ನಾರದನಾಮಪ್ರಣೀತ ಸಂಗೀತಶಾಸ್ತ್ರಗ್ರಂಥಗಳು

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ಸಂಗೀತಶಾಸ್ತ್ರ ಪ್ರಪಂಚದಲ್ಲಿ ಬೇರೆ ಬೇರೆ ಕಾಲದಲ್ಲಿ ನಾರದ ಪ್ರಣೀತವೆನ್ನುವ ಸಂಗೀತಶಾಸ್ತ್ರಗ್ರಂಥಗಳು ಲಭ್ಯವಿದೆ. ಪ್ರಾಚೀನದಿಂದ ಅರ್ವಾಚೀನದವರೆಗೂ ನಾಟ್ಯಶಾಸ್ತ್ರ, ಸಂಗೀತ, ಗಾಂಧರ್ವಶಾಸ್ತ್ರ ಇತ್ಯಾದಿ ವಿಚಾರಗಳಲ್ಲಿ ಉಲ್ಲೇಖಿಸಲ್ಪಟ್ಟ ಹತ್ತು ಮಂದಿ ನಾರದರು ಬೇರೆ ಬೇರೆ ಕಾಲಗಳಲ್ಲಿ ಕಂಡುಬರುತ್ತಾರೆ. ಇದರಲ್ಲಿ ನಾರದ ಪ್ರಣೀತವೆನ್ನುವ ಸಂಗೀತಶಾಸ್ತ್ರಗ್ರಂಥಗಳು ಇಂತಿವೆ.

 


