ಸಂಗೀತಜ್ಞ – ವಿಜ್ಞಾನಿ ಭಾರತರತ್ನಗಳು

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ಸಂಗೀತವು ಇಹಕ್ಕೂ ಪರಕ್ಕೂ ಸಾಧನವೆಂದು ಭಾರತದಲ್ಲಿ ಪ್ರಾಚೀನದಿಂದಲೂ ನಂಬುಗೆಯಿದ್ದು ಆಧ್ಯಾತ್ಮಿಕವಾದ, ಧಾರ್ಮಿಕ ನೆಲೆಯಲ್ಲೇ ಹುಟ್ಟಿ ಬೆಳೆದರೂ, ಪ್ರಾಚೀನದಿಂದಲೂ ವೈಜ್ಞಾನಿಕವಾಗಿಯೇ ಭಾರತೀಯ ಸಂಗೀತವು ಬೆಳೆದಷ್ಟು ವಿಶ್ವದಲ್ಲಿಯೇ ಇಂದಿಗೂ ಬೇರೆಲ್ಲಿಯೂ ಹೀಗೆ, ಇಲ್ಲವೆಂದೇ ಹೇಳಬೇಕು. ಪ್ರಾಚೀನದಿಂದಲೂ ಋಷಿಸದೃಶರಾಗಿದ್ದ, ಬಹುಶ್ರುತ ವಿದ್ವಾಂಸರಾಗಿ ಸಂಗೀತಶಾಸ್ತ್ರಕಾರರಾಗಿದ್ದ ನಂದಿಕೇಶ್ವರ, ಕಶ್ಯಪ, ಮತಂಗ, ಅಭಿನವಗುಪ್ತ, ಸೋಮೇಶ್ವರ, ಪಾರ್ಶ್ವದೇವ, ಶಾರ್ಙ್ಗದೇವ, ಸಿಂಹಭೂಪಾಲ,ಕುಂಭಕರ್ಣ, ವೆಂಕಟಮಖಿ ಮುಂತಾದ ಅನೇಕರಲ್ಲಿ ಕೆಲವರು ರಾಜರೂ ಅಥವಾ ಅವರಿಂದ ಪೋಷಿಸಲ್ಪಟ್ಟವರೂ ಆಗಿದ್ದು ವೈದಿಕಕಲ್ಪ, ವೈದ್ಯ. ಶಿಲ್ಪ. ಧರ್ಮಶಾಸ್ತ್ರ, ಜ್ಯೋತಿಷ (ಈಗಿನಂತೆ ಫಲ ಜ್ಯೋತಿಷವಲ್ಲ, ನಕ್ಷತ್ರಾದಿಗಳು ಹಾಗೂ ಗ್ರಹಚಾರಣವನ್ನು ತಿಳಿಯುವಂತದು), ಕಾವ್ಯಮೀಮಾಂಸೆ, ಅಲಂಕಾರ, ಛಂದಸ್ಸು, ವೇದಾಂತ, ವ್ಯಾಕರಣ, ಸ್ಮೃತಿ. ನಿಘಂಟು, ತಂತ್ರ, ಆಗಮ, ಶೈವಸಿದ್ಧಾಂತ, ಕೃಷಿ, ಗಣಿತ ಇತ್ಯಾದಿ ಹಲವು ಶಾಸ್ತ್ರಗಳ ಪ್ರವರ್ತಕರಾಗಿರುತ್ತಿದ್ದರು. ಇವರೆಲ್ಲ ಆಗಿನ ಕಾಲದಲ್ಲಿ ಅಗತ್ಯವಿದ್ದಂತೆ (ವಿಜ್ಞಾನವೆಂಬ ಈಗಿನ ಪರಿಭಾಷೆಯಲ್ಲಿ ಅಲ್ಲವಾದರೂ) ಆ ವಿದ್ಯೆಗಳಲ್ಲಿ ಅಗಾಧವಾದ ಸಾಧನೆಯನ್ನು ಮಾಡಿ, ಸಂಗೀತಕ್ಕೂ ಶಾಶ್ವತವಾಗಿ ಶಾಸ್ತ್ರವೆಂಬ ಭದ್ರವಾದ ಬುನಾದಿಯನ್ನು ಹಾಕಿ ನೆಲೆಯನ್ನಿತ್ತವರು. ಅರ್ವಾಚೀನವಾಗಿಯೂ ಆಯಾ ಕಾಲಕ್ಕೆ ಅಗತ್ಯವಿದ್ದಂತೆ ವಿಜ್ಞಾನವೂ, ವಿಜ್ಞಾನಿಗಳೂ ಹುಟ್ಟಿಕೊಂಡರೂ ಮಾನವನ ಮೂಲಭೂತ ಸ್ವಭಾವವಾದ ಸಂಗೀತವು ರಕ್ತಗತವಾಗಿಯೇ ಈ ವಿಜ್ಞಾನ ಮೇಧಾವಿಗಳಿಗೂ ಬಂದದ್ದಲ್ಲದೆ, ಅವರ ಬುದ್ಧಿಶಕ್ತಿಯು ಒಂದೆಡೆ ಕೇಂದ್ರೀಕೃತವಾಗಲೂ, ಮನಸ್ಸಿಗೆ ನೆಮ್ಮದಿ, ಶಾಂತಿಗಳನ್ನು ನೀಡಲೂ ಸಹಕಾರಿಯಾದವು. ಪಾಶ್ಚಿಮಾತ್ಯ ದೇಶಗಳ ವಿಜ್ಞಾನಿಗಳಲ್ಲಿಯೂ ಅನೇಕರು ಸಂಗೀತ ವಿದ್ವಾಂಸರಾಗಿದ್ದರು. ಐನ್‌ಸ್ಟೈನನು ವಯೊಲಿನ್ ವಾದಕನಾಗಿದ್ದ. ಎಡ್ವರ್ಡ್ ಟೆಲ್ಲರನು ಉತ್ತಮ ಪಿಯಾನೋ ವಾದಕನಾಗಿದ್ದ. ವಾಗ್ಗೇಯಕಾರನಾಗಿದ್ದ ಅಲೆಗ್ಜಾಂಡರ್ ಪೊರ್ಫಿರ್ಯೇವಿಚ್ ಬೊರೊಡಿನ್ ತನ್ನ ಉದ್ಯೋಗದಲ್ಲಿ ರಸಾಯನಶಾಸ್ತ್ರಜ್ಞನಾಗಿದ್ದ. ಖಗೋಳಶಾಸ್ತ್ರಜ್ಞನಾಗಿದ್ದ ಹರ್ಷೆಲನು ವಾಗ್ಗೇಯಕಾರನೂ, ವಾದ್ಯಗೋಷ್ಠಿನಿರ್ವಾಹಕನೂ ಆಗಿದ್ದನು ಹೀಗೆ ಅನೇಕಾನೇಕ ವಿಜ್ಞಾನಿಗಳು ಸಂಗೀತಗಾರರೂ, ಸಂಗೀತಪ್ರಿಯರೂ ಆಗಿದ್ದರು. ಈಗಲೂ ಇದ್ದಾರೆ. ಈ ಕೆಳಗೆ ಸಂಗೀತಗಾರ ವಿಜ್ಞಾನಿಗಳ ಕಿರುಪರಿಚಯವನ್ನು ನೀಡಿದೆ. ಅವರ ಮೇರುಸದೃಶ ಸಾಧನೆಗಳನ್ನು ಹೇಳಲು ಇಲ್ಲಿ ಶಕ್ಯವಿಲ್ಲ. ಭಾರತದ ಈ ವಿಜ್ಞಾನರತ್ನಗಳು ಸಂಗೀತರತ್ನಗಳೂ ಆಗಿದ್ದರು ಎಂದಷ್ಟೇ ಹೇಳುವುದು ಈ ಲೇಖನದ ಉದ್ದೇಶ. ಇಂತಹ ಇನ್ನೆಷ್ಟೋ ಮಹಾನುಭಾವರು! ಅಂದರಿಕಿ ವಂದನಮು.

