ಹೀಗೊಂದು ವಿಡಿಯೋ ವಾಟ್ಸ್ಯಾಪಲ್ಲಿ ಹರಿದಾಡುತಿತ್ತು. ಒಂದು ಬೈಕಲ್ಲಿ ಅಪ್ಪ ಮತ್ತು ಪುಟ್ಟ ಮಗು. ರೈಲ್ವೇ ಹಳಿ ದಾಟುವಾಗ ಆ ಬೈಕ್ ರೈಲು ಹಳಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿತು. ಅದನ್ನು ತಪ್ಪಿಸಲು ಹರಸಾಹಸ ಮಾಡಿದರೂ ಆಗಲೇ ಇಲ್ಲ ಅಪ್ಪನ ಕೈಯಲ್ಲಿ. ಇನ್ನೇನು ರೈಲು ಹತ್ತಿರವೇ ಬರುತ್ತಾ ಇತ್ತು. ಕಡೆಗೆ ಹೇಗೂ ತಾನು ಮತ್ತು ಮಗು ಆಚೆ ಕಡೆ ಹಾರಿಕೊಂಡರು. ಆದರೂ ಬೈಕ್ ಸಿಕ್ಕಿ ಹಾಕಿಕೊಂಡಿತ್ತಲ್ಲ. ಅದರ ಮೇಲೆ ವ್ಯಾಮೋಹ. ಮಗು, ಬಿಟ್ಟು ಹೋಗಬೇಡ ಅಂತ ಎಸ್ಟೇ ಕಾಲು ಹಿಡಿದು ಜಗ್ಗಿದರೂ ಅಪ್ಪ ಬೈಕ್ ಬಿಡಿಸಲಿಕ್ಕೆ ಹೋದ. ಅಂತೂ ಇಂತೂ ಸಿಕ್ಕಿ ಹಾಕಿಕೊಂಡಿದ್ದ ಬೈಕ್ ಬಿಟ್ಟಿತು. ಇನ್ನೇನು ಕೆಲವೇ ಕ್ಷಣದಲ್ಲಿ ರೈಲು ಬರುವುದರಲ್ಲಿತ್ತು. ಬೈಕ್ ಮತ್ತು ಅಪ್ಪ ಆಚೆ ಬದಿ ಬಿದ್ದರು. ಮಗು ಅಪ್ಪನನ್ನು ಕೂಗಿಕೊಂಡು ಈಚೆಯಿಂದ ಆಚೆ ದಾಟಲು ಹೋಗಿ ಮತ್ತೆ ಅದರ ಕಾಲು ಹಳಿಗೆ ಸಿಕ್ಕಿಹಾಕಿಕೊಂಡಿತು. ಅಪ್ಪನ ಕಾಲ ಮೇಲೇ ಬೈಕಿದೆ. ತೆಗೆದು ಆಚೆ ಬರಲಾಗುತಿಲ್ಲ. ರೈಲು ಅದಾಗಲೇ ಬರತೊಡಗಿದೆ. ಮಗು ಅನ್ಯಾಯವಾಗಿ ಅಲ್ಲೇ ಪ್ರಾಣ ಬಿಟ್ಟಿತು. ಎಂಥಾ ಮನಕಲಕಿದ ದೃಶ್ಯ.
ಈ ವಿಡಿಯೋ ನೋಡುತ್ತಿದ್ದಂತೆ ಮನಸಿಗೆ ಬಂದಿದ್ದು ಮಲೆನಾಡ ರೈತಾಪಿ ವರ್ಗ. ಜೀವಂತ ಮುದ್ದಾದ ಮಗುವನ್ನು ಅಲ್ಲೇ ಬಿಟ್ಟು ನಿರ್ಜೀವ ಆ ಬೈಕಿನತ್ತ ತೆರಳಿ ಮಗುವನ್ನು ಕಳೆದುಕೊಂಡ ಅಪ್ಪನಂತೆ ಇಂದು ನಾವು. ಪ್ರಕೃತಿ ನಮಗೆ ಮುದ್ದಾದ ಫಲಭರಿತ ಕೃಷಿಭೂಮಿಯನ್ನು ನೀಡಿತ್ತು. ಅತಿ ಹಣದ ಆಸೆ, ಬೇಗನೆ ಶ್ರೀಮಂತನಾಗುವ ಬಯಕೆ ರೈತನ ಬೆನ್ನುಹತ್ತಿ ನಿರ್ಜೀವ ಹಣದತ್ತ ಮುಖ ಮಾಡುವಂತೆ ಮಾಡಿ ಕೈಯಲಿದ್ದ ಫಲಭರಿತ ಭೂಮಿಯನ್ನು ಬಂಜರಾಗಿಸಿದೆ. ಶವವಾಗಿಸಿದೆ.
ಬೇಸಿಗೆಯ ಧಗೆಗೆ ಮಲೆನಾಡು ಭಾಗಶಃ ಬೆಂದಿದೆ. ಮಳೆಗಾಗಿ ಕಾಯುವ ಚಾತಕಪಕ್ಷಿಯಂತೆ ರೈತ ಹನಿ ನೀರಿಗಾಗಿ ಕಾಯುವಂತಾಗಿದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಒಣಗಿ ನಿಂತ ಗಿಡಮರವನ್ನು ನೋಡಿ ಇದು ಮಲೆನಾಡೇ ಎಂಬ ಪ್ರಶ್ನೆ ಎದುರಾಗಿದೆ. ಪ್ರತಿ ವರ್ಷ ಎಪ್ರಿಲ್, ಮೇ ತಿಂಗಳ ತಾಪಮಾನ ಈ ಭಾರಿ ಮಾರ್ಚಿನಲ್ಲೇ ಕಾಣಿಸುತ್ತಿದೆ. ಕೆರೆ ಬಾವಿಗಳೆಲ್ಲ ಬತ್ತಿವೆ. ಬತ್ತಿವೆ ಎನ್ನುವುದಕ್ಕಿಂತ ನಾವೇ ಬತ್ತಿಸಿದ್ದೇವೆ. ಸಿಕ್ಕ ಸಿಕ್ಕಲ್ಲೆಲ್ಲ ಬೋರವೇಲ್ ಕೊರೆದು ಕೊರೆದು ಅಂತರ್ಜಲದ ಮಟ್ಟ ಎಣಿಕೆಗೆ ಸಿಗದಷ್ಟು ಕೆಳಹೋಗಿದೆ.
ಹಿಂದೆ ಮಲೆನಾಡೆಂದರೆ ತೋಟ, ಗದ್ದೆ, ಅದಕ್ಕೆ ಬೇಕಾಗುವಷ್ಟು ನೀರು ಪೂರೈಕೆಗೆ ಒಂದೆರಡು ಕೆರೆ. ಮನೆ ಬಳಕೆಗೆ ಒಂದು ಬಾವಿ. ಇನ್ನು ಕೆಲವು ಕಡೆ ಅಬ್ಬಿ ನೀರು ಅಂತ ಬೆಟ್ಟದಿಂದ ನೀರು ತಾನಾಗೇ ಹರಿದು ಬರುತ್ತಿತ್ತು. ತೋಟದ ಹಿಂದೆ ಸೊಪ್ಪಿನ ಬೆಟ್ಟ. ಅಲ್ಲೇ ಜಾನವಾರು ಮೇಯಲು ಹುಲ್ಲು ಬ್ಯಾಣ. ಇದ್ದಷ್ಟೇ ಜಾಗದಲ್ಲೇ ತೋಟದಲ್ಲಿ ಏಲಕ್ಕಿ, ಲವಂಗ, ಮೆಣಸು ಹೀಗಿತ್ತು. ಈಗ ಧಿಡೀರ್ ಶ್ರೀಮಂತನಾಗುವ ಬಯಕೆಯೋ, ಬೇರೆಯವರ ಅನುಕರಣೆಯೋ ಗೊತ್ತಿಲ್ಲ. ಇರೋ ಬ್ಯಾಣ, ಬೆಟ್ಟದ ಎಲ್ಲ ಮರವನ್ನು ಬೋಳಿಸಿ ಅಲ್ಲಿ ಶುಂಠಿ ಮಹಾರಾಜ ತಲೆ ಎತ್ತಿದ್ದಾನೆ. ಅದಕ್ಕೆ ನೀರು ಬೇಕಲ್ಲ. ಅಲ್ಲೊಂದು ಬೋರ್ವೆಲ್. ಇತ್ತ ಮರ ಬೋಳಿಸು. ಅಲ್ಲೇ ಬೋರ್ವೆಲ್ ತೊಡಿಸಿ ನೀರಿಗಾಗಿ ಹುಡುಕು. ವಿನಾಶದ ಅಂಚಿಗೆ ತನನ್ನೇ ತಾನೇ ದೂಡಿಕೊಳ್ಳುತ್ತಿದ್ದಾನೆ.
