ಸುವ್ವಾಲಿ ಗೀತಗಳು

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ |

ಸಂಗೀತ ಮತ್ತು ಸಾಹಿತ್ಯಗಳು ಕಲಾಮಾತೆ ಸರಸ್ವತಿಯ ದಿವ್ಯಪಯೋಧರಗಳೆಂಬ ಧಾರ್ಮಿಕ ನೆಲೆಗಟ್ಟಿನಲ್ಲಿಯೇ ನಮ್ಮ ಸಂಗೀತ – ನೃತ್ಯ –  ಸಾಹಿತ್ಯಾದಿ ಲಲಿತಕಲೆಗಳು ಬೆಳೆದವು. ಶಿಷ್ಟ – ಜನಪದ ಸಂಗೀತ – ಸಾಹಿತ್ಯಗಳು ಪರಸ್ಪರವಾಗಿ ಕೊಂಡು – ಕೊಳ್ಳುವಿಕೆಯಿಂದ ಶ್ರೀಮಂತವಾದವು. ದೇಶದ ಮೇಲೆ ಅನೇಕಾನೇಕ ಪರ – ಹೊರ ಮತಗಳ, ಸಂಸ್ಕೃತಿಗಳ, ರಾಜಕೀಯ ದಾಳಿಗಳೇ ಆದರೂ ಸಂಗೀತ – ಸಾಹಿತ್ಯಗಳು ಆಯಾ ದೇಶಭಾಷೆಗಳಲ್ಲಿ ರಚಿತಗೊಂಡು, ತಮ್ಮಲ್ಲಿ ತುಕ್ಕು ಹಿಡಿದಿದ್ದನ್ನು ತ್ಯಜಿಸುತ್ತ, ಸ್ವೀಕಾರಾರ್ಹವಾದ ಹೊಸತನ್ನು ಸೇರಿಸಿಕೊಳ್ಳುತ್ತ, ಅವುಗಳನ್ನು ಜೀರ್ಣಿಸಿಕೊಂಡು, ದೇಶ – ಕಾಲಗಳಿಗೆ ಸೂಕ್ತವಾಗುವಷ್ಟು ಮಾರ್ಪಾಡುಗಳನ್ನೂ ಹೊಂದಿದವು. ಇಂತಹ ಪರ್ವಕಾಲಗಳಲ್ಲಿ ಭಾರತೀಯ ಕಲೆಗಳು ಕೊಳ್ಳುವುದಕ್ಕಿಂತ ಕೊಟ್ಟದ್ದೇ ಹೆಚ್ಚು. ಮಧ್ಯಕಾಲೀನ ಯುಗದಲ್ಲಿ ಸಂಸ್ಕೃತದ ಹೊರೆಯು ಹೆಚ್ಚಾಗಿ ಜನಸಾಮಾನ್ಯರಿಗೆ ಉಸಿರುಕಟ್ಟುವಂತಾಗಿ ದೇಶಭಾಷೆಗಳಲ್ಲಿ ಸಾಹಿತ್ಯ ಪ್ರಕಾರವು ಬೆಳೆಯಿತೆಂದು ಅನೇಕ ಹಿರಿಯ ವಿದ್ವಾಂಸರು ಸಾರುತ್ತ ಬಂದಿದ್ದಾರೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಸತ್ಯಾಂಶವು ಇದ್ದರೂ ಪೂರ್ವದಿಂದಲೇ ಭಾರತೀಯ ಕಲೆಗಳ ಶಾಸ್ತ್ರಜ್ಞರು ಎಂದಿಗೂ ಶಿಷ್ಟ ಹಾಗೂ ಜನಪದಗಳೆರಡನ್ನೂ ಸೇರಿಸಿ ಸಮನ್ವಯಿಸಿ ಅವುಗಳನ್ನು ತಮ್ಮ ಶಾಸ್ತ್ರಗ್ರಂಥಗಳಲ್ಲಿ ಅವುಗಳ ಲಕ್ಷಣಗಳನ್ನು ಹೇಳುತ್ತಲೇ ಬಂದಿರುವುದು