ಸಾವಿನೊಳಗೊಂದು ಜೀವನದ ಕಲ್ಪನೆ

ಅಂಕಣ ಸ್ಫಟಿಕ~ಸಲಿಲ : ಮಹೇಶ ಕೋರಿಕ್ಕಾರು

ಅವನು ಮರಣಶಯ್ಯೆಯಲ್ಲಿ ಮಲಗಿದ್ದನು. ಘಳಿಗೆ ಘಳಿಗೆಗೂ ಅದಾವುದೋ ಒಂದು ಶೀತಲ ಹೊದಿಕೆಯು ಅವನನ್ನು ಆವರಿಸಿ ಬರುತ್ತಿತ್ತು. ಕಣ್ಣ ಮುಂದೆಲ್ಲ ಬರೀ ಕತ್ತಲು. ಗೋಡೆಯ ಮೇಲಿರುವ ಗಡಿಯಾರವು ಅದಾವುದೋ ಒಂದು ನಿಶ್ಚಿತ ಘಳಿಗೆಯೆಡೆಗೆ ಮುನ್ನುಗ್ಗುತ್ತಿರುವಂತೆ ಟಿಕ್ ಟಿಕ್ ಎಂದು ಸದ್ದು ಮಾಡುತ್ತಲೇ ಇತ್ತು. ಸುತ್ತಲೂ ಕುಳಿತು ಗೋಳೋ ಎಂದು ಅಳುತ್ತಿದ್ದರು ಅವನ ಮನೆಯ ಮಂದಿ.

“ಅಷ್ಟಕ್ಕೂ ಸತ್ಹೋಗೋ ಪ್ರಾಯ ಎಲ್ಲಿ ಆಗಿತ್ತು ಇವನಿಗೆ? ಮದುವೆಯ ಪ್ರಾಯ ಆಗಿ ನಿಂತಿದ್ದಾಳೆ ಮಗಳು. ಇರೋ ಒಬ್ಬನೇ ಮಗ. ಇನ್ನೂ ತನ್ನ ಕಾಲ ಮೇಲೆ ತಾನು ನಿಂತಿಲ್ಲ ಅವನು ಪಾಪ. ಯಜಮಾನನೇ ಇಲ್ಲವಾದ ಮೇಲೆ ಈ ಕುಟುಂಬವನ್ನು ಇನ್ನು ಯಾರು ಕಾಯುವರು?! ಯಾವಾಗಲೇ ಸತ್ತು ಹೋಗಬೇಕಿದ್ದ ನನ್ನನ್ನು ಇಲ್ಲಿಯೇ ಬಿಟ್ಟು, ಈಗಲೇ ಹೊರಟು ಹೋಗುವ ಆತುರ ಯಾಕಾಯ್ತೋ ಇವನಿಗೆ?” ಎದೆ ಬಡಿದು ಚೀರಾಡುತ್ತಿದ್ದಳು ಅವನ ಹೆತ್ತ ತಾಯಿ.

ಎಲ್ಲರತ್ತ ಕತ್ತೆತ್ತಿ ನೋಡಬೇಕು, ಏನೋ ಹೇಳಬೇಕು ಎಂದನ್ನಿಸುತ್ತಿತ್ತು ಅವನಿಗೆ. ಆದರೆ ಸಾಧ್ಯವಾಗುತ್ತಿಲ್ಲ. ಛೇ ಇವರೆಲ್ಲರನ್ನೂ ಮಹಾ ದುಃಖದ ಮಡುವಿನಲ್ಲಿ ತಳ್ಳಿ ಹಾಕಿ ಬಿಟ್ಟು ಹೋಗಬೇಕಲ್ಲಾ ನಾನು ಎಂದನ್ನಿಸುತ್ತಿತ್ತು ಅವನಿಗೆ.  ಆದರೇನು ಮಾಡಲಿ? ಆ ಹೊದಿಕೆ ಅವನನ್ನು ಎಡೆಬಿಡದೇ ಆವರಿಸುತ್ತಲೇ ಇತ್ತು. ಇದು ಬಿಟ್ಟು ಹೋಗುವ ಹೊದಿಕೆಯಲ್ಲ, ಕ್ಷಣಿಕ ಜಗತ್ತನ್ನು ಮರೆಯಾಗಿಸುವ, ಶಾಶ್ವತ ಜಗತ್ತಿನೆಡೆಗೆ ತನ್ನನ್ನು ಹೊತ್ತೊಯ್ಯುವ ನಿಜವಾದ ಹೊದಿಕೆ ಎಂದನ್ನಿಸುತ್ತಿತ್ತು ಅವನಿಗೆ.