ಮನೆಯಲ್ಲಿ ಕೊಟ್ಟಿಗೆಯೇ ಇಲ್ಲ. ಇನ್ನು ಜಾನುವಾರು ಮೇಯುವ ಬೆಟ್ಟದ ಅವಶ್ಯಕತೆಯೇ ಇಲ್ಲ. ಸಗಣಿಯೇ ಇಲ್ಲ ಎಂದ ಮೇಲೆ ಸೊಪ್ಪಿನ ಅಗತ್ಯವೇ ಇಲ್ಲ. ಗೊಬ್ಬರ ಹೇಗೂ ಬೇಕಾದಷ್ಟು ತರ ತರ ಸಿಗವುದು. ರಾಸಾಯನಿಕ ಗೊಬ್ಬರಗಳ ಸಂಸ್ಥೆಗಳಂತೂ ಲೆಕ್ಕವಿಲ್ಲದಷ್ಟು. ರೆಡಿ ಫುಡ್, ಧಿಡೀರ್ ಬೆಳೆ. ಅಷ್ಟೇ ಬೇಗ ಭೂಮಿಯ ಫಲವತ್ತತೆಯ ಸರ್ವನಾಶ.
ಬದಲಾವಣೆ ಒಳ್ಳೆಯದೇ, ಸಹಜವೇ. ಅದು ಮೂಲಕ್ಕೆ ಪೂರಕವಾಗಿರದೆ ಮಾರಕವಾದರೆ ಮುಂದಿನ ನಾಶಕ್ಕೆ ನಾಂದಿ ನಾವೇ ಹಾಡಿದಂತೆ. ಪ್ರಕೃತಿ ನಮಗಿತ್ತ ಫಲವತ್ತಾದ ಭೂಮಿಯನ್ನು ಹಾಳು ಮಾಡಲು ನಾವ್ಯಾರು? ಗಿಡ ನೆಡಲು ಸಾಧ್ಯವಾಗದಿದ್ದರೂ ಇದ್ದ ಮರವನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಲ್ಲ? ಬುಡ ಸಮೇತ ಮರ ಗಿಡ ಉರುಳಿಸಿ ಎಲ್ಲೆಂದರಲ್ಲಿ ಬೆಳೆ ಬೆಳೆಯುವ ದುಷ್ಟ ಮನಸ್ಥಿತಿ ಯಾಕೋ ತಿಳಿಯದು.
ರೈತನೆಂದರೆ ಯೋಗಿ. ಆತನದು ಕಾಯುವ ಕೈ. ಬೆಳೆಯುವ ಕೈ. ನಾಡಿಗೆ ಅನ್ನವ ಉಣಿಸುವ ಕೈ. ಅದೇ ಕೈ ಪರಿಸರವನ್ನೇ ತನ್ನ ಸ್ವಾರ್ಥಕ್ಕೆ ಹಾಳು ಮಾಡುವ ಮನಸು ಮಾಡಿದರೆ ಪ್ರಕೃತಿಗೆ ಮುನಿಸಿಕೊಳ್ಳದೆ ವಿಧಿ ಇಲ್ಲ. ಅದಕ್ಕೂ ಮೊದಲೇ ಎಚೆತ್ತುಕೊಳ್ಳೋಣ. ಅಗತ್ಯಕ್ಕೆ ಬೇಕಾದಷ್ಟು ಬಳಸಿಕೊಳ್ಳೋಣ. ಪರಿಸರದಲ್ಲಿ ಗಿಡ ಬೆಳೆಸಲಾಗದಿದ್ದರೂ ನಾಶ ಮಾಡದಿರೋಣ. ಹುಚ್ಚು ನಿರ್ಜೀವ ಹಣದ ಹಿಂದೆ ಬಿದ್ದು ತಾಯಿ ಭೂಮಿಯನ್ನು ಶವವಾಗಿಸದಿರೋಣ.