್ತಿರುವ ತಣ್ಣೀರಿನ ಹನಿ ನಾನು. ಒಂದರ್ಥದಲ್ಲಿ ಕಣ್ಣೀರಿನ ಹನಿಯೂ ಕೂಡ.


ಹೌದು, ಬೆಳಿಗ್ಗೆ ತಿಂಡಿ ತಿಂದು ಕೈತೊಳೆದ ನೀನು ನಲ್ಲಿಯನ್ನು ಅರ್ಧ ತಿರುವಿ  ಹಾಗೆಯೇ ಶಾಲೆಗೆ ಓಡಿ ಹೋಗಿ ಈಗ ಬಂದೆ. ಬಾ ಮಗೂ, ನಲ್ಲಿಯನ್ನು ಬಂದ್ ಮಾಡು. ಇದೋ ನೀನು ಹೋದಾಗಿನಿಂದ ನಾನು ‘ಟಪ್ ಟಪ್’ ಎಂದು ಸುಮ್ಮನೆ ಸುರಿಯುತ್ತಲೇ ಇದ್ದೇನೆ.

 

ನಿನ್ನ ತಂದೆತಾಯಿಯರಿಗೂ ನನ್ನ ಕುರಿತು ಗಮನವಿಲ್ಲ. ನಿಮ್ಮಪ್ಪ ಮುಖಕ್ಷೌರದ ವೇಳೆ, ಮುಖಕ್ಕೆ  ಸೋಪು ಹಚ್ಚಿಕೊಳ್ಳುವಾಗ ಕೂಡ ನೀರು ನಿಲ್ಲಿಸುವವರಲ್ಲ. ಇನ್ನು ನಿಮ್ಮಮ್ಮ, ಪಾತ್ರೆ ತೊಳೆದು ಮುಗಿಯುವವರೆಗೂ ಸುರಿವ ನಲ್ಲಿಯನ್ನು ಬಂದ್ ಮಾಡಿ ಗೊತ್ತಿರುವ ಹೆಂಗಸೇ ಅಲ್ಲ. ನಿಮ್ಮಜ್ಜ, ಬೆಳಿಗ್ಗೆ ನಲ್ಲಿಗೆ ಹೋಸ್ ಪೈಪ್ ಸಿಕ್ಕಿಸಿ, ತಾನೇ ಕಾರು ತೊಳೆಯುತ್ತೇನೆಂಬ ಮುದಿಗರ್ವದಲ್ಲಿ ನಲ್ಲಿ ಬಿಟ್ಟರೆ ಆಸ್ಟ್ರೇಲಿಯಾದಲ್ಲಿರುವ ನಿನ್ನ ಅತ್ತೆಗೆ, ಅವರ ಮಗನಿಗೆ ಮಾತನಾಡಿ ಮುಗಿಯುವವರೆಗೂ ನೀರು ನೆಲಕ್ಕೇ.


ಇಂತಿಪ್ಪ ಮನೆಯೊಳಗೆ ಈ ಹನಿ ಕಹಾನಿಯನ್ನು ಕೇಳುವವರು ಯಾರು ಮಗು? ಪ್ಲೀಸ್, ನೀನಾದರೂ ಕೇಳಿಸಿಕೋ.


ನಾನು ಕೊಡಗಿನ ತಲಕಾವೇರಿ ಬಳಿಯ ಬೆಟ್ಟದಲ್ಲಿ ಮಳೆಯ ಹನಿಯಾಗಿ ನೆಲಕ್ಕಿಳಿದು ಉಕ್ಕುವ ಒರತೆಯಾಗಿ ಮೈತಳೆದು ನದಿ ಕಾವೇರಿಯಾಗಿ ಹರಿದುಬಂದರೆ, ನನ್ನ ಸೋದರ ನಂದಿಬೆಟ್ಟದಲ್ಲಿ ಬಿದ್ದು ಅರ್ಕಾವತಿಯಾಗಿ ಹರಿದು ಬಂದವನು. ಅಷ್ಟು ದೂರದಿಂದ ಎಷ್ಟೆಷ್ಟೋ ಕಷ್ಟನಷ್ಟ ಅನುಭವಿಸಿ ಈ ನಿಮ್ಮ ಮನೆಗೆ ಬಂದು ಇಲ್ಲಿ ಬದುಕಿಗೊಂದು ಸಾರ್ಥಕತೆಯಿಲ್ಲದೆ ಸೋತು ಸೋರಿಹೋಗುತ್ತಿದ್ದೇವೆ.


