ಸಂತ್ರಸ್ತರ ಸಂಕಷ್ಟಕ್ಕೆ ಶ್ರೀಮಠದ ಸ್ಪಂದನೆ

ಪ್ರಕಟಣೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಎಲ್ಲ ಶಾಖಾಮಠಗಳು ಹಾಗೂ ಅಂಗಸಂಸ್ಥೆಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಘೋಷಿಸಿದ್ದಾರೆ.

 

ನಿನ್ನೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, ಪರಿಸ್ಥಿತಿಯ ತೀವ್ರತೆ ಹಿನ್ನೆಲೆಯಲ್ಲಿ ಎಲ್ಲ ಅಂಗಸಂಸ್ಥೆಗಳಿಗೆ ಈ ವ್ಯವಸ್ಥೆ ವಿಸ್ತರಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.

 

ರಾಜ್ಯದಲ್ಲಿ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ, ಲಕ್ಷಾಂತರ ಜನರ ಬದುಕು ಬವಣೆಯಾಗಿದೆ. ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ಶ್ರೀಮಠ ಸಹಾಯಹಸ್ತ ಚಾಚಿದ್ದು, ಉಚಿತವಾಗಿ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿರುವ ಶ್ರೀಮಠದ ವಿದ್ಯಾಸಂಸ್ಥೆಗಳು, ಶಾಖಾ ಮಠಗಳು, ಗೋಶಾಲೆಗಳು ಸಂತ್ರಸ್ತರಿಗೆ ಆಶ್ರಯ ನೀಡಲಿವೆ. ಈಗಾಗಲೇ ಶ್ರೀಮಠದ ಶಿಷ್ಯಭಕ್ತರು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದು, ಇವುಗಳನ್ನು ಅಗತ್ಯವಿರುವ ಸಂತ್ರಸ್ತರಿಗೆ ವಿತರಿಸಲಾಗುವುದು.

 

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಸಂತ್ರಸ್ತರಿಗೆ ಅಗತ್ಯವಿರುವ ಬೆಡ್‍ಶೀಟ್, ಟವೆಲ್, ಟಿ-ಷರ್ಟ್, ಲುಂಗಿ, ನೈಟಿ, ಟೂಥ್‍ಬ್ರೆಷ್‍ಗಳನ್ನೊಳಗೊಂಡ 500ಕ್ಕೂ ಹೆಚ್ಚು ಕಿಟ್‍ಗಳನ್ನು ಕಳುಹಿಸಲಾಗಿದೆ. ಅಗತ್ಯ ಔಷಧಿಗಳನ್ನು ಹಾಗೂ ಆಹಾರ ಸಾಮಗ್ರಿ ವಿತರಣೆಗೂ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

 

ಆಶ್ರಯ ಬಯಸುವ ನೆರೆ ಸಂತ್ರಸ್ತರು ತುರ್ತು ನೆರವಿಗಾಗಿ ಶ್ರೀಮಠದ ಯೋಜನಾಖಂಡದ ಶ್ರೀಸಂಯೋಜಕ ಪ್ರಸನ್ನ ಶಾಸ್ತ್ರಿ (09880985475) ಅಥವಾ ಲೋಕಸಂಪರ್ಕ ವಿಭಾಗದ ಶಿಶಿರ್ ಹೆಗಡೆ ಅಂಗಡಿ (9483484074) ಅವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *