ಶಾಲೆಗೂ ನಮ್ಮ ಬಡಾವಣೆಗೂ ಬಹುಶಃ ಒಂದೂವರೆ ಕಿಲೋಮೀಟರ್ ಇದ್ದಿರಬಹುದು. ಮಧ್ಯಮವರ್ಗದವರೇ ಬರುತ್ತಿದ್ದ ಶಾಲೆ. ಹೆಚ್ಚಿನ ಮಕ್ಕಳು ನಡೆದುಕೊಂಡೇ ಬರುತ್ತಿದ್ದುದು. ನಾವೊಂದು ನಾಲ್ಕೈದು ಜನ ಮಕ್ಕಳದ್ದು ಮನೆ ಇದ್ದುದು ಒಂದೇ ಬಡಾವಣೆಯಲ್ಲಿ. ಪರಸ್ಪರ ಮಾತನಾಡಿಕೊಂಡು ಒಟ್ಟಿಗೇ ಹೊರಡಲು ಈಗಿನಂತೆ ಸಂಪರ್ಕ ಸಾಧನಗಳೇನೂ ಇರಲಿಲ್ಲವಾಗಿ ಬೆಳಗ್ಗೆ ನಮ್ಮ ನಮ್ಮ ಸಮಯಕ್ಕೆ ನಾವು ಹೊರಡುತ್ತಿದ್ದೆವು. ಸಿಕ್ಕರೆ ಜೊತೆ ಇರುತ್ತಿತ್ತು. ಇಲ್ಲದಿದ್ದರೆ ಒಂಟಿ ಪಯಣ. ಆದರೆ ಸಂಜೆ ಹಾಗಲ್ಲ. ಎಲ್ಲರೂ ಒಟ್ಟಿಗೇ ಹೊರಡುತ್ತಿದ್ದೆವು ಶಾಲೆಯಿಂದ. ಬಡಾವಣೆಗೆ ತಲುಪಿದ ಅನಂತರ ಒಬ್ಬೊಬ್ಬರದು ಒಂದೊಂದು ರಸ್ತೆಯ ಕೊನೆಯಲ್ಲಿ ಬೀಳ್ಕೊಡುಗೆ.
ನಾಲ್ಕನೆಯ ಕ್ಲಾಸಿನಲ್ಲಿದ್ದಾಗ ನಡೆದದ್ದದು. ಅದು ಯಾವ ತಿಂಗಳೆಂದು ನೆನಪಿಲ್ಲ. ಮಳೆಗಾಲ ಹೌದೋ ಅಲ್ಲವೋ ಅನ್ನುವುದೂ ನೆನಪಿಲ್ಲ. ಆದರೆ ಬೆಂಗಳೂರಿನ ಮಳೆಗೆ ಹೊತ್ತು ಗೊತ್ತು ಕಾಲ ಏನಾದರೂ ಇದೆಯೇ? ಒಂದು ಸಂಜೆ ಎಂದಿನಂತೆ ಶಾಲೆಯಿಂದ ನಮ್ಮದೇ ಮಾತುಕತೆಯಲ್ಲಿ ಮಗ್ನರಾಗಿ ಮನೆಯತ್ತ ನಮ್ಮ ಸವಾರಿ ಬರುತ್ತಿರುವಾಗ ಸುರಿದೇ ಬಿಟ್ಟಿತು. ಹೊರಲಾರದ ಭಾರದ ಚೀಲವನ್ನು ಹಾಗೋ ಹೀಗೋ ಹೊತ್ತುಕೊಂಡು ಹೋಗುವ ನಮ್ಮನ್ನು ಈ ಮಳೆ ಹೆದರಿಸಿಬಿಟ್ಟಿತು. ಗುಡುಗುಸಿಡಿಲಿನ ಅಬ್ಬರ. ಕತ್ತಲುಗಟ್ಟಿದ ಆಕಾಶ. ಏನಿಲ್ಲವೆಂದರೂ ನೆಲ್ಲಿಕಾಯಿ ಗಾತ್ರದ ಹನಿಗಳು. ಜೊತೆಗಿದ್ದವರೆಲ್ಲರೂ ಅದು ಹೇಗೋ ಓಡಿಹೋಗಿಬಿಟ್ಟಿದ್ದರು. ನಾನೂ ಓಡಲು ಪ್ರಯತ್ನಿಸಿದೆ. ಚೀಲದಲ್ಲಿದ್ದ ಅಷ್ಟೂ ಪುಸ್ತಕಗಳೊಳಗಿರುವುದನ್ನು ಓದಿ ಕಲಿತುಬಿಡುವಷ್ಟು ಸುಲಭವಾಗಿ ಆ ಪುಸ್ತಕಗಳನ್ನು ಹೊತ್ತು ಓಡುವ ಶಕ್ತಿ ನನಗಿರಲಿಲ್ಲ.
ಅಂತಹ ಕುಂಭದ್ರೋಣ ಮಳೆಯಲ್ಲಿ, ನಿರ್ಜನ ರಸ್ತೆಯಲ್ಲಿ, ಒಂಟಿಯಾಗಿ ನಿಂತುಬಿಟ್ಟೆ ನಾನು. ಮಳೆಯ ಬಗ್ಗೆ ಭಯವೇನೂ ಇರಲಿಲ್ಲವಾದರೂ ಇದ್ದಕ್ಕಿದ್ದಂತೆ ಎಲ್ಲರೂ ನನ್ನೊಬ್ಬಳನ್ನೇ ಬಿಟ್ಟು ಹೋದದ್ದು ನೋವಾಗಿತ್ತು. ಮಳೆಯೊಂದಿಗೆ ಸ್ಪರ್ಧೆಗೆ ನಿಂತಂತೆ ಕಣ್ಣೀರು ಧುಮುಕಿತು. ಅಲ್ಲೇ ರಸ್ತೆಯಲ್ಲಿ ಕೂತುಬಿಡೋಣ ಅನಿಸಿಬಿಟ್ಟಿತ್ತು. ಒಂದು ಹೆಜ್ಜೆ ಎತ್ತಿಡುವುದಕ್ಕೂ ಬಿಡಲಿಲ್ಲ ಆ ನೋವು. ಸಮಸ್ಯೆ ಬಂದಾಗ ಅದು ಹೇಗೆ ಒಂಟಿಯಾಗಿ ಬಿಟ್ಟು ಹೊರಟುಹೋದರು ಎಲ್ಲರೂ!
ಒಂದೆರಡು ನಿಮಿಷ ಅಲ್ಲಿಯೇ ನಿಂತಿದ್ದೆ. ಮನೆ ತಲುಪಲು ಮುಕ್ಕಾಲು ಕಿಲೋಮೀಟರಾದರೂ ಇದ್ದಿರಬಹುದು. ಸಿಟ್ಟು, ಬೇಸರ ಅವರ ಬಗೆಗೋ ಅಥವಾ ನನ್ನ ಪರಿಸ್ಥಿತಿಯ ಬಗೆಗೋ ಅರ್ಥವಾಗಲಿಲ್ಲ. ನಿಂತರೆ ಮನೆ ತಲುಪಲಾರೆ ಅನಿಸಿತು. ನಡೆಯಲಾರಂಭಿಸಿದೆ. ಮಳೆ ಸುರಿಯುತ್ತಲೇ ಇತ್ತು. ನಾನು ನಡೆಯುತ್ತಲೇ ಇದ್ದೆ. ಮನೆ ತಲುಪುವಷ್ಟರಲ್ಲಿ ಚೀಲವೂ, ನಾನೂ, ಪುಸ್ತಕಗಳೂ ಒದ್ದೆ. ಅಷ್ಟರಲ್ಲಿ ಸಿಟ್ಟು ಕರಗಿತ್ತು. ಬೇಸರ ಇಲ್ಲವಾಗಿತ್ತು. ಒಂಟಿಯಾಗಿ ನಡೆದು ಬಂದದ್ದು ಧೈರ್ಯ ತಂದಿತ್ತು. ಏನೋ ಸಾಧಿಸಿದ ಸಂತೋಷ ಕೊಟ್ಟಿತ್ತು. ಅಂದು ನಾನು ಶಾಲೆಯ ಹೊರಗೂ ಏನೋ ಕಲಿತಿದ್ದೆ.
