ಯಥೋ ಧರ್ಮಃ ತತೋ ಜಯಃ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ಅವಳು ಅಪ್ಪಟ ಭಾರತೀಯ ನಾರಿ. ನಮ್ಮ ಪುರಾಣೇತಿಹಾಸದಲ್ಲಿ ಅವಳು ಬಹುವಾಗಿ ಕಾಣದೇ ಉಳಿದಳು. ಕಣ್ಣಿಂದ ಕಾಣದೇ ಇದ್ದುದನ್ನು ತಾನು ಮನಸ್ಸಿನಿಂದ ಕಂಡಳು. ಜೀವನದಲ್ಲಿ ಅವಳು ಎಂದೂ ತಪಸ್ಸನ್ನು ಮಾಡಲಿಲ್ಲ. ಜೀವನವನ್ನೇ ತಪಸ್ಸನ್ನಾಗಿಸಿದಳು. ಆ ಮಹಾ ತಪಸ್ವಿನಿಯು ಲೋಕಕ್ಕೆ ನೀಡಿದ್ದು ಏನು ಎಂದು ಕೇಳಿದರೆ ಲೋಕ ಎಂದೂ ಮರೆಯದ ಮಾತು. ಅದಕ್ಕೆ ಸರಿಯಾದ ಇನ್ನೊಂದು ಅಂತಹ ಮಾತಿಲ್ಲ. ಆ ಮಾತೇ  ‘ಯಥೋ ಧರ್ಮಃ ತತೋ ಜಯಃ|’

ಆ ಮಾತೆಯೇ ಗಾಂಧಾರಿ.

 


ಆ ಕಣ್ಣಿಂದ ಅವಳನ್ನು ಅರಿಯೋಣ ಬನ್ನಿ.
ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿ. ಸ್ಫುರದ್ರೂಪಿ – ಸುಂದರಳಾದ ಅವಳು ಪ್ರಾಪ್ತ ವಯಸ್ಕಳಾದಳು. ಆಗ ದೂರದ ಹಸ್ತಿನಾವತಿಯ ಭೀಷ್ಮ ಬಂದು ತಮ್ಮ ಕುಟುಂಬಕ್ಕೆ ಇವಳನ್ನು ನೀಡುವಂತೆ ಯಾಚಿಸಿದ. ಭೀಷ್ಮ ಕೇಳಿದಾಗ, ಚಂದ್ರವಂಶಕ್ಕೆ ಯಾರು ಹೆಣ್ಣು ಕೊಡುವುದಿಲ್ಲ ಎನ್ನುತ್ತಾರೆ? ಅದೊಂದು ಗೌರವವೂ ಹೌದು. ಎಲ್ಲೋ ಒಂದೆಡೆ ಸಣ್ಣ ಭೀತಿಯೂ ಇತ್ತು.

 

