ನೆನೆಯಲೇಬೇಕು ದೇಶಕೆ ಧೈರ್ಯದ ಪಾಠ ಹೇಳಿಕೊಟ್ಟ ಪಂಜಾಬಿನ ಹುಲಿ

ಅಂಕಣ ಜಾಗೃಯಾಮ : ಶಿಶಿರ ಅಂಗಡಿ

“ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಯಿಂದ ಸಿಕ್ಕುವಂತದ್ದಲ್ಲ, ಅದು ಹೋರಾಟ ಮತ್ತು ಬಲಿದಾನಗಳಿಂದ ಮಾತ್ರ ಸಾಧ್ಯ” ಎಂದು ಗುಡುಗಿ, ಭರತ ಸಂಸ್ಕೃತಿಯಲ್ಲಿ ಹೇಳಲಾದ ಸಾಮ – ದಾನ – ಬೇದ – ದಂಡ ಇವುಗಳಲ್ಲಿ ದುಷ್ಟರಿಗೆ ದಂಡವನ್ನೂ ಪ್ರಯೋಗಿಸಬಹುದು ಎಂಬುದನ್ನು ನೆನಪಿಸಿ ದಾಸ್ಯ ಪದ್ದತಿಯಲ್ಲಿ ಮುಳುಗಿದ್ದ ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಬಡಿದೆಬ್ಬಿಸಿದ್ದು ಶ್ರೀ ಲಾಲಾ ಲಜಪತ್ ರಾಯ್. ಮೊನ್ನೆ ಜನವರಿ ೨೮ರಂದು ಲಾಲಾ ಅವರ ೧೫೧ನೇ ಜನ್ಮ ಜಯಂತಿಯ ಹಿನ್ನೆಲೆಯಲ್ಲಿ ಅವರ ಪ್ರೇರಣಾದಾಯಿ ಜೀವನಗಾಥೆಯನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡೋಣ.

ದೇಶದ ಅತಿದೊಡ್ಡ ನಾಲ್ಕು ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದರ ಸ್ಥಾಪನೆಗೂ ಇವರೇ ೧೮೯೫ರಲ್ಲಿ ಕಾರಣಿಕರ್ತರು.

೧೯೦೦ರ ಕಾಂಗ್ರೆಸ್ ಅಧಿವೇಶನದಲ್ಲಿ ಲಜಪತ‌ ರಾಯರು ಭಾರತದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿದರು.

ಅತ್ಯಂತ ಶ್ರೇಷ್ಠ ಸಾಹಿತ್ಯಾಸಕ್ತರಾಗಿದ್ದ ಲಾಲಾ, ಲಾಹೋರ್ ಮತ್ತು ಹಿಸ್ಸಾರ್‌ ನಲ್ಲಿ ವಕೀಲ ವೃತ್ತಿಯನ್ನು ಮಾಡುವ ಸಂದರ್ಭದಲ್ಲಿ ಆರ್ಯ ಸಮಾಜದ ಪ್ರಭಾವಕ್ಕೆ ಒಳಗಾಗಿ ‘ದಯಾನಂದ ಆಂಗ್ಲೋ ವೇದಿಕ್ ಶಾಲೆ’ಯ ಸ್ಥಾಪನೆಗೆ ಸಹಕರಿಸಿದರು. ಹಿಂದೂ ಧರ್ಮವನ್ನು ನಾನಾ ಕಾರಣಗಳಿಗೆ ತೊರೆದ ಹಲವು ಜನರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತಂದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕಾಂಗ್ರೆಸ್ ಪಾರ್ಟಿಯಲ್ಲಿ ರಾಜಕೀಯ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಒಂದು‌ ಲೇಖನ ಬರೆದ ಹಿನ್ನೆಲೆಯಲ್ಲಿ ಮೇ ೧೯೦೭ರಲ್ಲಿ ಲಾಲಾ ಅವರನ್ನು ಬರ್ಮಾದ ಮಂಡಾಲೆ ಜೈಲಿಗೆ ಗಡಿ ಪಾರು ಮಾಡಲಾಗಿತ್ತಾದರೂ, ನವೆಂಬರ್‌ನಲ್ಲಿ ಆಗಿನ ವೈಸರಾಯ್ ಲಾರ್ಡ್ ಮಿಂಟೊ, ಸೂಕ್ತ ಸಾಕ್ಷಾಧಾರಗಳು ಲಾಲಾರ ವಿರುದ್ಧ ಸಿಗದ ಕಾರಣಕ್ಕೆ ಅವರು ಭಾರತಕ್ಕೆ ವಾಪಸ್ಸಾಗಲು ಅನುಮತಿ ನೀಡಿದರು.

