ನಡೆಯುತ್ತಾರವರು – ನಾವು ಬಿಡಬೇಕು ಅಷ್ಟೇ !

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

1) ನನ್ನ ಮಗನಿಗೆ ಕಲಿಯುವುದರಲ್ಲಿ ಆಸಕ್ತಿ ಇಲ್ಲ. ಎಷ್ಟೇ ಪ್ರಯತ್ನಪಟ್ಟರೂ ಅಕ್ಷರ,

ಸಂಖ್ಯೆಗಳು ಮತ್ತು ಪದಗಳನ್ನು ಬರೆಯುತ್ತಿಲ್ಲ. ಬರೆಯಲು ಕೂರಿಸಿದ ತಕ್ಷಣ ಬೇರೆ
ಆಟಕ್ಕೆ ಹೊರಡುತ್ತಾನೆ. ಅವನಿಗೆ ಕಲಿಯುವಿಕೆಯ ಸಮಸ್ಯೆಗಳಿವೆ ಅನಿಸುತ್ತಿದೆ. ಏನು
ಮಾಡುವುದು? ಅವನ ವಯಸ್ಸು ನಾಲ್ಕು ವರ್ಷ.
2) ಮೂರು ವರ್ಷದ ನನ್ನ ಮಗಳಿಗೆ ಸರಿಯಾಗಿ ತಿನ್ನಲು ಬರುವುದಿಲ್ಲ. ಸುತ್ತಲೂ
ಚೆಲ್ಲುತ್ತಾಳೆ. She is messy. How do I discipline her?
3) ನನ್ನ ಮಗನಿಗೆ ಪೆನ್ಸಿಲ್ ಹಿಡಿದು ನೀಟಾಗಿ ಬರೆಯಲು ಬರುವುದಿಲ್ಲ. ಹೇಗೆ
ಕಲಿಸುವುದು? ಅವನಿಗೆ ಎರಡುವರೆ ವರ್ಷ.


ಪುಟ್ಟ ಮಕ್ಕಳ ತಾಯಂದಿರ ಪ್ರಶ್ನೆಗಳಿವು. ಫೇಸ್ಬುಕ್ಕಿನ ಕೆಲವು parenting
ಗುಂಪುಗಳಲ್ಲಿ ಸಿಕ್ಕಿದಂತವು. ಇವನ್ನು ನೋಡಿದಾಗ ತಾಯಂದಿರ ಕಾಳಜಿ, ಚಿಂತೆ,
ಸಮಸ್ಯೆಗಳು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರಿಲ್ಲಿ ಗಮನಿಸಬೇಕಾದ ಅಂಶ ಆ ಮಕ್ಕಳ
ವಯಸ್ಸು. ಇದೇ ಸಮಸ್ಯೆಗಳನ್ನು ಹತ್ತು ವರ್ಷದ ಮಗುವಿನ ಬಗ್ಗೆ ಹೇಳಿದ್ದೇ ಆದರೆ ಅದು
ಖಂಡಿತವಾಗಿಯೂ ಚಿಂತೆ ಮಾಡಬೇಕಾದ ವಿಚಾರ. ಆದರೆ ಇಲ್ಲಿ ಹಾಗಿಲ್ಲ. ಈ ತಾಯಂದಿರು ತಮ್ಮ
ತಮ ಮಕ್ಕಳ ಬಗ್ಗೆ ಅತಿಯಾಗಿ ಮತ್ತು ಅನಗತ್ಯವಾಗಿ ಚಿಂತೆ ಮಾಡುತ್ತಿದ್ದಾರೆ
ಅನಿಸುವುದಿಲ್ಲವೇ? ಹೀಗೆ ಪ್ರಶ್ನೆ ಕೇಳಿದ ಕೆಲವರ ಸಮಸ್ಯೆ ಮಾತ್ರ ಅಲ್ಲ ಇದು.
ಪ್ರಶ್ನೆ ಕೇಳದೆ ಇದ್ದರೂ ಇಂತಹ ಯೋಚನೆಗಳು ಹಲವು ತಾಯಂದಿರನ್ನು ಕಾಡುತ್ತಿರುವುದಂತೂ
ಹೌದು. ಹಾಗಾದರೆ ಮಕ್ಕಳ ಬಗ್ಗೆ ತಾಯಂದಿರ ಈ ಕಾಳಜಿ ತಪ್ಪೇ? ಕಾಳಜಿ ಖಂಡಿತಾ ತಪ್ಪಲ್ಲ.
ಆದರೆ ಯಾವುದರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಯಾವುದರ ಬಗ್ಗೆ ಬೇಡ ಎನ್ನುವ ಬಗ್ಗೆ
ನಾವು ಗಮನಹರಿಸಬೇಕಿದೆ.