ನಿಧಾನವಾಗಿ ಅವನನ್ನು ಆವರಿಸುತ್ತಲೇ ಬಂದ ಹೊದಿಕೆಯೀಗ ಅವನ ನೆತ್ತಿಯವರೆಗೂ ಮುಸುಕಿ ಬಂದಿತ್ತು. ಗಡಿಯಾರದ ಟಿಕ್ ಟಿಕ್ ಸದ್ದು ಈಗ ಕೇಳಿಸುತ್ತಿಲ್ಲ. ಗೋಳೋ ಎಂದು ಅಳುವ ಮನೆಯವರ ಸದ್ದೂ ಕೇಳಿಸುತ್ತಿಲ್ಲ. ಆ ಹೊದಿಕೆಯೊಳಗೆ ಬರೀ ಮೌನ..ಕತ್ತಲು..ಶೀತಲತೆ!

ಅಲುಗಾಟವಿಲ್ಲದ, ಸದ್ದಿಲ್ಲದ, ಗಾಢವಾದ ಆ ಕತ್ತಲಿನ  ಅಪಾರ ಅಗಾಧತೆಯೊಳಗೆ ತಾನೊಂದು ಅಣುವಾಗಿ ಸೇರಿ ಹೋದಂತೆ. ಅದರೊಳಗೇ ಎತ್ತಲೋ ಸೆಳೆಯಲ್ಪಟ್ಟು, ಕದಡಿ ಲೀನವಾದಂತೆ.. ಅಬ್ಬಾ! ನಿಗೂಢ, ಅಗೋಚರ, ಅನಿರ್ವಚನೀಯ ಆ ಅನುಭವ. ಕತ್ತಲ ಸೆಳೆತಕ್ಕೆ ಸಿಕ್ಕು ತೇಲಿ ತೇಲಿ ಹೋಗುತ್ತಿರುವ ಅವನ ಕಣ್ಣಮುಂದೊಂದು ಸ್ತಬ್ಧ ಚಿತ್ರ.

ತಾನು ಹುಟ್ಟಿದ ಆ ಘಳಿಗೆಯಿಂದ ಈ ಕ್ಷಣದವರೆಗೆ ಜೀವನದ ಹಲವಾರು ಹಂತಗಳಲ್ಲಿ ತಾನು ಅನುಭವಿಸಿದ ಕಷ್ಟಗಳು, ಸುಖಗಳು, ವೇದನೆಗಳು, ಕಾಮನೆಗಳು, ಎಂದೋ ಮರೆತು ಹೋದ ಹಲವಾರು ಘಟನೆಗಳು, ಈಡೇರಿದ, ಈಡೇರದೇ ಹೋದ ಹಲವಾರು ಬಯಕೆಗಳು ಎಲ್ಲವೂ ಒಂದು ಸ್ಮರಣ ಸಂಚಿಕೆಯಲ್ಲಿ ಜೋಡಿಸಿಟ್ಟ ಚಿತ್ರ ಪಟಗಳಂತೆ ಅವನ ಕಣ್ಣ ಮುಂದೆ ಹಾದು ಹೋಗುತ್ತಲೇ ಇದ್ದವು.