ವಿವಿಧ ರಾಷ್ಟ್ರಗಳಿಗೆ ಬ್ರಿಟಿಷರ ದುರಾಡಳಿತವನ್ನು ಮನವರಿಕೆ ಮಾಡಿ ಭಾರತಕ್ಕೆ ಸ್ವಾತಂತ್ರ್ಯದ ಅನಿವಾರ್ಯತೆಯನ್ನು ತಿಳಿಸುವುದು ಅತಿ ಅಗತ್ಯ ಎಂಬುದನ್ನು ಮನಗಂಡು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟಕ್ಕಿಳಿದರು.

1914ರಲ್ಲಿ ಬ್ರಿಟನ್ ಹಾಗೂ 1917ರಲ್ಲಿ ಅಮೇರಿಕಕ್ಕೆ ತೆರಳಿದ ಲಾಲಾ ಲಜಪತ ರಾಯರು ಅಮೇರಿಕೆಯ ನ್ಯೂಯಾರ್ಕ್  ಎಂಬಲ್ಲಿ ‘ಇಂಡಿಯನ್ ಹೋಮ್ ರೂಲ್ ಲೀಗ್ ಓಫ್ ಅಮೇರಿಕಾ’ ಸ್ಥಾಪಿಸಿ ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು.

೧೯೨೦ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಲಾಲಾ ಅವರು ಸ್ವಾತಂತ್ರ್ಯದ ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಲಾಯಿತು. ಕ್ರಾಂತಿಕಾರಿಗಳಿಗೆ ಒಳ್ಳೆಯ ವೇದಿಕೆ‌ ಆಯಿತು. ಇದರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಬಲವಾಗಿ ಖಂಡಿಸಲಾಯಿತು.

೧೯೨೧-೨೨ರ ವೇಳೆಯಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಕಾರಣ ೧೮ ತಿಂಗಳು ಜೈಲು ವಾಸ ಅನುಭವಿಸಿದ ರಾಯರು ಬಿಡುಗಡೆ ಆಗುತ್ತಲೆ ವಿಧಾನಸಭೆಗೆ ಆಯ್ಕೆಯಾದರು.

೧೯೨೨ರಲ್ಲಿ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರೂ ಸ್ಥಾಪಿಸಿದ್ದ ‘ಸ್ವರಾಜ್ಯಪಕ್ಷ’ವನ್ನು ಸೇರಿದರು. ಆದರೆ ಚಿತ್ತರಂಜನ್ ದಾಸ್‌ರವರು 1923ರಲ್ಲಿ ಮಾಡಿಕೊಂಡ ಹಿಂದೂ-ಮುಸ್ಲಿಂ ಒಪ್ಪಂದ ಲಾಲಾ ಅವರಿಗೆ ಹಿಡಿಸಲಿಲ್ಲ. ಈ ಕಾರಣಕ್ಕಾಗಿ ಆದರೆ 1925 ರಲ್ಲಿ ಅವರು ಆ ಪಕ್ಷದಿಂದ ಹೊರಬಂದರು.

ರೌಲತ್ ಆಕ್ಟ್ ಖಂಡಿಸಿ ಅಸಹಕಾರ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿ ಕೆಚ್ಚೆದೆಯ ಹೋರಾಟ ಮಾಡಿದ ಕಾರಣ ಅಂದಿನ ಕಾಲದಲ್ಲೇ ಪಂಜಾಬ ರಾಜ್ಯ ಲಾಲಾ ಅವರಿಗೆ ‘ಪಂಜಾಬ ಕೇಸರಿ’ ಎಂಬ ಅಭಿದಾನ ನೀಡಿತ್ತು.

ಬಿಪಿನ್‌ ಚಂದ್ರ ಪಾಲ್, ಬಾಲ ಗಂಗಾಧರ ತಿಲಕರ ಜೊತೆ ಸೇರಿ ಲಾಲ್-ಪಾಲ್-ಬಾಲ್ ಎಂಬ ತ್ರಿವೇಣಿ ಸಂಗಮವನ್ನು ರಚಿಸಿಕೊಂಡು ಸ್ವದೇಶಿ ಆಂದೋಲನದ ವ್ಯಾಪಕ ಜಾಗೃತಿ ಮೂಡಿಸುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿಸಿಕೊಂಡರು.

ಅವರು ‘ಯಂಗ್ ಇಂಡಿಯಾ’ ಪತ್ರಿಕೆಯ ಮೂಲಕ ಯುವಜನತೆಯಲ್ಲಿ ರಾಷ್ಟ್ರೀಯತೆಯ ಕಿಚ್ಚನ್ನು ಹೊತ್ತಿಸಿದರು. ಇವರು ಉರ್ದು ಭಾಷೆಯ ‘ಪಂಜಾಬಿ’ ಮತ್ತು ವಂದೇಮಾತರಂ ಪತ್ರಿಕೆಗಳ ಗೌರವ ಸಂಪಾದಕರೂ ಆಗಿದ್ದರು. ಜೊತೆಗೆ ‘ಪೀಪಲ್’ ಎಂಬ ಸಾಪ್ತಾಹಿಕವನ್ನು ಪ್ರಕಟಸುತ್ತಿದ್ದರು. ಆರ್ಯ ಸಮಾಜ್, ಅನಹ್ಯಾಪಿ ಇಂಡಿಯಾ ಸೇರಿದಂತೆ ಹಲವಾರು ಮಹತ್ವದ ಕೃತಿಗಳನ್ನೂ ರಚಿಸಿರುತ್ತಾರೆ.

ಲಾಹೋರಿನಲ್ಲಿ ಬ್ರಿಟೀಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜುಗಳನ್ನು ಸ್ಥಾಪಿಸಿದ್ದರು ರಜಪತ ರಾಯರು‌.

೧೯೨೭ರ ಸಮಯದಲ್ಲಿ ತಮ್ನ ತಾಯಿ  ಗುಲಾಬಿದೇವಿಯವರ ಹೆಸರಿನಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಿ ಆರೋಗ್ಯ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ.


೧೯೨೮ರಲ್ಲಿ ಭಾರತಕ್ಕೆ ಬಂದ ಸೈಮನ್ ಆಯೋಗದಲ್ಲಿ ಒಬ್ಬರೂ ಭಾರತೀಯರು ಇರದ ಕಾರಣ ಅದರ ವಿರುದ್ಧ ಆಕ್ರೋಶ ಬುಗಿಲೆದ್ದಿತ್ತು‌. ತನ್ನಿಮಿತ್ತ ಅಕ್ಟೋಬರ್ ೩೦ ೧೯೨೭ರಂದು ನಡೆದ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ರಜಪತ ರಾಯರು ಮುಂದಾಳತ್ವ ವಹಿಸಿದ್ದರು. ಬ್ರಿಟೀಷ್ ಪೋಲಿಸರು ಲಾಠಿ ಚಾರ್ಜಗೆ ಸೂಚನೆ ಹೊರಡಿಸಿದರ ಪರಿಣಾಮ ರಾಯರಿಗೆ ತೀವ್ರವಾದ ಗಾಯವಾಗಿತ್ತು. ಅಲ್ಲಿಂದ ಮತ್ತೆ ಚೇತರಿಸಿಕೊಳ್ಳಲೇ‌ ಇಲ್ಲ, ನವೆಂಬರ್ ೧೭ ೨೦೧೮ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ಇವರು ಮರಣಹೊಂದಿದ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.

ಭಗತ್ ಸಿಂಗ್, ಚಂದ್ರಶೇಖರ ಆಜಾದರಂತಹ ಅನೇಕಾನೇಕ ಯುವ ಕ್ರಾಂತಿಕಾರಿ ಹೋರಾಟಗಾರರಿಗೆ ಲಾಲಾ ಲಜಪತ ರಾಯರೇ ಪ್ರೇರಣೆಯಾಗಿದ್ದರು. ಲಾಲಾ ಅವರ ಬಲಿದಾನ, ಯುವಕರಲ್ಲಿ ತುಂಬುತ್ತಿದ್ದ ದೇಶಭಕ್ತಿಯ ಕಿಡಿ ಇವರುಗಳಿಗೆ ತಮ್ಮ ಜೀವವನ್ನು ದೇಶಕ್ಕಾಗಿ ಸಮರ್ಪಿಸುವಲ್ಲಿ ಸ್ಪೂರ್ತಿ ನೀಡಿತು.

ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ಶಿಕ್ಷಣ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ಆರೋಗ್ಯ, ದೇಶಭಕ್ತಿಯ ಜಾಗೃತಿ ಸೇರಿದಂತೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಮಸ್ತ ದೇಶಭಕ್ತರಿಗೆ ಸ್ಪೂರ್ತಿಯ ಶಕ್ತಿಯಾಗಿರುವ ಲಾಲಾ ಲಜಪತ್ ರಾಯರ ಆದರ್ಶಗಳನ್ನು ನಾವು ಪಾಲಿಸುತ್ತಾ ವಿಶ್ವಗುರು ಭಾರತದೆಡೆ ಬಲವಾಗಿ ಹೆಜ್ಜೆಹಾಕೋಣ.

Leave a Reply

Your email address will not be published. Required fields are marked *