ಮಕ್ಕಳು ಹುಟ್ಟಿದಂದಿನಿಂದ ಒಂದೊಂದೇ ಹಂತ ಬೆಳೆಯುತ್ತಾ ಸಾಗುತ್ತಾರೆ. ಮೊದಲ ಆರು
ತಿಂಗಳಿನಲ್ಲಿ ಕ್ರಮವಾಗಿ ಕುತ್ತಿಗೆಯ ಸ್ನಾಯುಗಳ ಮೇಲೆ ನಿಯಂತ್ರಣ, ನಿಧಾನಕ್ಕೆ ಅಂಗಾತ
ಮಲಗಿದಲ್ಲಿಂದ ಮಗಚುವುದು ಮತ್ತು ಮತ್ತೆ ಅಂಗಾತ ಮಲಗುವುದು, ಕೆಲವು ಮಕ್ಕಳು ಆರು
ತಿಂಗಳಾಗುವ ಹೊತ್ತಿಗೇ ಎದ್ದು ಕುಳಿತುಕೊಳ್ಳಲೂಬಹುದು. ಕೈಗಳಲ್ಲಿ ವಸ್ತುಗಳನ್ನು
ಹಿಡಿದುಕೊಳ್ಳುವುದು, ಸಮೀಪದಲ್ಲಿರುವ ವಸ್ತುವನ್ನು ತಲುಪುವುದಕ್ಕೆ ಪ್ರಯತ್ನಿಸುವುದು
ಮುಂತಾದ ಬೆಳವಣಿಗೆಗಳನ್ನು ಗಮನಿಸಬಹುದು.
ಅನಂತರ ಒಂದು ವರ್ಷ ವಾಗುವುದರೊಳಗೆ ಹೊಟ್ಟೆ ಎಳೆದುಕೊಳ್ಳುತ್ತಾ ಮುಂದೆ ಹೋಗುವುದು,
ಅಂಬೆಗಾಲಿಡುವುದು, ಹಿಡಿದು ನಿಲ್ಲುವುದು, ಹಿಡಿದುಕೊಂಡು ಕೆಲವು ಹೆಜ್ಜೆ ನಡೆಯುವುದು,
ಚೆಂಡನ್ನು ಎಸೆಯುವುದನ್ನು ಕಲಿಯುತ್ತದೆ. ಇದೇ ಸಂದರ್ಭದಲ್ಲಿ ಎರಡು ಬೆರಳುಗಳಲ್ಲಿ
ವಸ್ತುವನ್ನು ಹಿಡಿಯುವುದು., ಕೈಯಿಂದ ಬಿದ್ದುದನ್ನು ಹೆಕ್ಕುವುದು, ಒಂದು ಕೈಯಿಂದ
ಇನ್ನೊಂದು ಕೈಗೆ ಹಸ್ತಾಂತರಿಸುವುದು ಮುಂತಾದ ಚಟುವಟಿಕೆಯನ್ನು ಕಲಿಯುತ್ತವೆ.