ನಿನಗೆ ಗೊತ್ತೇನು, ನಾವು ಮೊದಲೆಲ್ಲ ಈ ಬೆಂಗಳೂರಿಗೆ ಬರುತ್ತಿದ್ದವರಲ್ಲ.ಹೌದು. ೧೮೯೬ರವರೆಗೂ ಬೆಂಗಳೂರಿನ ಬಾಯಾರಿಕೆ ತಣಿಯುತ್ತಿದ್ದುದು ಇಲ್ಲಿನ ಕೆರೆ, ಕಲ್ಯಾಣಿ ಮತ್ತು ತೆರೆದ ಬಾವಿಗಳಿಂದ. ಆಗೆಲ್ಲ ಈ ಊರನ್ನು ‘ಕೆರೆಗಳ ಪಟ್ಟಣ’, ‘ಕಲ್ಯಾಣಿಗಳ ನಗರ’ ಎಂದೇ ಕರೆಯುತ್ತಿದ್ದರು. ಒಂದು ವಿಷಯ ಕೇಳಿದರೆ ನೀನು ಆಶ್ಚರ್ಯಪಡುವೆ. ೧೯೫೦ರ ದಶಕದವರೆಗೂ ಬೆಂಗಳೂರಿನಲ್ಲಿದ್ದ ಕೆರೆಗಳ ಸಂಖ್ಯೆ ೨೮೦ಕ್ಕೂ ಹೆಚ್ಚು.  ಅದು ೧೯೯೦ ರ ಮಧ್ಯಭಾಗಕ್ಕೆ ಕೇವಲ ೮೦ಕ್ಕೆ ಇಳಿಯಿತು. ಇನ್ನು ಇತ್ತೀಚೆಗಂತೂ ಅದರ ಸಂಖ್ಯೆ ಐವತ್ತಕ್ಕಿಂತ ಕಮ್ಮಿ. ಯಾಕೆ? ಯಾಕೆ ಹೀಗಾಯಿತು ಹೇಳು. ನಗರೀಕರಣದ ಪ್ರಭಾವ. ನಗರ ವಿಸ್ತರಿಸುತ್ತ ಹೋದಂತೆ ಕೆರೆಗಳ ಒತ್ತುವರಿಯಾಗಿ, ಅವು, ಬಸ್ ನಿಲ್ದಾಣಗಳಾದವು, ಸ್ಟೇಡಿಯಂಗಳಾದವು, ನಿವೇಶನಗಳಾದವು, ಶಿಕ್ಷಣ ಸಂಸ್ಥೆಗಳಾದವು. ಬೆಂಗಳೂರಿನ ಯೋಜಿತ ಅಭಿವೃದ್ಧಿಗೆಂದು ಹುಟ್ಟಿಕೊಂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಒಟ್ಟು ೨೮ ಕೆರೆಗಳನ್ನು ಮುಚ್ಚಿ, ನಿವೇಶನಗಳಾಗಿಸಿ ನಗರಾಭಿವೃದ್ಧಿಗೈದಿತು.

 

ನಿನಗೆ ಗೊತ್ತೇ, ಕೆಂಪೇಗೌಡ ಬಸ್ ಸ್ಟ್ಯಾಂಡ್ ಧರ್ಮಾಂಬುಧಿ ಕೆರೆಯಾಗಿದ್ದರೆ, ಕೃಷ್ಣರಾಜ ಮಾರುಕಟ್ಟೆ ಸಿದ್ದಿಕಟ್ಟೆ ಕೆರೆಯಾಗಿತ್ತು. ಗಾಂಧೀಬಜಾರ್ ಕಾರಂಜಾ ಕೆರೆಯಾಗಿದ್ದರೆ, ರಾಷ್ಟ್ರೀಯ ಕ್ರೀಡಾ ಸಂಕೀರ್ಣ ಕೋರಮಂಗಲ ಕೆರೆಯಾಗಿತ್ತು. ಬ್ಯಾಡ್ಮಿಂಟನ್ ಸ್ಟೇಡಿಯಂ ಮಿಲ್ಲರ್ಸ್ ಲೇಕ್ ಆಗಿದ್ದರೆ, ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಕಾಡುಗೊಂಡನಹಳ್ಳಿ ಕೆರೆಯಾಗಿತ್ತು. ಹೀಗೇ ಹತ್ತು ಹಲವು. ಆದರೆ ಇಂತಹ ನೂರಾರು ಕೆರೆಗಳು ರಾಜಕಾರಣಿಗಳ, ರಿಯಲ್ ಎಸ್ಟೇಟ್ ಉದ್ದಿಮೆದಾರರ, ಸ್ವಾರ್ಥಿಗಳ, ಬ್ರೋಕರುಗಳ, ಸಮಾಜ ವಿರೋಧಿಗಳ, ಭ್ರಷ್ಟ ಅಧಿಕಾರಿಗಳ ಆಡೊಂಬಲವಾದವು. ಕೆರೆಗಳನ್ನು ಬತ್ತಿಸಿ, ಭೂಮಿಯನ್ನು ಬಾಚಿಕೊಳ್ಳುವುದು ಸಿಲಿಕಾನ್ ಸಿಟಿಯ ಲಾಭದಾಯಕ ಉದ್ಯಮವಾಗಿಹೋಯಿತು.

