ಸಂಗೀತದ ವಿಶೇಷ ಭಾಷೆ – ‘ಭಾಂಡೀರ

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ಸನಾತನ – ಪದೋ ದಾತಾ ನಿತ್ಯಂ ಚೈವ ಸನಾತನಃ |

ಭಾಂಡೀರವನವಾಸೀ ಚ ಶ್ರೀವೃಂದಾವನ ನಾಯಕಃ ||59||

 

ಬಾಲಕ್ರೀಣಾऽತಿ ಚಪಲೋ ಭಾಂಡೀರ – ವನ – ನಂದನಃ |

ಮಹಾಶಾಲಃ ಶ್ರುತಿ – ಮುಖೋ ಗಂಗಾ – ಚರಣ – ಸೇವನಃ ||103||

 

(ಶ್ರೀಗೋಪಾಲ ಸಹಸ್ರನಾಮ ಸ್ತೋತ್ರಮ್ – ಶ್ರೀನಾರದ ಪಂಚರಾತ್ರಮ್)

 

ಉತ್ತರಪ್ರದೇಶದ  ವೃಂದಾವನವೆಂಬುದು ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ, ಚಾರಿತ್ರಿಕ ಪರಂಪರೆಗಳ ಅಸ್ಮಿತೆಗಳಲ್ಲೊಂದು. ಭಾಗವತದ, ಭಕ್ತರ ಹೃದಯನಾಯಕನಾದ ಯಾದವ ಕೃಷ್ಣನ, ಆತನ ಸ್ನೇಹಿತರ ಹಾಗೂ ರಾಧಾ ಮುಂತಾದ ಗೋಪಿಯರ ಲೀಲಾವಿನೋದದ ಮನೋಹರ ಕ್ಷೇತ್ರ. ಅಂತೆಯೇ ಭಗವಂತನ ಮುರಳೀಗಾನದ ಸಂಗೀತವನ್ನು ಕೇಳಿದ ಸಂಗೀತಕ್ಷೇತ್ರವೂ ಹೌದು. ಆತನ ಕೊಳಲ ಧ್ವನಿಯನ್ನು ಕೇಳಿ  ಯಮುನೆಯೇ ಹರಿಯದೆ ನಿಲ್ಲತ್ತಿದ್ದಳಂತೆ. ವಾಯುವು ಸ್ತಬ್ಧನಾಗಿ ನಿಂತು ಆಲಿಸುತ್ತಿದ್ದನಂತೆ. ಮರಗಿಡಗಳೂ ಮೈಯೆಲ್ಲ ಕಿವಿಯಾಗಿ ಆಲಿಸುತ್ತಿದ್ದವಂತೆ. ಗೋವಿನ ಕರುಗಳು ಹಾಲು ಕುಡಿಯುವುದನ್ನೂ ನಿಲ್ಲಿಸಿ ತೆರೆದ ಬಾಯಿಯಲ್ಲೇ ಮುರಳೀರವವನ್ನು ಆಲಿಸಿದರೆ ಗೋವುಗಳಿಗೆ ಕೆಚ್ಚಲಿನಲ್ಲಿ ಕ್ಷೀರಧಾರಾಮೃತವು ಹರಿಯುತ್ತಿದ್ದರೂ ಅದರ ಅರಿವಾಗದೆ ಕಿವಿಗೊಟ್ಟು ನಿಲ್ಲುತ್ತಿದ್ದವಂತೆ. ಗೋಪಿಯರ ಪಾಡಂತೂ ಹೇಳತೀರದು, ಹೇಗೆ ಹೇಗಿರುತ್ತಿದ್ದರೋ ಅದೇ ಅವಸ್ಥೆಗಳಲ್ಲಿಯೇ, ಎಲ್ಲ ಕೆಲಸಗಳನ್ನೂ ಅರ್ಧದಲ್ಲಿ ನಿಲ್ಲಿಸಿ, ಕೃಷ್ಣನ ಕೊಳಲ ಧ್ವನಿಯನ್ನು ಆಲಿಸಿ, ಓಡೋಡಿ ಬರುತ್ತಿದ್ದಂತೆ. ಶ್ರೀಕೃಷ್ಣಚರಿತೆಯನ್ನು ಹೇಳಿದ  ಹರಿವಂಶ, ಭಾಗವತ, ವಿಷ್ಣುಪುರಾಣಗಳೂ , ಕೃಷ್ಣನನ್ನು ಕುರಿತ ಅನೇಕ ಚಂಪೂನಾಟಕ ಕಾವ್ಯ – ಮಹಾಕಾವ್ಯಗಳೂ ಮನದುಂಬಿ ಭಾವದುಂಬಿ ಕೃಷ್ಣನ ಕೊಳಲಗಾನವನ್ನು ವರ್ಣಿಸಿ ಧನ್ಯವಾಗಿವೆ.