ಇದೇ ರೀತಿ ನಿಧಾನಕ್ಕೆ gross motor skills ಮತ್ತು fine motor skills ಎಂಬ ಎರಡು
ರೀತಿಯ ಕೌಶಲ್ಯಗಳನ್ನು ಮಗು ಕಲಿಯುತ್ತದೆ. ಇದು ದೈಹಿಕವಾದ ಬೆಳವಣಿಗೆಗೆ
ಸಂಬಂಧಪಟ್ಟದ್ದು. ದೇಹದ ಚಲನೆ, ಸ್ನಾಯುಗಳ ಮೇಲೆ ಹಿಡಿತ ಇತ್ಯಾದಿಗಳು ಈ ಮೊಟಾರ್
ಸ್ಕಿಲ್ ಗಳ ಭಾಗವಾಗಿದೆ. ಅದೇ ರೀತಿ cognitive development ಎಂಬ ಇನ್ನೊಂದು ಮುಖ್ಯ
ಅಂಶವೂ ಮಕ್ಕಳ ಬೆಳವಣಿಗೆಯಲ್ಲಿದೆ. ಅದು ಮಗು ಭಾಷೆಯನ್ನು ಕಲಿಯುವುದು, ವಿಷಯಗಳನ್ನು
ಅರ್ಥಮಾಡಿಕೊಳ್ಳುವುದು, ತನಗೆ ತಿಳಿದ ವಿಚಾರಗಳನ್ನು ಒಂದಕ್ಕೊಂದು ಜೋಡಿಸುವುದು,
ಕಲ್ಪನೆ ಮಾಡಿಕೊಳ್ಳುವುದು ಇತ್ಯಾದಿ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯ ಅಂಶಗಳಿವು.


ಈ ಎಲ್ಲ ರೀತಿಯ ಬೆಳವಣಿಗೆಗಳೂ ಸಹಜವಾಗಿ ನಡೆಯುವ ಪ್ರಕ್ರಿಯೆಗಳು. ಆರೋಗ್ಯಕರ
ಮಗುವೊಂದು ಎಂತಹದೇ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯ ಕುಟುಂಬದಲ್ಲಿ ಜನಿಸಿರಲಿ, ಈ ಎಲ್ಲ
ಬೆಳವಣಿಗೆಗಳೂ ನಡೆದೇ ನಡೆಯುತ್ತವೆ. ಅಕಸ್ಮಾತ್ ಮಗುವಿನ ಆರೋಗ್ಯದಲ್ಲಿ, ಅದರ ಮಾನಸಿಕ,
ಬೌದ್ಧಿಕ ಬೆಳವಣಿಗೆಯಲ್ಲಿ ಸಮಸ್ಯೆ ಇದೆ ಎಂದಾದಾಗ ಮಾತ್ರ ಈ ಎಲ್ಲ ಬೆಳವಣಿಗೆಗಳೂ(mile
stones) ಕುಂಠಿತಗೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ತಜ್ಞರ ಸಲಹೆ ಮತ್ತು
ಮಾರ್ಗದರ್ಶನದಂಯೆತೇ ನಡೆಯಬೇಕು. ಆದರೆ ಆರೋಗ್ಯವಂತ ಮಗುವಾಗಿದ್ದಲ್ಲಿ ನಮ್ಮ
ಹಸ್ತಕ್ಷೇಪ ಹೆಚ್ಚು ಇಲ್ಲರಿದುವುದೇ ಉತ್ತಮ.


ಹಸ್ತಕ್ಷೇಪ ಎಂದರೆ? ನಮ್ಮ ಮಕ್ಕಳ ಬೆಳವಣಿಗೆಗೆ ನಾವು ಸಹಕರಿಸಬಾರದೇ? ಅದು ಹೇಗೆ
ತಪ್ಪಾಗುತ್ತದೆ? ಇತ್ಯಾದಿ ಪ್ರಶ್ನೆಗಳು ಸಹಜ. ಮೊದಲೇ ಹೇಳಿದಂತೆ ಬೆಳವಣಿಗೆ ಸಹಜ
ಪ್ರಕ್ರಿಯೆ. ನಮ್ಮ ಮುಖ್ಯ ಕರ್ತವ್ಯ ಆ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಅವರಿಗೆ
ಕೊಡುವುದು.
ಈ ಮೇಲಿನ ಉದಾಹರಣೆಗಳನ್ನು ಗಮನಿಸೋಣ. ಇಲ್ಲಿ ಅವರ ವಯಸ್ಸಿಗೆ ಮೀರಿದ್ದನ್ನು ಅವರಿಂದ
ನಿರೀಕ್ಷಿಸಲಾಗುತ್ತಿದೆ. ಅದಕ್ಕೆ ಎರಡು ಕಾರಣಗಳಿವೆ. ತಮ್ಮ ಮಕ್ಕಳು ಎಲ್ಲದರಲ್ಲಿಯೂ
ಮುಂದಿರಬೇಕು ಎಂಬ ತಾಯಂದಿರ ಹಂಬಲ. ಮತ್ತು ತಮ್ಮ ಮಕ್ಕಳಿಗಾಗಿ ತಾವು ಎಲ್ಲವನ್ನೂ
ಕೊಡುತ್ತೇವೆ ಮತ್ತು ಅವರನ್ನು ತಾವು ಅತ್ಯುತ್ತಮವಾದ ವಿಧಾನದಿಂದ ಬೆಳೆಸುತ್ತಿದ್ದೇವೆ
ಎಂಬ ಭ್ರಮೆ. ತಾಯಂದಿರ ಹಂಬಲ, ಆಸೆಗಳು ಸಹಜ. ಆದರೆ ಈ ಭ್ರಮೆ? ಅದು ಮಕ್ಕಳ
ಬೆಳವಣಿಗೆಗೇ ಮಾರಕವಾಗಬಹುದು.