ಅಬ್ಬಾ ಅದೇನಾಶ್ಚರ್ಯ! ಬದುಕಿನ ಪ್ರತಿಯೊಂದು ಹಂತದಲ್ಲೂ ಹಗಲು ಇರುಳುಗಳಂತೆ ಒಂದನ್ನೊಂದು ಅನುಸರಿಸಿ ಬಂದ ಕಷ್ಟ ಸುಖಗಳು. ನಿರ್ದಿಷ್ಟ ಕಾಲಮಿತಿಯನ್ನು ಇಟ್ಟುಕೊಂಡೇ ಅವನ ಬಾಳಲ್ಲಿ ಬಂದು ಹೋದವುಗಳು ಅವೆರಡೂ. ಒಂದು ಸುಖವನ್ನು ಮರೆಮಾಚಿದ ಇನ್ನೊಂದು ಕಷ್ಟ. ಆ ಕಷ್ಟವನ್ನು ಮರೆಮಾಚಿದ ಇನ್ನೊಂದು ಸುಖ. ಈ ಎಲ್ಲದರ ಮಧ್ಯೆ ತಾನಾಗಿಯೇ ಹುಟ್ಟಿಕೊಂಡ ಅದೆಷ್ಟೋ ಕಾಮನೆಗಳು. ಮನದೊಳಗೆ ಭುಗಿಲೆದ್ದ ಬೇಗುದಿಗಳು, ಮದ, ಮತ್ಸರ, ಸಿಟ್ಟು, ಪ್ರೀತಿ, ವಂಚನೆ ಇವೇ ಮೊದಲಾದ ಭಾವಾತಿರೇಕಗಳು.

ಅಬ್ಬಾ! ಒಂದೊಂದೇ ಘಟನೆಗಳನ್ನು ಅನುಸರಿಸುತ್ತಾ ಹೋದಂತೆಯೇ, ಒಂದಕ್ಕೊಂದು ಸಂಬಂಧವೇ ಇಲ್ಲದ, ಅರ್ಥವೇ ಇಲ್ಲದ ಅಸಂಬದ್ಧ ಕಾದಂಬರಿಯಂತೆ ನಡೆದು ಹೋದ ತನ್ನ ಜೀವನ.

ಹುಟ್ಟು ಸಾವುಗಳ ನಡುವೆ ಆಗಿದ್ದೆಲ್ಲವೂ ವಿಧಿ ಬರೆದ ಚಿತ್ರಕಥೆ.  ತಾನು ಹುಟ್ಟಿದ್ದು ಜೀವಿಸುವುದಕ್ಕಾಗಿಯಲ್ಲ, ಅನುಭವಿಸುವುದಕ್ಕಾಗಿ. ಮತ್ತೆ ಸತ್ತಿದ್ದು ಎಷ್ಟು ಅನುಭವಿಸಬೇಕೋ, ಅಷ್ಟು ಅನುಭವಿಸಿ ತೀರಿಸಿದ್ದಕ್ಕಾಗಿ. ಅನುಕ್ಷಣವೂ ಬದಲಾಗುವ ಭುವಿಯೆಂಬ ಕ್ಷಣಿಕ ಲೋಕದಲ್ಲಿ ಹುಟ್ಟುವ ಪ್ರತಿಯೊಂದು ಜೀವಿಯದ್ದೂ ಇದೇ ಕಥೆ.

ಎಲ್ಲವನ್ನೂ ನೋಡಿದ ಅವನು ಯಾವುದೂ ಇಲ್ಲದ ಶೂನ್ಯತೆಯಲ್ಲಿ ಮಂದ ಮಂದವಾಗಿ ಮರೆಯಾಗಿ ಹೋದನು.

(ಇದೊಂದು ಕಾಲ್ಪನಿಕ ಬರಹ. ಇಲ್ಲಿ ವಿವರಿಸಲಾದ ಸನ್ನಿವೇಶಗಳಿಗೆ ಯಾವುದೇ ಗ್ರಂಥಗಳ ಆಧಾರವಿಲ್ಲ)

Leave a Reply

Your email address will not be published. Required fields are marked *