ಹಾಗಾಗಿ ಇನ್ನು ಬೆಂಗಳೂರಿನ ಬಾಯಾರಿಕೆ ನೀಗುವುದು ಕೆರೆ ಕಲ್ಯಾಣಿಗಳಿಂದ ಸಾಧ್ಯವಿಲ್ಲ. ಭಾರತದ ಬಹುತೇಕ ನಗರಗಳಂತೆ ಬೆಂಗಳೂರು ಯಾವ ನದೀದಡದಲ್ಲೂ ಇಲ್ಲ. ಇನ್ನು ಇಲ್ಲಿಯ ವಾರ್ಷಿಕ ಮಳೆ ಪ್ರಮಾಣವೂ ಸರಾಸರಿ ೯೦೦ ಮಿಲಿಮೀಟರ್ ಮಾತ್ರ. ಹಾಗಾಗಿ ಅಂತರ್ಜಲ ಮೊದಲೇ ಕಡಿಮೆ. ಈಗಂತೂ ಅದರ ಮಟ್ಟ ಮತ್ತಷ್ಟು ಕುಸಿದಿದೆ, ಕುಸಿಯುತ್ತಿದೆ. ಜೊತೆಗೆ ಅಂತರ್ಜಲಕ್ಕೆ ಕಲುಷಿತ ನೀರು ಬೆರೆತು ಅದು ವಿಷಮಯವಾಗುತ್ತಿದೆ. ಅಂದಾಜು ನಗರದ ನಾಲ್ಕು ಲಕ್ಷ ಕೊಳವೆ ಬಾವಿಗಳಲ್ಲಿ ಕಾಲುಭಾಗದಷ್ಟೂ ಕೆಲಸ ಮಾಡುತ್ತಿಲ್ಲ. ಹಾಗಾಗಿ ನಿಮ್ಮೂರು ತನ್ನ ನೀರಡಿಕೆ ನೀಗಿಸಿಕೊಳ್ಳಲು ಬಾಹ್ಯ ಮೂಲಗಳನ್ನೇ ಆಶ್ರಯಿಸಬೇಕಾಗಿದೆ.

ಇರಲಿ, ನಿನಗೆ ಬೆಂಗಳೂರಿಗೆ ಶುದ್ಧೀಕರಿಸಿದ ಕೊಳಾಯಿ ನೀರಿನ ಸರಬರಾಜು ೧೮೯೬ರಿಂದ ಆರಂಭವಾಯಿತೆಂಬುದು ಗೊತ್ತಿರಲಿಕ್ಕಿಲ್ಲ. ಬೆಂಗಳೂರು ಬೆಳೆಯುತ್ತಿದ್ದಂತೆ ಇಲ್ಲಿನ ಕೆರೆ ಕಲ್ಯಾಣಿಗಳಿಗೆ ಅದರ ನೀರಡಿಕೆ ನೀಗಲಾಗಲಿಲ್ಲ. ನೀರಿಗೆ ಹಾಹಾಕಾರ ಉಂಟಾಗಿ ೧೮೯೩ರಲ್ಲಿ ಬೆಂಗಳೂರಿಗೆ (ಅಂದಿನ ಜನಸಂಖ್ಯೆ ೧.೮ ಲಕ್ಷ ) ನೀರೊದಗಿಸಲು ನಗರದ ವಾಯುವ್ಯ ದಿಕ್ಕಿನಲ್ಲಿ  ಹದಿನೆಂಟು ಕಿಲೋಮೀಟರ್ ದೂರದಲ್ಲಿದ್ದ ಹೆಸರಘಟ್ಟದಲ್ಲಿ, ನಂದಿಬೆಟ್ಟದಲ್ಲಿ ಹುಟ್ಟಿ ಹರಿದು ಬರುತ್ತಿದ್ದ ಅರ್ಕಾವತಿ ನದಿಗೆ, ‘ಚಾಮರಾಜ ವಾಟರ್ ವರ್ಕ್ಸ್’ ಎಂಬ ಹೆಸರಿನಲ್ಲಿ ಜಲಾಶಯವೊಂದನ್ನು ನಿರ್ಮಿಸಲು ಅಂದಿನ ದಿವಾನರಾಗಿದ್ದ ಕೆ ಶೇಷಾದ್ರಿ ಅಯ್ಯರ್ ಯೋಜಿಸಿದರು. ರಾಜ್ಯದ ಅಂದಿನ ಮುಖ್ಯ ಇಂಜಿನಿಯರ್ ಆಗಿದ್ದ ಮೆಕ್ ಹಚಿನ್ ನೇತೃತ್ವದಲ್ಲಿ ಹೆಸರುಘಟ್ಟದಲ್ಲಿ ಅರ್ಕಾವತಿ ನದಿಗೆ ೧೩೩ ಅಡಿ ಎತ್ತರದ ಕಟ್ಟೆ ಕಟ್ಟಿ ೧೧೦೦ ಎಕರೆಗಳಷ್ಟು ವಿಸ್ತಾರದ  ೯೯೭ ದಶಲಕ್ಷ ಘನ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸಿದರು. ಹೆಸರುಘಟ್ಟ ಜಲಾಶಯದಿಂದ ೪೨ ಇಂಚು ವ್ಯಾಸದ ಉಕ್ಕಿನ ಪೈಪುಗಳಲ್ಲಿ ನೀರನ್ನು ಸೋಲದೇವನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿಂದ ಸ್ಟೀಮ್ ಇಂಜಿನ್ ಮೋಟಾರು ಮೂಲಕ ನೀರನ್ನು