ನಾರದೀಯಶಿಕ್ಷಾ :
ವೇದದ ಸ್ವರವರ್ಣಾದಿಗಳನ್ನು ಉಚ್ಚರಿಸಬೇಕಾದ ಕ್ರಮವನ್ನು ಬೋಧಿಸುವ ಗ್ರಂಥಗಳಿಗೆ ಶಿಕ್ಷಾಗಳೆಂದು ಹೆಸರು. ನಾರದೀಯ ಶಿಕ್ಷೆಯು ಸಾಮವೇದದ ಶಿಕ್ಷಾ. ಸಾಮಗೀತೆಗೂ ಲೌಕಿಕ ಸಂಗೀತಕ್ಕೂ ಇದು ಸೇತುಬಂಧನವನ್ನುಂಟುಮಾಡುತ್ತದೆ. ನಾರದನು ನಾರದೀಯಶಿಕ್ಷೆಯ ಕರ್ತೃವೆಂಬುದು ಪ್ರಸಿದ್ಧವಾಗಿಯೇ ಇದೆ. ಇದು ನಾರದೀಯ ಪುರಾಣಾಂತರ್ಗತವಾಗಿದೆ. ಇವೆರಡರಲ್ಲಿ ಯಾವುದು ಮೊದಲು ಹುಟ್ಟಿತೆಂದು ಹೇಳುವುದು ಕಷ್ಟ. ಈ ಗ್ರಂಥವು ನಾರದೀಯ ಮಹಾಪುರಾಣದ ಒಂದು ಖಂಡ. ನಾರದೀಯ ಶಿಕ್ಷೆಯು ಗಾನವೆಂದರೆ ವಾಗ್ಗೇಯಕಾರರಿಂದ ಸಂಗೀತಶಾಸ್ತ್ರ ನಿಯಮಗಳಿಗೆ ಅನುಸಾರವಾಗಿ ಪ್ರಯೋಕ್ತೃಗಳಿಂದ ಜನರನ್ನು ರಂಜಿಸುವಂತಹ ಸಂಗೀತ. ಗಾಂಧರ್ವ ಶಬ್ದಕ್ಕೆ ಅರ್ವಾಚೀನ ಕಾಲದಲ್ಲಿ ಸ್ಥೂಲವಾಗಿ ಇದೇ ಅರ್ಥವು ಸಿದ್ಧಿಸಿದರೂ ಪ್ರಾರಂಭದೆಸೆಯಲ್ಲಿ ಅದಕ್ಕೆ ವೈದಿಕ ಸಂದರ್ಭದಲ್ಲಿ ಪ್ರಯುಕ್ತವಾಗುತ್ತಿದ್ದ ಜನರಂಜನೆಯ ದೃಷ್ಟಫಲಕ್ಕಿಂತ ದೇವತಾಪ್ರೀತಿಯಂತಹ ಅದೃಷ್ಟಫಲಕ್ಕಾಗಿಯೇ ಉದ್ದೇಶಿಸಲ್ಪಟ್ಟ ಸಂಗೀತ ಎಂಬ ಅರ್ಥವೇ ಇತ್ತು. ಗಾಂಧರ್ವವೆಂದರೆ ಇದೇ. ಈ ಗ್ರಂಥವು ಲೌಕಿಕಸಂಗೀತ (=ಗಾನ)ಕ್ಕೂ (ಸಾಮ) ವೇದದ ಸಂಗೀತಕ್ಕೂ ಪಾರಸ್ಪರ್ಯವನ್ನೂ ರೇಚಿತ ಮತ್ತು ಕುಹರಗಳೆಂಬ ವರ್ಣಾಲಂಕಾರಗಳ ಲಕ್ಷಣ, ತಾನಗಳಿಗೆ ಯಜ್ಞಗಳ ಹೆಸರು, ಷಡ್ಜ – ಪಂಚಮಸ್ವರಗಳ ನಾಮನಿಷ್ಪತ್ತಿಯನ್ನು ಹೇಳುತ್ತದೆ. ಷಡ್ಜಗ್ರಾಮ, ಗಾಂಧಾರಗ್ರಾಮ ಮತ್ತು ಮಧ್ಯಮಗ್ರಾಮ ದೇವತೆಗಳನ್ನು ಉದ್ದೇಶಿಸಿದ ಕರ್ಮಾಂಗಗಳಲ್ಲಿಯೂ, ಎಂಬ ಮೂರು ಗ್ರಾಮಗಳನ್ನೂ (ಸ್ವರವ್ಯವಸ್ಥೆ) ಅವುಗಳಲ್ಲಿ ತಲಾ ಏಳರಂತೆ ಇಪ್ಪತ್ತೊಂದು ಮೂರ್ಛನೆಗಳನ್ನೂ, ಒಟ್ಟು ನಲವತ್ತೊಂಬತ್ತು ತಾನಗಳನ್ನೂ ಹೇಳಿದೆ. ಇವುಗಳ ಪೈಕಿ ನಂದೀ, ವಿಶಾಲಾ, ಸುಮುಖೀ, ಚಿತ್ತಾ, ಚಿತ್ರಾವತೀ, ಸುಖಾ, ಬಲಾ ಎಂಬ ಏಳು ಮೂರ್ಛನೆ(ಸ್ವರಗಳ ಆರೋಹ – ಅವರೋಹ) ಗಳನ್ನು ದೇವತೆಗಳನ್ನು ಉದ್ದೇಶಿಸಿದ ಕರ್ಮಾಂಗಗಳಲ್ಲಿಯೂ, ಆಪ್ಯಾಯನೀ, ವಿಶ್ವಭೃತಾ, ಚಂದ್ರಾ, ಹೈಮಾ, ಕಪರ್ದಿನೀ, ಮೈತ್ರೀ ಮತ್ತು ಬಾರ್ಹತೀ ಎಂಬ ಏಳನ್ನು ಪಿತೃಸಂಬಂಧಿತವಾದವುಗಳಲ್ಲಿಯೂ, ಉತ್ತರಮಂದ್ರಾ, ಅತಿ(-ಭಿ)ರುದ್ಗತಾ, ಅಶ್ವಕ್ರಾಂತಾ, ಸೌವೀರೀ, ಹೃಷ್ಯಕಾ, ಉತ್ತರಾಯತಾ ಮತ್ತು ರಜನೀ ಎಂಬ ಏಳನ್ನು ಋಷಿ ಪ್ರೀತಿಗಾಗಿಯೂ ವಿನಿಯೋಗಿಸಬೇಕೆಂದು ಈ ಶಿಕ್ಷಾಗ್ರಂಥವು ವಿಧಿಸುತ್ತದೆ. ಇವುಗಳಲ್ಲಿ ಕಡೆಯ ಏಳನ್ನು ಲೌಕಿಕಗಾನದಲ್ಲಿ ಹೇಳಿದೆ. ನಾರದೀಯಶಿಕ್ಷೆಯು ಸಾಮಗಾನ ಹಾಗೂ ಲೌಕಿಕ ಸಂಗೀತಕ್ಕೆ ಏರ್ಪಡಿಸಿದ ಸಮೀಕರಣದಲ್ಲಿ ೧=ಮಧ್ಯಮ, ೨=ಗಾಂಧಾರ, ೩=ರಿಷಭ, ೪=ಷಡ್ಜ, ೫=ನಿಷಾದ, ೬=ಧೈವತ, ೭=ಪಂಚಮ ಎಂದು ಹೇಳುತ್ತದೆ. ಈ ಶಿಕ್ಷಾಗ್ರಂಥದಲ್ಲಿ ಸಾಮಗಾನದ ವರ್ಣವ್ಯವಸ್ಥೆ, ಸ್ವರವ್ಯವಸ್ಥೆ, ಗತಿ, ವೃತ್ತಿ, ಭಕ್ತಿ ಮುಂತಾದುವನ್ನು ಮಾತ್ರವಲ್ಲದೆ ಪಥ್ಯ, ಲಕ್ಷಣ, ಅಷ್ಟವಿಧಸ್ವರಲಕ್ಷಣ, ಪಂಚವಿಧ ಆಚಾರ್ಯ ಲಕ್ಷಣ, ಶರೀರಾರೋಗ್ಯ ಸಾಧನ, ಸದಾಚಾರದ ಅಭ್ಯಾಸ, ವೇದೋಚ್ಚಾರಕ್ಕೆ ಬೇಕಾಗುವ ಮುಖಸನ್ನಿವೇಶ, ವಿದ್ಯಾಗ್ರಹಣ, ಅಭ್ಯಾಸ ಇತ್ಯಾದಿಗಳನ್ನು ವಿವರಿಸುತ್ತದೆ. ನಾರದೀಯಶಿಕ್ಷೆಯುಲ್ಲಿ ಹೇಳುವ ಹಾಡಿನ ಗುಣಗಳಾದ ‘ರಕ್ತಂ ಪೂರ್ಣಂ ಅಲಂಕೃತಂ ಪ್ರಸನ್ನಂ ವ್ಯಕ್ತಂ, ವಿಕೃಷ್ಟಂ ಶ್ಲಕ್ಷ್ಣಂ ಸಮಂ ಸುಕುಮಾರಂ ಮಧುರಮಿತಿ ಗುಣಾಃ |’

