ಸಮಾಜಕ್ಕೆ ವಿಷವುಣಿಸುವವರಷ್ಟೇ ಅಪಾಯಕಾರಿ, ಮನಸ್ಸಿಗೆ ವಿಷವುಣಿಸುವವರೂ

ಅಂಕಣ ಶಬ್ದ~ಶಿಲ್ಪ : ಮಹೇಶ ಎಳ್ಯಡ್ಕ

ಕಳೆದೊಂದು ವಾರದಿಂದ ವೃತ್ತಪತ್ರಿಕೆಗಳ ಮುಖಪುಟ ಸುದ್ದಿ – ಚಾಮರಾಜನಗರದ ರಾಮಾಪುರ ಠಾಣೆಯ ಸರಹದ್ದಿನ ಸುಳ್ವಾಡಿ ಎಂಬಲ್ಲಿರುವ ಕಿಚ್ಚುಗತ್ತಿ ಮಾರಮ್ಮ ದೇವಾಲಯದ ಆವರಣದಲ್ಲಿ ನಡೆದ ದುರಂತದ್ದು. ದೇವಾಲಯಕ್ಕೆ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣ ನಡೆಸುವುದೆಂದು ನಿರ್ಣಯಿಸಿದ ವ್ಯವಸ್ಥಾಪಕರು ಶುಭ ಶುಕ್ರವಾರದಂದು ಭೂಮಿಪೂಜೆ ಏರ್ಪಡಿಸಿದ್ದರು. ಕಾರ್ಯಕ್ರಮದ ಕೊನೆಗೆ ನೆರೆದ ಭಕ್ತರಿಗೆ ಚಿತ್ರಾನ್ನ ಸಂತರ್ಪಣೆಯು ಏರ್ಪಾಡಾಗಿತ್ತು.

 

ಈ ಅನ್ನ ಪ್ರಸಾದಕ್ಕೆ ವಿಷ ಸೇರಿದ್ದುದರಿಂದ ಸೇವಿಸಿದ ಅನೇಕ ಅಮಾಯಕ ಭಕ್ತರು ಸ್ವಾಸ್ಥ್ಯ ಕಳೆದುಕೊಂಡರು, ಕೂಡಲೇ ಚಿಕಿತ್ಸೆಗೆ ದಾಖಲಿಸುವ ವ್ಯವಸ್ಥೆಯಾಯಿತು. ಹಲವರು ತೀವ್ರವಾಗಿ ಅಸ್ವಸ್ಥರಾದರು, ಕೆಲವರು ಪ್ರಾಣ ಕಳೆದುಕೊಂಡರು. ಕೆಲವರು ಇನ್ನೂ ಜೀವನ್ಮರಣ ಹೋರಾಟದಲ್ಲಿದ್ದಾರೆ. ತಾಯಿಯನ್ನು ಕಳಕೊಂಡ ಮಗು, ಮಕ್ಕಳನ್ನು ಕಳೆದುಕೊಂಡ ತಾಯಿ, ಏಕಮಾತ್ರ ಆಧಾರಸ್ತಂಭವನ್ನು ಕಳಕೊಂಡ ಕುಟುಂಬ, ಇವರ ಕರುಳ ಕಥೆಗಳು, ಆಕ್ರಂದನಗಳನ್ನು ಕೂಡಿದ  ಮುಖಪುಟದ ಈ ಸುದ್ದಿ ಸಾತ್ತ್ವಿಕರ ಕರುಳು ಹಿಂಡುತ್ತಿತ್ತು.

 

ಆರೇಳು ದಿನದ ಪ್ರಯತ್ನದಿಂದ ಕೊನೆಗೂ ಆರಕ್ಷಕರು ಈ ಪ್ರಕರಣವನ್ನು ಬಯಲಿಗೆಳೆದರು.

ದೇವಾಲಯದ ಆಡಳಿತವನ್ನು ವಂಚನೆಯ ಮೂಲಕ ಪಡೆದುಕೊಳ್ಳಲು ದುರುಳ ಬಣವೊಂದು ಮಾಡಿದ ಷಡ್ಯಂತ್ರವು ಅಮಾಯಕ ಭಕ್ತರ ಪ್ರಾಣಹರಣಕ್ಕೆ ಕಾರಣವೆಂದು ತನಿಖೆಯು ಬಯಲುಮಾಡಿದೆ.