ಆ ಮಾತುಗಳನ್ನು ಅಲ್ಲಗೆಳೆಯುತ್ತವೆ. ದೇಶೀಗೀತಗಳಾದ ಒನಕೆವಾಡುಗಳಿಗೆ ಅನ್ವಯವಾಗುತ್ತಿದ್ದ ತ್ರಿಪದಿಗಳನ್ನೂ, ಚತುಷ್ಪದಿ, ಷಟ್ಪದಿ, ಸಾಂಗತ್ಯಗಳನ್ನೂ, ಅನೇಕ ದೇಶೀ ನೃತ್ತನೃತ್ಯಗಳನ್ನೂ ತಮ್ಮ ಸಂಗೀತಗ್ರಂಥಗಳಲ್ಲಿ ಹೇಳುತ್ತಲೇ ಬಂದಿದ್ದಾರೆ. ರಾಜಾಧಿರಾಜರೂ, ಯತಿಗಳೂ, ಅಧಿಕಾರವರ್ಗದವರೂ ದಾನಿಗಳೂ ಅವನ್ನು ಪ್ರಚಾರ ಮಾಡಿಸಿ ಪೋಷಿಸುತ್ತಲೇ ಬಂದಿದ್ದಾರೆ. ಧಾರ್ಮಿಕ – ಮತೀಯ ನಂಬುಗೆಗಳನ್ನು ತಲಮಟ್ಟದಿಂದ ಪ್ರಚಾರ ಮಾಡಲು ದೇಶಭಾಷೆಗಳಿಗಿಂತ ಹಾಗೂ ಕಲೆಗಳಿಗಿಂತ ಬೇರೆ ಉತ್ತಮ ಮಾರ್ಗಗಳುಂಟೇ! ಶಿಷ್ಟರಷ್ಟೇ ಪ್ರಜ್ಞಾವಂತಮತಿಗಳು ಜನಪದರಲ್ಲಿಯೂ ಇದ್ದರೆಂಬ ಸತ್ಯವನ್ನು ಅವರು ಮನಗಂಡಿದ್ದರು. ಎಂದೇ ದೇಶೀ ಧಾರ್ಮಿಕಉತ್ಸವಾದಿಗಳ, ಶುಭಸಂಪ್ರದಾಯಗಳ ಸಮಯದಲ್ಲಿ ಪ್ರಚುರಗೊಂಡಿದ್ದ ಜನಪದಕಲೆಗಳೆಷ್ಟೋ ಸಂಗೀತಶಾಸ್ತ್ರಗ್ರಂಥಗಳಲ್ಲಿ ಶಾಸ್ತ್ರೀಯವಾದ  ನೆಲೆ – ಬೆಲೆಗಳನ್ನು ಕಂಡವು. ಅವುಗಳಲ್ಲಿ ಸುವ್ವಾಲಿಗೀತವೂ ಒಂದು.


ಸುವ್ವಾಲೆಯು ಕುಟ್ಟುವ ಅಥವಾ ಬೀಸುವ ಹಾಡು. ಇದನ್ನು ಅನ್ವರ್ಥವಾಗಿ ಒನಕೆವಾಡು ಎಂದೂ ಒರಳುಕಲ್ಲು ಪೂಜೆಯ ಪದವೆಂದೂ  ಕರೆಯುವುದುಂಟು. ಸುವ್ವೀ, ಸುವ್ವಲಿ, ಸುವ್ವಾಲೆ, ಸುವ್ವಾಲಿಗಳು ಜಾನಪದಗೀತೆಯೊಂದರ ಪರ್ಯಾಯ ನಾಮಗಳು. ಇದನ್ನು ಸ್ತ್ರೀಯರು ವಿವಾಹ ಇತ್ಯಾದಿ ಶುಭ ಸನ್ನಿವೇಶಗಳಲ್ಲಿ, ಕೆಲವು ಶುಭಸಂಪ್ರದಾಯಗಳ ಆಚರಣೆಯ ಸಮಯದಲ್ಲಿ ಧಾನ್ಯಗಳನ್ನು ಕುಟ್ಟುವಾಗಲೋ, ಬೀಸುವಾಗಲೋ ಹಾಡುತ್ತಿದ್ದರು. ಗೀತದ ಪಾದಾಂತ್ಯದಲ್ಲಿ ಸುವ್ವೀ, ಸುವ್ವೀ – ಸುವ್ವಾಲೆ ಎಂದು