ಎಂಬ ಹತ್ತುಗುಣಗಳು ಗೀತಗುಣಗಳಾಗಿರುವಂತೆಯೇ ಕಾವ್ಯಗುಣಗಳೂ ಹೌದು. ಕಾವ್ಯದಲ್ಲಿ ಬರುವ ಶಬ್ದಾರ್ಥಗಳ ಗುಣದೋಷಗಳನ್ನು ಅಲಂಕಾರಿಕರು ಹಿಂದಿನಿಂದಲೂ ವಿಮರ್ಶಿಸುತ್ತಲೇ ಬಂದಿದ್ದಾರೆ. ಇವುಗಳನ್ನು ಹಾಡಿಗೆ (ಎಂದರೆ ಸಾಮಗಳಿಗೆ) ಅನ್ವಯಿಸಿ ಸ್ವಲ್ಪ ಅರ್ಥಾಂತರದೊಡನೆ ಹೇಳಿರುವವರಲ್ಲಿ ನಾರದೀಯಶಿಕ್ಷಾಕಾರನಾದ ನಾರದನೇ ಬಹುಶಃ ಮೊದಲನೆಯವನು.

 

ಅಭಿನವಗುಪ್ತನು ತನ್ನ ಅಭಿನಯದರ್ಪಣದಲ್ಲಿ ನಾರದನನ್ನು ಗೀತಜ್ಞನೆಂದೂ, ಗಾಂಧರ್ವಲಕ್ಷಣಕಥನಸಮಯದಲ್ಲಿ ಅದು ದೇವತೆಗಳಿಗೆ ಪ್ರೀತಿವರ್ಧನೆಯನ್ನುಂಟುಮಾಡುತ್ತದೆನ್ನುವಲ್ಲಿಯೂ, ಷಡ್ಜ  ಹಾಗೂ ಪಂಚಮ ಸ್ವರಗಳ ನಾಮ ನಿರ್ವಚನದಲ್ಲಿಯೂ, 84 ತಾನಗಳಿಗೆ ಯಜ್ಞನಾಮಗಳನ್ನು ಅನ್ವಯಿಸುವುದರ ಸಮರ್ಥನೆಯಲ್ಲಿಯೂ, ಸಾಮಗಾನದ ಮತ್ತು ಲೌಕಿಕ ಸಂಗೀತಸ್ವರಗಳಲ್ಲಿ ಪರಸ್ಪರತೆಯನ್ನು ಸ್ಥಾಪಿಸುವಾಗಲೂ, ರೇಚಿತ ಮತ್ತು ಕುಹರವೆಂಬ ವರ್ಣಾಲಂಕಾರ ಲಕ್ಷಣವರ್ಣನ ಸಂದರ್ಭದಲ್ಲಿಯೂ ನಾರದೀಯಶಿಕ್ಷೆಯನ್ನು ಉಲ್ಲೇಖಿಸುತ್ತಾನೆ. ಶಾರ್ಙ್ಗದೇವನು ತನ್ನ ಸಂಗೀತರತ್ನಾಕರದಲ್ಲಿ ಗಾಂಧಾರಗ್ರಾಮ ಲಕ್ಷಣಕ್ಕಾಗಿ ನಾರದನನ್ನು ಆಶ್ರಯಿಸಿ ರಿಷಭ ಮಧ್ಯಮಗಳ ಒಂದೊಂದು ಶ್ರುತಿಯನ್ನು ಗಾಂಧಾರವು ಆಶ್ರಯಿಸಿದರೆ, ಪಂಚಮದ ಶ್ರುತಿಯನ್ನು ಧೈವತವೂ, ಧೈವತದ ಶ್ರುತಿಯನ್ನೂ ಷಡ್ಜದ ಶ್ರುತಿಯನ್ನೂ ನಿಷಾದವು ಕೂಡಿಕೊಂಡರೆ ಆಗ ಅದನ್ನು ಗಾಂಧಾರಗ್ರಾಮವೆಂದು ನಾರದ ಮುನಿಯು ಹೇಳಿದನು (ಸಂಗೀತರತ್ನಾಕರ l: 4: 4-5) ಎಂದು ಉದ್ಧರಿಸಿಕೊಂಡಿದ್ದಾನೆ. ಭರತಮುನಿಯು ತನ್ನ ನಾಟ್ಯಶಾಸ್ತ್ರದಲ್ಲಿ ಗಾಂಧಾರ ಗ್ರಾಮವು ಆತನ ಕಾಲಕ್ಕಾಗಲೇ ದೇವಲೋಕಕ್ಕೆ ಹೊರಟುಹೋಗಿತ್ತೆಂದು ಹೇಳುವುದರಿಂದಲೂ, ಈ ಗ್ರಂಥವು ಗಾಂಧಾರ ಗ್ರಾಮದ ಮೂರ್ಛನೆಗಳನ್ನು ವಿವರಿಸುವುದರಿಂದಲೂ ಹಾಗೂ ಇನ್ನಿತರ ಅನೇಕ ಸಾಕ್ಷ್ಯಾಧಾರಗಳಿಂದಲೂ ನಾರದೀಯಶಿಕ್ಷೆಯು ನಾಟ್ಯಶಾಸ್ತ್ರಕ್ಕಿಂತಲೂ (ಸುಮಾರು ಕ್ರಿ. ಪೂ. 2ನೇ ಶತಮಾನಕ್ಕಿಂತಲೂ ಪೂರ್ವ) ಪ್ರಾಚೀನವೆಂದು ವಿದ್ವಾಂಸರು ಹೇಳುತ್ತಾರೆ.