 

1. ಸರ್ ಸಿ. ವಿ. ರಾಮನ್ ( 7 – 11-1888 ರಿಂದ 21 – 11-1970)
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಜನಿಸಿದ ಚಂದ್ರಶೇಖರ ವೆಂಕಟರಾಮನ್ ರವರು ಭೌತಶಾಸ್ತ್ರ ವಿಜ್ಞಾನಿ. ಬೆಳಕಿನ ಚೆದುರುವಿಕೆಯಯನ್ನು ಕುರಿತಾದ ತಮ್ಮ ಪ್ರಥಮಾನ್ವೇಷಕ, ಪ್ರವರ್ತಕ ಸಂಶೋಧನೆಗಾಗಿ ವಿಶ್ವದ ಅತ್ಯುನ್ನತ ನೋಬಲ್ ಪಾರಿತೋಷಕವನ್ನು ಗಳಿಸಿದ, ಬಿಳಿಯರಲ್ಲದ ಪ್ರಪ್ರಥಮ ವಿಜ್ಞಾನಿ. ಶಾಸ್ತ್ರೀಯಸಂಗೀತದಲ್ಲಿ ಬಹುವಾದ ಒಲವಿದ್ದ ಶ್ರೀ ರಾಮನ್ ರವರು ಮೃದಂಗ, ತಬಾಲಾಗಳಂತಹ ಭಾರತೀಯ ಲಯವಾದ್ಯಗಳಲ್ಲಿಯೂ, ಪಿಟೀಲು ವಾದ್ಯವನ್ನು ಕುರಿತಾಗಿಯೂ ಶಬ್ದಶಾಸ್ತ್ರಾನ್ವಯವಾಗಿ ಪರಸ್ಪರವಾಗಿ ನಾದದಲ್ಲಿ ಮಧುರ ಸಾಮರಸ್ಯವನ್ನೇರ್ಪಡಿಸುವುದರ ಕುರಿತು ಸಂಶೋಧನೆಗಳನ್ನು ಮಾಡಿದರು. ಅವರು ದಿವಂಗತರಾಗುವ ಮುನ್ನ ಅವರ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ – ಬೆಂಗಳೂರು ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೇಳಿದ ಮಾತುಗಳನ್ನು ಕೆಳಗೆ ನೀಡಿದೆ. ಇವು ಎಂದಿಗೂ ಶಾಶ್ವತವಾಗಿ ಎಲ್ಲ ಶಾಸ್ತ್ರಗಳಲ್ಲಿಯೂ ಅನುಸರಿಸಬೇಕಾದ ಮಾತುಗಳು :
“ Do not allow journals of the academy to die for they are the sensitive indicators of the quality of science being done in the country and weather science is taking root in it or not”.

 

2. ಹೋಮಿ ಜೆ. ಭಾಭಾ — (30-10-1909 ರಿಂದ 24 – 1-1996)