ಗಾಂಧಾರ ದೊರೆ ಈ ಆಹ್ವಾನವನ್ನು ಕೇಳಿ ದಂಗಾದ. ಕಾರಣ ಭೀಷ್ಮ ಗಾಂಧಾರಿಯನ್ನು ಕೇಳಿದ್ದು ಧೃತರಾಷ್ಟ್ರನಿಗಾಗಿತ್ತು. ಆ ಧೃತರಾಷ್ಟ್ರನಾದರೋ ಜನ್ಮಾಂಧ. ಕಣ್ಣಿಂದ ಕಾಣಿಸದು. ಗಾಂಧಾರ ದೊರೆ ತನ್ನ ಮುದ್ದಿನ ಮಗಳನ್ನು ಕೇಳಿದ. ಧೃತರಾಷ್ಟ್ರ ಹುಟ್ಟು ಕುರುಡ ಎಂದೂ ಹೇಳಿದ. ಅರೆನಿಮಿಷ ಯೋಚಿಸಿದ ಗಾಂಧಾರಿ ತನ್ನ ಒಪ್ಪಿಗೆ ನೀಡಿದಳು, ಪೂರ್ಣಮನಸ್ಸಿನಿಂದ. ಅವಳ ಈ ಕ್ರಮ ಅಪೂರ್ವ ಹಾಗೂ ವಿನೂತನ. ಅವಳೇನೂ ಧೃತರಾಷ್ಟ್ರನನ್ನು ನೋಡಿರಲಿಲ್ಲ. ತನ್ನ ಗಂಡನಾಗುವವನ ಬಗೆಗೆ ಮೊದಲ ಸಲ ಕೇಳಿ ತಿಳಿದಳು. ತನ್ನ ನಿರ್ಣಯವನ್ನು ಮಾಡಿ ತೋರಿದಳು ಒಂದು ದಿನದಲ್ಲಿ. ಜೀವನ ಪೂರ್ತಿ ತಾನು ನೋಡದ ತನ್ನ ಗಂಡನಾಗುವವನಿಗೆ ಲೋಕವನ್ನು ನೋಡುವ ಭಾಗ್ಯವಿಲ್ಲ ಎಂದು ಅರಿತಳವಳು. ಅದಕ್ಕಾಗಿ ತಾನೂ ತನ್ನ ಕಣ್ಣಿಗೆ ಆ ಕ್ಷಣವೇ ಪಟ್ಟಿ ಕಟ್ಟಿಕೊಂಡಳು. ಪರಿಣಾಮ ಗಾಂಧಾರಿ ಲೋಕವನ್ನು ಕಾಣಲು ಸಾಧ್ಯವೇ ಇಲ್ಲವಾಯ್ತು. ತಾನಾಗಿ ತಂದುಕೊಂಡ ಕತ್ತಲೆ. ಎಂತಹ ಮಾದರಿ ನಡೆ ಅಂದರೆ ತಾನು ನೋಡದ ತನ್ನ ಗಂಡನಿಗೆ ಕಣಿಲ್ಲ ಎಂದು ತಿಳಿದೊಡನೆಯೇ ತಾನೂ ಅವನಂತಾದಳು. ನಾವು ಹೇಳಬಹುದು, ಹಾಗೆ ಮಾಡದೇ ಅವಳೇ ಕಣ್ಣಾಗಬಹುದಿತ್ತು ಎಂದು. ಆದರೆ ಇಂತಹ ಕಲ್ಪನೆಗಳೆಲ್ಲ ಗಾಂಧಾರಿಯಲ್ಲ. ಆ ಕಣ್ಣಿಂದ ನೋಡುವಾಗ ಗಾಂಧಾರಿ ಗಾಂಧಾರಿಯಲ್ಲ. ಎಂದೂ ಹಸ್ತಿನಾವತಿಯ ಸೂರ್ಯನನ್ನು ಕಾಣಲೇ ಇಲ್ಲ. ಹಾಗೇ ತನ್ನನ್ನು ಕಾಣಿಸಿಕೊಂಡ ಅವಳು ನೂರೊಂದು ಮಕ್ಕಳ ತಾಯಿಯಾದಳು. ಮಹಾರಾಣಿಯೇ ಆಗಿ ಲೋಕದ ಕಿವಿಯಾದಳೇ ಹೊರತು ಕಣ್ಣಲ್ಲಿ ಕಾಣಲಿಲ್ಲ. ಧರ್ಮದ ಕಣ್ಣನ್ನು ಸದಾ ಜಾಗ್ರತವಾಗಿರಿಸಿಕೊಂಡಿದ್ದಳು ಜೀವನ ಪೂರ್ತಿ. ಅದೇ ಆದರ್ಶ- ಅವಳೇ ಗಾಂಧಾರಿ.

 

 

ಯುದ್ಧವೇ ಸರಿ ಎಂದು ತೀರ್ಮಾನವಾಯಿತು. ಆಗ ಎಲ್ಲರೂ ತಮ್ಮ ಹಿರಿಯರಿಂದ ಆಶೀರ್ವಾದ ಪಡೆಯುತ್ತಿದ್ದರು. ಅಂತಹ ಒಂದು ಸಂದರ್ಭ. ಅವಳ ಹಿರಿಯ ಮಗ, ಕೌರವ ಪಾಳೆಯದ ಪ್ರಮುಖ, ದುರ್ಯೋಧನ ತನ್ನ ತಾಯಿಯೇ ಆದ ಗಾಂಧಾರಿಯಲ್ಲಿ ಬಂದು ತಾನು ಗೆಲ್ಲುವಂತೆ ಆಶೀರ್ವದಿಸು ಅಮ್ಮ, ಎನ್ನುತ್ತಾನೆ. ಇನ್ನೊಂದೆಡೆ ಧರ್ಮರಾಜನೂ ಬಂದು ಆಶೀರ್ವಾದ ಕೇಳುತ್ತಾನೆ.

ಆಗ ಅವಳೆಂದಳು – ಯಥೋ ಧರ್ಮಃ ತತೋ ಜಯಃ.