 


ಪಂಚಭಾರತೀಯ :
ತಮಿಳರು ನಾರದನೆಂಬುವನು ಈ ಗ್ರಂಥವನ್ನು ರಚಿಸಿದರೆಂದು ನಂಬುತ್ತಾರೆ.

ಪಂಚಮಸಂಹಿತಾ ಅಥವಾ ಪಂಚಮಸಾರಸಂಹಿತಾ :
ಇದರ ಹಸ್ತಪ್ರತಿಯು ಕೋಲ್ಕತ್ತದ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಮತ್ತು ವಾರಾಣಸಿಯ ರಾಮನಗರ್ ಪುಸ್ತಕಭಂಡಾರಗಳಲ್ಲಿದೆ. ನರಹರಿಚಕ್ರವರ್ತಿಯು ತನ್ನ ಸಂಗೀತಸಾರಸಂಗ್ರಹದಲ್ಲಿ ನಾರದಕೃತ ಪಂಚಮಸಾರಸಂಹಿತೆಯನ್ನು ಆಶ್ರಯಿಸಿಕೊಂಡು ಧ್ರುವ, ಮಂಠ, ಪ್ರತಿಮಂಠ, ನಿಃಸಾರು, ರಾಸ, ಪ್ರತಿ, ಏಕತಾಲೀ, ಯತಿ, ಝಮರಿ ಎಂಬ ಒಂಬತ್ತನ್ನು ಸಾಲಗಸೂಡಗೀತಗಳೆಂದು ಕರೆಯುತ್ತಾನೆ.


ಷಟ್ ತ್ರಿಂಶಚ್ಛತ ರಾಗನಿರ್ಣಯ (ರಾಗಮಾಲಾ) :
ಇದು ನಾರಾಯಣ ದೇವನು ರಚಿಸಿದ ಸಂಗೀತನಾರಾಯಣವೆಂಬ ಗ್ರಂಥದಲ್ಲಿ ಉದ್ಧೃತವಾಗಿದೆ. ಇದು ಅರ್ವಾಚೀನ ಗ್ರಂಥ.


ನಾರದ-ಭರತ :
ಇದೊಂದು ಬಹು ಅರ್ವಾಚೀನವಾದ ಹ್ರಸ್ವಗ್ರಂಥ. ಈ ಗ್ರಂಥವನ್ನು ನಾರದನೂ ಭರತನೂ ಸೇರಿ ಬರೆದರಂತೆ! ಇದರ ಪ್ರತಿಯು ರಾ. ಸತ್ಯನಾರಾಯಣರವರ ಗ್ರಂಥಭಂಡಾರದ ಬೆಂಗೇರಿ ಹಸ್ತಪ್ರತಿಯಲ್ಲಿ ಅಂತರ್ಗತವಾಗಿದೆ.


ಸ್ವರಾರ್ಣವ :
ತ್ಯಾಗರಾಜರಿಗೆ ನೀಡಿದ್ದೆಂದು ಹೇಳಲಾದ ಈ ಗ್ರಂಥವು 17-18ನೆಯ ಶತಮಾನದ ಸಂಗೀತವಿಷಯಗಳನ್ನು ಒಳಗೊಂಡಿದೆ.