 

ಈ ಎಲ್ಲ ಸಾಹಿತ್ಯಗಳಲ್ಲಿಯೂ   ಭಾಂಡೀರವೆಂಬ ಮಹಾ ವಟವೃಕ್ಷದ ಪ್ರಸ್ತಾಪವು ಇದೆ. ಈ ಭಾಂಡೀರದ ಬುಡವೇ ಆತನ ಮುರಳೀಗಾಯನದ ರಮ್ಯ, ಪುಣ್ಯ ತಾಣ. ಈ ಭಾಂಡೀರ ವೃಕ್ಷವಾದರೂ ರಾಷ್ಟ್ರನಾಯಕನಲ್ಲಿರಬೇಕಾದ ಮಹಾಸತ್ತ್ವವನ್ನು ಹೇಳುವಂತಹದಾಗಿದ್ದು, ಆಕಾಶದತ್ತಲೂ ತನ್ನ ಬಿಳಲುಗಳೆಂಬ ಬೇರಗಳನ್ನು ಚಾಚುತ್ತ, ಆಕಾಶದತ್ತ ಲಕ್ಷ್ಯವಿದ್ದರೂ ನೆಲವನ್ನು ಗಟ್ಟಿಯಾಗಿ ಆಲಂಗಿಸಿ ಅವಲಂಬಿಸಿ ನಿಲ್ಲಬೇಕಾದ ಎಚ್ಚರ, ಅಪ್ರತಿಮ ಜೀವೇಚ್ಛೆ, ಎಲ್ಲ ಬಗೆಯ ಆಪತ್ತುಗಳನ್ನೂ ಎದುರಿಸಿ ಅವುಗಳಿಂದ ರಾಷ್ಟ್ರವನ್ನು ರಕ್ಷಿಸುವ ಸಮುದಾಯ ಪ್ರಜ್ಞೆ ಮುಂತಾದ ಗುಣಗಳನ್ನು ಅನ್ಯಾದೃಶವಾಗಿ ಸಂಕೇತಿಸುತ್ತದೆ. ಅನೇಕ ಆಧ್ಯಾತ್ಮಿಕ ಸಂಕೇತಗಳನ್ನು ಹೊಂದಿದ ಈ ಭಾಂಡೀರದ ವೃಕ್ಷಗಳ ವನವನ್ನೇ ವೃಂದಾವನವು ಹೊಂದಿತ್ತು. ಗೋವುಗಳನ್ನು ಕಾಯಲು ಗೋಪಾಲಕೃಷ್ಣನು ಯಮುನಾತೀರದ ವನಗಳಲ್ಲಿ ಅಲೆಯುವಾಗ ಈ ಭಾಂಡೀರವನಕ್ಕೆ  ಓಡಿ ಬರುತ್ತಿದ್ದನಂತೆ. ಭಾಂಡೀರದಡಿಯಲ್ಲಿಯೇ ಆತನ ಲೋಕಮೋಹಕವಾದ ಮುರಳೀಗಾನದ ಅಭ್ಯಾಸ. ಕೃಷ್ಣನ ಕೊಳಲ ಧ್ವನಿಯನ್ನು ಕೇಳಿದ ಆ ವನವಾದರೂ ಅದೇನು ಪುಣ್ಯ ಮಾಡಿತ್ತೋ. ಕನ್ನಡದ ಮಹಾಕವಿ ಪುತಿನರವರು ತಮ್ಮ ಶ್ರೀಹರಿಚರಿತೆಯ ‘ಭಾಂಡೀರ ದರ್ಶನಂ’ ಎಂಬ ಉಲ್ಲಾಸದ  ಭಾಗದಲ್ಲಿ ಈ ಭಾಂಡೀರವೆಂಬ ನ್ಯಗ್ರೋಧವನ್ನು ಹೃದ್ಯವಾಗಿ ವಿವರಿಸಿದ್ದಾರೆ. ತನ್ನ ಅಸಂಖ್ಯ ಬಿಳಲುಗಳನ್ನು ನೆಲದ ತನಕ ಹರಡಿನಿಂತ ಈ ಭಾಂಡೀರವೃಕ್ಷವು  ಸಾಸಿರ ಕಂಬಗಳ ಕರುಮಾಡದಂತೆ ಇದೆಯಂತೆ. ಈ ಮಹೋನ್ನತ ವೃಕ್ಷದಡಿಯಲ್ಲಿ ಆಸೀನನಾಗಿ, ಅದರ ಬಿಳಲುಗಳನ್ನು ಹಿಡಿದು ಜಗ್ಗಿ ತೂಗಾಡಿ, ಅದರ ಶ್ಯಾಮಲವರ್ಣವನ್ನೀಕ್ಷಿಸುತ್ತ, ಮಹತ್ತನ್ನೇ ಮನದಲ್ಲಿ ಕಲ್ಪಿಸುತ್ತ, ಮುರಳೀಗಾನವನ್ನು ಅಭ್ಯಸಿಸುತ್ತ, ನಾದವನ್ನೇ ಧ್ಯಾನಿಸುತ್ತ ಮುರಳೀಗಾನಲೋಲನು ಗಾನದಲ್ಲಿ ಪರಿಪೂರ್ಣ ಸಿದ್ಧಿ ಪಡೆದನು ಎನ್ನುತ್ತಾರೆ ಮಹಾಕವಿ ಪುತಿನ. ಕೃಷ್ಣಕರ್ಣಾಮೃತವೆಂಬ ಕಾವ್ಯಾಮೃತಧಾರೆಯನ್ನು ಹರಿಸಿದ ಕವಿಮಾಂತ್ರಿಕ  ಲೀಲಾಶುಕನಾದರೋ ಕೃಷ್ಣನ ಕೊಳಲ ನಾದವಾಹಿನಿಯನ್ನು ಬಣ್ಣಿಸಲು ಕಾವ್ಯವಾಹಿನಿಯನ್ನೇ ಹರಿಸಿದ. ಈ ಭಾಂಡೀರವೃಕ್ಷದ ಬಳಿಯಲ್ಲಿ ಕುಳಿತ ಬಾಲನು ತನ್ನ ಕೊಳಲಿನಲ್ಲಿ ಸುಮಧುರ ಮುರಳೀಗಾನವಾಹಿನಿಯನ್ನು ಹರಿಸಿದನೆಂದರೆ ಲೋಕವೆಲ್ಲ ತನ್ಮಯವಾಗುತ್ತಿತ್ತು, ಅರಳುತ್ತಿತ್ತು ಎನ್ನುತ್ತಾನೆ ಲೀಲಾಶುಕ ಕವಿ. ಭಾಂಡೀರವೃಕ್ಷದಾಸರೆಯಲ್ಲಿ ಕಲಿತ ವೇಣುರವವನ್ನು ‘ಸರ್ವಭೂತಮನೋಹರಂ’ ಎಂದು ಬಣ್ಣಿಸುತ್ತದೆ ಶ್ರೀಮದ್ಭಾಗವತ. ಗಾರ್ಗ್ಯಸಂಹಿತೆಯ ಅಧ್ಯಾಯ – 1ರಲ್ಲಿ 15ನೆಯ ಶ್ಲೋಕವೊಂದು ಇಂತಿದೆ:

 

ಸ್ವಗುರುಂ ಮಾ ವಿಜಾನೀಯಾನ್ನಾವಮನ್ಯೇತ ಕರ್ಹಿಚಿತ್ |

ನ ಮರ್ತ್ಯಬುದ್ಧ್ಯಾ ಸೇವೇತ ಸರ್ವದೇವಮಯೋ ಗುರುಃ ||

 

(= ಗುರುವಿನ ವಿಷಯವನ್ನು ವಿಮರ್ಶೆ ಮಾಡಲು ಹೋಗಬಾರದು, ಎಂದೂ ಅವಮಾನ ಮಾಡಬಾರದು, ಗುರುವು ಸಮಸ್ತದೇವತಾಸ್ವರೂಪನಾದುದರಿಂದ ಮನುಷ್ಯ ಬುದ್ಧಿಯಿಂದ ಆತನನ್ನು ಸೇವಿಸಬಾರದು.)

 

ಈ ಶ್ಲೋಕದ ಸಂದರ್ಭವೇನೆಂದರೆ, ಗೋಪಿಯರು ಕೃಷ್ಣನೊಂದಿಗೆ ರಾಸಲೀಲೆಗೆ ಹಂಬಲಿಸಿ ಆಹ್ವಾನಿಸಿದಾಗ ಆತನು ಬರುವುದು ತಡವಾದ ಸಮಯದಲ್ಲಿ ಗೋಪಿಯರು ಕೇಳಿದ ಪ್ರಶ್ನೆಗೆ ಕೃಷ್ಣಪರಮಾತ್ಮನು ನೀಡಿದ ಉತ್ತರವಿದು-

‘ಎಲೈ ಪ್ರಿಯರೇ, ಇಂದು ಭಾಂಡೀರಕ್ಕೆ ನನ್ನ ಗುರುಗಳಾದ ದುರ್ವಾಸ ಮುನಿಗಳು ಬಂದಿದ್ದರು. ಆದುದರಿಂದ ಅವರ ಸೇವೆಗೋಸ್ಕರ ನಾನು ಹೋಗಿದ್ದೆನು’ ಎಂದು ಹೇಳಿದಾಗ ಶ್ರೀಕೃಷ್ಣನಿಗೂ ಗುರುಗಳಿದ್ದಾರೆಯೇ? ಅವರನ್ನು ಸೇವಿಸಲು ತಮ್ಮ ರಾಜಪುತ್ರನಾದ ಮಹಾಮಹಿಮ ಕೃಷ್ಣನೂ ಹೋಗಬೇಕೆ? ಎಂದು ಆಶ್ಚರ್ಯಪಟ್ಟಾಗ ಶ್ರೀಕೃಷ್ಣನು ಹೇಳಿದ ಮಾತಿದು. ಸಾಕ್ಷಾತ್ ಶ್ರೀಕೃಷ್ಣನೇ ದುರ್ವಾಸರನ್ನು ತನ್ನ ಗುರುಗಳೆಂದು ಹೇಳಿದ್ದರಿಂದ ಗೋಪಿಯರೆಲ್ಲರೂ ಭಾಂಡೀರವನಕ್ಕೇ ಹೋಗಿ ದುರ್ವಾಸಮುನಿಗಳನ್ನು ಸಂದರ್ಶಿಸಿ ಭಕ್ತಿಯಿಂದ ಸೇವಿಸಿ ಉಪಚರಿಸಿದರು.

 

ಭಾಗವತವು ಒಂದು ವಿಶ್ವಕೋಶ.  ಧ್ಯಾನ, ಹಠಯೋಗ, ಅನುಷ್ಠಾನಗಳಿಗೆ ಪೂರಕವಾಗಿ ಪರಮಪವಿತ್ರವಾದ ಭಾಂಡೀರವೃಕ್ಷವು ಹೇಗೆ ಮಹತ್ತಾಗಿ  ಕೆಳಗೂ ಮೇಲೂ ಸುತ್ತಲೂ ಬೆಳೆದು ನಮಗೆ ರಕ್ಷಣೆಯನ್ನೀಯುತ್ತದೆಯೋ ಅದರಂತೆಯೇ ಮಾನವನೂ ಬಾಳಬೇಕು ಎಂಬ ಸಂದೇಶವು ಭಗವಂತನಿಂದ ನಮಗೆ ದೊರೆಯುತ್ತದೆ. ಶ್ರೀಕೃಷ್ಣನ ಸಂಗೀತದ ಅನುಷ್ಠಾನ ಕ್ಷೇತ್ರವಾಗಿದ್ದ, ಅನೇಕಾನೇಕ ಆಧ್ಯಾತ್ಮಿಕ ಸಂಕೇತಗಳನ್ನು ಹೊಂದಿ ಭಾರತೀಯ ಸಂಸ್ಕೃತಿಯ ದ್ಯೋತಕವಾದ ಭಾಂಡೀರದ ಆದರ್ಶಗಳನ್ನೇ ಆರೋಪಿಸಿ, ನಮ್ಮ ಸಂಗೀತಶಾಸ್ತ್ರಜ್ಞರೂ ಸಂಗೀತವಿದ್ವಾಂಸರೂ ಸಂಗೀತ ಪ್ರಬಂಧ ರಚನೆಗಳಿಗಾಗಿ ಸೃಜಿಸಿದ ಭಾಷೆಗೆ ಇಟ್ಟ ಹೆಸರೇ ಭಾಂಡೀರ. ಭಾಂಡೀರಭಾಷೆಗೆಂದೇ ಪ್ರತ್ಯೇಕವಾದ ವ್ಯಾಕರಣವೂ, ನುಡಿಗಟ್ಟೂ ಏರ್ಪಟ್ಟಿದ್ದವು. ತಂಜಾವೂರು ಸರಸ್ವತೀಮಹಲ್ ನ ಸಂಗೀತಗ್ರಂಥಾಲಯದಲ್ಲಿ ಭಾಂಡೀರ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ ಹಸ್ತಪ್ರತಿಯೊಂದು ಲಭ್ಯವಿದೆ.