ಹಾಡುವುದರಿಂದ ಈ ಗೀತಕ್ಕೆ ಸುವ್ವಾಲಿ ಗೀತವೆಂದೇ ಹೆಸರಾಗಿದೆ. ಇದು ಏಕಲವಾಗಿಯೋ ಯಮಳವಾಗಿಯೋ ಗಾನ ಮಾಡಲ್ಪಟ್ಟು ಅದನ್ನು ಉಳಿದ ಸ್ತ್ರೀಯರು ಪುನರುಚ್ಚರಿಸುತ್ತಿದ್ದರು. ಸುವ್ವಾಲಿ ಗೀತವು ಕರ್ಣಾಟಕ, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಬಹಳವಾಗಿ ಪ್ರಚಲಿತವಿತ್ತು. ದ್ವಿಪದಿ, ದಂಡಕ, ಚೂರ್ಣಿಕೆ, ಉತ್ಪಲಮಾಲಾ, ಉದಯರಾಗ, ಸುವ್ವಾಲಿ, ಸೋಬಾನೆ, ಸಾಂಗತ್ಯ ಮುಂತಾದವುಗಳು ಪ್ರಾಚೀನದಿಂದಲೂ ನಿರ್ದಿಷ್ಟ ಪ್ರಬಂಧರಚನೆಗಳಾಗಿದ್ದು ತಮ್ಮದೇ ಆದ ವರ್ಣಮಟ್ಟು (ಧಾತು) ಗಳನ್ನು ಪಾರಂಪರಿಕವಾಗಿ ಉಳಿಸಿಕೊಂಡು ಬಂದಿವೆ. ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಓವೀ ಎಂಬುದೊಂದು ಪ್ರಸಿದ್ಧ ಜನಪದ ಗೀತವಿದೆ. ಉಪಲಬ್ಧ ಮಾನಸೋಲ್ಲಾಸದಲ್ಲಿ ಓವೀ ಅಥವಾ ಉವೀಯನ್ನು ಮಹಾರಾಷ್ಟ್ರದ ಹೆಂಗಸರು ಕುಟ್ಟುವ ಸಮಯದಲ್ಲಿ ಹಾಡುತ್ತಿದ್ದರೆಂದು ಸೂಚಿಸಿದೆ. (IV, 16.553) ಎಂದರೆ ಇದು ಕುಟ್ಟುವ ಹಾಗೂ ಬೀಸುವ ಹಾಡು, ರಾಗಿಬೀಸುವಪದಕ್ಕೆ ಹೋಲುತ್ತದೆ. ಸುವ್ವಾಲಿ ಗೀತಗಳ ಮಾತುವು ಕಥಾನಕ, ದೇವಸ್ತುತಿ, ಭಕ್ತಿ ಇತ್ಯಾದಿಗಳಿಂದ ಕೂಡಿದ್ದು  ದ್ವಿಪದಿ ಅಥವಾ ತ್ರಿಪದಿ ಛಂದಸ್ಸಿನಲ್ಲಿರುತ್ತವೆ. ಸರ್ವಜ್ಞ ಸೋಮೇಶ್ವರ ಚಕ್ರವರ್ತಿಯು ಈ ತ್ರಿಪದಿಗಳು ಜೋಳವನ್ನು ಕುಟ್ಟುವ ಸಮಯದಲ್ಲಿ ಸ್ತ್ರೀಯರಿಂದ ಹಾಡಲ್ಪಡುತ್ತಿದ್ದಿತೆಂದೂ, ಗೀತದ ಸಾಹಿತ್ಯವು ವಿಪ್ರಲಂಭ ಶೃಂಗಾರ ಇತ್ಯಾದಿಗಳಲ್ಲಿ ರಚಿತವಾಗಿತ್ತೆಂದೂ ಹೇಳುತ್ತಾನೆ. (ಸೋಮೇಶ್ವರ. IV, 16.549). ಹಾಗೆಯೇ, ತ್ರಿಪದಿಯನ್ನು ಒನಕೆವಾಡನ್ನಾಗಿಯೂ ಅಂಕಮಾಲೆಯನ್ನಾಗಿಯೂ (ಅಂಕಣದಲ್ಲಿ ಅಥವಾ ಮಲ್ಲಯುದ್ಧದಲ್ಲಿ ಸೋತವನನ್ನು ಪರಿಹಾಸ್ಯ ಮಾಡುತ್ತ ಮರ್ಮಗರ್ಭಿತವಾದ, ಮಿತವಾದ ಮಾತುಗಳಿಂದ ನಿಂದೆ ಮಾಡಿ ಹಾಡುವುದು) ಬಳಸಲಾಗುತ್ತಿತ್ತೆಂದು ಸೋಮೇಶ್ವರನು (ಉಕ್ತಗ್ರಂಥ, IV, 7,32,IV,16, 551) ತಿಳಿಸುತ್ತಾನೆ. ಪಂಡರೀಕವಿಠ್ಠಲನೂ ತ್ರಿಪದಿಯನ್ನು ನರ್ತನನಿರ್ಣಯದ ಮೂರನೆಯ ಪ್ರಕರಣವಾದ ಗಾಯಕ (ಪ್ರಬಂಧ)ದಲ್ಲಿ ಹೇಳುತ್ತಾನೆ. (ಪಂಡರೀಕ ವಿಠಲ, ನ. ನಿ., 3,2,194-196). ತ್ರಿಪದಿಯ ಗಾಯನವಿಧಿಯನ್ನು ಕಲ್ಲಿನಾಥನಿಂದ ಸಂಗ್ರಹಿಸಿದ್ದಾನೆ. ಚಂಪೂ ನುಡಿಗನ್ನಡಿಯ ಅರ್ಥಕೋಶದಲ್ಲಿ ‘ದಂತದ ಒನಕೆಯನೆತ್ತು ನುಣ್ದನಿಯ ಸುವ್ವಿಯ ಗಾವರದೊಳ್ ತೊಡರ್ಚಿ’ (ಲೀಲಾವತಿ. 8.30) ಎಂಬ, ಮತ್ತು ‘ಎನಿತೋದನೋದಿಯುಂ ಮನದನಿತೆ ವಲಂ ಬುದ್ಧಿಯಕ್ಕು ಎಂದು ಸಮಸ್ತಾವನಿಯ ಜನಂ ಒನಕೆವಾಡಪ್ಪಿನೆಗಂ ಸಲೆ ನುಡಿದ ನುಡಿ ಯಥಾರ್ಥಂ ನಿನ್ನೊಳ್ (ಪಂಚತಂತ್ರ. 68) ಎಂಬ ಉದಾಹರಣೆಗಳನ್ನು ನೀಡಿದೆ.


ಶಿವಶರಣರದೂ, ಹರಿದಾಸರದೂ ಕೆಲವು ಸುವ್ವಾಲೆಗಳೂ  ದೊರೆಯುತ್ತವೆ. ಜಾನಪದಸಂಗೀತದಲ್ಲಿ ಸುವ್ವಿಯ ಹಾಡು, ಸುವ್ವಾಲೆ, ಒನಕೆವಾಡು ಎಂಬ ಹೆಸರುಗಳಲ್ಲಿ ರೂಢಿಸಿರುವ ಈ ಹಾಡುಗಳ ಮಾತುಬಂಧವು ಶಿವಶರಣರ ಮತ್ತು ಹರಿದಾಸರುಗಳ ಸುವ್ವಾಲೆಗಳಲ್ಲಿ  ಕಂಡುಬರುವುದಿಲ್ಲ. ಏಕೆಂದರೆ ಜಾನಪದ ಸುವ್ವಾಲೆಗಳಲ್ಲಿ ಹಾಡನ್ನು ಪಲ್ಲವಿ, ಮತ್ತು ಚರಣಗಳಾಗಿ ಒಡೆಯದೆ ಸುವ್ವಿ, ಸುವ್ವಿಯೆನ್ನಿರೆ, ಸುಯ್ಯೋ, ಸುವ್ವಿಸುವ್ವಾಲೆ ಇತ್ಯಾದಿ ಶಬ್ದಗಳಲ್ಲಿ ಒಂದನ್ನು