ಇಂದಿಗೂ ಅಂಥದ್ದೇ ಸಂದರ್ಭಗಳು ಬರುತ್ತವೆ. ಅಂದು ರಸ್ತೆಯಲ್ಲಿ ನಡೆಯುವಾಗ ಆಗಸದಿಂದ ಮಳೆ ಸುರಿದಿತ್ತು. ಇಂದು ಜೀವನದ ಪಯಣದಲ್ಲಿ ವಿಧಿ ಮಳೆ ಸುರಿಸುತ್ತದೆ. ಅಂದಿನಂತೆಯೇ ಸಿಟ್ಟು, ನೋವು, ಬೇಸರಗಳು ಇಂದೂ ಆವರಿಸುತ್ತವೆ. ಸಾಕು ಬದುಕು ಅನ್ನಿಸುತ್ತದೆ. ಆದರೆ ಅಂದಿನಂತೆಯೇ ಇಂದೂ ಮತ್ತೆ ಎದ್ದು ನಡೆಯುತ್ತೇನೆ. ಜೊತೆಗೆ ಯಾರು ಇದ್ದಾರೆ ಅಥವಾ ಇಲ್ಲ ಅನ್ನುವುದು ಮುಖ್ಯವಾಗುವುದೇ ಇಲ್ಲ. ನಾನು ನಡೆಯಬೇಕಾದ ಹಾದಿ ಮಾತ್ರ ಮುಖ್ಯ.
ಇದು ನನ್ನೊಬ್ಬಳ ಪಯಣದ ಕಥೆಯಲ್ಲ
ಎಲ್ಲರದೂ ಹೀಗೆಯೇ. ಯಾರೂ ಇಲ್ಲ ಜೊತೆಗೆ ಅನಿಸುವ ಕ್ಷಣಕ್ಕೆ, ಎಲ್ಲ ಮುಗಿಯಿತು ಎಂದು ಅನಿಸುವ ಹೊತ್ತಿಗೆ ಒಂದು ಹೆಜ್ಜೆ ಮುಂದಿಡುವ ಧೈರ್ಯ ಒಗ್ಗೂಡಿಸುವುದಿದೆಯಲ್ಲ, ಅದು ನಮ್ಮ ಗೆಲುವು. ಅಲ್ಲೆಲ್ಲೋ ದೂರದಲ್ಲಿರುವ ಗುರಿ ತಲುಪುತ್ತೇವೋ ಇಲ್ಲವೋ ಅನ್ನುವುದಲ್ಲ.
ಇಂತಹ ಸಂದರ್ಭಗಳು ಎದುರಾದಾಗ ನಮಗೆ ಕೆಲವೊಮ್ಮೆ ನಿರಾಸೆ ಮೂಡುತ್ತದೆ. ಜಿಗುಪ್ಸೆಯೋ ವೈರಾಗ್ಯವೋ ಮೂಡಿಬಿಡುತ್ತದೆ. ಆದರೆ ವಾಸ್ತವದಲ್ಲಿ ಅದು ವೈರಾಗ್ಯವೂ ಅಲ್ಲ ಜಿಗುಪ್ಸೆಯೂ ಅಲ್ಲ. ಅದು ನಮ್ಮ ಮನಸ್ಸಿನ ಸಹಜ ಆಟ. ಏಳುಬೀಳುಗಳಿಲ್ಲ ಹಾದಿ ಯಾವುದಿದೆ? ನಮ್ಮ ಮನಸ್ಸೂ ಹಾಗೆಯೇ. ಒಮ್ಮೆ ಹಾರಿದರೆ ಇನ್ನೊಮ್ಮೆ ಕುಂಟುತ್ತದೆ. ಮತ್ತೊಮ್ಮೆ ಮುಗ್ಗರಿಸಿ ಬಿದ್ದರೆ ಇನ್ನೊಮ್ಮೆ ಸಮತೋಲನದಿಂದ ನಡೆಯುತ್ತದೆ. ಅದಿರುವುದೇ ಹಾಗೆ.