(ಯಾಕೆಂದರೆ ಆಗ ನಮ್ಮ ರಾಜ್ಯದಲ್ಲಿ ವಿದ್ಯುತ್ ಇರಲಿಲ್ಲ. ನಮ್ಮಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾದದ್ದು ೧೯೦೨ ರಲ್ಲಿ ಮತ್ತು ಸೋಲದೇವನಹಳ್ಳಿಗೆ ಬಂದದ್ದು ೧೯೧೯ರಲ್ಲಿ)
ಸೋಲದೇವನಹಳ್ಳಿಯಿಂದ ಬಂದ ನೀರನ್ನು ಮಲ್ಲೇಶ್ವರಂನಲ್ಲಿದ್ದ ಜೋಡಿ ಜಿವೆಲ್ ಫಿಲ್ಟರ್ ಗೆ ತಂದು ಶುದ್ಧೀಕರಿಸಲಾಗುತ್ತಿತ್ತು. ಹೆಸರಘಟ್ಟಕ್ಕಿಂತ ಮಲ್ಲೇಶ್ವರಂ ಸುಮಾರು ನಾಲ್ಕುನೂರು ಅಡಿ ಎತ್ತರವಿದ್ದುದರಿಂದ ಸೋಲದೇವನಹಳ್ಳಿ ಪಂಪುಗಳು ನೀರನ್ನು ಅಷ್ಟು ಎತ್ತರ ಎತ್ತುತ್ತಿತ್ತು. ಅಲ್ಲಿ ಮೊದಲು ನೀರನ್ನು ನೆಲ ಮಟ್ಟದ ಜಲಾಶಯ ( ಗ್ರೌಂಡ್ ಲೆವಲ್ ರಿಸರ್ವಾಯರ್) ದಲ್ಲಿ ಸಂಗ್ರಹಿಸಿ ನಂತರ ಫೀಡರ್ ಪೈಪುಗಳ ಮೂಲಕ ಮನೆ ಮನೆಗೆ ಸರಬರಾಜು ಮಾಡಲಾಗುತ್ತಿತ್ತು. ಮೂರು ವರ್ಷ ಮಳೆ ಬರದಿದ್ದರೂ ಹೆಸರಘಟ್ಟದ ನೀರು ಬೆಂಗಳೂರಿನ ಅಗತ್ಯ ಪೂರೈಸುವಂತೆ ಯೋಜಿಸಲಾಗಿತ್ತು.

ಮುಂದೆ ೧೯೨೫ರ ಹೊತ್ತಿಗೆ ಮತ್ತೆ ಬೆಂಗಳೂರು ಜಲಕ್ಷಾಮ ಎದುರಿಸತೊಡಗಿತು. ಹೆಸರುಘಟ್ಟ ಕೆರೆ ಹೂಳು ತುಂಬಿ ಒಣಗತೊಡಗಿತು. ಜನಸಂಖ್ಯೆ ಎರಡೂವರೆ ಲಕ್ಷಕ್ಕೆ ಏರಿತು. ನಗರ ಬೆಳೆಯಿತು. ಅದು ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿನ ಪ್ರಭುಗಳೂ, ಸರ್ ಮಿರ್ಜಾ ಇಸ್ಮಾಯಲ್ ದಿವಾನರೂ ಆಗಿದ್ದ ಕಾಲ. ಆಗ ಸರ್ಕಾರ, ನಾಡಿನ ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನೀರು ಸರಬರಾಜಿನ ಕುರಿತು ಯೋಜಿಸಲು ಒಂದು ಸಮಿತಿ ರಚಿಸಿತು. ಸಮಿತಿಯು ಹಲವು ಸಭೆ ನಡೆಸಿ, ಬೆಂಗಳೂರಿನ ಪಶ್ಚಿಮ ದಿಕ್ಕಿನಲ್ಲಿ ೩೫ ಕಿಲೋಮೀಟರ್ ದೂರದ ಅರ್ಕಾವತಿ ಮತ್ತು ಕುಮದ್ವತಿ ನದಿಗಳು ಸಂಗಮಿಸುವ  ತಿಪ್ಪಗೊಂಡನಹಳ್ಳಿಯಲ್ಲಿ ಜಲಾಶಯವೊಂದನ್ನು ನಿರ್ಮಿಸಲು ಸಲಹೆ ನೀಡಿತು. ( ಹಿಂದೆ ಬ್ರಿಟಿಷರು ಅದನ್ನು ಯೋಜಿಸಿದ್ದರು) ಅಲ್ಲಿ ೩.೩೪ ಟಿ.ಎಂ ಸಿ ಸಾಮರ್ಥ್ಯದ ೭೪ ಅಡಿ ಎತ್ತರಕ್ಕೆ ನೀರು ಸಂಗ್ರಹವಾಗಬಲ್ಲ, ‘ಚಾಮರಾಜಸಾಗರ’ ಎಂಬ ಜಲಾಶಯವನ್ನು ನಿರ್ಮಿಸಲಾಯಿತು. ಅಲ್ಲಿಂದ ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿ ನಿರ್ಮಿಸಲಾಗಿದ್ದ ಭೂ ಮಟ್ಟದ ಜಲಾಶಯಕ್ಕೆ ನೀರನ್ನು ತಂದು ನಂತರ ಮನೆ ಮನೆಗೆ ಒದಗಿಸಲಾಯಿತು. ಆರಂಭದಲ್ಲಿ ನಗರದ ಮೂರುಲಕ್ಷ ಜನಸಂಖ್ಯೆಗೆ, ಪ್ರತಿದಿನ ೨೭ ದಶಲಕ್ಷ ಲೀಟರ್ ನೀರನ್ನು ಒದಗಿಸುವ, ಕ್ರಮೇಣ ೧೯೫೬ರ ಹೊತ್ತಿಗೆ ಹತ್ತುಲಕ್ಷ ಜನರಿಗೆ ಪ್ರತಿದಿನ ೬೦ ದಶಲಕ್ಷ ಲೀಟರ್ ನೀರೊದಗಿಸುವ ಈ ಯೋಜನೆ ೧೯೩೩ರಲ್ಲಿ ಉದ್ಘಾಟನೆಗೊಂಡಿತು. ಅದರಿಂದ ಹೆಚ್ಚುಕಡಿಮೆ ಮೂರು ದಶಕಗಳ ಕಾಲ ಬೆಂಗಳೂರಿನ ಬಾಯಾರಿಕೆ ನೀಗಿತು.

ಆದರೆ ೧೯೫೦ರ ದಶಕದಲ್ಲಿ ಶರಾವತಿಯ ಸಿರಿಬೆಳಕು ಬೆಂಗಳೂರು ತಲುಪಿ ನಗರದ ಅಭಿವೃದ್ಧಿ ಗರಿಗೆದರಿತು. ಬೆಂಗಳೂರು ಬೆಳೆಯತೊಡಗಿತು; ಜನಸಂಖ್ಯೆ ಮತ್ತಷ್ಟು ಏರತೊಡಗಿತು. ೧೯೬೯ ರ ಹೊತ್ತಿಗೆ ಮತ್ತೆ ಜಲಕ್ಷಾಮ ಎದುರಾಯಿತು.

ಆಗ ಅವತರಿಸಿದ್ದೇ ಬೆಂಗಳೂರಿಗೆ ಕಾವೇರಿಯನ್ನು ಕರೆತರುವ ಯೋಜನೆ. ೧೯೬೪ ರಲ್ಲಿ ರಾಜ್ಯಸರ್ಕಾರ ಬೆಂಗಳೂರಿನ  ಸುಗಮ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ಜಲಮಂಡಳಿಯನ್ನು ಸ್ಥಾಪಿಸಿತು. ನಂತರ ಜಲಮಂಡಳಿಯ ಮುಂದಾಳುತನದಲ್ಲಿ ಕಾವೇರಿ ನದಿಯಿಂದ ಮೊದಲೆರಡು ಹಂತದಲ್ಲಿ ಪ್ರತಿದಿನ ತಲಾ ೧೩೫ ದಶಲಕ್ಷ ಲೀಟರ್ ನೀರು ಒದಗಿಸುವ ಯೋಜನೆ ಕಾರ್ಯಾರಂಭಗೊಂಡಿತು. ಮೊದಲ ಹಂತ ೧೯೭೪ ರಲ್ಲಿ ಮುಗಿದರೆ, ಎರಡನೆಯ ಹಂತ ೧೯೮೩ ರಲ್ಲಿ ಪೂರ್ಣಗೊಂಡಿತು. ಆದರೂ ಬಾಯಾರಿಕೆ ನೀಗಲಿಲ್ಲ. ಮತ್ತೆ ಪ್ರತಿದಿನ ೨೭೦ ದಶಲಕ್ಷ ಲೀಟರ್ ನೀರೊದಗಿಸುವ ಮೂರನೇ ಹಂತ ಪ್ರಾರಂಭವಾಗಿ ೧೯೯೩ರಲ್ಲಿ ಮುಕ್ತಾಯಗೊಂಡಿತು. ಆಗ ಬೆಂಗಳೂರಿನ ಜನಸಂಖ್ಯೆ ಅಂದಾಜು ೪೨ ಲಕ್ಷ ಮತ್ತು ವಿಸ್ತೀರ್ಣ ೨೨೬ ಚದರ ಕಿಲೋಮೀಟರ್ ಇತ್ತು.