ಚತ್ವಾಂರಿಶಶಚ್ಛತರಾಗನಿರೂಪಣಂ :
ಈ ಗ್ರಂಥವು ಹಿಂದೂಸ್ಥಾನೀ ಸಂಗೀತ ವಿಷಯಕವಾಗಿದ್ದು, ರಾಗರತ್ನಾಕರ ಗ್ರಂಥದ ಉಪಬೃಂಹಣವೂ ಸ್ವಲ್ಪ ಅರ್ವಾಚೀನವೂ ಆಗಿ, ರಾಗರತ್ನಾಕರದಲ್ಲಿರುವ, ಕರ್ಣಾಟಕ ಸಂಗೀತದಲ್ಲಿ ಮಾತ್ರ ಇರುವ ರಾಗಗಳೊಂದಿಗೆ ಈಶಮನೋಹರಿ, ಜಯಂತಸೇನ, ನೀಲಾಂಬರೀ, ನಾಗವರಾಲಿ, ಬಿಲಹರಿ, ಮಾಲವೀ, ರೀತಿಗೌಲ, ವೇಗವಾಹಿನೀ, ಶುದ್ಧಸಾವೇರಿ, ಶ್ರೀರಂಜನೀ, ಸಾಮ, ಸಿಂಧುರಾಮಕ್ರಿಯ, ಸುರಸಿಂಧು, ಸರಸ್ವತೀಮನೋಹರೀ ರಾಗಗಳೂ ಉಲ್ಲೇಖಿತವಾಗಿದೆ. ಆದುದರಿಂದ ಈ ಗ್ರಂಥವೂ ಬಹುಶಃ ತಂಜಾವೂರಿನಲ್ಲಿಯೇ ರಚಿತವಾಗಿದ್ದಿರಬೇಕು. ತಂಜಾವೂರಿನ ರಾಜಾಸ್ಥಾನದಲ್ಲಿ ಹಿಂದೂಸ್ಥಾನೀ ಸಂಗೀತದ ಪ್ರಭಾವವು ವಿಶೇಷವಾಗಿ ಇತ್ತೆಂದು ಹೇಳಲು ಅವಕಾಶವಿದೆ. ಸ್ವತಃ ತುಳಜನೇ ಶಂಕರಾಭರಣದ ಖ್ಯಾಲನ್ನೂ ಒಳಗೊಂಡ ಹಿಂದೂಸ್ಥಾನೀ ಸಂಗೀತರಚನೆಗಳನ್ನು ಮಾಡಿದ್ದಾನೆ. ಈ ಗ್ರಂಥವು ಮೋಹನರಾಗಕ್ಕೆ ಅಕ್ಷರಶಃ ಸಾಮ್ಯವಿರುವ ಧ್ಯಾನ ಶ್ಲೋಕಗಳನ್ನು ಕೊಡುತ್ತದೆ. ಆರಭಿರಾಗವನ್ನು ಶ್ರೀರಾಗದ ಸೊಸೆಯೆಂದು ರಾಗಿಣೀ ಧ್ಯಾನಶ್ಲೋಕವನ್ನು ಕೊಡುತ್ತಾನೆ. ಕರ್ಣಾಟಕ ಸಂಗೀತದಲ್ಲಿ ಸುಮಾರು ನೂರೈವತ್ತು ವರ್ಷಗಳಷ್ಟು ಈಚೀನದಾದ ನವರೋಚಿಕಾ (ನವರೋಜು) ರಾಗವನ್ನು ಪಂಚಮರಾಗದ ಸೊಸೆಯೆಂದು ವರ್ಗೀಕರಿಸಿ ಶ್ಲೋಕದಲ್ಲಿ ಧ್ಯಾನಮೂರ್ತಿಯ ಚಿತ್ರವನ್ನು ನೀಡುತ್ತದೆ. ನೀಲಾಂಬರೀ ರಾಗವು ಇಂದು ಪ್ರಸಿದ್ಧಿ ಪ್ರಾಚುರ್ಯಗಳನ್ನು ಪಡೆದ ರಾಗವಾಗಿದ್ದರೂ ಸುಮಾರು ನೂರೈವತ್ತು ವರ್ಷಗಳಷ್ಟು ಹಿಂದಿನದು, ಅಷ್ಟೇ. ಕ್ರಿ. ಶ. 