ಶ್ರೀಮಚ್ಛರಾವತೀತೀರವಾಸ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ನಮ್ಮ ಶ್ರೀರಾಮಚಂದ್ರಾಪುರ ಮಠದ ಶ್ರೀ ಸಂಸ್ಥಾನವನ್ನು ಆದರಿಸಿಕೊಳ್ಳುವ, ಬರಮಾಡಿಕೊಳ್ಳುವ ಮತ್ತೊಂದು ಪರಾಕು – ‘ಶ್ರೀಮಚ್ಛರಾವತೀತೀರವಾಸ’. ಇದನ್ನು ಹೇಳುವಾಗ ಬಹಳ ಮಹತ್ತ್ವಪೂರ್ಣವಾದ ಮಾಹಿತಿಗಳು ಲಭ್ಯವಾಗುತ್ತವೆ. ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತವಾದ ಶ್ರೀಮಠವನ್ನು ಪರಿಪಾಲಿಸಿಕೊಂಡು ಬಂದ ಸಮಸ್ತ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಂತ ಯತಿವರೇಣ್ಯರುಗಳಲ್ಲಿ ಅವಿಚ್ಛಿನ್ನ ಪರಂಪರೆಯ ಶ್ರೀಸಂಸ್ಥಾನದವರಲ್ಲಿ ಹನ್ನೊಂದನೆಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಶಿಷ್ಯರಾದ ಶ್ರೀರಾಮಚಂದ್ರಭಾರತೀ ಶ್ರೀಗಳವರನ್ನು ಪಟ್ಟದಲ್ಲಿ ಕೂರಿಸಿ ಅವರಿಗೆ ದಿವ್ಯ ಮಂತ್ರೋಪದೇಶವನ್ನು ಮಾಡುತ್ತಾರೆ. ಹನ್ನೆರೆಡನೆಯ ಪೂಜ್ಯ ಶ್ರೀಸಂಸ್ಥಾನದವರು ತಮ್ಮ ಕಾಲಘಟ್ಟದಲ್ಲಿ ಈಗಿನ ಶ್ರೀರಾಮಚಂದ್ರಾಪುರಮಠಕ್ಕೆ ತೆರಳಿ ಅಲ್ಲಿಯ ಸುಂದರ ಪರಿಸರದಲ್ಲಿ ಮಠವೊಂದನ್ನು ಸ್ಥಾಪಿಸುತ್ತಾರೆ. ಮತ್ತು ಆ ಪ್ರದೇಶಕ್ಕೆ ಶ್ರೀರಾಮಚಂದ್ರಾಪುರ ಮಠ ಎಂದು ಹೆಸರಿಡುತ್ತಾರೆ. ಆ ಊರನ್ನೇ ರಾಮಚಂದ್ರಾಪುರವನ್ನಾಗಿಸುತ್ತಾರೆ. 

 


ಅಲ್ಲಿ ಕೆಲವು ವಿಶೇಷಗಳನ್ನು ದಾಖಲೆಗಳಲ್ಲಿ ಗುರುತಿಸಬಹುದು. ಆ ಪ್ರದೇಶವು ಅಗಸ್ತ್ಯರು ತಪಸ್ಸು ಮಾಡಿದ ಪ್ರದೇಶ. ಅಲ್ಲಿ ಈಗಲೂ ಅಗಸ್ತ್ಯ ತೀರ್ಥವಿದೆ. ಮಹರ್ಷಿಗಳಾದ ಅಗಸ್ತ್ಯರು ಆ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದರು ಎನ್ನುವುದಕ್ಕೆ ಐತಿಹ್ಯಗಳಿವೆ. ಅಗಸ್ತ್ಯರು ತಪಸ್ಸು ಮಾಡಿದ ಆ ಪುಣ್ಯಭೂಮಿಯಲ್ಲಿ ಆ ತಪಸ್ಸಿನ ಪ್ರಭಾವ ಗಾಢವಾಗಿ ಶ್ರೀರಾಮಚಂದ್ರಭಾರತೀ ಶ್ರೀಗಳವರನ್ನು ಸೆಳೆಯುತ್ತದೆ. ಅಲ್ಲಿ ಅಗಸ್ತ್ಯ ತೀರ್ಥವೂ ಇರುವುದರಿಂದ ಮಠವೊಂದನ್ನು ಸ್ಥಾಪಿಸುವದಕ್ಕೆ ಅವರಿಗೆ ತುಂಬು ಪ್ರೇರಣೆಯನ್ನು  ಆ ಪ್ರದೇಶ ನೀಡುತ್ತದೆ.