 


ಎಷ್ಟೋ ಸಂದರ್ಭ ಈ ಮಾತನ್ನು ಶ್ರೀಕೃಷ್ಣ ಹೇಳಿದ್ದಾನೆ ಎನ್ನುತ್ತಾರೆ ಅಲ್ಲಿ. ಮಹರ್ಷಿ ವ್ಯಾಸರು ಈ ಮಾತನ್ನು ಲೋಕವೇ ಕಾಣುವಂತೆ ಕಣ್ಣು ಪಟ್ಟಿಯ ಒಳಗಿನಿಂದ ಗಾಂಧಾರಿಯ ಆ ಕಣ್ಣಿಂದ ನೀಡಿದ್ದಾರೆ. ಹಾಗಾಗಿ ಹೀಗೂ ನೋಡಬಹುದು – ಜಯ ಬೇಕಾದರೆ ಧರ್ಮವೇ ಆಧಾರ. ಧರ್ಮವೇ ಗುರಿ. ಧರ್ಮವೇ ದಾರಿ. ಆಗ ಕಾಣಲಿ ಗಾಂಧಾರಿ; ಕ್ಷಮಿಸಿ, ಮಾತೆ ಗಾಂಧಾರಿ.

 


ನಾನು ಅವಳನ್ನು ತಪಸ್ವಿನಿ ಎಂದೆ. ಯಾಕೆ ಗೊತ್ತೇ? ಅವಳು ತನ್ನ ಜೀವನವನ್ನೇ ಧರ್ಮದ ದಾರಿಯಲ್ಲಿ ರೂಪಿಸಿದಳು. ತನ್ನ ಮಗನನ್ನು ಸರಿದಾರಿಗೆ ತರಲು ಅವಳಿಗೆ ಆಗಲಿಲ್ಲ. ಆದರೆ ಎಂದೂ ಅವಳು ಯಾರ ಮೇಲೂ ಆಗ್ರಹ ಪಡಿಸಿಲ್ಲ. ಪ್ರಭಾವ ಬೀರಲಿಲ್ಲ. ಶ್ರೀಕೃಷ್ಣನನ್ನು ಚೆನ್ನಾಗಿ ಅರಿತವಳಾಗಿದ್ದಳು. ಅವನು ಧರೆಗಿಳಿದ ಭಗವಂತ, ಅವತಾರಿ ಎಂದು ನಂಬಿದ್ದಷ್ಟೇ ಅಲ್ಲ ಅವನ ಆರಾಧಕಳು ಸಹ. ಹಾಗಿದ್ದೂ ಮಾತೃತ್ವ ಮತ್ತು ಭಗವಂತ ಎಂಬ ವಿಚಾರ ಬಂದಾಗ ಅವಳಿಗೆ ಮಾತೃತ್ವವೇ ಮೇಲಾಯಿತು.
ಮಹಾಭಾರತ ಯುದ್ಧ ಮುಗಿದು ಎಲ್ಲಾ ಕೌರವರು ಮೃತರಾಗಿ ಪಾಂಡವರು ವಿಜಯಿಗಳಾದರು. ಇಂತಹ ಸಂದರ್ಭದಲ್ಲಿ ಹಸ್ತಿನಾವತಿಯ ಅರಮನೆ ಎಂತಹ ಶೋಕದಲ್ಲಿ ಮುಳುಗಿರಬೇಕು! ನೂರಾಒಂದು ಮಕ್ಕಳ ತಂದೆ ತಾಯಿಗಳು ಎಲ್ಲರನ್ನೂ ಕಳೆದುಕೊಂಡಿದ್ದರು. ಅಂದರೆ ಯಾವ ಪ್ರಮಾಣದಲ್ಲಿ ಶೋಕ ಮಡುಗಟ್ಟಿತ್ತು ಎಂದರೆ ಅಲ್ಲೆಲ್ಲೋ ಆಕ್ರೋಶ ಹತಾಶೆ – ಅಸಹನೆ – ಅನಿಶ್ಚಿತತೆ ಎಲ್ಲ ಕಾಣಬಹುದಾಗಿತ್ತು. ಇಂತಹ ಸಂದರ್ಭದಲ್ಲಿ ಪಾಂಡವರನ್ನು ಕರೆದುಕೊಂಡು ಶ್ರೀಕೃಷ್ಣ ಗಾಂಧಾರಿಯ ಆಶೀರ್ವಾದ ಕೇಳಲು ಬರುತ್ತಾನೆ. ಪಾಂಡವರನ್ನು ಆಶೀರ್ವದಿಸಿದ ಗಾಂಧಾರಿಯ ಎದುರು ಶ್ರೀಕೃಷ್ಣ ಬಂದಾಗ  ಅವಳ ದುಃಖದ ಕಟ್ಟೆ ಒಡೆಯಿತು. ಭಗವಂತ ಒಬ್ಬ ರಾಜಕೀಯ ಮುತ್ಸದ್ಧಿಯಾಗಿ ಕಂಡ ಅವಳಿಗೆ ವಳ ಮಾತೃತ್ವ ಉಳಿದೆಲ್ಲವನ್ನೂ ಮರೆಸಿತು. ನೋವಿನ ತೀವ್ರತೆ ಎಷ್ಟಿತ್ತೆಂದರೆ ಶ್ರೀಕೃಷ್ಣ ಯಾರು ಎಂಬುದನ್ನೇ ಮರೆತು ಬಿಟ್ಟಳು. ಕೃಷ್ಣನಿಗೇ ಶಾಪ ಕೊಟ್ಟಳು. ನಮ್ಮ ಮಕ್ಕಳು ಪರಸ್ಪರ ಹೊಡೆದಾಡಿಕೊಂಡು ಒಂದು ಕುಟುಂಬವೇ ಸಮೂಲ ನಾಶವಾಯಿತು. ಅದನ್ನು ನೀನು ತಡೆಯಲಿಲ್ಲ. ತಡೆಯಬಲ್ಲ ಶಕ್ತಿ ನಿನಗೆ ಮಾತ್ರವೇ ಇತ್ತು. ನಿನ್ನ ಉದ್ದೇಶವೇ ಬೇರೆ ಆಗಿತ್ತು. ಇದು ನನ್ನನ್ನು ತುಂಬಾ ಘಾಸಿಗೊಳಿಸಿದೆ. ನಿನಗೂ ಇದರ ಅರಿವು ಆಗಲೇಬೇಕು. ಹಾಗಾಗಿ ನಿನ್ನ ಕುಲವೂ ಸಹ ಪರಸ್ಪರರು ಕಾದಾಡಿಕೊಂಡೇ ಸರ್ವನಾಶವಾಗುವುದನ್ನು ಲೋಕ ನೋಡುವಂತಾಗಲಿ. ಎಂದು ಶಾಪವನ್ನೇ ಕೊಟ್ಟುಬಿಟ್ಟಳು.
ಆ ಶಾಪ ತಟ್ಟಿತು.
ಭಗವಂತ ಎಂಬ ಕಾರಣಕ್ಕೆ ಹುಸಿಯಾಗಲಿಲ್ಲ.
ನೊಂದ ಮಾತೃ ಹೃದಯದ ಬಿಸಿ ಅದು. ಅದರಲ್ಲೂ ಮಹಾ ತಪಸ್ವಿನಿಯ ದುಃಖ ಅಂದರೆ ಅಕ್ಷರಶಃ ಬೆಂಕಿಯೇ. ಸುಡದಿದ್ದೀತೇ? ಸಮಸ್ತ ಯಾದವ ಕುಲದ ನಾಶಕ್ಕೆ ಮೊದಲ ಭಾಷ್ಯ ಬರೆದಳು ಈ ಮಹಾಮಾತೆ!


(ಹೀಗೆ ಇವಳನ್ನು ನಾನು ನೋಡುವಾಗಲೂ ಅವಳಿಗೆ ಮಕ್ಕಳಾಗದೇ ಇದ್ದಾಗ, ಕುಂತಿಗೆ ಮಕ್ಕಳು ಹುಟ್ಟಿದ್ದಾರೆ ಎಂದು ಕೇಳಿದಾಗ,  ತನ್ನ ಹೊಟ್ಟೆಯಲ್ಲಿ ಸಂಕಟ ಅನುಭವಿಸಿದಳು. ಆಗಲೂ ವರ್ಷ ಎರಡಾಗಿದ್ದರೂ ಗರ್ಭವತಿ ಗಾಂಧಾರಿ ಹೆತ್ತಿರಲಿಲ್ಲ. ಆ ನೋವು ಸಹಜ ಗುಣವೇ ಹೊರತೂ ಅಸೂಯೆ ಎಂದು ನನಗೆ ಕಾಣುತ್ತಿಲ್ಲ.)


ಈ ಎಲ್ಲ ಅವಲೋಕನದಿಂದ ಗಾಂಧಾರಿ ಓರ್ವ ಭಾರತದ ಮರೆಯಲಾಗದ ಮಹಿಳೆ.

Author Details


Srimukha

Leave a Reply

Your email address will not be published. Required fields are marked *