ಫಾರ್ಸಿ ಮೂಲದ ಭಾರತದ ಭೌತಶಾಸ್ತ್ರ ವಿಜ್ಞಾನಿ ಹೋಮಿ ಜೆ. ಭಾಭಾರವರು ಮುಂಬೈನಲ್ಲಿ ಜನಿಸಿದರು. ಪರಮಾಣು ಭೌತಶಾಸ್ತ್ರಜ್ಞರಾದ ಇವರು ರಾಶಿಪರಿಮಾಣ ಸಿದ್ಧಾಂತ (quantum theory)ವನ್ನು ಕುರಿತಾಗಿ ಅತ್ಯಂತವಾದ ಸಾಧನೆಗಳನ್ನು ಮಾಡಿ ಭಾರತದ ಅಣುಶಕ್ತಿ ಕಾರ್ಯಕ್ರಮ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಹಾಗೂ ಅದರ ನಿರ್ದೇಶಕರಾಗಿಯೂ ಕಾರ್ಯವನ್ನು ನಿರ್ವಹಿಸಿದರು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿಯೂ ಕಾರ್ಯವನ್ನು ನಿರ್ವಹಿಸಿದರು. ಅವರ ಕಾಲಾನಂತರ ಗೌರವ ಸಲ್ಲಿಸುವ ಸಲುವಾಗಿ ಮುಂಬೈನ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್ಮೆಂಟ್ ಸಂಸ್ಥೆಯನ್ನು ಭಾಭಾ ಅಟಾಮಿಕ್ ಸಂಶೋಧನಾ ಕೇಂದ್ರವೆಂದು ಮರುನಾಮಕರಣವನ್ನು ಮಾಡಲಾಯಿತು. ಸಮರ್ಥ ವಿಜ್ಞಾನಿಯೂ, ನಿರ್ವಾಹಕ ನಿರ್ದೇಶಕರೂ ಆಗಿದ್ದ ಭಾಭಾರವರು ಲಲಿತಕಲೆಗಳಲ್ಲಿಯೂ ಬಹುವಾಗಿ ಆಸಕ್ತರಾಗಿದ್ದು ವರ್ಣಚಿತ್ರಕಾರರೂ, ಶಾಸ್ತ್ರೀಯ ಸಂಗೀತಗಾರರೂ, ಒಪೆರಾ ಸಂಗೀತಾಸಕ್ತರೂ ಆಗಿದ್ದು ಪರಿಣತಿಯನ್ನು ಹೊಂದಿದ್ದರು. ಅಣುಶಕ್ತಿಯ ವಿಜ್ಞಾನಿಯೇ ಆಗಿದ್ದರೂ ಅಣ್ವಸ್ತ್ರಗಳ ತಯಾರಿಕೆಯ ವಿರೋಧಿಯಾಗಿದ್ದರು. ಭಾಭಾರವರು ಪಯಣಿಸುತ್ತಿದ್ದ ವಿಮಾನವು ಮಾಂಟ್ ಬ್ಲಾಂಕ್ ಬಳಿ ಅಪಘಾತಕ್ಕೊಳಗಾಗಿದ್ದು ಮೃತ್ಯುವಶರಾದರು.

 