ಪಕ್ಕದಲ್ಲಿಯೇ ಶರಾವತಿ ಹರಿಯುತ್ತಿದ್ದಾಳೆ. ಶರಾವತಿ ನದಿಯು ಅಂಬುತೀರ್ಥದಿಂದ ಅರಬ್ಬೀ ಸಮುದ್ರವನ್ನು ಸೇರುವವರೆಗೆ ಸುಮಾರು ೧೪೦ ಕಿ.ಮೀ. ಹರಿಯುತ್ತಾಳೆ. ಈ ನದಿಯು ಉದ್ದಳತೆಯಲ್ಲಿ ಬಹುದೊಡ್ಡ ನದಿಯೇನಲ್ಲ. ಈ ಜಗತ್ತಿನಲ್ಲಿ ಇವಳ ಉದ್ದದಷ್ಟೇ ಅಗಲವಾದ ನದಿಗಳೂ ಇವೆ. ಪ್ರಪಂಚದಲ್ಲಿಯೇ  ಅತೀ ಉದ್ದವಾದ ಈಜಿಪ್ತಿನ ನೈಲ್ ನದಿಯು ೬೫೪೫ ಕಿ.ಮೀ. ಹರಿಯುತ್ತಾಳೆ. ನಮ್ಮ ಪವಿತ್ರವಾದ ಗಂಗಾ ನದಿಯು ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಸುಮಾರು ೨೫೨೫ ಕಿ.ಮೀ. ಹರಿಯುತ್ತಾಳೆ.


ಶರಾವತಿ ಎಂಬ ನದಿಯ ಹೆಸರನ್ನು ಕೇಳದವರಿಲ್ಲ. ಹೇಗೆ ಶರಾವತಿ ಎಂಬ ಹೆಸರು ಬಂತು, ಎಲ್ಲಿ ಅವಳು ಹುಟ್ಟಿದಳು, ಎಲ್ಲಿ ಅವಳು ಸಾಗಿದಳು, ಹೇಗೆ ಸಮುದ್ರವನ್ನು ಸೇರಿದಳು? ಈ ವಿಷಯವನ್ನು ಗಮನಿಸುವಾಗ ಶ್ರೀರಾಮಚಂದ್ರ ಸೀತಾಲಕ್ಷ್ಮಣ ಸಮೇತನಾಗಿ ಅರಣ್ಯವಾಸಕ್ಕೆ ಬಂದಾಗ ಈ ಪ್ರದೇಶದಲ್ಲಿಯೂ ಸಾಗಿ ಹೋಗಿದ್ದಾನೆ ಎನ್ನುವ ಮಾತುಗಳಿವೆ. ಹಾಗೆ ಈ ಪ್ರದೇಶದಲ್ಲಿ ಇರುವಾಗ ಸೀತಾಮಾತೆಗೆ ಬಾಯಾರಿಕೆಯಾಗಿ ಶ್ರೀರಾಮನಲ್ಲಿ ನೀರಿಗಾಗಿ ಯಾಚಿಸುತ್ತಾಳೆ.  ಅವತಾರೀ ಮರ್ಯಾದಾಪುರುಷೋತ್ತಮನಾದ ಶ್ರೀರಾಮಚಂದ್ರ ತಕ್ಷಣವೇ ಶರವೊಂದನ್ನು ತೆಗೆದು ಭೂಮಿಗೆ ಬಿಟ್ಟು ಅಲ್ಲಿಂದ ನೀರು ಚಿಮ್ಮುವಂತೆ ಮಾಡುತ್ತಾನೆ. ಶರದಿಂದ ಹುಟ್ಟಿದ ನದಿಯ ಮೂಲವಾದ್ದರಿಂದ ‘ಶರಾವತಿ’ ಎಂಬ ಹೆಸರು. ಅದು ಹುಟ್ಟಿದ ಸ್ಥಳ ಇಂದಿಗೂ ‘ಅಂಬುತೀರ್ಥ’ ಎಂದು ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಅಂಬು ಎಂದರೆ ಬಾಣ. ಅಂಬು ಎಂದರೆ ಶರ. ಆ ಅಂಬಿನಿಂದ ಹುಟ್ಟಿದ ತೀರ್ಥ. ಶ್ರೀ ರಾಮಚಂದ್ರನಿಂದ ಹುಟ್ಟು ಪಡೆದ ಪವಿತ್ರ ತೀರ್ಥ. ಸೀತಾಮಾತೆಯ ದಾಹವನ್ನು ತೀರಿಸಿದ ಪವಿತ್ರ ತೀರ್ಥ. ಸೀತಾ-ರಾಮಚಂದ್ರರ ಹಾಗೂ ಲಕ್ಷ್ಮಣನ ಅಪೇಕ್ಷೆಯನ್ನು ಈಡೇರಿಸಿದಂತಹ ಪುಣ್ಯ ಜಲ, ಲೋಕದ ಜನರ ದಾಹವನ್ನು ತೀರಿಸಿದೇ ಇದ್ದಾಳೆಯೇ? ರಾಮನ ಶರದಿಂದ ಹುಟ್ಟಿದ ಶರಾವತಿ ಅತ್ಯಂತ ಅನ್ವರ್ಥಕವಾದ ಹೆಸರನ್ನೇ  ಪಡೆದಳು ‘ಶರಾವತೀ’ ಎಂದು.


ಶ್ರೀರಾಮಚಂದ್ರ, ಚಂದ್ರಮೌಳೇಶ್ವರ, ರಾಜರಾಜೇಶ್ವರಿಯ ಆರಾಧಕರು ಶ್ರೀರಾಮಚಂದ್ರಾಪುರ ಮಠದ ಯತಿವರ್ಯರು. ಶ್ರೀರಾಮಚಂದ್ರನ ಅಯೋಧ್ಯೆಯನ್ನು ಸುತ್ತುವರಿದ ಪುಣ್ಯ ನದಿ ಸರಯೂ. ಶರಯೂ ಅಂತಲೂ ಕರೆಯುತ್ತಾರೆ.  ಇಲ್ಲಿ ಶರಯೂ ಎನ್ನುವುದು ಬಾಣದಿಂದ ಎನ್ನುವದನ್ನೇ ಹೋಲುತ್ತದೆ. ಇದನ್ನು ಗಮನಿಸಿದರೆ ಈ ರಾಮಚಂದ್ರಾಪುರಮಠವನ್ನು ಶರಾವತಿ ಬಳಸಿ ಸಾಗುವುದು ಅತ್ಯಂತ ಮಹತ್ತ್ವದ ಮಾಹಿತಿ.


ಅಂಬುತೀರ್ಥದಿಂದ ಹುಟ್ಟಿ ಶ್ರೀರಾಮಚಂದ್ರಾಪುರ ಮಠವನ್ನು ಬಳಸಿ ಸಾಗಿದ ಶರಾವತಿ ಜೋಗದಲ್ಲಿ ಇಳಿದು ಗೇರುಸೊಪ್ಪೆಯ ಮುಖಾಂತರ ಹರಿದು ಮಲೆನಾಡಿನಿಂದ ಧುಮುಕಿ ಸಾಗಿದವಳು, ಗೇರುಸೊಪ್ಪಾ ಸೀಮೆಯ ಅಂಚಿನಲ್ಲಿಯೇ ಸಾಗುತ್ತ ಸಾಗುತ್ತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಮೀಪ ಸಮುದ್ರವನ್ನು ಸೇರುತ್ತಾಳೆ.


ಈ ಶರಾವತಿ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ. ತಾನು ಹರಿಯುವುದರ ಮುಖೇನ ಸಮೃದ್ಧವಾದ ನೀರನ್ನು ಕೊಟ್ಟಳು. ಎರಡೂ ಕಡೆಗಳಲ್ಲಿ ಸಮೃದ್ಧವಾದ ಕೃಷಿಭೂಮಿಯನ್ನುಂಟು ಮಾಡಿದಳು. ಜೋಗದಲ್ಲಿ ಧುಮುಕುವಾಗ ಪ್ರಪಂಚಕ್ಕೇ ಬೆಳಕನ್ನು ನೀಡಿದ, ಹೊಸ ಬೆಳಕನ್ನು ನೀಡಿದ ಮಹಾನದಿಯೆಂದು ಪೂಜಿಸಲ್ಪಟ್ಟಳು. ಮಹಾ ಅಣೆಕಟ್ಟಿಗೆ ಪ್ರೇರಣೆ ನೀಡಿ ಮೈಸೂರು ಮಹಾರಾಜರಿಂದಲೂ ಸರ್ ಎಂ. ವಿಶ್ವೇಶ್ವರಯ್ಯನವರಿಂದಲೂ ಇವಳ ಶಕ್ತಿಯನ್ನು ಬಳಸಿ ನವೀನ ತಂತ್ರಜ್ಞಾನವಾದ ವಿದ್ಯುತ್‌ದೀಪದ ಆವಿಷ್ಕಾರಕ್ಕೆ ಕಾರಣವಾದದ್ದು ಈ ನದಿ ಸರ್ವೋನ್ನತ ಕೊಡುಗೆಗಳಲ್ಲಿ ಒಂದು. ಹಾಗಾಗಿಯೇ ಇಂದಿಗೂ ಮೈತುಂಬಿ ಹರಿವ ಜೋಗದಲ್ಲಿ ಭೋರ್ಗರೆಯುತ್ತ ಧುಮುಕುವ ಶರಾವತಿಯ ಜಗದಗಲ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಮನದುಂಬಿ ಧನ್ಯರಾಗಲು ಕೋಟಿ ಕೋಟಿ  ಯಾತ್ರಿಕರು ಬರುತ್ತಾರೆ. ಇದರಿಂದ ರಾಷ್ಟ್ರದ ಆದಾಯ ಹೆಚ್ಚುತ್ತದೆ. ಈ ಮಹಾಕಾರ್ಯದಲ್ಲಿ ಅದೆಷ್ಟೋ ಮನೆಗಳು, ಊರುಗಳು ಇವಳ ಒಡಲನ್ನು ಸೇರಿದವು. ಆಗೆಲ್ಲ ರಾಮಚಂದ್ರಾಪುರಮಠವು ಶರಾವತಿಯ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗುತ್ತದೆ ಎನ್ನುವ ದಟ್ಟವದಂತಿ ಇತ್ತು. ಆದರೆ ಇಲ್ಲಿಯ ಯತಿವರೇಣ್ಯರುಗಳ ತಪಸ್ಸಿನ ಪ್ರಭಾವವೋ ಎನ್ನುವಂತೆ ಈ ಮಠವು ಅದಕ್ಕಿಂತ ಎತ್ತರದಲ್ಲಿಯೇ ಉಳಿಯಿತು. ಇದೊಂದು ಚಾರಿತ್ರಿಕ ಪವಾಡ.


ಗೇರುಸೊಪ್ಪೆಯನ್ನು ಆಳಿದ ರಾಣಿ ಚೆನ್ನಾಬೈರಾದೇವಿ ಈ ನದಿಯನ್ನು ಬೃಹತ್ ಬಂದರನ್ನಾಗಿಸಿದ್ದರು. ಇಲ್ಲಿಂದಲೇ ಅವರು ವಿಶ್ವದ ಕಾಳುಮೆಣಿಸಿನ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದಳು ಆದುದರಿಂದ ಅವಳನ್ನು ‘ ಕಾಳುಮೆಣಸಿನ ರಾಣಿ’ (ರೈನಾ ಆಫ್ ದಿ ಪೆಪ್ಪರ್) ಎಂದೇ ಗುರುತಿಸುತ್ತಿದ್ದರು.