ಪ್ರತಿಯೊಂದು ಚರಣದ ನಂತರ ಹಾಡಲಾಗುತ್ತದೆ. ಹಾಡು ದ್ವಿಪದಿಗಳ ಅಥವಾ ತ್ರಿಪದಿಗಳ ರೂಪದಲ್ಲಿರುವುದೇ ಹೆಚ್ಚು. ಶಿವಶರಣರ ಹಾಗೂ ಹರಿದಾಸರ ಸುವ್ವಾಲೆಗಳಲ್ಲಿ  ಪಲ್ಲವಿ ಮತ್ತು ಚರಣ ಎಂಬ ವಿಂಗಡಣೆಯು ಸ್ಪಷ್ಟವಾಗಿ ಕಂಡುಬರುತ್ತದೆ. ಮಹಿಪತಿರಾಯನ ಸುವ್ವಾಲೆಗಳಲ್ಲೂ ಸುವ್ವಿಯ ಎಂಬ ಶಬ್ದದ ಪುನರುಚ್ಚಾರವಿದ್ದರೂ ಉಳಿದ ಬಂಧವು ಜಾನಪದಗೀತದಂತಿಲ್ಲ. ಶಿವಶರಣರ ಸಂಗೀತದ ಐತಿಹಾಸಿಕ ದೃಷ್ಟಿಯಿಂದ ‘ಕೈವಲ್ಯಪದ್ಧತಿ’ಯು ಮಹತ್ತ್ವಪೂರ್ಣವಾಗಿದೆ. ಇದನ್ನು ನಿಜಗುಣ ಶಿವಯೋಗಿಯು ಸ್ವರವಚನಗಳೆಂದು ಕರೆದು 5 ಸ್ಥಲಗಳಲ್ಲಿ 174 ಹಾಡುಗಳನ್ನು ರಚಿಸಿದ್ದಾನೆ. ಇದರಲ್ಲಿ ಶಿವಕಾರುಣ್ಯ ಮತ್ತು ನೀತಿಕ್ರಿಯಾಚರ್ಯ ಸ್ಥಲಗಳಲ್ಲಿ ‘ಸುವ್ವಾಲೆವರ್ನ’ ಎಂಬ ಶೀರ್ಷಿಕೆಯುಳ್ಳ ಎರಡು ಹಾಡುಗಳಿವೆ.  ನಿಜಗುಣನ ರಚನೆಗಳ ಮೊದಲನೆಯದರಲ್ಲಿ ಹ್ರಸ್ವ + ಹ್ರಸ್ವತಮ + ಹ್ರಸ್ವ + ಹ್ರಸ್ವ ಎಂಬ ರಚನೆಯುಳ್ಳ ಪಲ್ಲವಿಯೂ ನಾಲ್ಕು ಪಙ್ತಿಗಳ ಚರಣವೂ ಇದ್ದರೆ ಎರಡನೆಯದರಲ್ಲಿ ಮೂರು ಹ್ರಸ್ವಪಙ್ತಿಗಳನ್ನುಳ್ಳ ಪಲ್ಲವಿಯೂ ನಾಲ್ಕು ಹ್ರಸ್ವಪಙ್ತಿಗಳನ್ನುಳ್ಳ ಚರಣವೂ ಇವೆ. ಹೀಗೆ ಅವುಗಳ ರಚನೆಯು ಭಿನ್ನವಾಗಿದೆ. ಆದುದರಿಂದ ಸುವ್ವಾಲೆವರ್ನ ಎಂಬ ಶೀರ್ಷಿಕೆಯನ್ನು ಸುವ್ವಾಲೆಯೆಂಬ ಜಾನಪದಗೀತದ ಧಾಟಿಯಲ್ಲಿ ಹಾಡಿಕೊಳ್ಳಲು ಬೇಕಾದ ವರ್ಣ ಎಂದರೆ ಗಾನಕ್ರಿಯೆ ಎಂದು ಅರ್ಥೈಸಿಕೊಳ್ಳುವುದು ಸಮಂಜಸವಾಗುತ್ತದೆ. ಸಂಗೀತಶಾಸ್ತ್ರದಲ್ಲಿ ವರ್ಣವೆಂದರೆ ಗಾನಕ್ರಿಯೆಯೆಂದೇ ಅರ್ಥ.  