3.. ಭಾರತರತ್ನ ಎ. ಪಿ. ಜೆ. ಅಬ್ದುಲ್ ಕಲಾಂ — (15-8-1931 ರಿಂದ 27-7-2015).
ಅವಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂರವರು ಮದ್ರಾಸು ಪ್ರೆಸಿಡೆನ್ಸಿಯ ರಾಮೇಶ್ವರದಲ್ಲಿ ಬಹಳ ಬಡತನವಿದ್ದ ಕುಟುಂಬದಲ್ಲಿ ಜನಿಸಿದರು. ತಮ್ಮ ಬಡ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಬೇಕೆಂದು ನಿಶ್ಚಯಿಸಿ ಕಿರಿವಯಸ್ಸಿನಲ್ಲಿಯೇ ವಾರ್ತಾಪತ್ರಿಕೆವಿತರಣೆ ಇತ್ಯಾದಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದವರು. ಮದ್ರಾಸು ವಿಶ್ವನಿವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರೂ ಅಲ್ಲಿ ಸಂಶೋಧನೆಯನ್ನು ಮಾಡಲು ಇಷ್ಟವಾಗದೆ ಅಂತರಿಕ್ಷ ಯಾನ ಇಂಜಿನಿಯರಿಂಗ್ ಓದಲು ತೊಡಗಿ ನಂತರ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯಿಯವರ ಅಡಿಯಲ್ಲಿದ್ದ ಇನ್ಕೋಸ್ಟಾರ್ಸ್ ಸಮಿತಿಯಲ್ಲಿ ಸದಸ್ಯರಾಗಿ ಅಲ್ಲಿಂದ ಮುಂದೆ ಇಸ್ರೋ ಸಂಸ್ಥೆಗೆ ವರ್ಗಾಯಿಸಲ್ಪಟ್ಟರು. ಅಲ್ಲಿ ರೋಹಿಣಿ ಉಪಗ್ರಹವನ್ನು 1980 ರಲ್ಲಿ ಭೂಮಿಯ ಉಪಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದರು. ಜೀವನದಲ್ಲಿ ಅತ್ಯಂತ ಕಷ್ಟಗಳನ್ನು ಏರುಪೇರುಗಳನ್ನು ಅನುಭವಿಸಿದರೂ ಕಲಾಂರವರ ದೇಶಭಕ್ತಿ, ವಿದ್ಯೆ, ತಾಕತ್ತುಗಳು ಕಡಿಮೆಯಾಗಲಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಕಲಾಂರವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿ ಯಶಸ್ವಿಯಾಗಿ ಈ ಕಾರ್ಯಭಾರವನ್ನು ನಿರ್ವಹಿಸಿದರು. ಕ್ಷಿಪಣಿಗಳ ಜನಕ (Missile Man of India) ಎಂದೇ ಕೀರ್ತಿಯನ್ನು ಗಳಿಸಿದ್ದ ಕಲಾಂರವರು ವಿಜ್ಞಾನಿ ಮಾತ್ರವಲ್ಲದೆ, ತಮಿಳುಭಾಷಾಕವಿಯೂ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವೀಣಾವಾದಕರೂ ಆಗಿದ್ದರು.

 

4..ವಿಕ್ರಂ ಸಾರಾಭಾಯಿ — (12 – 8-1919ರಿಂದ 13-12 1971)
ವಿಕ್ರಂ ಸಾರಾಭಾಯಿಯವರ ಜನನ ಅಹಮದಾಬಾದ್ ನಲ್ಲಿ. ಅವರ ಮಾತಾಪಿತೃಗಳು ಶ್ರೀಮಂತರೇ ಬಾಲ್ಯದಿಂದಲೂ ಭೌತಶಾಸ್ತ್ರ ಹಾಗೂ ಗಣಿತದಲ್ಲಿ ಆಸಕ್ತರಾಗಿದ್ದ ವಿಕ್ರಂ ಸಾರಾಭಾಯಿಯವರು ತಮ್ಮ ಬಾಲ್ಯದ ಶಿಕ್ಷಣವನ್ನು ಗುಜರಾತಿನಲ್ಲಿ ಮುಗಿಸಿ ಉನ್ನತ ಶಿಕ್ಷಣವನ್ನು ಇಂಗ್ಲೆಂಡ್ ನಲ್ಲಿ ಮಾಡಿದರು. ಮರಳಿ ಭಾರತಕ್ಕೆ ಬಂದು ಸರ್ ಸಿ. ವಿ. ರಾಮನ್ ನಂತಹ ವಿಜ್ಞಾನಿ ದಿಗ್ಗಜಗಳೊಡನೆ ಸಂಶೋಧನೆಗಳನ್ನು ಮಾಡಿ, ಅಧ್ಯಯನಕ್ಕಾಗಿ ಇಂಗ್ಲೆಂಡ್ ಗೆ ತೆರಳಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ Ph.D. ಯನ್ನು ಗಳಿಸಿದರು ಭಾರತಕ್ಕೆ ಹಿಂತಿರುಗಿದ ಸಾರಾಭಾಯಿಯವರು ಅನೇಕ ವಿಜ್ಞಾನ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿ, ಸಂಶೋಧನೆಗಳನ್ನು ಮಾಡುತ್ತ ಬಾಹ್ಯಾಕಾಶ ವಿಜ್ಞಾನದಲ್ಲಿ ಬಹುವಾದ ಸಾಧನೆಗಳನ್ನು ಮಾಡಿ 1975 ರಲ್ಲಿ ಭಾರತದ ಮೊತ್ತಮೊದಲ ಬಾಹ್ಯಾಕಾಶ ಉಪಗ್ರಹವಾದ ‘ಆರ್ಯಭಟ’ ವು ಭೂಮಿಯ ಕಕ್ಷೆಯನ್ನು ಸೇರಲು ಕಾರಣೀಭೂತರಾದರು. ಅವರ ಬಾಹ್ಯಾಕಾಶ ವಿಜ್ಞಾನದ ಸಾಧನೆಗಳಿಂದಾಗಿ ಭಾರತದ ದೂರದರ್ಶನ, ಸಂಪರ್ಕಸಾಧನಗಳಲ್ಲಿ ಮಹತ್ತರವಾದ ಕ್ರಾಂತಿಯುಂಟಾಗಿ ಮಿಲಿಯಗಟ್ಟಲೆ ಜನರಿಗೆ ಇವುಗಳು ದೊರೆಯುವಂತಾಯಿತು. ಲಲಿತಕಲೆಗಳಲ್ಲಿ ಅಪಾರವಾದ ಆಸಕ್ತಿ ಹಾಗೂ ಸಾಧನೆಗಳಿದ್ದ ವಿಕ್ರಂ ಸಾರಾಭಾಯಿಯವರು ತಮ್ಮ ಪತ್ನಿಯವರಾಗಿದ್ದ ವಿಶ್ವವಿಖ್ಯಾತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿಯವರೊಂದಿಗೆ,’ದರ್ಪಣ ಅಕೆಡಮಿ’ ಯನ್ನು ಸ್ಥಾಪಿಸಿ, ಭಾರತವಿಡೀ ರಂಗಕಲೆಗಳೂ, ಭಾರತೀಯ ಪ್ರಾಚೀನ ಸಂಸ್ಕೃತಿಗಳೂ ಪಪಸರಿಸಲು ಕಾರಣರಾದರು.