ಶರಾವತಿ ನದಿಯ ಇಕ್ಕೆಲಗಳಲ್ಲಿ ಹಲವು ದೇವಸ್ಥಾನಗಳು ತಲೆ ಎತ್ತಿವೆ. ರಾಮಚಂದ್ರಾಪುರಮಠದ ಶಿಷ್ಯಸ್ತೋಮದಲ್ಲಿ  ಪ್ರಮುಖ ಶಿಷ್ಯರಾಗಿರುವ ಹವ್ಯಕ ಸಮುದಾಯ ಯಾವ ಹೈಗುಂದಲ್ಲಿ ಹುಟ್ಟಿದುದು ಎಂಬ ಮಾತು ಬರುತ್ತದೆಯೋ ಆ ಪುಣ್ಯ ಭೂಮಿಯನ್ನು ಶರಾವತಿ ಸುತ್ತುವರೆದಿದ್ದಾಳೆ. ಮುಂದುವರಿದು ಹರಿದ ಇವಳ ತೀರದಲ್ಲಿ ಜಗತ್ಪ್ರಸಿದ್ಧವಾದ ನಾರದ ಮಹರ್ಷಿಗಳಿಂದ ಸ್ಥಾಪಿತವಾದ ದ್ವಿಭುಜಾಕೃತಿಯ ಗಣಪತಿಯು ಇರುವ ಇಡಗುಂಜಿಯೂ ಸೇರಿದೆ.  ಭಕ್ತರ ಅಪೇಕ್ಷೆಯನ್ನು ಈಡೇರಿಸುವ ಇವನು ಬಾಲಗಣಪನಾದ್ದರಿಂದ ಎಲ್ಲರಿಗೂ ಮುದ್ದು. ಹೊನ್ನಾವರದ ಅಪ್ಸರಕೊಂಡ ಮಠವನ್ನೂ ತನ್ನ ತೀರದಲ್ಲಿ ಅವಳು ಕಾಣಗೊಡುತ್ತಾಳೆ. ಹೀಗೆ ಹರಿದು ಬಂದ ಶರಾವತಿ ತೀರದಲ್ಲಿ ಅಗಸ್ತ್ಯಮುನಿ ಸ್ಥಾಪಿತವಾದ ತಪೋ ಭೂಮಿಯಲ್ಲಿ ಶ್ರೀರಾಮಚಂದ್ರಾಪುರಮಠ ಈಗ ಪ್ರಧಾನ ಮಠವಾಗಿ ವಿಜೃಂಭಿಸುತ್ತಿದೆ. ಹೀಗೆ ಶ್ರೀಸಂಸ್ಥಾನದವರು ಪರಮ ಪವಿತ್ರವಾದ ಶರಾವತೀ ನದಿಯ ತೀರದಲ್ಲಿ ವಾಸಿಸುತ್ತಿದ್ದುದರಿಂದ ಅವರನ್ನು ‘ಶ್ರೀಮಚ್ಛರಾವತೀತೀರವಾಸ’ ಎಂದು ಉದ್ಘೋಷಿಸಲಾಗುತ್ತದೆ.