ಮನಸ್ಸಿರುವುದೇ ಹಾಗೆ. ಒಮ್ಮೆ ನೀನು ಒಂಟಿ ಎಂದು ಹೆದರಿಸುತ್ತದೆ. ಮತ್ತೊಮ್ಮೆ ಅದೇಕೆ ಅಷ್ಟೊಂದು ಜನರ ನಡುವೆ ಇದ್ದು ಹಿಂಸಿಸುತ್ತೀಯ ಎಂದು ಪ್ರಶ್ನಿಸುತ್ತದೆ. ನೋಡು ನಿನ್ನ ಆತ್ಮೀಯ ನಿನ್ನ ಬಿಟ್ಟು ನಡೆದೇ ಬಿಟ್ಟ ಎಂದು ನೋಯಿಸುತ್ತದೆ. ಇನ್ನೊಮ್ಮೆ ನೋಡು ನಿನ್ನ ಪ್ರೀತಿಸುವವರು ಇಷ್ಟು ಜನ ಎಂದು ಉಬ್ಬಿಸುತ್ತದೆ. ಮನಸ್ಸಿಗೆ ಸೋತವನು ಇದೆಲ್ಲವನ್ನೂ ನಂಬಿ ಮೋಸ ಹೋಗುತ್ತಾನೆ.
ನೂರು ಜನರ ಮಧ್ಯೆ ಇದ್ದೂ ನಮ್ಮೊಳಗೆ ಒಂಟಿತನ ಕಾಡುತ್ತಿದ್ದರೆ ನಾವು ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡಿದ್ದೇವೆ. ಸ್ವಲ್ಪ ತೆರೆದುಕೊಂಡರೂ ಹೊರಗಿನ ಗಾಳಿ ಬೆಳಕುಗಳು ಬಾರದಿದ್ದೀತೇ? ಕಿಟಿಕಿಯಲ್ಲಿ ಕಂಡ ಮುಖಗಳು ಮುಗುಳ್ನಗದೇ ಉಳಿದಾವೇ?
ಹಾಗೆಯೇ,
ಸಂತೆಯೊಳಗಿದ್ದೂ ಸಂತನಾಗುವುದು ಎಲ್ಲರಿಗೂ ಸುಲಭಸಾಧ್ಯವಲ್ಲದಿದ್ದರೂ ಬೇಕೆನಿಸಿದಾಗ ಹೊರಜಗತ್ತಿನ ಕಿಟಕಿ ಬಂದ್ ಮಾಡಿ ಒಳಗೆ ನಮ್ಮನ್ನೇ ನಾವು ಕಂಡುಕೊಳ್ಳುವುದು ಅಷ್ಟೇನೂ ಕಷ್ಟವೂ ಅಲ್ಲ.
ಮನಸ್ಸು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ನೋಡು ನಿನಗೇ ಇಷ್ಟು ಕಷ್ಟ. ಮುಗಿಯುವುದೇ ಇಲ್ಲ ಈ ನಿನ್ನ ಸಂಘರ್ಷಗಳು.’ ಎಂದು ಹೆದರಿಸುತ್ತದೆ, ಅಷ್ಟೇ ಅಲ್ಲ ನಾವದನ್ನು ನಂಬುವಂತೆಯೂ, ಇದೆಲ್ಲ ಸಾಕು ಎಂದು ನಾವು ವಿಧಿಯೆದುರು ಗೋಗರೆಯುವಂತೆ ಮಾಡಿಬಿಡುತ್ತದೆ.
ಆದರೆ ಸಂತೋಷವಾದಾಗ ಹೀಗೆ ‘ಸಾಕು’ ಎಂದು ಅದು ಹೇಳುವುದೇ ಇಲ್ಲ ಏಕೆ?!
ನೆತ್ತಿಯ ಮೇಲೆ ಮಳೆಯೋ, ಬಿಸಿಲೋ, ನೆರಳೋ; ಅಂಗಾಲಿಗೆ ಹೂವಿನ ಹಾಸೋ, ಮುಳ್ಳಿನ ಮೊನಚೋ; ಮುಂದಿನ ತಿರುವಿನಲ್ಲಿ ಪ್ರಪಾತವೋ ಪರ್ವತವೋ; ಜೊತೆಗೇ ನಡೆದು ಬಂದವ ಹಿಂದೆಯೇ ಉಳಿಯುವನೋ, ಕಾಡುವ ನಕ್ಷತ್ರಿಕ ಜೊತೆಯಾಗುವನೋ; ಒಂಟಿಯೋ ಜಂಟಿಯೋ; ಕತ್ತಲೋ ಬೆಳಕೋ…
ನಡೆಯುತ್ತಾ ಇರುವುದು ಬದುಕು. ಜೊತೆಗೆ ಯಾರಿದ್ದರೂ, ಇರದಿದ್ದರೂ; ಏನಾದರೂ, ಆಗದಿದ್ದರೂ.