ಮಾಣಿ: ಆಚಾರ್ಯ ಚಾಣಕ್ಯರು ಸ್ಥಾಪಿಸಿದ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವತರಣ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಿದ್ಧಿಗಾಗಿ ಆರು ತಿಂಗಳ ಅಖಂಡ ಧಾರಾ ರಾಮಾಯಣ ಪ್ರವಚನ ಕೈಗೊಂಡಿರುವ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಜುಲೈ 11ರಂದು ಮಾಣಿ ರಾಮಚಂದ್ರಾಪುರ ಮಠ ಮಹಾಕ್ಷೇತ್ರಕ್ಕೆ ಆಗಮಿಸಲಿದ್ದು, ಶಿಷ್ಯಭಕ್ತರ ಮಾರ್ಗದರ್ಶನ ಸಭೆ ನಡೆಸುವರು.
ಶ್ರೀರಾಮಚಂದ್ರಾಪುರ ಮಠದ ಮಂಡಲ, ವಲಯ ಹಾಗೂ ಘಟಕ ಹಂತಗಳ ಶ್ರೀಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಗುರಿಕಾರರು ಮಧ್ಯಾಹ್ನ 3.30ಕ್ಕೆ ಪೆರಾಜೆ ಶ್ರೀರಾಮಚಂದ್ರಾಪುರಮಠದ ಜನಭವನದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ಪ್ರಕಟಣೆಯಲ್ಲಿ ಕೋರಿದ್ದಾರೆ.
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿ 25 ವಸಂತಗಳು ತುಂಬಿದ್ದು, ಸುವರ್ಣಯುಗ ಆರಂಭದ ನೆನಪಿಗಾಗಿ ಭಾರತೀಯ ಪ್ರಾಚೀನ ವಿದ್ಯೆಗಳಿಗೆ ಕಾಯಕಲ್ಪ ನೀಡುವ ಈ ವಿಶಿಷ್ಟ ಕೊಡುಗೆಯನ್ನು ಶ್ರೀರಾಮಚಂದ್ರಾಪುರಮಠ ಸಮಾಜಕ್ಕೆ ನೀಡುತ್ತಿದೆ. ದೇಸಿ ಗೋವಂಶ ರಕ್ಷಣೆಗಾಗಿ ಕಳೆದ ವರ್ಷ ವಿಶ್ವದ ಏಕೈಕ ಗೋಸ್ವರ್ಗವನ್ನು ಸಮಾಜಕ್ಕೆ ಧಾರೆ ಎರೆದ ಶ್ರೀಮಠ ಇದೀಗ ಆದಿಗುರು ಶಂಕರಾಚಾರ್ಯರಿಗೆ ಕಿರುಗಾಣಿಕೆಯಾಗಿ ದೇಸಿ ವಿದ್ಯೆಗಳ ಪುನರುತ್ಥಾನಕ್ಕೆ ಮುಡಿಪಾಗಿರುವ ವಿಶ್ವವಿದ್ಯಾಪೀಠವನ್ನು ಸಮರ್ಪಿಸುತ್ತಿದೆ.
ದಾಖಲೆ ಹತ್ತು ತಿಂಗಳ ಅವಧಿಯಲ್ಲಿ ನಿರ್ಮಾಣವಾಗಲಿರುವ ಈ ವಿಶ್ವವಿದ್ಯಾಪೀಠ 2020ರ ಏಪ್ರಿಲ್ 26ರ ಅಕ್ಷಯ ತೃತೀಯದಂದು ಲೋಕಾರ್ಪಣೆಗೊಳ್ಳಲಿದೆ. ಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿದ ಮತ್ತು ಹಲವು ತಿಂಗಳ ಕಾಲ ವಾಸವಿದ್ದ, ಶಂಕರರ ಜ್ಞಾನಶಿಶು ಎನಿಸಿದ ಶ್ರೀರಾಮಚಂದ್ರಾಪುರಮಠದ ಮೂಲಸ್ಥಾನ, ಗೋಕರ್ಣ ಸಮೀಪದ ಅಶೋಕೆಯ ಸ್ವಚ್ಛ, ಸುಂದರ ಪರಿಸರದಲ್ಲಿ ನೂತನ ವಿಶ್ವವಿದ್ಯಾಪೀಠ ತಲೆ ಎತ್ತಲಿದೆ. ವಿಶ್ವದಲ್ಲಿ ಎಲ್ಲೂ ಇಲ್ಲದಂಥ ಅಪೂರ್ವ ವಿದ್ಯಾಪೀಠ ಆದಿಶಂಕರರ ನೆನಪಿನಲ್ಲಿ ಅವರಿಗೇ ಸಮರ್ಪಣೆಯಾಗಲಿದೆ.