1750 ರಿಂದ 1800 ರಲ್ಲಿ ಇದು ಉದ್ಭವಿಸಿರಬೇಕು. ಇದರ ಪ್ರಥಮೋಲ್ಲೇಖವು ಹಿಂದೂಸ್ಥಾನೀ ವಿಷಯಕವಾದ ನಾರದೀಯ ಚತ್ವಾರಿಂಶಚ್ಛತರಾಗನಿರೂಪಣದಲ್ಲಿ ವಸಂತರಾಗದ ಭಾರ್ಯೆಯಾಗಿ. ಆದರೆ, ನೀಲಾಬರೀ ಎಂದು ಉಲ್ಲೇಖಿಸಲ್ಪಟ್ಟ ಈ ರಾಗದ ಸಂಚಾರಸ್ವರೂಪವು ಈ ಗ್ರಂಥದಿಂದ ದೊರೆಯುವುದಿಲ್ಲ. ಆದರೆ ಕರ್ಣಾಟ ಸಂಗೀತದಲ್ಲಿ ಗೋವಿಂದಾಚಾರ್ಯ, ಮುದ್ದುವೆಂಕಟಮಖಿ, ತಿರುವೆಂಕಟಕವಿ, ರಾಗಲಕ್ಷಣದ ಅಜ್ಞಾತಕರ್ತೃ, ಕನ್ನಡ ಸಂಗೀತರತ್ನಾಕರಕಾರ ಪರಮೇಶ್ವರ, ಸುಬ್ಬರಾಮ ದೀಕ್ಷಿತ ಮುಂತಾದವರು ಧೀರಶಂಕರಾಭರಣ ಅಥವಾ ಹರಿಕಾಂಭೋಜಿ ಮೇಳಗಳಲ್ಲಿ ಜನ್ಯವಾಗಿ ವ್ಯತ್ಯಾಸಗಳನ್ನು ಹೇಳುತ್ತ ನೀಲಾಂಬರೀ ರಾಗಕ್ಕೆ ಲಕ್ಷಣವನ್ನು ಹೇಳಿದ್ದಾರೆ. ಪೂರ್ಣಚಂದ್ರಿಕಾ ರಾಗದ ಲಕ್ಷಣವೂ ನಮ್ಮ ಸಂಗೀತದಲ್ಲಿ ಮೊದಲು ಸುಳಿಯುವುದು ಇದೇ ಗ್ರಂಥದಲ್ಲಿ. ಈ ಗ್ರಂಥಕರ್ತೃವು ರಾಗವನ್ನು ಕೌಶಿಕರಾಗದ ಸೊಸೆಯಾಗಿ ವರ್ಗೀಕರಿಸಿ ಧ್ಯಾನಮೂರ್ತಿಯ ಶ್ಲೋಕವನ್ನು ಹೇಳಿದ್ದಾನೆ. ಆದರೆ ರಾಗದ ಸ್ವರಸಂಪತ್ತಿಯು ತಿಳಿಯುವುದಿಲ್ಲ. ಆದರೆ ತುಳಜನ ಸಂಗೀತಸಾರಾಮೃತದಲ್ಲಿ ಈ ರಾಗದ ಸ್ವರಸಂಪತ್ತಿಯು ಮೊದಲು ದೊರೆಯುತ್ತದೆ. ಅನಂತರದಲ್ಲಿ ಮುದ್ದುವೆಂಕಟಮಖಿ, ಗೋವಿಂದಾಚಾರ್ಯ, ತಿರುವೆಂಕಟಕವಿ, ರಾಗಲಕ್ಷಣಕಾರ, ಕನ್ನಡಸಂಗೀತರತ್ನಾಕರಕಾರ, ಪರಮೇಶ್ವರ, ಸುಬ್ಬರಾಮ ದೀಕ್ಷಿತ ಮುಂತಾದವರು ಶಂಕರಾಭರಣ ಜನ್ಯವೆಂದೇ ಹೇಳಿದರೂ ರಾಗದ ಸಂಚಾರಗಳಲ್ಲಿ ವ್ಯತ್ಯಾಸವನ್ನು ಹೇಳಿದ್ದಾರೆ. ಈ ಗ್ರಂಥರಚನಾಕಾಲವು 17ನೆಯ ಶತಮಾನವಾಗಿರಬಹುದು.