 

ಭಾಂಡೀರವು ಸಂಸ್ಕೃತ ಅಪಭ್ರಂಶ ಭಾಷೆಗಳಲ್ಲಿ ಒಂದಾಗಿದ್ದು ಸಂಗೀತದ ಪ್ರಾಚೀನ ಪ್ರಬಂಧಗಾಯನಕ್ಕೆ ಹೆಚ್ಚು ಹೊಂದುವಂತಹುದಾಗಿದೆ. ಈ ಭಾಷೆಯು ಸಾಮವೇದದಂತೆಯೇ ತುಮ, ಅಯ, ಇಯ, ತಿಯ, ವೋಯಿ, ರೇ, ಅಂವ ಮೊದಲಾದ ಸ್ತೋಭಾಕ್ಷರಗಳನ್ನು ಹೊಂದಿದೆ. ಸಾಮ (ಸಾ +ಅಮ) ಎಂದರೆ ಋಗಕ್ಷರ ಮತ್ತು ಸ್ವರಗಳ ಸಂಯೋಗ. ಋಕ್ಕಿನ ಒಂದೊಂದು ವರ್ಣಕ್ಕೆ ಉದಾತ್ತ, ಅನುದಾತ್ತ ಮತ್ತು ಸ್ವರಿತವೆಂಬ ಒಂದೊಂದು ಸ್ವರವನ್ನು ಸಂಯೋಜಿಸಿ ಉಚ್ಚರಿಸಬೇಕು. ಅದನ್ನೇ ಸ್ವರಬಾಹುಲ್ಯದೊಡನೆ ಸಂಯೋಜಿಸಿ ಹಾಡಿದಾಗ ಸಾಮ ಎನ್ನಿಸಿಕೊಳ್ಳುತ್ತದೆ. ಋಕ್ಕಿನಲ್ಲಿ ಸ್ವರಗಳು ಅಲ್ಪವಾಗಿಯೂ ಸಾಮದಲ್ಲಿ ಬಹುಲವಾಗಿಯೂ ಪ್ರಯುಕ್ತವಾಗುತ್ತವೆ. ಲೌಕಿಕಗಾನದಲ್ಲಿ ಮಾತುಪ್ರಧಾನ ಗೀತಗಳೂ, ಧಾತುಪ್ರಧಾನ ಗೀತಗಳು ಇದಕ್ಕೆ ನಿದರ್ಶನವಾಗಿದೆ. ಲೌಕಿಕಗಾಯಕರು ತಮ್ಮ ಗಾಯನಕ್ಕೆ ಅನುಕೂಲಿಸುವಂತೆ ಮಾತಿನ ಅಕ್ಷರಗಳನ್ನು ವಿಕಾರಗೊಳಿಸುವುದಿಲ್ಲವೇ? ಅಂತೆಯೇ ಸಾಮಗಾಯನದಲ್ಲಿಯೂ ಇಂತಹ ಸ್ವರಪ್ರಕ್ರಿಯೆಯಲ್ಲಿ ವಿಕಾರ, ವಿಶ್ಲೇಷಣೆ, ವಿಕರ್ಷಣ, ವಿರಾಮ, ಅಭ್ಯಾಸ, ಸ್ತೋಭಗಳೆಂಬ ಆರು ವಿಧಗಳು ಇವೆ. ಇದರಲ್ಲಿ ಸ್ತೋಭವು ಋಕ್ಕಿನಲ್ಲಿ ಇಲ್ಲದ ‘ಹಾಉ, ಓಹೋಹಾ, ಈ, ಏಹಿ, ಹಿಂ, ಯಾ, ವಿರಾಜ, ಹುಂ, ಹಿಂ’ ಇತ್ಯಾದಿ ಅರ್ಥಹೀನ ಅಕ್ಷರಗಳನ್ನು ಮಧ್ಯದಲ್ಲಿ ಸೇರಿಸಿಕೊಂಡು ಹಾಡುವಂತೆಯೇ ಭಾಂಡೀರ ಭಾಷೆಯೂ ಸ್ತೋಭಗಳನ್ನು ಒಳಗೊಂಡಿದೆ. ಇದು ಲೌಕಿಕಗಾಯನದ ಆಲಾಪನೆಯಲ್ಲಿ ತ, ನ, ದಿ, ರಿ ಇತ್ಯಾದಿ ವಾಹಕ ಶಬ್ದಗಳನ್ನು ಬಳಸುವುದಕ್ಕೆ ಪರಸ್ಪರವಾಗಿದೆ. ಸ್ತೋಭದಲ್ಲಿ ಅಕ್ಷರಸ್ತೋಭ, ಪದಸ್ತೋಭ, ವಾಕ್ಯಸ್ತೋಭ ಮುಂತಾದ ಒಳಭೇದಗಳೂ ಇವೆ.