ಶ್ರೀರಾಮಚಂದ್ರ, ಚಂದ್ರಮೌಳೇಶ್ವರ, ರಾಜರಾಜೇಶ್ವರೀ ದೇವ ಸನ್ನಿಧಿಯ ಆರಾಧಕರಾದ ಶ್ರೀರಾಮಚಂದ್ರಾಪುರಮಠದ ಯತಿವರೇಣ್ಯರು ಶರಾವತೀ ತೀರದಲ್ಲಿ ವಾಸವಾಗಿದ್ದು, ಯಾವ ಶ್ರೀರಾಮಚಂದ್ರನು ಅಗಸ್ತ್ಯಮುನಿಗಳಿಂದ ಆಶೀರ್ವಾದವನ್ನು ಪಡೆದಿದ್ದನೋ ಅಂಥವರ ತಪೋಭೂಮಿಯಲ್ಲಿ ಮಠವನ್ನು ಸ್ಥಾಪಿಸಿದ್ದು, ಅಲ್ಲಿಂದಲೇ ಸಮಸ್ತ ಧಾರ್ಮಿಕ ಪರಂಪರೆಗೆ ಮಾರ್ಗದರ್ಶನವನ್ನು ನೀಡುತ್ತ ಬಂದಿದ್ದು ಅಲ್ಲಿಯ ರಾಜ ಮಹಾರಾಜರುಗಳಿಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತ ಬಂದಿದ್ದು ಇತಿಹಾಸದಲ್ಲಿ ನಾವು ಕಾಣುವ ಸಂಗತಿಗಳು. ಹಾಗಾಗಿಯೇ ವಿಜಯನಗರದ ಅರಸರಾಗಲೀ. ಕೆಳದಿಯ ಬಿದರೂರಿನ ಅರಸರಾಗಲೀ, ಗೇರುಸೊಪ್ಪೆ ಸೀಮೆಯ ಅರಸರಾಗಲೀ ಇನ್ನನೇಕ ಮಾಡಲೀಕ ಅರಸರುಗಳೆಲ್ಲ ಶ್ರೀರಾಮಚಂದ್ರಾಪುರ ಮಠದ ಯತಿವರೇಣ್ಯರುಗಳಿಗೆ ತಮ್ಮ ಗೌರವವನ್ನು ರಾಜಮರ್ಯಾದೆಯನ್ನು ಸಲ್ಲಿಸುತ್ತ ಆದರಿಸುತ್ತಿದ್ದರು. ಮಾರ್ಗದರ್ಶನವನ್ನು ಪಡೆಯುತ್ತಿದ್ದರು. ಆದುದರಿಂದ ಕೇಳುವಾಗ ಮನಸ್ಸಿಗೆ ತಂಪನ್ನು ನೀಡುವಂತಹ, ಭವದ ದಾಹವನ್ನು ನಿವಾರಿಸುವಂತಹ, ಅಮೃತ ಸದೃಶವಾದಂತಹ ಸಲಿಲದಿಂದ ಹರಿದು ಕಂಗೊಳಿಸುತ್ತಿರುವಂತಹ ಶರಾವತಿಯನ್ನು ನೆನಪು ಮಾಡಿಕೊಳ್ಳುತ್ತ ತದ್ವಾರ ಶ್ರೀರಾಮಚಂದ್ರನನ್ನು ಸ್ಮರಿಸುವಂತಾಗುವ ಹಾಗೂ ಸೀತಮಾತೆಯ ದಾಹವನ್ನು ಇಂಗಿಸಿದ ಹಾಗೆ ಭವದ  ಕಷ್ಟದಲ್ಲಿರುವವರ ಆರ್ತರ ದಾಹವನ್ನು ಪರಿಹರಿಸು ಪ್ರಭುವೇ ಎಂದು ಪ್ರಾಂಜಲವಾಗಿ ಶಿಷ್ಯಸ್ತೋಮ ಅವರನ್ನು ಪೀಠಕ್ಕೆ ಬಂದು ಕುಳಿತಾಗ ಪರಾಕೆ ಇತ್ತ ಲಕ್ಷಿಸು ಎಂದು ಹೇಳುವುದನ್ನು ಇಂತಹ ಸಾವಿರ ಕಣ್ಣುಗಳಿಂದ ನಾವು ಕಾಣಬಹುದಾಗಿದೆ. ಆದುದರಿಂದ ಶರಾವತೀ ತೀರವಾಸ ಶ್ರೀಮಚ್ಛರಾವತೀ ತೀರವಾಸ ಎನ್ನುವ ಮಂಗಳಕರವಾದಂತಹ ಪರಾಕು ಶ್ರೀರಾಮಚಂದ್ರಾಪುರಮಠದ ಸಂಸ್ಥಾನದವರನ್ನು ಆವರಿಸಿಕೊಂಡಿದೆ. ಅದರಿಂದ ಅವರು ಸದಾ ಸಂಪ್ರೀತರಾಗುತ್ತಾರೆ.

Author Details


Srimukha

Leave a Reply

Your email address will not be published. Required fields are marked *