ಕಾಲ ಬದಲಾದಂತೆ ನಮ್ಮ ಬದುಕಿನ ರೀತಿ ಬದಲಾಗಿದೆ. ತಲೆಮಾರಿನ ಹಿಂದೆ ಇದ್ದ ಬದುಕು
ಈಗಿಲ್ಲ. ನಮ್ಮ ಅಜ್ಜಿಯಂದಿರಿಗೆ ತಿಳಿಯದ ವಿಜ್ಞಾನ ನಮಗೆ ತಿಳಿದಿದೆ. ಅವರು ತಮ್ಮ
ಅಜ್ಜಿಯಂದಿರಿಂದ ಕಲಿತ ಮತ್ತು ತಮಗೆ ಸರಿ ಅನಿಸಿದ ರೀತಿಯಲ್ಲಿ ಮಕ್ಕಳನ್ನು
ಬೆಳೆಸಿದರು. ಬೆಳೆಸಿದರು ಅನ್ನುವುದಕ್ಕಿಂತ ಆಗಿನ ಕಾಲದಲ್ಲಿ ಮಕ್ಕಳು
ಬೆಳೆಯುತ್ತಿದ್ದರು. ತಮ್ಮಷ್ಟಕ್ಕೇ!
ಆದರೆ ನಾವು ಚೈಲ್ಡ್ ಸೈಕಾಲಜಿ ಅಭ್ಯಾಸ ಮಾಡಿ ಮಕ್ಕಳನ್ನು ಬೆಳೆಸುತ್ತೇವೆ. ನಮಗಾಗಿ
ಇಂದು ಪೇರೆಂಟಿಂಗ್ ತರಗತಿಗಳಿವೆ. ಮಕ್ಕಳ ಪ್ರತಿಯೊಂದು ಮಾತು, ವರ್ತನೆಗಳ ಹಿಂದಿನ
ಕಾರಣವನ್ನು ನಾವು ಹುಡುಕುತ್ತೇವೆ. ಮಗು ಹೀಗೆ ವರ್ತಿಸಿದರೆ ಅದಕ್ಕೆ ಹೀಗೆ ಅರ್ಥ,
ಹಾಗಾಗಿ ನಾವು ಹೀಗೆ ಪ್ರತಿಕ್ರಿಯಿಸಬೇಕು ಎಂದು ಕಲಿತಿದ್ದೇವೆ. ಮಕ್ಕಳನ್ನು
ಶಿಕ್ಷಿಸುವುದು ಅಪರಾಧ ಎನಿಸುತ್ತದೆ ನಮಗೆ. ಮಗುವಿಗೆ ನಾವು ಒಂದೇ ಒಂದು ಏಟನ್ನೂ
ಕೊಡುವುದಿಲ್ಲ. ಮಗುವಿನೊಂದಿಗೆ ನಾವು ಮಾತನಾಡುವಾಗ ಯಾವ ರೀತಿ ಮಾತನಾಡಬೇಕು
ಎಂಬುದನ್ನು ನಾವು ಪುಸ್ತಕಗಳು ಮತ್ತು ತರಗತಿಗಳಿದ ಕಲಿಯುತ್ತಿದ್ದೇವೆ. ನಮ್ಮ ಮಗು
ಎಲ್ಲವನ್ನೂ ಮಾಡಬೇಕು, ಎಲ್ಲವನ್ನೂ ಕಲಿಯಬೇಕು. ಮಗುವಿನ ಮನಸ್ಸಿಗೆ ನೋವಾಗದಂತೆ
ಮಗುವನ್ನು ಬೆಳೆಸಬೇಕು. ಮಗುವಿಗೆ ಯಾವುದೇ ಕೊರತೆಯಾಗಬಾರದು… ಹೀಗಿದೆ ಇಂದಿನ ಕಥೆ.


ಆದರೂ ಎಲ್ಲೋ ಎಡವುತ್ತಿಲ್ಲವೇ ನಾವು? ಎರಡು ರೀತಿಯ ತಪ್ಪುಗಳು ನಮ್ಮಿಂದ ಆಗುತ್ತಿವೆ.
ಮೊದಲನೆಯದು, ಅವರನ್ನು ಸಹಜವಾಗಿ ಬೆಳೆಯಲು ಬಿಡದೇ ಅವರಿಂದ ಅವರ ವಯಸ್ಸು ಮತ್ತು
ಸಾಮರ್ಥ್ಯವನ್ನು ಮೀರಿದ ಸಾಧನೆಯನ್ನು ಬಯಸುತ್ತಿದ್ದೇವೆ. ಪ್ರತಿಯೊಂದು ಮಗುವೂ ತನ್ನದೇ
ರೀತಿಯಲ್ಲಿ ವಿಶಿಷ್ಟ. ಅದನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ನಮ್ಮ ಪ್ರತಿಷ್ಠೆಗೆ,
ನಮ್ಮ ಆಸೆಗಳನ್ನು ಈಡೇರಿಸುವುದಕ್ಕೆ ಮಕ್ಕಳ ಮೇಲೆ ನಾವು ಒತ್ತಡ ಹೇರುವುದು ಮೂರ್ಖತನ.
ಅವರ ರೆಕ್ಕೆ ಕತ್ತರಿಸಿ ನಾವು ಏನನ್ನು ಸಾಧಿಸಬೇಕಿದೆ?
ಅವರು ಸಾಕಾರಗೊಳಿಸಬೇಕಿರುವುದು ಅವರ ಕನಸುಗಳನ್ನು. ನಮ್ಮದನ್ನಲ್ಲ!


ನಮ್ಮಿಂದ ಆಗುತ್ತಿರುವ ಎರಡನೆಯ ತಪ್ಪು, ನಮ್ಮ ಮಕ್ಕಳಿಗೆ ನಾವು ಯಾವುದೇ ಕೊರತೆ
ಇಲ್ಲದಂತೆ ಮತ್ತು ಅವರಿಗೆ ನೋವೇ ಆಗದಂತೆ ನೋಡಿಕೊಳ್ಳುವುದು. ಅರೆ! ಇದು ತಪ್ಪಾಗುವುದು
ಹೇಗೆ?
ಕೇಳಿದ್ದೆಲ್ಲ ಸಿಕ್ಕಾಗ, ಮತ್ತು ತಾನು ಹೇಳಿದಂತೆಯೇ ಮನೆಯಲ್ಲಿ ಎಲ್ಲವೂ ನಡೆದಾಗ
ಅವರಿಗೆ ನಿರಾಕರಣೆ ಅನ್ನುವುದೊಂದು ತಿಳಿದೇ ಇರುವುದಿಲ್ಲ. ನಮ್ಮ ಈ ಸ್ವಭಾವದಿಂದಾಗಿ
ನಿರಾಕರಣೆಯನ್ನು, ಸೋಲನ್ನು ಎದುರಿಸುವುದು ಸಾಧ್ಯವೇ ಆಗದಂತಹ ಸ್ಥಿತಿಗೆ ನಾವವರನ್ನು
ನೂಕುತ್ತೇವೆ.
ಅವರ ಅಗತ್ಯಕ್ಕೆ ಕೊರತೆಯಾಗದಂತೆ, ಆದರೆ ಬಯಸಿದ್ದಲ್ಲೆವೂ ಸಿಗುವುದಿಲ್ಲ ಎಂಬು೦ದು
ಅರಿವಾಗುವಂತೆ ಅವರನ್ನು ಬೆಳೆಸಬೇಕಿದೆ.