ಅದೇ ಕಾಲಘಟ್ಟದಲ್ಲಿ ಭಾರತ ಸರ್ಕಾರ ಉದಾರೀಕರಣ ನೀತಿಯನ್ನು ಅಪ್ಪಿಕೊಂಡ ಪರಿಣಾಮ ಬೆಂಗಳೂರಿನ ಬೆಳವಣಿಗೆ ಅನಿರೀಕ್ಷಿತ ವೇಗ ಪಡೆದು ಮೂಲಸೌಲಭ್ಯಗಳ ಕೊರತೆ ಎದ್ದು ಕಾಣಿಸಿತು.
ನಗರದ ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಕಾವೇರಿ ನಾಲ್ಕನೆಯ ಹಂತ ಅನಿವಾರ್ಯವಾಗಿ ಅದನ್ನು ಎರಡು ಘಟ್ಟದಲ್ಲಿ ಜಾರಿಗೊಳಿಸಲಾಯಿತು. ಪ್ರತಿದಿನ ೨೭೦ ದಶಲಕ್ಷ ಲೀಟರುಗಳ ಮೊದಲ ಘಟ್ಟ ೨೦೦೨ ರಲ್ಲಿ ಪೂರ್ಣವಾದರೆ, ೫೦೦ ದಶಲಕ್ಷ ಲೀಟರುಗಳ ಎರಡನೇ ಘಟ್ಟ ೨೦೧೧ ರಲ್ಲಿ ಪೂರ್ಣಗೊಂಡಿತು.

ಊಹೂಂ! ರಾವಣ ಹೊಟ್ಟೆಗೆ ಆರುಕಾಸಿನ ಮಜ್ಜಿಗೆಯೇ?  

ಮತ್ತೆ ಮುಂದಡಿಯಿಡಲಾಯಿತು, ಕಾವೇರಿಯ ಐದನೇ ಹಂತಕ್ಕೆ. ಪ್ರತಿದಿನ ೭೭೫ ದಶಲಕ್ಷ ಲೀಟರ್ ನೀರೊದಗಿಸುವ ಯೋಜನೆ ಸಿದ್ದವಾಗಿ ಇದೀಗ ಮುಂದಡಿಯಿಡುತ್ತಿದೆ.      

ಇದೆಲ್ಲ‌ ಲೆಕ್ಕಾಚಾರದ ಮಾತಾಯಿತು. ಆದರೆ ಇಷ್ಟೊಂದು ಪ್ರಮಾಣದ ಕಾವೇರಿ ನೀರು ಹರಿದು ಬಂದು ಹೇಗೆ ಮನೆಮನೆ ತಲುಪುತ್ತಿದೆ ಗೊತ್ತೇ ಮಗು? ಕಾವೇರಿಯನ್ನು ಬೆಂಗಳೂರಿಗೆ ತರಲು ನೂರು ಕಿಲೋಮೀಟರ್ ದೂರಕ್ಕೆ ಮತ್ತು ಒಂದು ಸಾವಿರ ಅಡಿ ಎತ್ತರಕ್ಕೆ ಪಂಪ್ ಮಾಡಲಾಗುತ್ತಿದೆ.ಅಂದರೆ ಜೋಗ ಜಲಪಾತದ ನೀರನ್ನು ಅದರ ಒಂದೂವರೆಯಷ್ಟು ಎತ್ತರಕ್ಕೆ ಮೇಲೆತ್ತಿ, ಅದನ್ನು ಅಲ್ಲಿಂದ ಶಿವಮೊಗ್ಗಕ್ಕೆ ತಂದಂತೆ.


ಇದು ನಿಜವೇ?