 

ಹನ್ನೆರಡನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆಗೂ ಸಂಗೀತ ರಚನೆಗಳು ಈ ಭಾಷೆಯಲ್ಲಿ ದೊರೆಯುತ್ತವೆ. ಧಾರಾಚಕ್ರವರ್ತಿ ಭೋಜ, ಚಾಳುಕ್ಯ ಚಕ್ರವರ್ತಿ ಮೂರನೆಯ ಸೋಮೇಶ್ವರ, ಮುಂತಾದವರ ಕಾಲದಲ್ಲಿ ಈ ಭಾಷೆಯು ಬೌದ್ಧಿಕ ಪ್ರಚೋದನೆಯನ್ನು ಉಂಟುಮಾಡಿ ಸಂಗೀತಭಾಷೆಯಾಗಿ ಸ್ವೀಕರಿಸಲ್ಪಟ್ಟು ಈ ವಾಗ್ಗೇಯಕಾರರು ಭಾಂಡೀರ ಭಾಷೆಯಲ್ಲಿ ಹಾಡುಗಳನ್ನು ರಚಿಸಿದ್ದರು. ಅವುಗಳಲ್ಲಿ ಸೋಮೇಶ್ವರ ರಚಿತವಾದವು ಇನ್ನೂ ಉಳಿದಿವೆ. ಅನಂತರದ ಕಾಲದಲ್ಲಿ ವಿಠಲಾಮಾತ್ಯ, ಲಕ್ಷ್ಮೀನಾರಾಯಣ ಕವಿ, ವ್ಯಾಸರಾಯ (ಶ್ರೀವರ್ಧನಾದಿ ಪ್ರಬಂಧಗಳು), ಪುರಂದರದಾಸರ (ಆನಲೇಕರ, ಭಯಸಮಯದೇವ ಗೀತೆಗಳು), ವೆಂಕಟಮಖಿ, ಮುದ್ದುವೆಂಕಟಮಖಿ, ಪೈಡಾಲ ಗುರುಮೂರ್ತಿ ಶಾಸ್ತ್ರಿ, ವೆಂಕಟಮಂತ್ರಿ ಮುಂತಾದವರ ವಿವಿಧ ರಚನೆಗಳು ಈ ಭಾಷೆಯಲ್ಲಿ ಈಗಲೂ ದೊರೆಯುತ್ತವೆ. ಆದರೆ ಇವುಗಳನ್ನು ಹಾಡುವುದು ಈಗ ಅಪರೂಪವೇ ಆಗಿದೆ. ಭಾಂಡೀರಿ, ಭಾಂಡಿಕ್ – ಪು ಎಂಬ ಹಾಡಿನ ಗೀತಗಳು ಮಕ್ಕಳ ಹಾಸ್ಯಪ್ರಧಾನಗೀತಗಳಾಗಿ, ಮೂಕನಾಟಕಗಳಲ್ಲಿ ಕಾಂಭೋಜ, ಮಗಧ, ಗೌಡ, ಕಳಿಂಗ, ಮಹಾರಾಷ್ಟ್ರ ರಾಜ್ಯಗಳಲ್ಲಿದ್ದು ಸಂಸ್ಕ್ರತ ಮಿಶ್ರಿತವಾಗಿದ್ದವು. ಇವು ಪ್ರಾಚೀನ ಮರಾಠೀ (=ಮಹಾರಾಷ್ಟ್ರೀ) ಭಾಷೆಯನ್ನು ಹೋಲುತ್ತವೆಂದು ಮರಾಠೀ ಶಬ್ದಕೋಶವೊಂದು ಹೇಳುತ್ತದೆ. ಭಾಂಢೀರಭಾಷೆಗೆ ಪರಸ್ಪರವಾಗಿ ಹಿಂದೂಸ್ಥಾನೀ ಸಂಗೀತದಲ್ಲಿ ವ್ರಜ ಭಾಷೆ ಇದೆ. ಇದು ಹಿಂದೂಸ್ಥಾನೀ ಭಾಷೆಯ ಅಪಭ್ರಂಶ. ಸ್ತೋಭಗಳು ಇರುವುದು ಅಪರೂಪ. ಸೂರದಾಸ್, ಕಬೀರದಾಸ್, ತುಲಸೀದಾಸ್ ಮೊದಲಾದ ಸಂತರ ರಚನೆಗಳೂ, ಖ್ಯಾಲ್, ಠುಮರೀ, ಧ್ರುಪದಗಳೂ ಈ ಭಾಷೆಯಲ್ಲಿ ರಚಿತವಾಗಿವೆ.