ಅವರಿಗೆ ಜಗತ್ತಿನ ಬಾಗಿಲನ್ನು ತೆರೆಯೋಣ. ಅವರು ನಡೆಯಲಿ. ಬೀಳುತ್ತಾ ಏಳುತ್ತಾ
ಓಡುತ್ತಾ. ಹಾರುವ ಚಿಟ್ಟೆ, ಹಕ್ಕಿ, ವಿಮಾನಗಳನ್ನು, ಓಡುವ ನದಿ, ಜಿಂಕೆ, ವಾಹನಗಳನ್ನು
ನೋಡಲಿ. ನೀರಿಗಿಳಿಯಲಿ, ಈಜು ಕಲಿಯಲಿ. ಪಕ್ಕದವನೊಂದಿಗೆ ಹಂಚಿ ತಿನ್ನಲಿ.
ಬಿದ್ದವನನ್ನು ಎಬ್ಬಿಸಲಿ. ಸರಿ-ತಪ್ಪುಗಳನ್ನು ಅರಿತು ಬದುಕಲಿ. ನಾವು ಒಂದಷ್ಟು ಕಾಲ
ಪಕ್ಕದಲ್ಲಿರೋಣ, ನಿಧಾನಕ್ಕೆ ಹಿಂದಿರೋಣ. ಅವರು ನಡೆಯುತ್ತಾರೆ. ನಾವು ನಡೆಯಲು
ಬಿಡಬೇಕಷ್ಟೇ.
***

ಒಂದು ಕಥೆ ನೆನಪಾಗುತ್ತದೆ ಇಲ್ಲಿ.
ಹಿಂದೊಬ್ಬ ರಾಜ. ಅವನಿಗೊಬ್ಬಳು ರಾಣಿ. ಹೆಣ್ಣುಮಗುವನ್ನು ಹಡೆಯುತ್ತಾಳೆ ರಾಣಿ.
ಮಗುವನ್ನು ನೋಡಿದ ರಾಜ ವೈದ್ಯರಲ್ಲಿಗೆ ಓಡುತ್ತಾನೆ. ಮಗುವಿಗೆ ಬಾಯಲ್ಲಿ ಹಲ್ಲೂ ಇಲ್ಲ,
ತಲೆಯಲ್ಲಿ ಕೂದಲೂ ಇಲ್ಲ. ಏನು ಮಾಡುವುದು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ
ನನ್ನಲ್ಲಿ ಔಷಧಿಯಿದೆ. ಹದಿನಾರು ವರ್ಷಗಳ ಕಾಲ ನಾನು ಈ ಮಗುವನ್ನು ಸಾಕಿ ಔಷಧಿ
ಕೊಡುತ್ತೇನೆ. ಆಗ ನಿನಗೆ ಸುಂದರಿಯಾದ ಮಗಳು ಸಿಗುತ್ತಾಳೆ ಎಂದ ವೈದ್ಯ. ಆತ ಏನೂ
ಮಾಡಲಿಲ್ಲ. ರಾಜಕುಮಾರಿ ಅವನ ಆಶ್ರಮದಲ್ಲಿ ಬೆಳೆದಳು. ಹದಿನಾರು ವರ್ಷ ಕಳೆದಾಗ ಸುಂದರಿ
ರಾಜಕುಮಾರಿಯನ್ನು ರಾಜನಿಗೊಪ್ಪಿಸಿದ. ಅದು ಯಾವ ಔಷಧಿಯನ್ನು ಕೊಟ್ಟು ಮಗುವನ್ನು ಇಷ್ಟು
ಸುಂದರವಾಗಿಸಿದಿರಿ ಎಂದು ಕೇಳಿದ ರಾಜ. ಕಾಲವೆಂಬ ಔಷಧಿ ಎಂದ ವೈದ್ಯ.



Author Details


Srimukha

Leave a Reply

Your email address will not be published. Required fields are marked *