ಹೌದು, ಮಗು. ನಗರದ ದಕ್ಷಿಣ ದಿಕ್ಕಿನಲ್ಲಿ ಇಲ್ಲಿಂದ ನೂರು ಕಿಲೋಮೀಟರ್ ದೂರದಲ್ಲಿರುವ ತೊರೆಕಾಡನಹಳ್ಳಿಯಿಂದ ಇಲ್ಲಿಗೆ ಕಾವೇರಿಯನ್ನು ತರಲಾಗುತ್ತಿದೆ. ತೊರೆಕಾಡನಹಳ್ಳಿ ಸಮುದ್ರ ಮಟ್ಟದಿಂದ ಸರಾಸರಿ೨೦೦೦ ಅಡಿ ಎತ್ತರದಲ್ಲಿದ್ದರೆ ಬೆಂಗಳೂರು  ಸರಾಸರಿ ೩೦೦೦ ಅಡಿ ಎತ್ತರದಲ್ಲಿದೆ. ಕೃಷ್ಣರಾಜ ಸಾಗರದಿಂದ ( ಕೆ ಆರ್ ಎಸ್ ನಿಂದ) ನೀರು ಶಿವ ಜಲಾಶಯಕ್ಕೆ ಬಂದು ಅಲ್ಲಿಂದ ನೆಟ್ಕಲ್ಲಪ್ಪ ಸಂತುಲಿತ ಜಲಾಶಯ ತಲುಪಿ ನಂತರ ತೊರೆಕಾಡನಹಳ್ಳಿ (ಟಿ ಕೆ ಹಳ್ಳಿ) ಜಲಶುದ್ಧೀಕರಣ ಘಟಕಕ್ಕೆ ಬರುತ್ತದೆ. ಅಲ್ಲಿ ಮೊದಲು ಕ್ಯಾಸ್ಕೇಡ್ ಏರೇಟರ್ ಮೂಲಕ ಅದು ಗಾಳಿಯಿಂದ ಆಮ್ಲಜನಕ ಹೀರಿಕೊಳ್ಳುತ್ತದೆ. ಅದರ ನಂತರ ಅದನ್ನು ಕ್ಲೋರೀನೇಶನ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.  ಅದರ ನಂತರ ಆಲಮ್ (ಅಲ್ಯೂಮಿನಿಯಮ್ ಸಲ್ಫೇಡ್) ಬೆರೆಸಲಾಗುತ್ತದೆ. ಅದರ ನಂತರ ಅದನ್ನು ಫಿಲ್ಟರ್ ಮೂಲಕ ಹರಿಸಿ, ಶುದ್ಧೀಕರಣ ಪ್ರಕ್ರಿಯೆ ಮುಗಿಸಿ ಅದನ್ನು ೫೦೦ ಅಡಿ ಮೇಲೆತ್ತುವ ಬೃಹತ್ ಪಂಪ್ ಗಳಿಂದ ಹಾರೋಹಳ್ಳಿಗೆ ಪಂಪ್ ಮಾಡಲಾಗುತ್ತದೆ. ಹಾರೋಹಳ್ಳಿಯಲ್ಲಿ ಮತ್ತೆ ಅದನ್ನು ಐನೂರು ಅಡಿ ಮೇಲೆತ್ತಿ ತಾತಗುಣಿಗೆ ತರಲಾಗುತ್ತದೆ. ಅಲ್ಲಿಂದ ಮತ್ತೆ ಐನೂರು ಅಡಿ ಮೇಲೆತ್ತಿ ಬೆಂಗಳೂರಿನ ಒಟ್ಟು ೫೭ ಭೂ ಮಟ್ಟದ ಜಲಾಶಯ ( ಗ್ರೌಂಡ್ ಲೆವಲ್ ರಿಸರ್ವಾಯರ್)ಗಳಿಗೆ ತರಲಾಗುವುದು.‌ (ನೀರನ್ನು ೧೦೦೦ ಅಡಿ ಎತ್ತಿ ನೂರು ಕಿಲೋಮೀಟರ್ ಸಾಗಿಸಲು ಜಲಮಂಡಳಿ ಪ್ರತಿ ವರ್ಷ ವಿದ್ಯುತ್ತಿಗಾಗಿಯೇ ೩೭೦ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡುತ್ತಿದೆ.)

ಜಿ ಆರ್ ಎಲ್ ಗಳಲ್ಲಿ ಸಂಗ್ರಹವಾಗುವ ನೀರನ್ನು  ಪ್ರೈಮರಿ ಮತ್ತು ಸೆಕೆಂಡರಿ ಫೀಡರ್ ಪೈಪುಗಳ ಮೂಲಕ ವಿವಿಧ ಸಂಪರ್ಕಗಳಿಗೆ, ಮನೆಗಳಿಗೆ  ಒದಗಿಸಲಾಗುವುದು. ಪ್ರತಿ ಫೀಡರಿಗೆ ನೀರನ್ನು ನಿಯಂತ್ರಿಸುವ ಕವಾಟ (ವಾಲ್ವ್ ) ವಿದ್ದು ಅದನ್ನು ಜಲಮಂಡಳಿಯ ವಾಟರ್ ಮನ್ ಗಳು ತಿರುವಿ ನಮಗೆ ನೀರುಣಿಸುತ್ತಾರೆ.