ಮುಪ್ಪಿನ ಷಡಕ್ಷರಿಯ ‘ಹೆಮ್ಮೆಗಳು ನಾನಿಮ್ಮ‘ ಎಂಬ ಒಂದು ಷಟ್ಪದಿಯಲ್ಲಿ ಸುವ್ವಿಯ ಛಾಯೆಯಿದೆ. ‘ಕಟ್ಟುತ್ತ ಬೀಸುತ್ತ ನಮ್ಮ ಒಡಹುಟ್ಟಿದ ಪುರಾತನರ ಹಾಡುತಿಹೆನು’ ಎಂಬ ಅದರ ಮಾತು ಒನಕೆವಾಡಿನ ಪ್ರಯುಕ್ತಿಯನ್ನೂ, ‘ಸುವ್ವಿಯ ಚೆನ್ನಣ್ಣನಿಗೆ… ಸುಸುವ್ವಿಯ ನಮ್ಮಯ್ಯ ಚೆನ್ನಯ್ಯನಡಿಗೆ’ ಎಂಬ ಮಾತು ಸುವ್ವಿಯ ಪ್ರತಿಧ್ವನಿಯನ್ನು ಒಳಗೊಂಡಿದೆ. ಆದರೆ ಈ ರಚನೆಯು ಕುಸುಮಷಟ್ಪದಿಯಲ್ಲಿದೆ. ಸರ್ಪಭೂಷಣ (ಸಣ್ಣಪ್ಪ)ನ ಕೈವಲ್ಯಕಲ್ಪವಲ್ಲರಿಯು ನಿಜಗುಣ ಶಿವಯೋಗಿಯ ಕೈವಲ್ಯಪದ್ಧತಿಯ ಮಾದರಿಯಲ್ಲಿ ರಚಿತವಾದ ಹಾಡಿನ ಗ್ರಂಥ. ಅದರಲ್ಲಿ ಶಿವಕಾರುಣ್ಯಸ್ಥಲ, ಜೀವಸಂಬೋಧನಸ್ಥಲ, ನೀತಿಚರ್ಯ ಪ್ರತಿಪಾದನಸ್ಥಲ, ಯೋಗಪ್ರತಿಪಾದನಸ್ಥಲ ಮತ್ತು ಜ್ಞಾನಪ್ರತಿಪಾದನಸ್ಥಲಗಳೆಂದು ಒಟ್ಟು 177 ಹಾಡುಗಳಿವೆ. ಇವುಗಳಲ್ಲಿ ಎರಡು ಸುವ್ವಾಲೆಗಳೂ ಇವೆ. ಇವೆರಡರಲ್ಲಿ ನಾಲ್ಕು ಹ್ರಸ್ವಪಙ್ತಿಗಳು ಇರುವ ಚರಣ ಎಂಬ ಸಮಾನರಚನೆಯು ಇದ್ದು, ನಿಜಗುಣನು ಶಿವಕಾರುಣ್ಯಸ್ಥಲದಲ್ಲಿ ರಚಿಸಿರುವ ಬಂಧವನ್ನು ಹೋಲುತ್ತವೆ. ನಿಜಗುಣ ಹಾಗೂ ಸರ್ಪಭೂಷಣರ  ‘ಸುವ್ವಾಲೆ ವರ್ನ’ಗಳಲ್ಲಿ ಸುವ್ವಿಯ ಶಬ್ದದ ಪ್ರಯೋಗವು ಇಲ್ಲ. ಆದುದರಿಂದಲೂ, ರಾಗನಿರ್ದೇಶನದ ಸ್ಥಾನದಲ್ಲಿ ಸುವ್ವಾಲೆವರ್ನ ಎಂಬ ಉಲ್ಲೇಖವಿರುವುದರಿಂದಲೂ ಸುವ್ವಾಲೆ ಧಾಟಿಯು ಎಂದರೆ ಧಾತುವು ಮಾತ್ರ ಇಲ್ಲಿ ವಿವಕ್ಷಿತವಾಗಿದೆಯೆಂದು ಇಟ್ಟುಕೊಳ್ಳಬೇಕಾಗುತ್ತದೆ. ಈವರೆಗೆ ದೊರೆತಿರುವ ಶಿವಶರಣ ನಿರ್ಮಿತಿ ಹಾಡುಗಳಲ್ಲಿ ಸುವ್ವಾಲೆಗೆ ದೊರೆಯುವ ನಿದರ್ಶನಗಳು ಇಷ್ಟೆ ಎಂದು ಹೇಳಬಹುದು. ಹರಿದಾಸರ ಸುವ್ವಾಲೆಗಳಲ್ಲೂ ಮೇಲ್ಕಂಡ ಬಂಧವೆ ಹೆಚ್ಚುಕಡಿಮೆ ಇದೆ.