ಸಂಗೀತಮಕರಂದ :
ಭಾರತದ ಲೌಕಿಕ ಸಂಗೀತ ಪ್ರವಾಹವು ಬಹು ಹಿಂದಿನಿಂದಲೂ ಬ್ರಹ್ಮಮತ, ಶಿವಮತ ಎಂಬ ಎರಡು ಸ್ರೋತಗಳಲ್ಲಿ ಹರಿದುಬಂದ ಸಂಗತಿಯು ಭರತನ ನಾಟ್ಯಶಾಸ್ತ್ರದಲ್ಲಿಯೇ ಅಲ್ಲಲ್ಲಿ ಕಂಡುಬಂದರೂ ಸಂಗೀತಮಕರಂದದಂತಹ ಅರ್ವಾಚೀನಗ್ರಂಥದಲ್ಲಿ ಸಹ ಇಂತಹ ವಿಂಗಡಣೆಯು ಕಂಡುಬರುತ್ತದೆ. ಈ ಗ್ರಂಥದ ಉಪಲಬ್ಧರೂಪವು ಮಿಶ್ರಿತವಾಗಿದ್ದು ಸುಮಾರು 16-17ನೆಯ ಶತಮಾನಗಳಷ್ಟು ಅರ್ವಾಚೀನ ವಿಷಯಗಳನ್ನು ಹೊಂದಿದೆಯಾದ್ದರಿಂದ ಇದರ ರಚನಾಕಾಲವು 17ನೆಯ ಶತಮಾನವಾಗಿರಬಹುದು. ಈ ಗ್ರಂಥವು ತನಗಿಂತ ಪ್ರಾಚೀನನಾದ ಇನ್ನೊಬ್ಬ ನಾರದನ ಪ್ರಾಮಾಣ್ಯವನ್ನು ಹಲವೆಡೆಗಳಲ್ಲಿ ಉಲ್ಲೇಖಿಸುತ್ತದೆ. 24 ಶ್ರುತಿಗಳನ್ನು ಪ್ರಕ್ಷಿಪ್ತವೆನ್ನಿಸುವ ಒಂದು ಪಾಠದಲ್ಲಿ ಕೊಡುತ್ತದೆ. ಸಂಗೀತಮಕರಂದದಲ್ಲಿ ನಾರದನು ಹಗಲಿನಲ್ಲಿ ಹಾಡಬೇಕಾದ ರಾಗಗಳನ್ನು ಸೂರ್ಯಾಂಶಜನ್ಯಗಳೆಂದೂ ರಾತ್ರಿಯಲ್ಲಿ ಹಾಡಲು ತಕ್ಕವುಗಳನ್ನು ಚಂದ್ರಮಾಂಶಜನ್ಯಗಳೆಂದೂ ವರ್ಗೀಕರಿಸುತ್ತಾನೆ. ರಾಗವೇಳಾನಿಯಮವನ್ನು —
ಶೋಕಸಂತಾಪದಾರಿದ್ರ್ಯಮಾಯುಕ್ಷೀಣಂ ಭವೇದ್ ಧ್ರುವಮ್ |
ರಾಜ್ಯನಾಶೋ ಮನೋದುಃಖಂ ಭವತ್ಯೇವ ನ ಸಂಶಯಃ |
ಜ್ಞಾತ್ವಾ ಸರ್ವಮಿದಂ ಶಾಸ್ತ್ರಂ ಯಃ ಶೃಣೋತಿ ಸದಾ ನೃಪಃ |
ಆಯುರಾರೋಗ್ಯಮೈಶ್ವರ್ಯಂ ಲಭತೇ ವಾಂಛಿತಂ ಫಲಮ್ ||
ಎಂಬ ಎಚ್ಚರಿಕೆಯ ಮಾತುಗಳನ್ನು ನಾರದನು ಸಂಗೀತಮಕರಂದದಲ್ಲಿ ಆಡುತ್ತಾನೆ. ಆದರೆ ಈ ನಿಯಮವನ್ನು ಕೆಲವು ಸಂದರ್ಭಗಳಲ್ಲಿ ಸಡಿಲಗೊಳಿಸಬಹುದು —
ವಿವಾಹಸಮಯೇ ದಾನದೇವತಾಸ್ತುತಿಸಂಯುತೇ |
ಅವೇಳರಾಗಮಾಕರ್ಣ್ಯ ನ ದೋಷೋ ಪರಿಕೀರ್ತಿತಃ ||
ಎಂದೂ ಹೇಳಿದ್ದಾನೆ.

Author Details


Srimukha

Leave a Reply

Your email address will not be published. Required fields are marked *