ಇದೀಗ ಬೆಂಗಳೂರಿನ ಜನಸಂಖ್ಯೆ ಒಂದೂಕಾಲು ಕೋಟಿ. ವಿಸ್ತೀರ್ಣವಂತೂ ೭೭೧ ಚದರ ಕಿಲೋಮೀಟರ್ ದಾಟಿ ನಿತ್ಯ ವಿಸ್ತಾರವಾಗುತ್ತಲೇ ಇದೆ. ಕಾವೇರಿಯಿಂದ ಬೆಂಗಳೂರಿನ ಕುಡಿಯುವ ನೀರಿಗಾಗಿ ಮೂವತ್ತು ಟಿ ಎಂ ಸಿ ನೀರು ಕೇಳುತ್ತಿದ್ದರೂ ಈಗ ಹಂಚಿಕೆಯಾದ ೨೩ ಟಿ ಎಂ ಸಿಗಿಂತ  ಹೆಚ್ಚಿನ ನೀರು ಖಂಡಿತ ದೊರೆಯಲಾರದು. ಇದೂ ದಕ್ಕುವುದು ಮಳೆ ಸಾಕಷ್ಟು ಬಂದು, ಕೆ ಆರ್ ಎಸ್ ತುಂಬಿದರೆ. ಜಲಮಂಡಳಿ ಮಾಸ್ಟರ್ ಪ್ಲಾನ್ ಪ್ರಕಾರ ೨೦೩೧ ಕ್ಕೆ ಬೆಂಗಳೂರಿಗೆ ೪೨೮೨ ದಶಲಕ್ಷ ಲೀಟರ್ ನೀರು ಬೇಕು. ಈಗ ಕಾವೇರಿಯಿಂದ ದೊರೆಯುತ್ತಿರುವ ೧೪೫೦ ದಶಲಕ್ಷ ಲೀಟರ್, ಐದನೇ ಹಂತದ ೭೭೫ ದಶಲಕ್ಷ ಲೀಟರ್ ಸೇರಿದರೆ ಕಾವೇರಿಯಿಂದ ಒಟ್ಟು ೨೨೨೫ ದಶಲಕ್ಷ ಲೀಟರ್. ಕಾವೇರಿಯ ಐದನೇ ಹಂತ ಮುಗಿದರೂ ಒಟ್ಟು ದೊರೆಯುವುದು ೨೨೨೫ ದಶಲಕ್ಷ ಲೀಟರ್ ಎಂಬಲ್ಲಿಗೆ ೨೦೩೧ಕ್ಕೇ ನಮ್ಮ ಕೊರತೆ ಪ್ರತಿನಿತ್ಯ ೨೦೦೦ ದಶಲಕ್ಷ ಲೀಟರಿಗೂ ಹೆಚ್ಚು. ಅಂದರೆ ವಾರ್ಷಿಕ ೨೫ ಟಿಎಂಸಿಗೂ ಹೆಚ್ಚು ಕೊರತೆ. ಅರ್ಥಾತ್ ನಗರದ ನೀರಡಿಕೆಗಾಗಿ ನೇತ್ರಾವತಿಯನ್ನೋ ಶರಾವತಿಯನ್ನೋ ಅವಲಂಬಿಸುವುದು ಅನಿವಾರ್ಯ.

ಅಲ್ಲಿಯ ಜನ ಏನು ಮಾಡಬೇಕು?  ಅವರ ತೃಷೆಗೆ, ಕೃಷಿಗೆ ಗತಿ? ಬೆಂಗಳೂರು ಕೂಡ ದಕ್ಷಿಣ ಆಫ್ರಿಕದ ಕೇಪ್ ಟೌನಿನಂತೆ ನೀರಿಲ್ಲದ ನಗರವಾಗಬೇಕೇ? ಯೋಚಿಸು ಮಗು.

ಅದಕ್ಕೆ   ಎರಡು ಪರಿಹಾರವಿದೆ. ಒಂದು ಪರಿಹಾರ ನಿಮ್ಮಂತಹ ಮಕ್ಕಳಿಂದ ಸಾಧ್ಯ. ಅದೆಂದರೆ ನೀರಿನ ಮಿತ ಬಳಕೆ.

 

ಎರಡು ಕೊಳಚೆ ನೀರನ್ನು ಮರುಬಳಕೆ ಮಾಡುವುದು, ಅದಕ್ಕೆ ಜಲಮಂಡಳಿ ಮತ್ತು ಸರ್ಕಾರ ಪ್ರಯತ್ನಿಸಬೇಕು.

ಮಕ್ಕಳೇ, ಇಷ್ಟೆಲ್ಲ ದೂರದಿಂದ, ಇಷ್ಟು ಎತ್ತರಕ್ಕೆ ಕಷ್ಟದಿಂದ ಹತ್ತಿ ಬರುವ ನನ್ನನ್ನು ವ್ಯರ್ಥವಾಗಿ ಹರಿಯಬಿಡುತ್ತೀರಾ?

ಕೇಳು ಮಗೂ,

ನೂರು ಹರದಾರಿಗಳ ಹರಿದು ಬಂದಿಹೆ ನಾನು ನಿನ್ನ ಬಾಯಾರಿಕೆಯ ನೀಗಲೆಂದು
ಸಾಕಷ್ಟೆ ಬಳಸು ಮಗು ಇತರರಿಗು ಉಳಿಸು
ಇರಲಿ ನಾಳೆಗೂ ನೀರು ಕೆಲವು ಬಿಂದು!

ತೊಟ್ಟು ನೀರಿಗೆ ಹಕ್ಕಿ ಕಂಗೆಟ್ಟು ಚೀರುತಿದೆ
ಅಂಬಾ ಎನುತಿದೆ ಹಸುವು ಗಂಟಲೊಣಗಿ
ಹಸಿರಿರದೆ ಬಾಳಿಹುದೆ ಎಸರಿರದೆ ಕೂಳಹುದೆ  
ತೃಷೆಗೆ ಬಳಲಿಹರು ಜನ ಹನಿ ನೀರಿಗೆ

Leave a Reply

Your email address will not be published. Required fields are marked *