ಪಾರಂಪರಿಕ ವಾಸ್ತುಶಿಲ್ಪವನ್ನು ಒಳಗೊಂಡ ಈ ವಿಶಿಷ್ಟ ವಿದ್ಯಾಪೀಠದಲ್ಲಿ ಭಾರತೀಯ ವಿದ್ಯಾವಿಶ್ವವೇ ಅಧ್ಯಯನ ವಸ್ತು. ಭಾರತೀಯ ಸಂಸ್ಕøತಿಯ ಮೂಲಾಧಾರ ಎನಿಸಿದ ನಾಲ್ಕು ವೇದಗಳು, ಜ್ಯೋತಿಷ್ಯವನ್ನು ಒಳಗೊಂಡ ವೇದದ ಆರು ಅಂಗಗಳು, ಆಯುರ್ವೇದವೇ ಮೊದಲಾದ ನಾಲ್ಕು ಉಪವೇದಗಳು, ರಾಮಾಯಣ ಮಹಾಭಾರತ ಒಳಗೊಂಡಂತೆ ಇತಿಹಾಸ- ಪುರಾಣಗಳು, ಆರು ದರ್ಶನಗಳು, ಸಕಲ ಕಲೆಗಳು, ಸಮಯುಗದ ಜಗತ್ತಿನ ಸಾಮಾನ್ಯ ಜ್ಞಾನ, ಆಧುನಿಕ ತಂತ್ರಜ್ಞಾನ, ದೇಶದ ಚರಿತ್ರೆ, ಸಂವಹನ ಕೌಶಲ, ಕಾನೂನು, ಧರ್ಮಯೋಧನಿಗೆ ಎದುರಾಗಬಹುದಾದ ವಿಪತ್ತುಗಳನ್ನು ಮನಸ್ಸಿನಲ್ಲಿರಿಸಿಕೊಂಡು ಆತ್ಮರಕ್ಷಣೆಯ ಸಮರ ವಿದ್ಯೆಗಳು ವಿದ್ಯಾವಿನ್ಯಾಸದಲ್ಲಿ ಸೇರಿವೆ. ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯಜಗತ್ತಿನಲ್ಲಿ ಅಪ್ರಸ್ತುತನಾಗಬಾರದು ಎಂಬ ಕಾರಣಕ್ಕೆ ಇಂಗ್ಲಿಷ್, ಹಿಂದಿ ಮೊದಲಾದ ಆಧುನಿಕ ಸಮಾಜ ಭಾಷೆಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ ಅವಕಾಶವಿದ್ದು, ಅವರವರಿಗೆ ಸಲ್ಲುವ ವಿದ್ಯೆಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ. ಒಂದು ವಿಷಯದಲ್ಲಿ ವಿದ್ಯಾರ್ಥಿ ಪರಿಪೂರ್ಣ ಪರಿಣತಿ ಪಡೆಯುವಂತೆ ರೂಪಿಸುವ ಜತೆಜತೆಗೆ ಬಾಕಿ ವಿದ್ಯೆಗಳ ಪರಿಚಯ ಇಲ್ಲಿನ ವಿದ್ಯಾವಿನ್ಯಾಸ.
ಅಂದು ಸಕಲ ಭಾರತೀಯ ವಿದ್ಯೆಗಳ ತವರುಮನೆ ಎನಿಸಿದ್ದ, ವಿಶ್ವದ ಉದ್ದಗಲಗಳಿಂದ ವಿದ್ಯೆಯನ್ನರಸಿ ಬರುವ ಹತ್ತಾರು, ಸಹಸ್ರಾರು ಜ್ಞಾನಾರ್ಥಿಗಳ ಬುದ್ಧಿಯನ್ನು ಬೆಳಕಾಗಿಸುತ್ತಿದ್ದ ತಕ್ಷಶಿಲೆಯನ್ನು ಸತತ ಪ್ರಯತ್ನಗಳಿಂದ ನಾಶಪಡಿಸಲಾಯಿತು. ಆದರೆ ಇಂದು ಅದಕ್ಕೆ ತದ್ವಿರುದ್ಧವಾಗಿ ಆದಿಗುರು ಶಂಕರರಿಂದ ಸ್ಫೂರ್ತಿ ಪಡೆದು, ಧರ್ಮನಿಷ್ಠರ- ದೇಶಪ್ರೇಮಿಗಳ ತ್ಯಾಗ-ಸೇವೆಯನ್ನು ಮೂಲಾಧಾರವಾಗಿರಿಸಿಕೊಂಡು, ಅದೇ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರ್ ಸೃಷ್ಟಿಯ ಪ್ರಯತ್ನ ಇದಾಗಿದೆ.
ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಮೂಲಕ ದೇಶದ ಮೂಲೆಮೂಲೆಗಳ ತಜ್ಞ ವಿದ್ವಾಂಸರಿಂದ ಅಧ್ಯಾಪನ ವ್ಯವಸ್ಥೆಯೊಂದಿಗೆ ಆಧುನಿಕ ತಂತ್ರಜ್ಞಾನದ ಸೌಲಭ್ಯವನ್ನೂ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ.
ಸರ್ಕಾರದ ಅನುದಾನಕ್ಕೆ ಕೈಚಾಚದೇ, ಸಂಪನ್ಮೂಲ ಹಾಗೂ ಮಾನ್ಯತೆ ಎರಡೂ ವಿಶ್ವವಿದ್ಯಾಪೀಠದ್ದೇ ಆಗಿರುತ್ತದೆ. ಸರ್ಕಾರದ ಮಾನ್ಯತೆಯ ಅವಶ್ಯಕತೆ ಇರುವಲ್ಲಿ ಪರೀಕ್ಷೆಗಳನ್ನು ಅಧಿಕೃತ ವ್ಯವಸ್ಥೆಯಿಂದ ಪಡೆದುಕೊಳ್ಳಲು ಪರ್ಯಾಯ ಕ್ರಮ ಅನುಸರಿಸಲಾಗುತ್ತದೆ. ವೇದ- ಶಾಸ್ತ್ರಗಳು, ಪರಂಪರೆ- ಪದ್ಧತಿಗಳನ್ನು ಒಳಗೊಂಡ ಸಮಗ್ರ ಭಾರತೀಯ ಸಂಸ್ಕೃತಿಯಲ್ಲಿ ಹುದುಗಿರುವ ಅದೆಷ್ಟೋ ಮಹತ್ವದ ಸಂಗತಿಗಳ ಕುರಿತು ಸಂಶೋಧನಾಲಯವೊಂದು ಇಲ್ಲಿ ಅನಾವರಣಗೊಳ್ಳಲಿದ್ದು, ಅದು ವಿಶ್ವವಿದ್ಯಾಪೀಠದ ಮುಕುಟಮಣಿಯಾಗಲಿದೆ.