 

ಪ್ರಬಂಧಗಳಲ್ಲಿ ಪ್ರಾಚೀನ ಗೌರವಿತವಾದ ಏಲಾ, ಡೆಂಕೀ, ವರ್ತನಿ ಮುಂತಾದ ‘ಶಾಸ್ತ್ರೀಯ ಸಂಗೀತ’ದ ಪ್ರಬಂಧಗಳೂ ಇದ್ದವು. ತ್ರಿಪದಿ, ಷಟ್ಪದಿಗಳಂತಹ ಸಾಹಿತ್ಯ ಪ್ರಕಾರಗಳೂ ಇದ್ದವು. ವಿರಕ್ತಿಯನ್ನು ಉಪದೇಶಿಸುವಂತಹ ಆಧ್ಯಾತ್ಮಿಕ ವಿಷಯಗಳನ್ನುಳ್ಳ ಚರ್ಯಾದಂತಹ ಹಾಡುಗಳೂ, ವಸಂತೋತ್ಸವ, ಹೋಳಿ ಮುಂತಾದ ಹಬ್ಬ-ಹರಿದಿನ ಉತ್ಸವಾದಿಗಳಲ್ಲಿ, ಸಂಭ್ರಮ ಸಂತೋಷಗಳಲ್ಲಿ ಹಾಡುವ ಚಚ್ಚರಿಯಂತಹ ಪ್ರಬಂಧಗಳೂ (=ಹಾಡುಗಳು), ವಿವಾಹ, ವಿಜಯ ಮುಂತಾದವುಗಳಲ್ಲಿ ಹಾಡಲು ತಕ್ಕುದಾದ ಧವಳದಂತಹ ರಚನೆಗಳೂ: ಜೈನ ಮುಂತಾದ ಮತದವರು ವಿಶಿಷ್ಟ ಸಂದರ್ಭಗಳಲ್ಲಿ ಹಾಡುತ್ತಿದ್ದ ಮಂಗಲ, ಮಂಗಲಾಚಾರ, ಪ್ರಾಭೃತ ಇತ್ಯಾದಿ ಪ್ರಬಂಧಗಳೂ ಇದ್ದವು. ಇಂತಹ ಶಾಸ್ತ್ರೀಯ, ಸಾಂಪ್ರದಾಯಿಕ ಅಥವಾ ಧಾರ್ಮಿಕ ಸಂಗೀತ ರಚನೆಗಳು ಮಾತ್ರವಲ್ಲದೆ ಭಾರತದ ಅನೇಕ ಜನಪದ ಸಂಗೀತದ ಹಾಡುಗಳನ್ನೂ ಭಾರತೀಯ ಸಂಗೀತ ಶಾಸ್ತ್ರಗ್ರಂಥಗಳು ವರ್ಣಿಸುತ್ತವೆ. ಅವು ಓವೀ, ಲೊಲ್ಲಿ, ದಂತಿ, ಢೋಲ್ಲರಿ ಮುಂತಾದ ಪ್ರಬಂಧಗಳೂ ಓವಿ ಇತ್ಯಾದಿ ಹೆಸರುಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. ಅವುಗಳು ಮಾತ್ರವಲ್ಲದೆ ರಾಹಡೀ, ವೀರಶ್ರೀ ಮುಂತಾದ ಪ್ರಬಂಧಗಳು ಯುದ್ಧಗಳಲ್ಲಿ ಸೈನಿಕರಿಗೆ ಶೌರ್ಯೋತ್ಸಾಹಗಳನ್ನು ಪ್ರಚೋದಿಸುತ್ತಿದ್ದವು, ಯುದ್ಧಗಳಲ್ಲಿ ಯಶಸ್ಸು ಗಳಿಸಿದವರನ್ನು ಸ್ತುತಿಸುವ ಕೀರ್ತಿಧವಳ ಮುಂತಾದ ಹಾಡುಗಳೂ ಇದ್ದವು. ಈ ಹಾಡುಗಳನ್ನೆಲ್ಲ ಆಯಾ ಸ್ಥಳೀಯ ಭಾಷೆಗಳಲ್ಲಿ ಮಾತ್ರವೇ ಹಾಡುವುದು ಎಂದೇನೂ ಇರದೆ, ಈ ಹಾಡುಗಳು ಭಾಂಡೀರ ಭಾಷೆಯಲ್ಲಿಯೂ ರಚಿತವಾಗುತ್ತಿದ್ದವು.