 

5. ಡಾ. ರಾಜಾರಾಮಣ್ಣ — (28 -1-1925 ರಿಂದ 24-9-2004)
ರಾಜಾರಾಮಣ್ಣನವರ ಜನನವಾದದ್ದು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ. ಬಾಲ್ಯದ ವಿದ್ಯಾಭ್ಯಾಸವು ತಿಪಟೂರಿನಲ್ಲಿ. ಮದ್ರಾಸಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ. ಎಸ್. ಸಿ ಆನರ್ಸ್ ಪದವಿ ಪಡೆದ ನಂತರ ಲಂಡನ್ನಿಗೆ ತೆರಳಿ ಲಂಡನ್ನಿನಲ್ಲಿ ಅಭ್ಯಸಿಸಿ ಪಿ. ಎಚ್. ಡಿ ಪದವಿಯನ್ನು ಪಡೆದು ತಾಯ್ನಾಡಿಗೆ ಮರಳಿ ಹೋಮಿ ಜಹಾಂಗೀರ್ ಭಾಭಾರವರೊಡನೆ ಕೆಲಸವನ್ನು ಮಾಡಿ, ಪರಮಾಣುಕೇಂದ್ರವಿದಳನದ (ನ್ಯೂಕ್ಲಿಯರ್ ಫಿಜನ್) ವಿಷಯದಲ್ಲಿ ಆಳವಾದ ಸಂಶೋಧನೆಯನ್ನು ಮಾಡಿದರು. ಭಾರತದ ಮೊದಲನೆಯ ಅಣುಬಾಂಬ್ ಕಾರ್ಯಕ್ರಮದ ಹರಿಕಾರರಾಗಿದ್ದ ಅವರು 1974 ರಲ್ಲಿ ಭಾರತದ ಪ್ರಪ್ರಥಮ ಪರಮಾಣು ಪರೀಕ್ಷೆಯನ್ನು ರಾಜಾಸ್ಥಾನದ ಪೊಖ್ರಾನ್ ನಲ್ಲಿ ಯಶಸ್ವಿಯಾಗಿ ನಿರ್ವಹಿಸಿದರು. ಬಹುಮುಖಪ್ರತಿಭೆ ರಾಜಾರಾಮಣ್ಣನವರು ಶ್ರೇಷ್ಠ ಪರಮಾಣು ವಿಜ್ಞಾನಿ ಮಾತ್ರವಲ್ಲದೆ ಶ್ರೇಷ್ಠ ಆಡಳಿತಗಾರರೂ ಆಗಿದ್ದಲ್ಲದೆ, ವೇದೋಪನಿಷತ್ತುಗಳ ಪಾರಂಗತರೂ, ದಾರ್ಶನಿಕರೂ ಸಂಗೀತದಲ್ಲಿ ನುರಿತ ಪಿಯಾನೋ ಹಾಗೂ ವಿಯೋಲ ವಾದಕರೂ ಆಗಿದ್ದರು. The Structure of Music in Raga and Western Systems ಗ್ರಂಥವನ್ನು ರಚಿಸಿದ್ದಾರೆ.