ವಾದಿರಾಜರ ಮೂರು ಸುವ್ವಾಲಿಗಳು ಲಭ್ಯವಿವೆ. 1.ಅವತಾರ ತ್ರಯ ಮಧ್ವ ಸುವ್ವಾಲಿ — ಇದು ಮಧ್ವಾಚಾರ್ಯರ ಮೂರು ಜನ್ಮಗಳಾದ ಹನುಮ, ಭೀಮ, ಮಧ್ವರ ಅವತಾರಮಹಿಮೆಗಳನ್ನು ಕುರಿತದ್ದಾಗಿದೆ. 2.ಜಗ ಬಿರುದಿನ ಸುವ್ವಾಲಿ — ಇದರ ಸಾಹಿತ್ಯವು ಕೃಷ್ಣನ ಮಾಹಾತ್ಮ್ಯವನ್ನು, ವೈಕುಂಠವರ್ಣನೆಯನ್ನು, ಫಲಸ್ತುತಿಯನ್ನು ಹೇಳುವುದರೊಂದಿಗೆ ಅದ್ವೈತ ಸಿದ್ಧಾಂತವನ್ನು ಖಂಡಿಸುತ್ತದೆ. ತ್ರಿಪದಿ ಛಂದಸ್ಸಿನಲ್ಲಿ ರಚಿಸಿದ್ದು ಎರಡನೆಯ ಸಾಲಿನ ಕಡೆಯಲ್ಲಿ ಸುವ್ವಿ ಎಂದು ಇದ್ದು, ಇದನ್ನು ತ್ರಿಪದಿಯ ಲಕ್ಷಣದಂತೆ ಎರಡನೆಯ ಸಾಲನ್ನು ಪುನರುಚ್ಚರಿಸಿ ಹಾಡಬೇಕು. ಪ್ರಾಚೀನ ಪ್ರಬಂಧಗಳಲ್ಲಿ ಇರಬೇಕಾದ ಅಂಗಗಳಲ್ಲಿ ಬಿರುದವೂ ಒಂದಾಗಿತ್ತು. ಬಿರುದವೆಂದರೆ  ಹೊಗಳಿಕೆಯ ವಿಶೇಷಣದ ಮಾತು. 3..ತತ್ತ್ವಸುವ್ವಾಲಿ — ಇದೂ ತ್ರಿಪದಿಯಿಂದ ಆರಂಭವಾಗಿ ವಿಷ್ಣುವಿನ ದಶಾವತಾರಗಳನ್ನು, ಅದ್ಧೈತ ಸಿದ್ಧಾಂತ ಖಂಡನೆ, ದ್ವೈತ ಸಿದ್ಧಾಂತದ ಮಂಡನೆಯನ್ನು ಒಳಗೊಂಡಿದ್ದು ದೇಹದ ವಿವಿಧಾಂಗಗಳಲ್ಲಿ ನೆಲೆಸಿರುವ ದೇವತೆಗಳನ್ನು ಹೇಳಿದೆ ಮತ್ತು ಮಧ್ವಾಚಾರ್ಯರ ಮೂರು ಅವತಾರಗಳನ್ನೂ ಹೇಳಿದೆ. ಇವಕ್ಕೆ ಸುವ್ವಾಲಿಗೀತದ ಧಾಟಿಯು ಪ್ರಸಿದ್ಧವಾಗಿದ್ದರಿಂದ ಅದೇ ಧಾಟಿಯೇ ಇವುಗಳಿಗೂ ಅನ್ವಯವಾಗುತ್ತದೆ. ಜಗನ್ನಾಥದಾಸರಿಂದ ರಚಿತವಾದ ತತ್ತ್ವಸುವ್ವಾಲಿಯೂ ಒನಕೆವಾಡಿನ ತ್ರಿಪದಿಗಳಿಂದಲೇ ರಚಿತವಾಗಿದೆ. ಜಗನ್ನಾಥದಾಸರು ಇದನ್ನು ವಿಧವೆಯಾಗಿದ್ದ ತಮ್ಮ ಮಗಳೋ ಸೊಸೆಯೋ ಆಗಿದ್ದ ಗೋಪಮ್ಮನೆಂಬ ಸ್ತ್ರೀಯ ಮನಃಶಾಂತಿಗಾಗಿ ಅಧ್ಯಾತ್ಮತತ್ತ್ವಸುವ್ವಾಲಿಯನ್ನು ರಚಿಸಿದರೆಂಬ ವಿದ್ವಜ್ಜನ ಅಭಿಪ್ರಾಯವೂ ಇದೆ. ಈ ತತ್ತ್ವಸುವ್ವಾಲಿಗಳ ವಿಷಯಗಳು  ಗಣಪತಿ, ತುಳಸಿ, ರುದ್ರ, ವಾಯು, ಬ್ರಹ್ಮ, ನವಗ್ರಹಗಳು, ಅಗ್ನಿ, ಗಂಗೆ, ದಶಾವತಾರ, ಶ್ರೀನಿವಾಸ ಸ್ತೋತ್ರಗಳೂ ಶ್ರೀಕೃಷ್ಣ – ರುಕ್ಮಿಣಿ ಸಂವಾದಗಳೂ ಮತ್ತು ಅದ್ವೈತಖಂಡನೆಯೂ ಆಗಿವೆ. ಪುರಂದರದಾಸರು, ಕವಿಲಕ್ಷ್ಮೀಶ, ಗುರುಪ್ರಾಣೇಶವಿಠಲರು, ಕಾಖಂಡಕೀ ಶ್ರೀಮಹಿಪತಿದಾಸರು, ಚಿದಾನಂದ ಅವಧೂತರು, ಪ್ರಾಣೇಶದಾಸರು, ಉರಗಾದ್ರಿವಾಸವಿಠಲದಾಸರು, ಕೃಷ್ಣವಿಠಲದಾಸರು, ಗಲಗಲಿ ಅವ್ವನವರು, ಪ್ರಸನ್ನ ವೆಂಕಟದಾಸರು ಮಂತಾದ ದಾಸವರೇಣ್ಯರು ಸುವ್ವಾಲಿ, ಸುವ್ವಿಪದಗಳನ್ನು ರಚಿಸಿದ್ದಾರೆ.


ಇಂತಹ ದಾಸವಿರಚಿತ ಸುವ್ವಾಲಿ ಗೀತಗಳನ್ನು ಅರ್ವಾಚೀನ ವಿದ್ವಾಂಸರು ಆನಂದಭೈರವಿ, ಹರಿಕಾಂಭೋಜಿ, ಮೋಹನ, ಶುದ್ಧಸಾವೇರಿ, ಪಹಾಡಿ, ಜಂಜುರುಟಿ, ನಾಥರಾಮಕ್ರಿಯಾ ಮುಂತಾದ ಜನಪದ ಸಂಗೀತಕ್ಕೊಪ್ಪುವ ರಾಗಗಳನ್ನು ಅನ್ವಯಿಸಿ ತಮ್ಮ ಕಚೇರಿಗಳಲ್ಲಿ ಹಾಡಿ ಈಗಲೂ ಇವನ್ನು ಪ್ರಚಲಿತವಿಟ್ಟರೆ ಹರಿದಾಸರೂ ಶಿವಶರಣರೂ ಶಾಸ್ತ್ರಕಾರರೂ ಪಟ್ಟ ಶ್ರಮವು ಸಾರ್ಥಕವಾಗಿ ಅವರ ಉದ್ದೇಶಗಳು ಫಲಿಸುತ್ತವೆ ಹಾಗೆಯೆ ಅವರ ವಿದ್ವತ್ ಋಣವು ಕಿಂಚಿತ್ತಾದರೂ ಸಲ್ಲುತ್ತದೆ.

 

(ವಿವಿಧ ಆಕರಗಳಿಂದ)

 

Leave a Reply

Your email address will not be published. Required fields are marked *