 

ಪುರಂದರದಾಸರದೇ ಅಂಕಿತವಿರುವ ದೇಶಾಕ್ಷಿರಾಗದ ಗೀತೆಯೊಂದಿದೆ. ಆದರೆ ಅತ್ಯಂತ ಅಪರೂಪದ ಬಳಕೆಯಲ್ಲಿದೆ. ‘ಭಯಸಮಯದೇವ, ಉನಿದೇವ, ಶ್ರೀ ವೆಂಕಟಾಚಲದೇವನಲರೆ ಶ್ರೀ ಪುರಂದರವಿಠಲರಾಯ ಶ್ರೀ ವೆಂಕಟಾಚಲದೇವನಲರೆ ಕೇರಳಮಣಿ ದಣಿಸುವರೆ’ ಎಂಬುದು ಇದರ ಮಾತು. ಇದರಲ್ಲಿನ ‘ದಣಿಸುವರೆ’ ಎಂಬ ದೈನ್ಯಭಾವದ ಪ್ರಶ್ನೆಯು ಕನ್ನಡದಲ್ಲಿದೆ. ಪುರಂದರದಾಸರದ್ದೇ ಆದ ಶುದ್ಧಸಾವೇರಿ ರಾಗದ ಭಾಂಡೀರ ಭಾಷೆಯ ಗೀತೆಯ ಮಾತು ಹೀಗಿದೆ. ‘ಆನಲೇಕರ ಉನ್ನಿ ಪೋಲದಿ ಸಕಲ ಶಾಸ್ತ್ರ ಪುರಾಣಧೀನಂ ತಾಲ ಧೀನಂ ತಾಲ ಪರಿಘತು ರೇ ರೇ ಸೇತು ವಾಹ ಪರಿಘ ತಂನಂ ಜಟಾಜೂಟ’ವೆಂಬ ದೀಪನಿ ಜಾತಿಯ ಗೀತೆಯು ‘ಇಯ್ಯ ಇಯ್ಯ’ ಎಂಬ ಸ್ತೋಭಾಕ್ಷರಗಳನ್ನು ಹೊಂದಿದೆ. ಅಭ್ಯಾಸಗಾನಕ್ಕಾಗಿ ಭಾಂಡೀರ ಭಾಷೆಯಲ್ಲಿ ಗೀತೆಗಳನ್ನು ರಚಿಸಿದ ಶ್ರೀಪುರಂದರದಾಸರ ಚಾಣಾಕ್ಷಮತಿ, ಹಾಗೂ ಮುಂದಾಲೋಚನೆಗಳು ಈ ಭಾಷೆಯನ್ನು ಇಂದೂ ಜೀವಂತವಾಗಿರಿಸಲು ಕಾರಣವಾದವು. ಸುಬ್ಬರಾಮ ದೀಕ್ಷಿತನು ಕ್ರಿ. ಶ. 1904ರಲ್ಲಿ ಎಟ್ಟೆಯಾಪುರದಲ್ಲಿ ಬರೆದ ತನ್ನ ‘ಸಂಗೀತ ಸಂಪ್ರದಾಯ ಪ್ರದರ್ಶನಿ’ ಗ್ರಂಥದಲ್ಲಿ ವೆಂಕಟಮಖಿಯು ರಚಿಸಿದ ಭಾಂಡೀರ ಭಾಷೆಯ ಗೀತೆಗಳನ್ನು ಉಲ್ಲೇಖಿಸಿದ್ದಾನೆ.

Author Details


Srimukha

Leave a Reply

Your email address will not be published. Required fields are marked *