~

 

ಮಾರಮ್ಮ ದೇವಾಲಯವು ಸ್ಥಳೀಯರಿಂದ ಚೆನ್ನಾಗಿಯೇ ನಡೆಯುತ್ತಿತ್ತು. ಅದರ ಅಭಿವೃದ್ಧಿ, ಅದರ ಆದಾಯ-ವೆಚ್ಚಗಳ ನಿರ್ವಹಣೆಗಳು ಅಲ್ಲಿನ ಶ್ರದ್ಧಾಭಕ್ತಿಯ ಟ್ರಸ್ಟಿಗಳ ಮೂಲಕ ನಡೆಯುತ್ತಿತ್ತು. ಆದರೆ ಬೇರೊಂದು ಮಠದ ಸ್ವಾಮೀಜಿಯೊಬ್ಬರ ದುರಾಸೆಯಿಂದಾಗಿ, ದೇವಾಲಯವನ್ನೂ, ದೇವಾಲಯದ ಆರ್ಥಿಕ ನಿರ್ವಹಣೆಯನ್ನೂ ತನ್ನ ವಶಕ್ಕೆ ಪಡೆದುಕೊಳ್ಳುವ ಹೊಂಚಿನಿಂದ ಈ ಕುಕೃತ್ಯವನ್ನು ರೂಪಿಸಲಾಯಿತು. ಇದಕ್ಕಾಗಿ ಬಳಸಿಕೊಂಡಿದ್ದು, ಓರ್ವ ಮಹಿಳೆ ಹಾಗೂ ಅವಳ ಗಂಡನನ್ನು. ಮಹಿಳೆಗೆ ಸುಪ್ಪತ್ತಿಗೆಯ ಆಸೆಯಾದರೆ, ಅವಳ ಗಂಡನಿಗೆ ಆ ದೇವಸ್ಥಾನದ ನಿರ್ವಹಣೆಯಲ್ಲಿ ಮೊದಲಿದ್ದ ಸ್ವಾತಂತ್ರ್ಯ ಕಳೆದುಕೊಂಡ ಅಸೂಯೆ.

 

ವಿಷಬೆರೆಸಿ, ಆ ವಿಷವನ್ನು ಭಕ್ತರಿಗೆ ಹಂಚಿದಾಗ – ಭಕ್ತರು ಅದನ್ನುಂಡು ಸಾಯುವುದರೊಂದಿಗೆ, ಶ್ರದ್ಧಾಭಕ್ತಿಯ ಆಡಳಿತ ನಿರ್ವಾಹಕರು ಕಂಬಿ ಎಣಿಸುವಂತಾಗಿ, ಪೂರ್ಣ ದೇವಾಲಯ ಸ್ವಾಧೀನ ತಮ್ಮದಾದೀತು ಎಂದು ಮನಸ್ಸಿನಲ್ಲೇ ಮಂಡಿಗೆ ಕಡಿಯುತ್ತಿದ್ದರು.

 

ಆದರೆ, ಹಾಗಾಗಲಿಲ್ಲ; ಮಾರಮ್ಮನ ಅನುಗ್ರಹವಿತ್ತು. ಸತ್ಯ ಹೊರ ಬಂತು. ನಿಜವಾದ ಖೂಳರು ಯಾರೆಂಬುದು ಎಲ್ಲರೂ ತಿಳಿವಂತಾಯ್ತು.

 

ಆದರೂ, ದುರಾಸೆಯ ಕೂಟವು ರೂಪಿಸಿದ ಷಡ್ಯಂತ್ರದಿಂದಲಾಗಿ ಕಷ್ಟ ಅನುಭವಿಸಿದವರು ಯಾರು? ಬಲಿಯಾದ ಅಮಾಯಕರು ಯಾರು? ಕೊನೆಗೂ ಸತ್ಯ ಹೊರಬಂದು ಕಂಬಿ ಎಣಿಸುತ್ತಿರುವವರು ಯಾರು!?

~

 

ಪ್ರಕರಣವನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ, ಇಂತಹ ಒಂದು ಸನ್ನಿವೇಶ ನಮ್ಮ ಹತ್ತಿರದಲ್ಲೇ ನಡೆದಿದೆ- ಎಂದು ಅನಿಸುತ್ತದೆ. ನಮ್ಮ ತೀರಾ ಹತ್ತಿರದಲ್ಲೇ, ನಮ್ಮ ಸಮಾಜದಲ್ಲೇ, ಅಲ್ಲ – ನಮ್ಮ ಮಠದಲ್ಲೇ!?

ಹೌದೆಂದು ಅನಿಸುತ್ತದೆ!

 

ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಶ್ರೀಮಠದ ಆಡಳಿತ, ಆಸ್ತಿಯನ್ನು ವಶಪಡೆಯುವುದು, ಅದರೊಂದಿಗೆ ಪ್ರಸ್ತುತ ಪೀಠಾರೂಢ ಗುರುವರ್ಯ ಶಂಕರಾಚಾರ್ಯರ ವ್ಯಕ್ತಿತ್ವಕ್ಕೂ ಮಸಿ ಬಳಿಯುವುದು, ಆ ಮೂಲಕ ಶಿಷ್ಯರನ್ನು ದಿಕ್ಕೆಡಿಸಿ ದಿಕ್ಕಿಲ್ಲದಂತಾಗಿಸಲು ಷಡ್ಯಂತ್ರವೊಂದು ನಡೆಯುತ್ತದೆ. ಇಡಿಯ ಷಡ್ಯಂತ್ರ ನಾಟಕದ ಮೊದಲ ಒಂದೆರಡು ಅಂಕಗಳೂ ನಡೆಯುತ್ತವೆ. ಮುಗ್ಧ ಶಿಷ್ಯಭಕ್ತರ ಮನಸ್ಸಿಗೆ ವಿಷವುಣಿಸುವ ಪ್ರಯತ್ನವೂ ಮಾಡಲಾಗುತ್ತದೆ. ಬೆರಳೆಣಿಕೆಯ ಶಿಷ್ಯಭಕ್ತರು ಮಾನಸಿಕವಾಗಿ ವಿಷಪ್ರಾಶನವುಂಡು ಮೊದಲಿನ ಸ್ವಾಸ್ಥ್ಯವನ್ನೂ ಕಳಕೊಳ್ಳುತ್ತಾರೆ. ಗುರುವರ್ಯರ ವ್ಯಕ್ತಿತ್ವಕ್ಕೇ ಘಾಸಿಯಾಗುವಂತಹ ಮಿಥ್ಯಾರೋಪಗಳು ಕೇಳಿಬರುತ್ತವೆ.

 

ಕೊನೆಗೂ – ಸತ್ಯ ಒಂದೊಂದಾಗಿ ಹೊರಬರುತ್ತಿದೆ. ಸತ್ಯ ಶಾಶ್ವತವೆಂಬುದನ್ನು ರಾಮದೇವರು  ತೋರಿಸಿಕೊಡುತ್ತಿದ್ದಾರೆ. ಶಿಷ್ಯಭಕ್ತರು ನಿಜವನ್ನು ಕಂಡುಕೊಳ್ಳುತ್ತಿದ್ದಾರೆ.

ಷಡ್ಯಂತ್ರದ ಒಂದೊಂದೇ ಮಜಲುಗಳು ಹೊರಬರುತ್ತಿದ್ದಂತೆಯೇ, ಮಾನಸಿಕ ವಿಷಪ್ರಾಶನವಾದವರು ಎಚ್ಚೆತ್ತು ತಮ್ಮ ಇರವನ್ನು ಗಮನಿಸಿಕೊಳ್ಳುತ್ತಿದ್ದಾರೆ.

ವಿಷವುಣ್ಣದ, ವಿಚಲಿತವಾಗದ ಅಖಂಡ ಭಕ್ತವೃಂದವು ಮೊದಲಿಗಿಂತಲೂ ಪ್ರಸನ್ನರಾಗಿ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

~

 

ಮಾರಮ್ಮನ ಕ್ಷೇತ್ರದಲ್ಲಿ ಷಡ್ಯಂತ್ರವೆಸಗಿದವರು ಸಿಕ್ಕಿ ಕಂಬಿ ಎಣಿಸುತ್ತಿರುವಂತೆಯೇ, ಶ್ರೀಮಠದಲ್ಲಿ ವಿಷವುಣಿಸಲು ಯತ್ನಿಸಿದವರಿಗೆ ಶಿಕ್ಷೆಯಾಗಬೇಕಿದೆ. ಯಾವ ಹೊರಗಿನ ಶಕ್ತಿಗಳು ಮಠವನ್ನು ವಹಿಸಲು ಪ್ರಯತ್ನಿಸುತ್ತಿದೆಯೋ, ಯಾವ ವಿಷಕನ್ಯೆಗಳ ಮೂಲಕ ಸಮಾಜವನ್ನು ದಿಕ್ಕೆಡಿಸಲು ಯತ್ನಿಸಿವೆಯೋ – ಅವುಗಳೆಲ್ಲದಕ್ಕೂ ಶಾಶ್ವತ ಶಿಕ್ಷೆಯನ್ನು ಶ್ರೀರಾಮ ಕರುಣಿಸಲು ಇದು ಸಕಾಲವೆಂದು ಸಮಸ್ತ ಶಿಷ್ಯಕೋಟಿಯು ಸಾರಿ ಹೇಳುತ್ತಿದೆ.

 

ಮಾರಮ್ಮನ ಕ್ಷೇತ್ರದಲ್ಲಿ ಸಮಾಜಕ್ಕೆ ವಿಷವುಣಿಸಲು ಷಡ್ಯಂತ್ರ, ಶ್ರೀಮಠದ ಶಿಷ್ಯಕ್ಷೇತ್ರದಲ್ಲಿ ಮನಸ್ಸಿಗೆ ವಿಷವುಣಿಸಲು ಪ್ರಯತ್ನ. ಎರಡೂ ಅಪಾಯಕಾರಿ!

 

 

 

Author Details


Srimukha

Leave a Reply

Your email address will not be published. Required fields are marked *