 

6.. ಸತ್ಯೇಂದ್ರನಾಥ ಬೋಸ್ — (1-1-1894 ರಿಂದ 4-2-1974)
ಸತ್ಯೇಂದ್ರನಾಥ ಬೋಸರ ಜನನ ಕಲ್ಕತ್ತದಲ್ಲಿ. ಚಿಕ್ಕಂದಿನಿಂದಲೂ ಗಣಿತದಲ್ಲಿ ಅಪಾರವಾದ ಆಸಕ್ತಿ. ಕಲ್ಕತ್ತೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ 1915 ರಲ್ಲಿ ಎಂ. ಎಸ್ಸಿ. ಪದವಿಯನ್ನು ಪಡೆದರು. ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು. ಬೋಸರು ಬರೆದ ಪ್ಲ್ಯಾಂಕನ ನಿಯಮ ಮತ್ತು ಲೈಟ್ ಮತ್ತು ಕ್ವಾಂಟಮ್ ಕುರಿತಾಗಿ ಬರೆದ ಲೇಖನವನ್ನು ಪ್ರಸಿದ್ಧ ವಿಜ್ಞಾನಿ ಐನ್ ಸ್ಟೀನ್ ರವರು ಬಹುವಾಗಿ ಮೆಚ್ಚಿಕೊಂಡು ಜರ್ಮನ್ ಭಾಷೆಗೆ ಅನುವಾದವನ್ನು ಮಾಡಿದರು. ಬೋಸರ ಆಸಕ್ತಿ ಭೌತಶಾಸ್ತ್ರಕ್ಕೆ ಮಾತ್ರ ಸೀಮಿತವಾಗದೆ ಭೂಗರ್ಭಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ತತ್ತ್ವಶಾಸ್ತ್ರ, ಮುಂತಾದವುಗಳಲ್ಲಿಯೂ ಅನೇಕ ಭಾಷೆಗಳಲ್ಲಿಯೂ ಪರಿಣತಿಯಿದ್ದಿದ್ದು ಸಮಾಜಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಂತೆಯೇ ಲಲಿತಕಲೆಗಳಲ್ಲಿಯೂ ಅಪಾರ ಆಸಕ್ತಿಯಿದ್ದು ಎಸರಾಜ್ ಎಂಬ ಪಿಟೀಲನ್ನು ಹೋಲುವ ಭಾರತೀಯ ಸಂಗೀತವಾದ್ಯವನ್ನು ನುಡಿಸುತ್ತಿದ್ದರು.

Author Details


Srimukha

Leave a Reply

Your email address will not be published. Required fields are marked *